ಭಾನುವಾರ, ಜೂನ್ 20, 2021
26 °C

ಮೀನುಗಾರಿಕೆ ಸಚಿವರನ್ನು ಸಂಪುಟದಿಂದ ಕೈಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸಚಿವ ಆನಂದ ಅಸ್ನೋಟಿಕರ್ ಜಿಲ್ಲೆ ವಿಭಜನೆ ಮಾಡುವ ಪ್ರಸ್ತಾವ ಮಾಡುತ್ತಿದ್ದಾರೆ. ಕ್ಷೇತ್ರ, ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಚಿವರು ಈಗ ವಿಭಜನೆಯ ರಾಗ ಹಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ್ ಟೀಕಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಇವರು ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಕರಾವಳಿಯ ಯಾವ್ಯಾವ ಭಾಗಕ್ಕೆ ಇವರು ತಿರುಗಾಡಿದ್ದಾರೆ? ಅಲ್ಲಿಯ ಸಮಸ್ಯೆಗಳ ಬಗ್ಗೆ ಇವರಿಗೆ ಎಷ್ಟು ಮಾಹಿತಿ ಇದೆ ಎನ್ನುವುದನ್ನು ಹೇಳಲಿ~ ಎಂದರು.ಬಿಜೆಪಿ ಸರ್ಕಾರದಲ್ಲಿರುವ ಐವರು ಪಕ್ಷೇತರ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ರೂ. 45 ಕೋಟಿ ಮಂಜೂರು ಮಾಡಿದ್ದಾರೆ. ಅವರ ಕ್ಷೇತ್ರಕ್ಕೆ ಅಭಿವೃದ್ಧಿಗೆ ನೀಡಿದ ಅನುದಾನಕ್ಕಿಂತ ಐದುಪಟ್ಟು ಹೆಚ್ಚು ಅನುದಾನವನ್ನು ಸಚಿವ ಅಸ್ನೋಟಿಕರ್ ತರಬೇಕಿತ್ತು.ಏನೂ ಅನುದಾನ ತರಲು ಸಾಧ್ಯವಾಗದಿರುವುದು ನೋಡಿದರೆ  ಸರ್ಕಾರದಲ್ಲಿ ಇವರೆಷ್ಟು ಪ್ರಭಾವಿ ಸಚಿವರು ಎನ್ನುವುದು ಗೊತ್ತಾಗುತ್ತದೆ ಎಂದು ಅವರು ನುಡಿದರು.ಜನರ ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಆನಂದ ಅಸ್ನೋಟಿಕರ್ ಅವರನ್ನು ಮುಖ್ಯಮಂತ್ರಿಗಳು ಮಂತ್ರಿ ಮಂಡಲದಿಂದ ಕೈಬಿಟ್ಟು ಸಜ್ಜನ ವ್ಯಕ್ತಿಗೆ ಮೀನುಗಾರಿಕೆ ಖಾತೆ ನೀಡಬೇಕು ಎಂದ ಅವರು, ಸಚಿವರ ಪೊಳ್ಳು ಭರವಸೆಯಿಂದ ಕ್ಷೇತ್ರದ ಜನರು ಬೇಸತ್ತಿದ್ದಾರೆ ಎಂದರು.ಅರಣ್ಯ ಇಲಾಖೆ ಅಧಿಕಾರಿಗಳು, ಕ್ವಾರಿ ಮಾಲೀಕರನ್ನು ಮನೆಗೆ ಕರೆದುಕೊಂಡು ಕಲ್ಲುಕ್ವಾರಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪದೇಪದೇ ಭರವಸೆ ನೀಡುತ್ತಿದ್ದಾರೆ. ಸಮಸ್ಯೆ ಬಗೆಹರಿಸುವುದು ಒತ್ತಟ್ಟಿಗಿರಲಿ ಮೊದಲು ಎಲ್ಲ ಕಲ್ಲುಕ್ವಾರಿಗಳನ್ನು ಅಧಿಕೃತಗೊಳಿಸಲಿ ನಂತರ ಸಮಸ್ಯೆ ಬಗೆಹರಿಸಲಿ ಎಂದು ವೈಂಗಣಕರ್ ಸಚಿವರಿಗೆ ಸವಾಲು ಹಾಕಿದರು.ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಮಾಡಲು ವಿಫಲರಾಗಿರುವ ಸಚಿವ ಅಸ್ನೋಟಿಕರ್ ಜನರ ಮನ್ನಣೆಗಳಿಸಲು ಗಿಮಿಕ್ ಮಾಡುತ್ತಿದ್ದಾರೆ. ಜನರಲ್ಲಿ ಒಂದು ರೀತಿಯ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಕವಡೆ ಕಾಸಿನ ಪ್ರಯೋಜನ ಕ್ಷೇತ್ರಕ್ಕೆ ಆಗಲಿಲ್ಲ ಎಂದು ವಿಷಾದಿಸಿದರು.ಮಾಜಾಳಿಯಲ್ಲಿ ಎಂಜಿನಿಯರಿಂಗ್ ಕಾಲೇಜಿಗೆ ಶೀಘ್ರದಲ್ಲೇ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿಕೆಗಳನ್ನು ನೀಡಿರುವ ಸಚಿವರು ವಿಟಿಯುಗೆ ಮೊದಲು ಹೋಗಿ ಕಾಲೇಜು ಕಟ್ಟಡ ನಿರ್ಮಾಣ ಪ್ರಸ್ತಾವ ಯಾಂತ ಹಂತದಲ್ಲಿದೆ ಎನ್ನುವುದನ್ನು ನೋಡಿಕೊಂಡು ಬರಲಿ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸಚಿವರು ಮಾತನಾಡುತ್ತಾರೆ ಎಂದು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.