ಶನಿವಾರ, ಜನವರಿ 18, 2020
21 °C

ಮೂರನೇ ಮೌಲ್ಯಮಾಪಕರ ಕರಾಮತ್ತು!

ಪ್ರಜಾವಾಣಿ ವಾರ್ತೆ / ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ರ 362 ಪ್ರೊಬೇಷ ನರಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಯಲ್ಲಿ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಯಪರಾತಪರಾ ನಡೆದಿರುವುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಮೊದಲ ಮೌಲ್ಯಮಾಪನ, 2ನೇ ಮೌಲ್ಯಮಾಪನ ಹಾಗೂ ಕೆಪಿಎಸ್‌ಸಿ ನಡೆಸಿದ ಮೂರನೇ ಮೌಲ್ಯಮಾಪನ­ದಲ್ಲಿ ಅಂಕಗಳ ಭಾರಿ  ವ್ಯತ್ಯಾಸ ಇರುವುದು ಕಂಡು ಬಂದಿದೆ.

ಒಂದು ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದಾಗ ಮೊದಲ ಮತ್ತು 2ನೇ ಮೌಲ್ಯ ಮಾಪಕರು ನೀಡಿದ ಅಂಕಗಳಲ್ಲಿ 45 ಕ್ಕಿಂತ ಹೆಚ್ಚು ಅಥವಾ ಕಡಿಮೆಯಾದ ವ್ಯತ್ಯಾಸ ಕಂಡು ಬಂದರೆ ಅದನ್ನು ಮೂರನೇ ಮೌಲ್ಯಮಾಪನಕ್ಕೆ ಒಳಪಡಿಸ­ಬಹುದು. ಆದರೆ, ಸಾಮಾನ್ಯ­ವಾಗಿ ಇಂತಹ ಸ್ಥಿತಿ ಬರುವುದು ಕಡಿಮೆ. ಬಂದರೂ ಅತ್ಯಲ್ಪ ಉತ್ತರ ಪತ್ರಿಕೆಗಳನ್ನು ಮೂರನೇ ಮೌಲ್ಯಮಾಪನಕ್ಕೆ ನೀಡ ಬೇಕಾ­ಗ­ಬಹುದು.

ಆದರೆ, 2011ರ ನೇಮಕಾತಿ ಪ್ರಕ್ರಿಯೆಯಲ್ಲಿ ಹೀಗೆ ಸಾಕಷ್ಟು ಪತ್ರಿಕೆಗಳನ್ನು ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಕೆಪಿಎಸ್‌ಸಿ ಮೂರನೇ ಮೌಲ್ಯಮಾಪಕರಿಗೆ ಮಾದರಿ ಉತ್ತರಗಳನ್ನೂ ನೀಡುತ್ತದೆ. ಒಂದು ಮತ್ತು 2ನೇ ಮೌಲ್ಯಮಾಪಕರು ನೀಡಿದ ಅಂಕಕ್ಕೂ ಮೂರನೇ ಮೌಲ್ಯಮಾಪಕರು ನೀಡಿದ ಅಂಕಕ್ಕೂ ಭಾರಿ  ವ್ಯತ್ಯಾಸವಿದೆ.ಮೂರನೇ ಮೌಲ್ಯಮಾಪನಕ್ಕೆ ಒಳ ಪಡಿಸಿದ ಉತ್ತರ ಪತ್ರಿಕೆಗಳಲ್ಲಿ ಶೇ 94.23ರಷ್ಟು ಪತ್ರಿಕೆಗಳಿಗೆ ಮೂರನೇ ಮೌಲ್ಯಮಾಪಕರು ಮೊದಲ ಮತ್ತು ಎರಡನೇ ಮೌಲ್ಯಮಾಪಕರಿಗಿಂತ ಹೆಚ್ಚು ಅಂಕ ನೀಡಿದ್ದಾರೆ. ಶೇ 44.23ರಷ್ಟು ಪ್ರಕರಣಗಳಲ್ಲಿ ಮೂರನೇ ಮೌಲ್ಯ ಮಾಪಕರು ಒಂದು ಮತ್ತು ಎರಡನೇ ಮೌಲ್ಯಮಾಪಕರಿಗಿಂತ ಶೇ 50ಕ್ಕೂ ಹೆಚ್ಚು ಅಂಕ ನೀಡಿದ್ದಾರೆ. ಶೇ 7.69 ಪ್ರಕರಣಗಳಲ್ಲಿ ಮೂರನೇ ಮೌಲ್ಯ ಮಾಪಕರು ಮೊದಲ ಮತ್ತು ಎರಡನೇ ಮೌಲ್ಯಮಾಪಕರಿಗಿಂತ ಶೇ 100ಕ್ಕಿಂತ ಹೆಚ್ಚು ಅಂಕ ನೀಡಿದ್ದಾರೆ.

ಶೇ 3.84 ಪ್ರಕರಣಗಳಲ್ಲಿ ಮೂರನೇ ಮೌಲ್ಯ ಮಾಪಕರು ಶೇ 150ಕ್ಕಿಂತ ಹೆಚ್ಚು ಅಂಕ ನೀಡಿದ್ದಾರೆ. ಶೇ 1.92 ಪ್ರಕರಣಗಳಲ್ಲಿ ಮೂರನೇ ಮೌಲ್ಯ­ಮಾಪಕರು ಶೇ 200 ಕ್ಕಿಂತ ಹೆಚ್ಚು ಅಂಕ ನೀಡಿದ್ದಾರೆ. ಮೌಲ್ಯ ಮಾಪನ ಕ್ರಿಯೆಯಲ್ಲಿ ಸಾಕಷ್ಟು ಅವ್ಯವ ಹಾರಗಳು ನಡೆದಿವೆ ಎನ್ನಲು ಇದು ಸಾಕ್ಷಿ ಎಂದು ಸಿಐಡಿ ವರದಿ ಹೇಳಿದೆ.ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಕೆಲವು ವಿಷಯಗಳ ಉತ್ತರ ಪತ್ರಿಕೆ ಗಳನ್ನು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತಜ್ಞ ಪ್ರಾಧ್ಯಾಪಕ ರಿಂದ ಮತ್ತೆ ಮಾಡಿಸಿದ್ದಾರೆ. ಭೂಗೋಳದಲ್ಲಿ 58, ಸಾರ್ವಜನಿಕ ಆಡಳಿತದಲ್ಲಿ 40, ಸಮಾಜ ವಿಜ್ಞಾನ ದಲ್ಲಿ 20, ರಾಜಕೀಯ ವಿಜ್ಞಾನದಲ್ಲಿ 22, ಇತಿಹಾಸದಲ್ಲಿ 20, ಮನೋ ವಿಜ್ಞಾನದಲ್ಲಿ 20, ಕನ್ನಡ ಸಾಹಿತ್ಯದಲ್ಲಿ 30, ಸಾಮಾನ್ಯ ವಿಜ್ಞಾನದ 1 ಮತ್ತು 2ನೇ ಪತ್ರಿಕೆಯಲ್ಲಿ 24 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ತಜ್ಞ ಪ್ರಾಧ್ಯಾಪ ಕರು ಮತ್ತೆ ಮೌಲ್ಯಮಾಪನ ಮಾಡಿದ್ದಾರೆ.

ಹೀಗೆ ಮಾಡಿದಾಗ ಕೆಪಿಎಸ್‌ಸಿ ನಡೆಸಿದ ಮೌಲ್ಯಮಾಪನಕ್ಕೂ ಸಿಐಡಿ ನಡೆಸಿದ ಮೌಲ್ಯಮಾಪನಕ್ಕೂ ಭಾರೀ ವ್ಯತ್ಯಾಸ ಕಂಡು ಬಂತು.

ಕೆಪಿಎಸ್‌ಸಿ ಅವೈಜ್ಞಾನಿಕವಾಗಿ ಮತ್ತು ಬೇಕಾಬಿಟ್ಟಿಯಾಗಿ ಮೌಲ್ಯಮಾಪನ ನಡೆಸಿದೆ ಎನ್ನುವುದು ಖಾತರಿ­ಯಾಯಿತು. ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ತಮಗೆ ಬೇಕಾದವರಿಗೆ ಹೆಚ್ಚಿನ ಅಂಕ ಕೊಡಿಸುವುದಕ್ಕಾಗಿ ಎಲ್ಲ ಮೂಲ­ಗಳನ್ನೂ ಬಳಸಿ ಕೊಂಡಿದ್ದರು ಎನ್ನುವುದು ಖಚಿತವಾಗಿದೆ ಎಂದು ಸಿಐಡಿ ವರದಿ ಹೇಳುತ್ತದೆ.ಆದ್ದರಿಂದ ಮುಖ್ಯಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಫಲಾನುಭವಿಗಳು, ಮೌಲ್ಯಮಾಪಕರು, ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವಿನ ಸಂಪರ್ಕದ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಿದೆ ಎಂದೂ ಸಿಐಡಿ ಪೊಲೀಸರು ಹೇಳುತ್ತಾರೆ.ತರಾತುರಿ: 2011ನೇ ಸಾಲಿನಲ್ಲಿ ಮೌಲ್ಯಮಾಪನವನ್ನು ತರಾತುರಿಯಲ್ಲಿ ಮಾಡಲಾಗಿದೆ ಎನ್ನುವುದನ್ನೂ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. 2008ರಲ್ಲಿ 141 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಮುಖ್ಯಪರೀಕ್ಷೆಗೆ 2,190 ಅಭ್ಯರ್ಥಿಗಳು ಹಾಜರಾಗಿದ್ದರು. ಒಟ್ಟು ಉತ್ತರ ಪತ್ರಿಕೆಗಳ ಸಂಖ್ಯೆ 17,520 ಇತ್ತು.ಒಟ್ಟಾರೆ 429 ಮೌಲ್ಯಮಾಪಕರು 98 ದಿನಗಳ ಕಾಲ ಮೌಲ್ಯಮಾಪನ ಮಾಡಿದ್ದರು. 2010ರಲ್ಲಿ 268 ಹುದ್ದೆ ಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆ ಯಿತು. ಮುಖ್ಯಪರೀಕ್ಷೆಗೆ 4,306 ಅಭ್ಯ ರ್ಥಿಗಳು ಹಾಜರಾಗಿದ್ದರು. 34,448 ಉತ್ತರ ಪತ್ರಿಕೆಗಳಿದ್ದವು. 846 ಮೌಲ್ಯ ಮಾಪಕರು 96 ದಿನಗಳ ಕಾಲ ಮೌಲ್ಯ ಮಾಪನ ನಡೆಸಿದರು.

2011ರ ಸಾಲಿ ನಲ್ಲಿ 362 ಹುದ್ದೆಗಳಿಗೆ ಅರ್ಜಿ ಕರೆಯ ಲಾಗಿತ್ತು. 6,205 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 49,640 ಉತ್ತರ ಪತ್ರಿಕೆಗಳಿ ದ್ದವು. 795 ಮೌಲ್ಯಮಾಪ­ಕರು 85 ದಿನಗಳಲ್ಲಿಯೇ ಮೌಲ್ಯಮಾಪ­ನವನ್ನು ಮುಗಿಸಿದರು. ಅಂದರೆ ಈ ಬಾರಿ ತರಾ ತುರಿಯಲ್ಲಿ ಮೌಲ್ಯಮಾಪನ ನಡೆಸಲಾಗಿದೆ.ಕೆಪಿಎಸ್‌ಸಿಯ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ನಿವೃತ್ತರಾಗುವುದಕ್ಕೆ ಮೊದಲೇ ನೇಮ ಕಾತಿ ಪ್ರಕ್ರಿಯೆಯನ್ನು ಮುಗಿಸಬೇಕು ಎಂಬ ಆತುರದಲ್ಲಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಮತ್ತು ಸಂದರ್ಶನ ವನ್ನು ನಡೆಸಲಾಗಿದೆ ಎನ್ನುವುದನ್ನು ಸಿಐಡಿ ವರದಿ ದೃಢಪಡಿಸಿದೆ.ಹೀಗೆ ಇಡೀ ಮೌಲ್ಯಮಾಪನ ಪ್ರಕ್ರಿಯೆಯನ್ನೇ ಕುಲಗೆಡಿಸಲಾಗಿದ್ದು ಬೇಕಾದವರಿಗೆ ಬೇಕಾದಷ್ಟು ಅಂಕವನ್ನು ನೀಡಿ ಅವರಿಗೆ ಕೆಲಸ ಕೊಡಿಸುವ ಪ್ರಯತ್ನ ನಡೆಸಲಾಗಿದೆ ಎನ್ನುವುದನ್ನು ಸಿಐಡಿ ವರದಿ ದೃಢಪಡಿಸುತ್ತದೆ.

(ಮರು ಎಣಿಕೆಯ ಕೈಚಳಕ–ನಾಳಿನ ಸಂಚಿಕೆಯಲ್ಲಿ)

ಪ್ರತಿಕ್ರಿಯಿಸಿ (+)