ಗುರುವಾರ , ಮೇ 19, 2022
20 °C

ಮೆಟ್ರೊ ಪ್ರಯಾಣಕ್ಕೆ ವೈವಿಧ್ಯಮಯ ಟಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ ರೈಲಿನಲ್ಲಿ ಪ್ರಯಾಣಕ್ಕೆ ವೈವಿಧ್ಯಮಯ ಟಿಕೆಟ್ ವ್ಯವಸ್ಥೆ ಇದ್ದು, ಪ್ರಯಾಣಿಕರು ತಮಗೆ ಅನುಕೂಲವಾಗುವ ಟೋಕನ್ ಅಥವಾ ಸ್ಮಾರ್ಟ್ ಕಾರ್ಡ್ ಖರೀದಿಸಿ ಪ್ರಯಾಣಿಸಬಹುದು.

ಸ್ಮಾರ್ಟ್ ಟೋಕನ್: ಇದು ಪ್ರಯಾಣ ಮಾಡುವಾಗ ಬಳಸುವ ಟಿಕೆಟ್ ಇದ್ದಂತೆ.ಒಂದು ಸಲದ ಪ್ರಯಾಣಕ್ಕೆ ಮಾತ್ರ ಇದು ಬಳಕೆಯಾಗುತ್ತದೆ. ನಿಲ್ದಾಣದಲ್ಲಿ ಹಣ ಪಾವತಿ ಮಾಡಿ ನಿಗದಿತ ಸ್ಥಳಕ್ಕೆ ನಿಗದಿತ ದರ ಪಾವತಿಸಿದರೆ ಸ್ಮಾರ್ಟ್ ಟೋಕನ್ ಕೊಡಲಾಗುತ್ತದೆ.ಆ ಟೋಕನ್ ಅನ್ನು ಪ್ರವೇಶ ದ್ವಾರಗಳಲ್ಲಿರುವ ಸ್ವಯಂ ಚಾಲಿತ ಯಂತ್ರದ ಪ್ಯಾಡ್ ಮೇಲೆ ಸ್ಪರ್ಶಿಸಿದರೆ ಮಾತ್ರ ನಿಲ್ದಾಣಕ್ಕೆ ಪ್ರವೇಶ ತೆರೆದುಕೊಳ್ಳುತ್ತದೆ. ಅದೇ ಟೋಕನ್ ಇಟ್ಟುಕೊಂಡು ಪ್ರಯಾಣ ಮಾಡಬೇಕು. ಇಳಿಯುವ ನಿಲ್ದಾಣದಲ್ಲಿ ಸ್ವಯಂ ಚಾಲಿತ ಯಂತ್ರಕ್ಕೆ ಆ ಟೋಕನ್ ಅನ್ನು ಹಾಕಿದರೆ ಮಾತ್ರ ಹೊರಗೆ ಬರಬಹುದು.ಸ್ಮಾರ್ಟ್ ಕಾರ್ಡ್: ಹಲವು ಸಲ ಪ್ರಯಾಣ ಮಾಡುವವರಿಗೆ ಸ್ಮಾರ್ಟ್ ಕಾರ್ಡ್ ಬಹಳ ಉಪಯುಕ್ತ. ಈ ಕಾರ್ಡ್ ಬಳಕೆದಾರರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗಲಿದೆ. ರೂ 50 ಶುಲ್ಕ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. `ವಾರ್ಷಿಕ್~ ಮತ್ತು `ಸಂಚಾರ್~ ಎಂಬ ಎರಡು ಬಗೆಯ ಸ್ಮಾರ್ಟ್ ಕಾರ್ಡ್‌ಗಳನ್ನು ನಿಗಮವು ಪರಿಚಯಿಸಲಿದೆ.ಒಂದೇ ಸ್ಮಾರ್ಟ್ ಕಾರ್ಡ್‌ನಲ್ಲಿ `ವಾರ್ಷಿಕ್~ ಮತ್ತು `ಸಂಚಾರ್~ ಎರಡೂ ಬಗೆಯ ಅಥವಾ ಎರಡರಲ್ಲಿ ಒಂದು ಬಗೆಯ ಟಿಕೆಟ್ ಮಾದರಿಯನ್ನು ಬಳಸಿ ಸಂಚರಿಸಬಹುದು. ಈ ಎರಡೂ ಬಗೆಯ ಟಿಕೆಟ್ ವಿಧಾನಗಳಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. ಅದರ ವಿವರಗಳಿಗೆ ಪಟ್ಟಿಯನ್ನು ನೋಡಬಹುದು.ವಾರ್ಷಿಕ್ ಕಾರ್ಡ್‌ನಲ್ಲಿ ರೂ 50ರ ಗುಣಕದಲ್ಲಿ ಗರಿಷ್ಠ ರೂ 1500ರವರೆಗೆ ಹಣದ ಮೌಲ್ಯವನ್ನು ತುಂಬಿಸಿಕೊಳ್ಳಬಹುದು. ಪ್ರತಿ ಸಲ ಪ್ರಯಾಣ ಮಾಡಿದಾಗ ನಿಗದಿತ ಮೊತ್ತದ ಹಣ ಕಡಿತಗೊಳ್ಳುತ್ತದೆ.

 

ಈ ಕಾರ್ಡ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೆಟ್/ ಮೊಬೈಲ್ ಬ್ಯಾಂಕಿಂಗ್ ಅಥವಾ ಎಟಿಎಂಗಳಿಂದ ಹಣದ ಮೌಲ್ಯ ತುಂಬಿಸಿಕೊಳ್ಳಬಹುದು. ಬಿಎಂಆರ್‌ಸಿಎಲ್ ವೆಬ್‌ಸೈಟ್ ಅಥವಾ ಸ್ಕ್ಯ್ರಾಚ್ ಕಾರ್ಡ್‌ಗಳ ಮೂಲಕವೂ ವಾರ್ಷಿಕ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.ಇನ್ನು `ಸಂಚಾರ್~ ಕಾರ್ಡ್, ನಿರ್ದಿಷ್ಟ ಸ್ಥಳಗಳ ನಡುವೆ ನಿಯಮಿತವಾಗಿ ಸಂಚರಿಸುವವರಿಗೆ ರಿಯಾಯಿತಿ ಸೌಲಭ್ಯ ದೊರಕಿಸಿಕೊಡಲಿದೆ. ಈ ಕಾರ್ಡ್ ನೌಕರರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅನುಕೂಲಕರವಾಗಿದೆ.`ಸಂಚಾರ್ 10~ ಕಾರ್ಡ್‌ಗೆ ಒಂದು ತಿಂಗಳು, `ಸಂಚಾರ್ 40 ಮತ್ತು 50~ಕ್ಕೆ ಮೂರು ತಿಂಗಳು ಹಾಗೂ `ಸಂಚಾರ್ 100~ಕ್ಕೆ ಆರು ತಿಂಗಳ ಕಾಲಾವಕಾಶ (ವ್ಯಾಲಿಡಿಟಿ) ಇರಲಿದೆ.ಗುಂಪು ಟಿಕೆಟ್: ನಿರ್ದಿಷ್ಟ ನಿಲ್ದಾಣಗಳ ನಡುವೆ ಪ್ರಯಾಣಿಸುವ ಕನಿಷ್ಠ ಹತ್ತು ಮಂದಿಯ ಗುಂಪಿಗೆ ಕಾಗದದ ರೂಪದ ಟಿಕೆಟ್ ಕೊಡಲಾಗುವುದು. ಇಂತಹ ಕಾಗದದ ಟಿಕೆಟ್‌ಗಳನ್ನು ಪರಿಶೀಲಿಸಲು ಪ್ರತಿ ನಿಲ್ದಾಣದಲ್ಲೂ ಪ್ರತ್ಯೇಕ ಆಗಮನ/ ನಿರ್ಗಮನ ದ್ವಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹ ಗುಂಪು ಟಿಕೆಟ್‌ನಲ್ಲಿ ಪ್ರತಿ ಪ್ರಯಾಣಿಕರಿಗೂ ಶೇ 10ರಷ್ಟು ರಿಯಾಯಿತಿ ನೀಡಲಾಗುವುದು.ಮೆಟ್ರೊ ಬಸ್ ಟಿಕೆಟ್ (ಎಂಬಿಟಿ) ಪಾಸ್

ಈ ದೈನಿಕ ಪಾಸ್ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಮತ್ತು ಮೆಟ್ರೊ ರೈಲುಗಳಲ್ಲಿ ಸಂಚರಿಸಬಹುದು. ಇದರಲ್ಲೂ ಸರಳ್ ಮತ್ತು ಸರಾಗ್ ಎಂಬ ಎರಡು ಬಗೆ.ರೂ 110 ಮೌಲ್ಯದ `ಸರಾಗ್~ ಎಂಬಿಟಿ ತೆಗೆದುಕೊಂಡರೆ ವಾಯು ವಜ್ರ ಹೊರತು ಪಡಿಸಿ ಬಿಎಂಟಿಸಿಯ ಎಲ್ಲ ವರ್ಗದ ಬಸ್‌ಗಳು ಮತ್ತು ಮೆಟ್ರೊ ರೈಲಿನಲ್ಲಿ ಸಂಚರಿಸಬಹುದು.ರೂ 70 ಮೌಲ್ಯದ `ಸರಳ್~ ಎಂಬಿಟಿ ಪಾಸ್‌ನಲ್ಲಿ ಮೆಟ್ರೊ ರೈಲು ಮತ್ತು ಬಿಎಂಟಿಸಿಯ ಹವಾನಿಯಂತ್ರಣ ರಹಿತ ಬಸ್‌ಗಳಲ್ಲಿ ಪ್ರಯಾಣಿಸಬಹುದು.ನಿಲ್ದಾಣದಲ್ಲಿ ಹೆಚ್ಚು ಕಾಲ ಇದ್ದರೆ ದಂಡ!

`ನಮ್ಮ ಮೆಟ್ರೊ~ದ ನಿಲ್ದಾಣದ ಪ್ರವೇಶ ಶುಲ್ಕ ರೂ 10. ಇದೊಂದು ರೀತಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಟಿಕೆಟ್ ಇದ್ದ ಹಾಗೆ. ಆದರೆ ಪ್ಲಾಟ್‌ಫಾರಂ ಟಿಕೆಟ್‌ಗೆ ನೀಡಿರುವಷ್ಟು ಸಮಯಾವಕಾಶ ಮೆಟ್ರೊ ನಿಲ್ದಾಣದಲ್ಲಿ ಇರುವುದಿಲ್ಲ.ಮೆಟ್ರೊ ನಿಲ್ದಾಣದಲ್ಲಿ ಯಾವುದೇ ವ್ಯಕ್ತಿ 20 ನಿಮಿಷಕ್ಕಿಂತ ಹೆಚ್ಚು ಕಾಲ ಉಳಿಯುವಂತಿಲ್ಲ. ಪ್ರತಿ ನಿಲ್ದಾಣದಲ್ಲೂ ಪಾವತಿ ಪ್ರದೇಶ (ಪೇಯ್ಡ ಏರಿಯಾ) ಇದ್ದು, ಆ ಪ್ರದೇಶದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಕಾಲ ಇರುವ ವ್ಯಕ್ತಿಯನ್ನು ಹೊರ ಹಾಕುವುದಲ್ಲದೇ ಪ್ರತಿ ಗಂಟೆಗೆ ರೂ 10ರಿಂದ 50ರವರೆಗೆ ದಂಡ ವಿಧಿಸಲಾಗುವುದು.ವಿವಿಧ ನಿಲ್ದಾಣಗಳ ನಡುವೆ ಪಾವತಿ ಪ್ರದೇಶದಿಂದ ಆಗಮನ ಮತ್ತು ನಿರ್ಗಮನಕ್ಕೆ ಗರಿಷ್ಠ 120 ನಿಮಿಷಗಳ ಕಾಲಾವಕಾಶ ಇರಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.3 ಅಡಿಗಿಂತ ಎತ್ತರ ಇರುವ ಮಕ್ಕಳಿಗೆ ಟಿಕೆಟ್

ಬಸ್ ಅಥವಾ ರೈಲಿನಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ. ಆದರೆ ಮೆಟ್ರೊದಲ್ಲಿ 90 ಸೆಂಟಿ ಮೀಟರ್ ಅಥವಾ 3 ಅಡಿಗಿಂತ ಕಡಿಮೆ ಎತ್ತರ ಇರುವ ಮಕ್ಕಳು ಟಿಕೆಟ್ ಪಡೆಯುವ ಅಗತ್ಯವಿಲ್ಲ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.