ಮಂಗಳವಾರ, ಮೇ 18, 2021
24 °C

ಮಾರಮ್ಮದೇವಿ ಜಾತ್ರೆ: ವಿಶೇಷ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರಮಸಾಗರ: ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಬುಧವಾರ ಇಲ್ಲಿನ ಪರಿಶಿಷ್ಟ ಕಾಲೊನಿಯ ಜನರ ವಿಶೇಷ ಆಚರಣೆಗಳು ಜರುಗಿದವು.ಸಂಪ್ರದಾಯದಂತೆ ಜಾತ್ರೆಯ ಕೊನೆಯ ದಿನ ದೇವಸ್ಥಾನದಲ್ಲಿ ಹಟ್ಟಿ ಜನರಿಗಾಗಿಯೇ ವಿಶೇಷ ಪೂಜೆಗಳು ನಡೆಯುತ್ತವೆ. ವಾಡಿಕೆಯಂತೆ ಬುಧವಾರ ಹಟ್ಟಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದ ಬಳಿಕ ಮನೆಯಿಂದ ದೇವರನ್ನು ಮಾಡಿಕೊಂಡು ಹರಕೆ ಹೊತ್ತವರನ್ನು ಆರತಿ ಕಳಸ ಹಿಡಿದ ಮುತ್ತೈದೆಯರು ಮೆರವಣಿಗೆ ಮೂಲಕ ಮಾರಮ್ಮನ ದೇವಸ್ಥಾನಕ್ಕೆ ಕರೆತರುತ್ತಾರೆ.ಚಿಕ್ಕವರು, ದೊಡ್ಡವರೆನ್ನದೇ ಹರಕೆ ಹೊತ್ತವರೆಲ್ಲಾ ಕಡ್ಡಾಯವಾಗಿ ಬೇವಿನ ಉಡುಗೆ ಧರಿಸಿರುತ್ತಾರೆ. ಕೌಟುಂಬಿಕ ಸಮಸ್ಯೆ, ಚರ್ಮವ್ಯಾಧಿ ನಿವಾರಣೆ, ಮದುವೆ ಮುಂತಾದ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲೆಂದು ಹರಕೆ ಹೊತ್ತವರು ಹರಕೆ ಫಲಿಸಿದ ನಂತರ ಜಾತ್ರೆಯಲ್ಲಿ ಬೇವಿನ ಉಡುಗೆ ತೊಟ್ಟು ಹರಕೆ ತೀರಿಸುವುದು ಸಂಪ್ರದಾಯ ಎನ್ನುತ್ತಾರೆ ಹಟ್ಟಿಯ ಮಲ್ಲಿಕಾರ್ಜುನ.ಸಂಪ್ರದಾಯಗಳೇನೇ ಇರಲಿ ಬೇವಿನಸೊಪ್ಪಿಗೆ ಔಷಧೀಯ ಗುಣ ಇರುವುದರಿಂದ ಬೇವಿನ ಉಡುಗೆ ತೊಟ್ಟು ನಡೆಯುವುದರಿಂದ, ಉರುಳು ಸೇವೆ ಮಾಡುವುದರಿಂದ ಬೇವಿನ ಸೊಪ್ಪು ಮೈಚರ್ಮಕ್ಕೆ ತಾಗಿ ಬಹಳಷ್ಟು ಕಾಯಿಲೆಗಳು ನಿವಾರಣೆಯಾಗುವ ವೈಜ್ಞಾನಿಕ ಕಾರಣವೂ ಉಂಟು ಎನ್ನುತ್ತಾರೆ ಇಲ್ಲಿನ ಛಾಯಾಗ್ರಾಹಕ ದೊಡ್ಡಮನಿ ಚನ್ನಬಸಪ್ಪ.ಬುಧವಾರ ಈ ರೀತಿ ಬೇವಿನ ಹರಕೆ ಹೊತ್ತವರು ದೇವಸ್ಥಾನದ ಬಳಿ ಬಂದು ಪ್ರದಕ್ಷಿಣೆ ಹಾಕಿ ಕೈಮುಗಿದ ಬಳಿಕ ಬೇವಿನ ಉಡುಗೆ ಕಳಚಿ ತೀರ್ಥದ ನೀರು ಹಾಕಿಸಿಕೊಂಡು ಮಡಿಯುಟ್ಟು ದೇವಿಗೆ ಸೀರೆ, ಕುಪ್ಪಸ ಮುಂತಾದ ಕಾಣಿಕೆ ಒಪ್ಪಿಸಿ ಹರಕೆ ತೀರಿಸಿದರು. ನಂತರ ಹಟ್ಟಿಗೆ ಮರಳಿ ಹಟ್ಟಿ ದೇವರಿಗೆ ಬೇಟೆ ಸೇವೆ ಸಲ್ಲಿಸಲಾಯಿತು.ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಮಹಾ ಮಂಗಳಾರತಿ ನಡೆಸಿ ದೇವರನ್ನು ಗುಡಿಯಿಂದ ಹೊರಡಿಸಿಕೊಂಡು ಪೂಜಾರಿ ಮನೆಗೆ ಕರೆದೊಯ್ಯುವ ಮೂಲಕ ಈ ವಿಶಿಷ್ಟ ಆಚರಣೆಯ ಜಾತ್ರೆಗೆ ತೆರೆ ಬೀಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.