ಮಂಗಳವಾರ, ಏಪ್ರಿಲ್ 20, 2021
24 °C

ಮಾತು ತಪ್ಪಿದರೆ ಕ್ರಿಮಿನಲ್ ಮೊಕದ್ದಮೆ!

ಪ್ರಜಾವಾಣಿ ವಾರ್ತೆ/ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಸಮರ್ಪಕ ತಾಜ್ಯ ನಿರ್ವಹಣೆ ವಿಚಾರದಲ್ಲಿ ತಾವೇ ವಿಧಿಸಿಕೊಂಡಿರುವ ಗಡುವನ್ನು ಮೀರುವ ಪುರಸಭೆ ಮತ್ತು ನಗರಸಭೆ ಅಧಿಕಾರಿಗಳ ಮೇಲೆ ಈಗ ತೂಗುಗತ್ತಿ ಆಡುತ್ತಿದೆ.ಕೊಟ್ಟ ಮಾತನ್ನು ಗಡುವಿನೊಳಗೆ ಈಡೇರಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ. ಅದರ ಪರಿಣಾಮವಾಗಿ ಜೈಲುವಾಸವೂ ಆಗಬಹುದು!ಅಂಥ ಸನ್ನಿವೇಶ ಬಾರದಿರಲೆಂಬುದು ಕರ್ನಾಟಕ ರಾಜ್ಯ ವಾಣಿಜ್ಯ ನಿಯಂತ್ರಣ ಮಂಡಳಿಯ ಆಶಯ. ಏಕೆಂದರೆ ಪುರಸಭೆ, ನಗರಸಭೆಗಳ ಕಾರ್ಯವೈಖರಿಯನ್ನು ಗಮನಿಸಿ ಮೊಕದ್ದಮೆ ಹೂಡುವ ಜವಾಬ್ದಾರಿ ಮಂಡಳಿಯದೇ ಆಗಿದೆ.ಕಲುಷಿತ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ-ಸಿವೇಜ್ ಟ್ರೀಟ್‌ಮೆಂಟ್ ಪ್ಲಾಂಟ್) ಸ್ಥಾಪನೆ ಮತ್ತು ಎಂಎಸ್‌ಡಬ್ಲ್ಯು- ಘನತ್ಯಾಜ್ಯ ನಿರ್ವಹಣೆ ಮುನಿಸಿಪಲ್ ಸಾಲಿಡ್ ವೇಸ್ಟ್ -ವ್ಯವಸ್ಥೆಯನ್ನು ರೂಪಿಸಲು ಜಿಲ್ಲೆಯ ಹಲವು ಪುರಸಭೆ, ನಗರಸಭೆ ಅಧಿಕಾರಿಗಳು ಗಡುವು ದಿನಾಂಕವನ್ನೂ ನೀಡಿ ಲೋಕಪಾಲ್ ಸಮಿತಿಗೆ ಜಿಲ್ಲಾಧಿಕಾರಿಗಳ ಮೂಲಕ ಕಳೆದ ಡಿ.29ರಂದೇ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳೊಳಗೆ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದು ಅಧಿಕಾರಿಗಳು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಯೊಬ್ಬರು ಸದಸ್ಯರಾಗಿರುವ ಲೋಕಪಾಲ್‌ಗೆ ಜಿಲ್ಲೆಯಿಂದ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಗಡುವು ಮೀರಿ ಕೆಲಸವಾಗದಿದ್ದರೆ ಅದು ನ್ಯಾಯಾಂಗ ನಿಂದನೆಯೂ ಆಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಡುವಿನೊಳಗೆ ಕೆಲಸ ಪೂರ್ಣಗೊಳಿಸುವ ಪ್ರಯತ್ನ ನಡೆಸುವುದು ಕ್ಷೇಮಕರ’ ಎಂದು ಮಂಡಳಿಯ ಪರಿಸರ ಅಧಿಕಾರಿ ವಿಜಿ ಕಾರ್ತಿಕೇಯನ್ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.ತಾಜ್ಯ ನಿರ್ವಹಣೆ ವಿಚಾರದಲ್ಲಿ ಸಮರ್ಪಕವಾಗಿ ಕೆಲಸ ಮಾಡದ ಶಿರಸಿಯ ಪುರಸಭೆ ಅಧಿಕಾರಿಯನ್ನು ಶಿಕ್ಷಿಸಿದ ಉದಾಹರಣೆ ಕಣ್ಣ ಮುಂದೆಯೇ ಇದೆ. ಹೀಗಾಗಿ ಜಿಲ್ಲೆಯ ನಗರಸಭೆ, ಪುರಸಭೆ ಅಧಿಕಾರಿಗಳು ಎಚ್ಚರಿಕೆ ವಹಿಸುವುದೂ ಅಗತ್ಯವಾಗಿದೆ’ ಎನ್ನುತ್ತಾರೆ ಅವರು.ಎಲ್ಲೆಲ್ಲಿ ಇಲ್ಲ? ತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮಂಡಳಿಯು ತಯಾರಿಸಿರುವ ಅಧಿಕೃತ ಅಂಕಿ-ಅಂಶ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಹಲವೆಡೆ ಎಸ್‌ಟಿಪಿ ವ್ಯವಸ್ಥೆಯೇ ಇಲ್ಲ.ಶ್ರೀನಿವಾಸಪುರ ಮಾತ್ರ ಎರಡೂ ಘಟಕಗಳನ್ನು ಹೊಂದಿದೆ. ಉಳಿದಂತೆ, ಕೆಜಿಎಫ್ ನಗರಸಭೆ ಮತ್ತು ಬಂಗಾರಪೇಟೆ ಪುರಸಭೆಯಲ್ಲಿ ಎಸ್‌ಟಿಪಿಯಾಗಲಿ, ಒಳಚರಂಡಿ ವ್ಯವಸ್ಥೆಯಾಗಲೀ ಇಲ್ಲ. ಕೆಜಿಎಫ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ (ಕೆಯುಡಬ್ಲ್ಯುಎಸ್‌ಡಿಬಿ) ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದೆ. ಯೋಜನೆ ರೂಪುಗೊಳ್ಳಬೇಕಿದೆ. ಬಂಗಾರಪೇಟೆಯಲ್ಲಿ ಅಂಥ ಯಾವ ಪ್ರಯತ್ನವೂ ನಡೆದಿಲ್ಲ.ಮಾಲೂರು ಮತ್ತು ಮುಳಬಾಗಲು ಪುರಸಭೆಗಳು ಒಳಚರಂಡಿ (ಯುಜಿಡಿ) ಕಾಮಗಾರಿ ನಡೆಸುತ್ತಿವೆ. ಮಾಲೂರಿನಲ್ಲಿ ಯುಜಿಡಿ ಕಾಮಗಾರಿ ಮುಂದಿನ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಎಸ್‌ಟಿಪಿ ಘಟಕಕ್ಕೆ ದೊಡ್ಡಕೆರೆಯಲ್ಲಿ ಗುರುತಿಸಲಾಗಿರುವ ಜಾಗವನ್ನು ಕೆಯುಡಬ್ಲ್ಯುಎಸ್‌ಡಿಬಿಗೆ ಹಸ್ತಾಂತರಿಸಬೇಕಿದೆ. ಮುಳಬಾಗಲಿನಲ್ಲಿ ಎಸ್‌ಟಿಪಿ ಕೋಲಾರದ ಚಿನ್ನಾಪುರದಲ್ಲಿ 10.16 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ/ ದಿನಕ್ಕೆ 10 ಲಕ್ಷ ಲೀಟರ್ ಶುದ್ಧೀಕರಿಸುವ) ಸಾಮರ್ಥ್ಯದ ಕಲುಷಿತ ನೀರು ಶುದ್ಧೀಕರಣ ಘಟಕ ಕಳೆದ ಜನವರಿಯಿಂದ ಕಾರ್ಯನಿರ್ವಹಿಸುತ್ತಿದೆ. 6.16 ಎಂಎಲ್‌ಡಿ ಸಾಮರ್ಥ್ಯದ ಮತ್ತೊಂದು ಘಟಕ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.ಕಲುಷಿತ ನೀರು ಶುದ್ಧೀಕರಣ ಘಟಕಗಳು ಏಪ್ರಿಲ್ ಅಂತ್ಯದೊಳಗೆ ಕಾರ್ಯಾರಂಭವಾಗಬೇಕು. ಜಿಲ್ಲೆಯ ಎರಡು ನಗರಸಭೆ ಮತ್ತು ಪುರಸಭೆಗಳು ಹೇಗೆ ಕಾರ್ಯನಿರ್ವಹಿಸುತ್ತವೋ ಕಾದು ನೋಡಬೇಕಿದೆ.ಘನತ್ಯಾಜ್ಯ ನಿರ್ವಹಣೆ:
ಘನತ್ಯಾಜ್ಯ ನಿರ್ವಹಣೆಗಾಗಿ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ ಗುರುತಿಸಲಾಗಿರುವ 5 ಎಕರೆ ಜಮೀನನ್ನು ಘಟಕವಾಗಿ ರೂಪಿಸಬೇಕಾಗಿದೆ. ಕೆಜಿಎಫ್ ಪುರಸಭೆಯು ಪಾರಂಡಹಳ್ಳಿಯಲ್ಲಿ 16 ಎಕರೆ 18 ಗುಂಟೆ ಜಮೀನಿನಲ್ಲಿ ರೂಪಿಸಿರುವ ಘಟಕ ಕಾರ್ಯನಿರ್ವಹಿಸುತ್ತಿದೆ. ಬಂಗಾರಪೇಟೆ ಪುರಸಭೆಯು ಬ್ಯಾಡಬೆಲೆ ಹಳ್ಳಿಯಲ್ಲಿ 5 ಎಕರೆ ಜಮೀನಿಲ್ಲಿ ರೂಪಿಸಿರುವ ಘಟಕ ಕಾರ್ಯನಿರ್ವಹಿಸುತ್ತಿದೆ. ಶ್ರೀನಿವಾಸಪುರದ ಹೆಬ್ಬಟ ಹಳ್ಳಿಯಲ್ಲಿ 5 ಎಕರೆ ಜಮೀನು ಗುರುತಿಸಲಾಗಿದೆ. ಘಟಕ ನಿರ್ಮಾಣವಾಗಬೇಕಿದೆ. ಮಾಲೂರಿನ ಹಾರೋಹಳ್ಳಿಯಲ್ಲಿ ಘಟಕ ಕಾರ್ಯನಿರ್ವಹಿಸುತ್ತಿದೆ. ಮುಳಬಾಗಲಿನ ರಾಚಬಂಡಹಳ್ಳಿಯಲ್ಲಿ ಘಟಕ ಕಾರ್ಯನಿರ್ವಹಿಸುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.