ಭಾನುವಾರ, ಮಾರ್ಚ್ 7, 2021
27 °C
ಸರ್ಕಾರದ ವಸತಿ ಯೋಜನೆಗಳಲ್ಲಿ ಮುಂದುವರಿದ ‘ತಾಂತ್ರಿಕ ಸಮಸ್ಯೆ’

ಮೂರು ವರ್ಷವಾದರೂ ಮನೆ ಕಟ್ಟಿದವರಿಗೆ ದುಡ್ಡಿಲ್ಲ!

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮೂರು ವರ್ಷವಾದರೂ ಮನೆ ಕಟ್ಟಿದವರಿಗೆ ದುಡ್ಡಿಲ್ಲ!

ಚಿತ್ರದುರ್ಗ: ಇಂದಿರಾ, ಬಸವ, ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಂಡಿರುವ ಫಲಾನುಭವಿಗಳಿಗೆ ಬಿಲ್ ಪಾವತಿಯಾಗದೇ, ಕಚೇರಿಯಿಂದ ಕಚೇರಿಗೆ ಬಿಲ್‌ಗಾಗಿ ಅಲೆದಾಟ ಮುಂದುವರಿದಿದೆ.ಈ ಕುರಿತು ಚಿತ್ರದುರ್ಗ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಿಗೆ ‘ರಿಯಾಲಿಟಿ  ಚೆಕ್’ಗಾಗಿ ‘ಪತ್ರಿಕೆ’ ಭೇಟಿ ನೀಡಿದಾಗ, ಮೂರು ವರ್ಷಗಳ ಹಿಂದಿನ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡು ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ನೀಡದೇ, ಕುಂಟು ನೆಪಗಳನ್ನು ಹೇಳುತ್ತಾ ಕಚೇರಿಗೆ ಅಲೆದಾಡಿಸುತ್ತಿರುವ ವಿಚಾರಗಳು ಬೆಳಕಿಗೆ ಬಂದವು. ಮಾತ್ರವಲ್ಲ, ಒಂದೊಂದು ಗ್ರಾಮ ಪಂಚಾಯ್ತಿಯಲ್ಲಿ ಎಂಟರಿಂದ ಹತ್ತು ಮಂದಿಗೆ ಮೂರು ವರ್ಷದ ಹಿಂದೆ ವಸತಿ ಯೋಜನೆಗಳಲ್ಲಿ ಬಿಡುಗಡೆಯಾದ ಹಣ ಪಾವತಿಯಾಗಿಲ್ಲದಿರುವ ವಿಚಾರವೂ ಬೆಳಕಿಗೆ ಬಂದಿದೆ.ಒಂದು ಉದಾಹರಣೆ

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಪಂಚಾಯ್ತಿಯ ವಾಸಿ ಶಾರದಮ್ಮ ಅವರಿಗೆ ೨೦೧೧-–೧೨ರಲ್ಲಿ ಆಶ್ರಯ ಮನೆ ಮಂಜೂರಾಯಿತು. ಇದ್ದ ಗುಡಿಸಲು ಕೆಡವಿ ಮನೆ ನಿರ್ಮಾಣಕ್ಕೆ ಕೈ ಹಾಕಿದರು. ಮೂರು ವರ್ಷ ಕಳೆದರೂ ಈಕೆಗೆ ಅಂತಿಮ ಕಂತಿನ ಬಿಲ್ ಪಾವತಿಯಾಗಿಲ್ಲ. ಕಳೆದ ಒಂದು ತಿಂಗಳಿಂದೆ ಮನೆ ನಿರ್ಮಾಣ ಕಾರ್ಯ ಮುಗಿಸಿದ ಸಂಭ್ರಮದ ಲ್ಲಿದ್ದರೂ, ಹೆಚ್ಚುವರಿ ಹಣ ಸರಿದೂಗಿಸಲು ಸಾಲ ಮಾಡಿದ್ದರಿಂದ ಸಾಲಗಾರರ ಕಾಟ ಹೆಚ್ಚಾಗಿದೆ.ಸರ್ಕಾರ ಮನೆ ನಿರ್ಮಾಣಕ್ಕೆ ₨ 50 ಸಾವಿರ ನಿಗದಿಪಡಿಸಿತ್ತು. ಪ್ರತಿ ಕಂತಿನಲ್ಲಿ ₨ ೧೨ ಸಾವಿರದಂತೆ ಮೂರು ಕಂತುಗಳಲ್ಲಿ ₨ ೩೬ ಸಾವಿರ ಹಣ ಶಾರದಮ್ಮ ಅವರಿಗೆ ಬಂದಿದೆ. ಇನ್ನೂ ₨ 14 ಸಾವಿರ ಬಾಕಿ ಬರಬೇಕು. ಮನೆ ಕಟ್ಟಿ ವರ್ಷ ಕಳೆಯುತ್ತಿದೆ. ಉಳಿದ ಹಣಕ್ಕಾಗಿ ಗ್ರಾ.ಪಂ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ‘ಖಾತೆ, ಛಾಯಾಚಿತ್ರ ಸೇರಿದಂತೆ ಎಲ್ಲ ರೀತಿಯ ದಾಖಲಾತಿಗಳನ್ನು ನೀಡಿ, ಜಿಪಿಎಸ್ ಸಹ ಮಾಡಲಾಗಿದೆ. ಆದರೂ ಹಣ ಬಿಡುಗಡೆಯಾಗಿಲ್ಲ’ ಎನ್ನುತ್ತಾರೆ ಅಲ್ಲಿನ ಗ್ರಾಪಂ ಪಿಡಿಒ.ಕಾರಣ ಕೇಳಿದರೆ ಜಿ.ಪಂ ಅಧಿಕಾರಿಗಳು ‘ಆಲ್‌ಲೈನ್, ಜಿಪಿಎಸ್ ಸಮಸ್ಯೆ, ಹಣ ಬಂದಿಲ್ಲ.. ಇತ್ಯಾದಿ ಕಾರಣಗಳನ್ನು ಹೇಳುತ್ತಾರೆ. ಸರ್ಕಾರ ಕೊಡುವ ಬಿಡಿಗಾಸನ್ನು ನಂಬಿ, ತಾವೊಂದಿಷ್ಟು ಸಾಲಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿರುವ ಶಾರದಮ್ಮ, ಸುನಂದಮ್ಮ, ತಿಪ್ಪಮ್ಮ ಅವರಂಥವರು ಗೋನೂರು ಗ್ರಾ.ಪಂನಲ್ಲಿ ಏಳೆಂಟು ಜನವಿದ್ದಾರೆ. ಇದೇ ಪರಿಸ್ಥಿತಿ ತಾಲ್ಲೂಕಿನ ಅನೇಕ ಕಡೆ ಇದೆ ಎನ್ನುವುದನ್ನು ಗ್ರಾ.ಪಂ. ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.ಮತ್ತೊಂದು ಘಟನೆ

ಇದೇ ಗ್ರಾಮ ಪಂಚಾಯ್ತಿಯ ಫಲಾನುಭವಿ ಆಶಾ ಗಣೇಶ್ ಅವರಿಗೆ ೨೦೧೪–-೧೫ನೇ ಸಾಲಿನಲ್ಲಿ ‘ಆಶ್ರಯ’ ಮನೆ ಮಂಜೂರಾಗಿತ್ತು. ಯೋಜನೆ ಮಂಜೂರಾದ ಕೂಡಲೇ ತಳಹದಿಯ ಕೆಲಸ ಮುಗಿಸಿದ್ದಾರೆ. ಈಗ ಮೂರು ತಿಂಗಳು ಕಳೆದಿದೆ. ಜಿಪಿಎಸ್ ಮಾಡಲಾಗಿದ್ದರೂ, ಜಿಪಿಎಸ್‌ನಲ್ಲಿ ಸರಿಯಾಗಿ ದಾಖಲಾಗುತ್ತಿಲ್ಲ. ‘ಜಂಟಿ ಗೋಡೆಯ ಮನೆ ಪಕ್ಕದಲ್ಲಿದ್ದಾಗ ಹೀಗೆ ಆಗುತ್ತದೆ’ ಎಂದು ಅಧಿಕಾರಿಗಳು ತಾಂತ್ರಿಕ ಕಾರಣ ನೀಡುತ್ತಾರೆ.ಆ ತಾಂತ್ರಿಕ ಕಾರಣವನ್ನು ಒಪ್ಪುವುದಾದರೂ, ಆಶಾ ಅವರು ನಿರ್ಮಿಸಿರುವ ಮನೆ ತಳಹದಿ ಜಂಟಿ ಗೋಡೆಗಿಂತ ಎರಡೂವರೆ ಅಡಿ ಜಾಗ ಬಿಟ್ಟು ಕಟ್ಟಲಾಗಿದೆ, ಆದರೂ ಜಿಪಿಎಸ್ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರೆ, ಅದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಆದರೆ, ಸರ್ಕಾರದ ವಸತಿ ನಿಗಮಗಳು ಜಿಪಿಎಸ್ ವ್ಯವಸ್ಥೆ ಕುರಿತು ನಿಗದಿಪಡಿಸಿರುವ ಮಾನದಂಡಗಳೇ ಅಂಥ ಸಮಸ್ಯೆಯನ್ನು ಸೃಷ್ಟಿಸುತ್ತಿರುವ ಸಾಧ್ಯತೆಗಳನ್ನು ಅಧಿಕಾರಿ ವರ್ಗದವರು ಉಲ್ಲೇಖಿಸುತ್ತಾರೆ.ಅನುಷ್ಠಾನದ ಕೊರತೆ

ಇಂದಿರಾ ಆವಾಸ್ ವಸತಿ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳುವುದರ ಜೊತೆಗೆ ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕಾಗಿ ಉಪಗ್ರಹ ಆಧಾರಿತ ಜಿಪಿಎಸ್ ತಾಂತ್ರಿಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕೆಂಬುದು ಇದರ ಉದ್ದೇಶ. ಆದರೆ ಈ ತಾಂತ್ರಿಕ ವ್ಯವಸ್ಥೆಯನ್ನೇ ಫಲಾನುಭವಿಗಳು ಅನುಮಾನಿ ಸುತ್ತಿದ್ದಾರೆ. ಅನುಮಾನಿಸುವಂತಹ ಘಟನೆಗಳು ಅವರ ಎದುರಿಗೆ ನಡೆಯುತ್ತಿವೆ.ಇಲ್ಲಿ ಜಿಪಿಎಸ್ ತಾಂತ್ರಿಕ ವ್ಯವಸ್ಥೆಯಲ್ಲಿ ಏನಾದರೂ ಲೋಪವಾಗಿದೆಯೋ ಅಥವಾ ಆ ವ್ಯವಸ್ಥೆಯನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬಳಸುವಲ್ಲಿ ವಿಫಲರಾಗುತ್ತಿದ್ದಾರೆಯೋ ಈ ಬಗ್ಗೆ ಸರಿಯಾದ ಪರಿಶೀಲನೆ ನಡೆಯಬೇಕು ಎನ್ನುತ್ತಿದ್ದಾರೆ ಗ್ರಾಮಸ್ಥರು. ಕೆಲವು ಗ್ರಾ.ಪಂ. ಸದಸ್ಯರೇ ಹೇಳುವಂತೆ ‘ಮೊದಲು ಗ್ರಾ.ಪಂ ನೌಕರರೇ ವಸತಿ ನಿಗಮದ ಮನೆ ಕಟ್ಟಿಸುತ್ತಿದ್ದರು. ಆನ್‌ಲೈನ್ ವ್ಯವಸ್ಥೆ ಬಂದ ಮೇಲೆ, ಯಾವುದೇ  ಲಾಭವಿಲ್ಲ ಎಂದು ಗೊತ್ತಾದ ನಂತರ ಸಿಬ್ಬಂದಿ ಈ ಹೊಸ ಜಿಪಿಎಸ್ ವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ’.ಭರವಸೆ ನಂತರವೂ ..

ಜಿಲ್ಲಾ ಪಂಚಾಯ್ತಿಯಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಪಿಎಸ್ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚೆಯಾಯಿತು. ಜಿ.ಪಂ. ಉಪಾಧ್ಯಕ್ಷ ಅನಿಲ್ ಕುಮಾರ್, ಕೆಲವೊಂದು ಉದಾಹರಣೆಗಳನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಇಒ ಎನ್. ಮಂಜುಶ್ರೀ ಅವರು ಜಿಪಿಎಸ್ ತಾಂತ್ರಿಕ ಸಮಸ್ಯೆಗಳಿರುವುದನ್ನು ವಿವರಿಸಿದ್ದಲ್ಲದೇ, ಇನ್ನು ಮುಂದೆ ಸಮಸ್ಯೆಯಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇಂಥ ಭರವಸೆಯ ನಡುವೆಯೂ, ಹಳ್ಳಿಗಳಲ್ಲಿ ವಸತಿ ಯೋಜನೆ ಸಮಸ್ಯೆಗಳು ಬಗೆಹರಿದಿಲ್ಲ. ಬಗೆ ಹರಿಸಲು ಯಾವ ಕ್ರಮಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ...!

ಏನಿದು ಜಿಪಿಎಸ್ ವ್ಯವಸ್ಥೆ?

ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಉಪಗ್ರಹ ಆಧಾರಿತ ವ್ಯವಸ್ಥೆ. ಇದು ಭೂಮಿಯ ಆಕ್ಷಾಂಶ ಮತ್ತು ರೇಖಾಂಶಗಳನ್ನು ನಿಖರವಾಗಿ ಗುರುತಿಸುತ್ತದೆ. ಈ ತಂತ್ರಾಂಶ ಇರುವ ಮೊಬೈಲ್‌ನಲ್ಲಿ ಫಲಾನುಭವಿಯ ಮನೆಯ ಸ್ಥಳದಲ್ಲಿ ನಿಂತು ಛಾಯಾಚಿತ್ರ ತೆಗೆದು ಅದನ್ನು ನೇರವಾಗಿ ನಿಗಮದ ಆಲ್‌ಲೈನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅಂದರೆ ಫಲಾನುಭವಿಗೆ ನೀಡಿದ ಕೋಡ್ ಸಂಖ್ಯೆಗೆ ಅನುಗುಣವಾಗಿ ಮನೆಯ ಪ್ರಗತಿ ಹಂತವನ್ನು ನಿಗಮದ ಅಧಿಕಾರಿಗಳು ಪರಿಶೀಲಿಸಿ ಹಣ ಬಿಡುಗಡೆ ಮಾಡುತ್ತಾರೆ. ಅಷ್ಟೇ ಅಲ್ಲ ಅದೇ ಸ್ಥಳದಲ್ಲಿ ನಿಂತು ಇನ್ನೊಂದು ಬಾರಿ ಬೇರೆ ಫಲಾನುಭವಿ ಕೋಡ್ ಬಳಸಿ ಚಿತ್ರ ತೆಗೆಯಲು ಜಿಪಿಎಸ್‌ನಲ್ಲಿ ಸಾಧ್ಯವೇ ಇರುವುದಿಲ್ಲ.

ಈ ಹಿಂದೆ ಯಾರದೋ ಮನೆ ತೋರಿಸಿ ಬಿಲ್ ಪಡೆದಿರುವುದು, ಮನೆ ಇಲ್ಲದಿದ್ದರೂ ಬೋಗಸ್ ಬಿಲ್‌ ತಯಾರಿಸಿ ಹಣ ಲಪಟಾಯಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಅದನ್ನು ತಡೆಯುವುದಕ್ಕಾಗಿ ಆನ್‌ಲೈನ್‌ನಲ್ಲಿ ನಿಖರವಾಗಿ ಫಲಾನುಭವಿ ಮನೆ ಇರುವ ಸ್ಥಳ, ಪ್ರಗತಿಯ ಹಂತ ಸಂಪೂರ್ಣ ವಿವರವನ್ನು ಪರಿಶೀಲಿಸಿ ಆಯಾ ಹಂತಕ್ಕೆ ಅನುಗುಣವಾಗಿ ನೇರವಾಗಿ ಗ್ರಾ.ಪಂ ವ್ಯಾಪ್ತಿಯ ಅರ್ಹ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುವ ಹೊಸ ವ್ಯವಸ್ಥೆ ಇದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.