ಶನಿವಾರ, ಫೆಬ್ರವರಿ 27, 2021
31 °C
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಹೇಶ್ವರಯ್ಯ

ಮೂವರು ಮೇಧಾವಿಗಳಿಗೆ ರಾಷ್ಟ್ರಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂವರು ಮೇಧಾವಿಗಳಿಗೆ ರಾಷ್ಟ್ರಪ್ರಶಸ್ತಿ

ಕಲಬುರ್ಗಿ: ‘ಶಾಸ್ತ್ರೀಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಮೂರು ಜನ ಮೇಧಾವಿಗಳಿಗೆ ತಲಾ ₹5 ಲಕ್ಷ ಮೊತ್ತದ ರಾಷ್ಟ್ರಪ್ರಶಸ್ತಿ ನೀಡಲು ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಸಂಸ್ಥೆಯು ಯೋಜನೆ ರೂಪಿಸಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ ಯದ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಹೇಳಿದರು.ನಗರದ ಕನ್ನಡ ಭವನದಲ್ಲಿ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಅಭಿಜಾತ ಕನ್ನಡ ಪಠ್ಯವಾಚನ ಮತ್ತು ಅಧ್ಯಯನ ತರಬೇತಿ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‘ಶಾಸ್ತ್ರೀಯ ಕನ್ನಡದಲ್ಲಿ ಕೆಲಸ ಮಾಡಿದವರು, ಪಾಶ್ಚಿಮಾತ್ಯ ಕನ್ನಡ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ಸಂಜಾತ ಕನ್ನಡ ವಿದ್ವಾಂಸರು ಸೇರಿದಂತೆ ಮೂವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಐವರು ಯುವ ಸಾಹಿತಿಗಳಿಗೆ ತಲಾ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡಲು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತೀರ್ಮಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ಹೇಳಿದರು.‘ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತ ಬಳಿಕ ಕೇಂದ್ರ ಸರ್ಕಾರ ₹50 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆ ಅನುದಾನ ಬಳಕೆ ಮಾಡಿಕೊಂಡು ಕನ್ನಡ ಕಟ್ಟುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡ ಬೇಕಾಗಿದೆ. ಕನ್ನಡದ ಮಹಾಕಾವ್ಯ, ಗ್ರಂಥಗಳನ್ನು ಇಂಗ್ಲಿಷ್ ಮತ್ತು ಯುರೋಪ್ ಭಾಷೆಗಳಿಗೆ ಅನುವಾದ ಮಾಡಬೇಕು. ಅದೇ ರೀತಿ ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಜಗತ್ತಿನ ಇತರೆ ಎಲ್ಲ ದೇಶಗಳ ಜನರೂ ಕಲಿಯುವಂ ತಾಗಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮ.ಗು.ಬಿರಾದಾರ ಮಾತನಾಡಿ, ‘ಹಳಗನ್ನಡ ಈಗ ಉಳಿಗನ್ನಡವಾಗಿದೆ. ನಾವು ಅವಕಾಶಕ್ಕಾಗಿ ಹೊಡೆದಾಡು ತ್ತೇವೆ. ಆದರೆ, ಅನುಷ್ಠಾನಕ್ಕೆ ಹೊಡೆದಾ ಡುವುದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯಲು ನಾವೆಲ್ಲ ಹೋರಾಟ ಮಾಡಿದ್ದೇವೆ. ಅದರ ಅನು ಷ್ಠಾನಕ್ಕೆ ಯಾರೂ ಯತ್ನಿಸುತ್ತಿಲ್ಲ. ಶಾಸ್ತ್ರೀಯ ಭಾಷೆ ಕನ್ನಡಕ್ಕೆ ತಾಯಿ ಬೇರು. ಆದರೆ, ನಾವು ಅದನ್ನು ಕಡೆಗಣಿ ಸುತ್ತಿದ್ದೇವೆ’ ಎಂದರು.‘ಹಳಗನ್ನಡ ಮೇಲೆ ಸಂಶೋಧನಾ ಪ್ರಬಂಧಗಳು ಬರುತ್ತಿಲ್ಲ. ಒಂದರ್ಥದಲ್ಲಿ ಸಂಶೋಧನೆಗಳು ಸತ್ತು ಹೋಗಿವೆ. ಅಧ್ಯಯನ ಮತ್ತು ಸಂಶೋಧನೆಗಳು ಪದವಿ, ನೌಕರಿಗೆ ಸೀಮಿತವಾಗುತ್ತಿವೆ. ನಿಜವಾದ ಕನ್ನಡದ ಸಂಶೋಧನೆ ಆಗುತ್ತಿಲ್ಲ. ಪಂಪ, ರನ್ನ, ಹರಿಹರ, ರಾಘವಾಂಕ ಕಳೆದು ಹೋಗಿದ್ದಾರೆ. ಪಠ್ಯದಲ್ಲಿ ಹಳಗನ್ನಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಹೊಸಗನ್ನಡವನ್ನೂ ತಪ್ಪು ತಪ್ಪಾಗಿ ಬರೆಯಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಪಿ.ಕೆ.ಖಂಡೋಬಾ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಹಳಗನ್ನಡ, ಭಾಷಾಶಾಸ್ತ್ರ, ಛಂದಸ್ಸು, ವ್ಯಾಕರಣವನ್ನು ಶಾಸ್ತ್ರೀಯವಾಗಿ ಓದಿಸಲಾಗುತ್ತಿಲ್ಲ. ಓದುವವರೂ ಇಲ್ಲ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಈ ಸಮಸ್ಯೆ ಇದೆ. ಈ ಕಾರಣಕ್ಕಾಗಿ ಹಳಗನ್ನಡವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವ ದೃಷ್ಟಿಯಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಶಿಬಿರದ ಸಂಯೋಜಕ ಡಾ.ಕೊಟ್ರಸ್ವಾಮಿ ಇದ್ದರು.***

ಹಳಗನ್ನಡ, ನಡುಗನ್ನಡದ ಸತ್ವವನ್ನು ಬಳಸಿಕೊಂಡು ಹೊಸಗನ್ನಡ ಕಟ್ಟುವ ಕೆಲಸವಾಗಬೇಕು. ಹೀಗಾಗಿ ಅಭಿಜಾತ ಕನ್ನಡ ಪಠ್ಯ ವಾಚನ ಮತ್ತು ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.

-ಮನು ಬಳಿಗಾರ, ಕಸಾಪ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.