ಗುರುವಾರ , ಮೇ 13, 2021
40 °C

ಮಾಹಿತಿ ಕಂಪ್ಯೂಟರೀಕರಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ/ಉ.ಮ.ಮಹೇಶ್ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ವಿವಿಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಮತ್ತು ಪ್ರಕರಣದ ಸ್ಥಿತಿ, ವಿಚಾರಣೆ ನಡೆವ ದಿನ, ಮುಂದೂಡಲಾದ ದಿನಾಂಕ ಕುರಿತು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಲಭ್ಯವಾಗುವಂತೆ ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ.ಪ್ರಸ್ತುತ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ವಿವರಗಳನ್ನು ಪ್ರತ್ಯೇಕ ಸಾಫ್ಟ್‌ವೇರ್‌ನಲ್ಲಿ ನಮೂದಿಸಿ, ಕೇಸ್ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ನಂತರದ ದಿನಗಳಲ್ಲಿ ಕೆಳಹಂತದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ, ತಹಶೀಲ್ದಾರ್‌ಗಳ ನ್ಯಾಯಾಲಯಗಳಿಗೂ ವಿಸ್ತರಿಸುವ ಚಿಂತನೆಯಿದೆ.ಖಾತಾ ಬದಲಾವಣೆ, ಪೋಡಿ ಪ್ರಕರಣಗಳು ಸೇರಿದಂತೆ ಭೂ ಸುಧಾರಣಾ ಕಾಯ್ದೆಯಡಿ ಬರುವ ಭೂ ವಿವಾದಕ್ಕೆಸಂಬಂಧಿಸಿದ ಕೆಲ ಪ್ರಕರಣಗಳು, ನಗರಸಭೆಯ ಖಾತೆಗೆ ಸಂಬಂಧಿಸಿತ ವಿವಾದ, ಗಡಿಪಾರು ಪ್ರಕರಣಗಳು, ಅಗತ್ಯ ವಸ್ತುಗಳ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತವೆ.`ಇದುವರೆಗೂ ಇಂಥ ಪ್ರಕರಣಗಳ ದಾಖಲೆಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದರು. ಯಾವ ಪ್ರಕರಣ, ಯಾವ ದಿನಾಂಕದಂದು ವಿಚಾರಣೆಗೆ ಬರುತ್ತದೆ; ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಖಚಿತ ಮಾಹಿತಿ ಸಿಗುವುದು ಕಷ್ಟ ಆಗುತ್ತಿತ್ತು.ದಾಖಲಿಸುವ ಹಂತದಲ್ಲಿ ಲೋಪವಾದರೆ ನಿರ್ದಿಷ್ಟ ಪ್ರಕರಣ ವಿಚಾರಣೆಗೇ ಬರದೆ ನೆನೆಗುದಿಗೆ ಉಳಿಯುವ ಸಾಧ್ಯತೆಗಳೂ ಇದ್ದವು. ಇಂಥ ಲೋಪವನ್ನು ತಪ್ಪಿಸುವುದು ಈ ಕಂಪ್ಯೂಟರೀಕರಣದ ಉದ್ದೇಶ' ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್.`ನಿರೀಕ್ಷೆಯಂತೇ ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ಜಾರಿಗೆ ಬಂದರೆ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಜಿಲ್ಲೆ ಎಂಬ ಹಿರಿಮೆಗೂ ಗಡಿ ಜಿಲ್ಲೆ ಬೀದರ್ ಪಾತ್ರವಾಗಲಿದೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ರೂಪಿಸಲಾಗಿದ್ದು, ಬರುವ ದಿನಗಳಲ್ಲಿ ನ್ಯಾಷನಲ್ ಇನ್‌ಫೋರ್ಮಾಟಿಕ್ಸ್ ಸೆಂಟರ್ (ಎನ್‌ಐಸಿ) ಸಹಯೋಗದಲ್ಲಿ `ಭೂಮಿ' ಸಾಫ್ಟ್‌ವೇರ್ ಜೊತೆಗೂ ಲಿಂಕ್ ಅನ್ನೂ ಕಲ್ಪಿಸಬಹುದಾಗಿದೆ' ಎಂದು ಅಭಿಪ್ರಾಯಪಡುತ್ತಾರೆ.`ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್' ಹೆಸರಿನ ಈ ಪ್ರತ್ಯೇಕ ಸಾಫ್ಟ್‌ವೇರ್‌ನಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಯಾವ ಕಾಯ್ದೆಯ, ಯಾವ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.ಅರ್ಜಿದಾರರ ಹೆಸರು, ಪ್ರತಿವಾದಿಗಳ ಹೆಸರು, ವಕೀಲರ ಹೆಸರು, ವಿಳಾಸ, ಪ್ರಕರಣದ ಸಂಕ್ಷಿಪ್ತ ವಿವರ, ವಾದಿ, ಪ್ರತಿವಾದಿಗಳ ಮೊಬೈಲ್ ಸಂಖ್ಯೆ ಹೀಗೇ ಪೂರ್ಣ ಮಾಹಿತಿಯನ್ನು ದಾಖಲಿಸಲಾಗುತ್ತದೆ.ಇಂಥ ನೂತನ ವ್ಯವಸ್ಥೆಯಿಂದ ಅರ್ಜಿದಾರರಿಗೆ ಹೆಚ್ಚಿನ ಅನುಕೂಲವಿದೆ. ಕಂಪ್ಯೂಟರ್‌ಗೆ ಮಾಹಿತಿ ಅಳವಡಿಸಿದಂತೆ ಕೇಸ್ ನಂಬರ್ ದಾಖಲಾಗುವ ಕಾರಣ, ವಿಚಾರಣೆ ದಿನ, ಮುಂದೂಡಿಕೆ ಯಾದಿಯಿಂದ ಕೈ ತಪ್ಪಿಹೋಗುವ ಸಾಧ್ಯತೆಯಿಲ್ಲ. ಕಡತ ಕೈತಪ್ಪಿ ಮಾಹಿತಿ ಮಿಸ್ ಆಗುವ ಅವಕಾಶವೂ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.ಎಸ್‌ಎಂಎಸ್ ಮೂಲಕ ಮಾಹಿತಿ: ಅರ್ಜಿಗಳಿಗೆ ಸಂಬಂಧಿಸಿ ಅರ್ಜಿದಾರರು, ಪ್ರತಿವಾದಿಗಳು ಮತ್ತು ಎರಡು ಪರ ವಕೀಲರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಲಿದ್ದು, ಪ್ರಕರಣದ ವಿಚಾರಣೆ ದಿನಾಂಕ, ಮುಂದೂಡಿದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಕಳುಹಿಸುವ ಬಗೆಗೂ ಚಿಂತನೆ ನಡೆದಿದೆ.ಈ ವ್ಯವಸ್ಥೆಯು ಒಂದು ತಿಂಗಳಲ್ಲಿ ಜಾರಿಗೆ ಬರಬಹುದು ಎಂಬುದು ಅವರ ವಿವರಣೆ. ಭೂ ವಿವಾದ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ವ್ಯವಸ್ಥೆ ಇತರೆ ಜಿಲ್ಲೆಗಳಿಗೂ ಮಾದರಿ ಆಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.