ಮಂಗಳವಾರ, ಮೇ 24, 2022
27 °C

ಮೈಲಾರದಲ್ಲಿ ಕಾರ್ಣಿಕ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನ ಹಡಗಲಿ: ಮೈಲಾರ ಗ್ರಾಮದ ಡೆಂಕನ   ಮರಡಿಯಲ್ಲಿ ಭಾನುವಾರ ಸಂಜೆ ನಡೆದ ಕಾರ್ಣಿಕ ನುಡಿಯು ನಾಗರಿಕರಲ್ಲಿ ಸಂತಸದ ಹೊಳೆ ಹರಿಸಿತು.  ಪ್ರಸಕ್ತ ವರ್ಷ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆಯಲಿದೆ ಎನ್ನುವ ನುಡಿ ಕೇಳಿ ಬಂದಿತು. “ಅಂಬಲಿ ದುಂಡಗಾದೀತಲೇ ಪರಾಕ್‌” ಎನ್ನುವುದು ಈ ವರ್ಷದ ಭವಿಷ್ಯವಾಣಿಯಾಗಿದೆ.ಸ್ವಾತಂತ್ರ್ಯದ ಪೂರ್ವದಲ್ಲಿ ಇಂತಹ ಕಾರ್ಣಿಕ ನುಡಿ ಕೇಳಿ ಬಂದಿತ್ತು. ಸ್ವಾತಂತ್ರ್ಯದ  ನಂತರ ಮೊದಲ ಬಾರಿಗೆ ಇಂತಹ  ಒಳ್ಳೆಯ ಕಾರ್ಣಿಕನುಡಿ ಕೇಳಿ ಬಂದಿದೆ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ. ಭವಿಷ್ಯವಾಣಿ ಕೇಳಲು ಇಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಈ ನುಡಿಯನ್ನು ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟರು.  ಮೈಲಾರ ಲಿಂಗೇಶ್ವರನ ಜಾತ್ರೆಯ ಆಕರ್ಷಣೆಯ ಕೇಂದ್ರಬಿಂದು ಕಾರ್ಣಿಕೋತ್ಸವ. ಮೈಲಾರ ಗ್ರಾಮದ ಹೊರವಲಯದಲ್ಲಿರುವ ಡೆಂಕನಮರಡಿಯ ಬಯಲು ಪ್ರದೇಶದಲ್ಲಿ ಕಾರ್ಣಿಕ ಸಂಪ್ರದಾಯ ನಡೆಯಿತು. ಕಾರ್ಣಿಕೋತ್ಸವದ ಇಪ್ಪತ್ತೊಂದು ದಿನಗಳ ಮುಂಚಿತವಾಗಿಯೇ ಗೊರವಪ್ಪನೊಬ್ಬ ಮೌನವ್ರತ ಕೈಗೊಂಡಿದ್ದ. ಕಾರ್ಣಿಕದ ದಿನದಂದು ಗೊರವಪ್ಪ ಕಾರ್ಣಿಕವನ್ನು ನುಡಿಯುವ ಮುನ್ನ ಕಂಚಾವೀರರು, ಗೊರವಪ್ಪಗಳ ಜೊತೆಗೆ ಡೆಂಕನ ಮರಡಿಗೆ ಸಾಗಿ ಬಂದು ಧರ್ಮಾಧಿಕಾರಿ ವೆಂಕಪ್ಪ ಒಡೆಯರ್ ಆಶೀರ್ವದಿಸಿದ ನಂತರ ಸುಮಾರು 12ಅಡಿ ಎತ್ತರದ ಬಿಲ್ಲನ್ನು ಏರಿ “ಸದ್ದಲೇ ಸದ್ದು” ಎಂದು ನುಡಿದು, ನೆರೆದ ಜನಸ್ತೋಮವನ್ನು ದೀರ್ಘವಾಗಿ ನೋಡಿ ಕಾರ್ಣಿಕವನ್ನು ನುಡಿದು ಕೆಳಗೆ ಬಿದ್ದನು ಕರಿಯ ಕಂಬಳಿ ಹಿಡಿದಿದ್ದ ಗೊರವಪ್ಪಗಳು ಆತನನ್ನು ಹಿಡಿದು ಹಾಲು ಹಣ್ಣು ಸೇವನೆ ಮಾಡಿಸಿದರು.ಇದು ವರ್ಷದ ಭವಿಷ್ಯವಾಣಿ ಎಂಬ ನಂಬಿಕೆ ಜನರಲ್ಲಿದೆ. ಕಾರ್ಣಿಕದ ನಂತರ ದೇಶದಲ್ಲಿ ಮುಂದಿನ ದಿನಗಳಲ್ಲಿ ನಡೆಯ ಬಹುದಾದ ಘಟನೆಗಳ ಬಗ್ಗೆ ಜನರು ಲೆಕ್ಕಾಚಾರ ಹಾಕುತ್ತಿದ್ದುದು ಕಂಡು ಬಂತು. ಭವಿಷ್ಯದ ದಿನಗಳ ರಾಜಕೀಯ ವಿಚಾರ, ಮಳೆ-ಬೆಳೆ ಮತ್ತು ಸುಖ ನೆಮ್ಮದಿಗಳ ಬಗ್ಗೆ ಹಳ್ಳಿಗರು ಯೋಚಿಸುತ್ತಿದ್ದರು. ನೆರೆದ ಭಕ್ತ ಸಮುದಾಯದ “ಏಳು ಕೋಟಿಗೋ... ಏಳುಕೋಟಿಗೋ... ಚಾಂಗ್‌ಬಲೋ... ಚಾಂಗ್‌ಬಲೋ...”  ಉದ್ಗಾರ ಮುಗಿಲು ಮುಟ್ಟಿತ್ತು.ಗಣ್ಯರ ದಂಡು :ಕಾಗಿನೆಲೆ ಸ್ವಾಮೀಜಿ ನಿರಂಜನಾನಂದ ಪುರಿಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಸಿದ್ಧಲಿಂಗಸ್ವಾಮೀಜಿ, ಶಾಸಕ ಚಂದ್ರಾನಾಯ್ಕ, ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಶಂಕರಗೌಡ ಪಾಟೀಲ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಆರ್. ಚವ್ಹಾಣ, ತಹಸೀಲ್ದಾರ್ ಬಸವರಾಜ ಸೋಮಣ್ಣನವರ, ಸಿವಿಲ್ ನ್ಯಾಯಾಧೀಶ  ರಮಾಕಾಂತ ಚವ್ಹಾಣ, ಜಿ.ಪಂ. ಸದಸ್ಯೆ ಶೋಭಾ ಬೆಂಡಿಗೇರಿ, ಮುಖಂಡರಾದ ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ, ಸೊಪ್ಪಿನ ವೀರಣ್ಣ, ಎಂ.ಬಿ.ಬಸವರಾಜ ಕಾರ್ಣಿಕೋತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಜಾತ್ರೆಯಲ್ಲಿ ಕಾರ್ಣಿಕ ನುಡಿಯೇ ಮುಖ್ಯ. ಕಾರ್ಣಿಕವನ್ನು ಕೇಳಲು ಮತ್ತು ಗೊರವಪ್ಪ ನುಡಿಯುವುದನ್ನ ನೋಡಲು ಬರುವ ಜನಕ್ಕೆ ಲೆಕ್ಕವಿರಲಿಲ್ಲ. ಈ ಜಾತ್ರೆಯ ಕೇಂದ್ರಬಿಂದುವಾಗಿರುವ ಕಾರ್ಣಿಕ ನುಡಿಗೆ ಭಕ್ತ ಸಮೂಹ ನಾಲ್ಕು ದಿನಗಳ ಮುಂಚಿತವಾಗಿಯೇ ಮೈಲಾರಕ್ಕೆ ಬಂದು ವಾಸ್ತವ್ಯ ಹೂಡಿದ್ದರು.  ಭಾನುವಾರ  ಭಕ್ತ ಸಮೂಹವು ಸುಮಾರು 25ಏಕರೆ ಭೂ ಪ್ರದೇಶದಲ್ಲಿ ಕಾರ್ಣಿಕವನ್ನು  ಕೇಳಲು ರಾಜ್ಯದ ಬೀದರ, ಗುಲ್ಬರ್ಗಾ, ವಿಜಾಪುರ, ಗದಗ, ಕೊಪ್ಪಳ, ದಾವಣಗೆರೆ, ರಾಯಚೂರು, ಹಾವೇರಿ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿಗಳಿಂದ ಮಾತ್ರವಲ್ಲದೇ ನೆರೆಯ ರಾಜ್ಯದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದಲೂ ಭಕ್ತ ಸಮೂಹ ಮೈಲಾರಕ್ಕೆ ಆಗಮಿಸಿತ್ತು.

ಮೈಲಾರದಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರ ತುಂಬಿ ತುಳುಕಾಡುತ್ತಿತ್ತು.ಜಾತ್ರೆಯ ಪ್ರಯುಕ್ತ ಮತ್ತು ಕಾರ್ಣಿಕದ ಅಂಗವಾಗಿ ಮೈಲಾರದ ಹೊರವಲಯದ ಹೊಲ-ಗದ್ದೆಗಳಲ್ಲಿ ಬಂಡಿ, ಟ್ರ್ಯಾಕ್ಟರ್, ಮಿನಿಡೋರ್‌ಗಳು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ಬೀಡು ಬಿಟ್ಟಿದ್ದವು. ಪ್ರಯಾಣಿಕರಿಗಾಗಿ ಹಡಗಲಿ ಡಿಪೋದಿಂದ ಕಳೆದ ಮೂರು ದಿನಗಳಿಂದ ಜಾತ್ರಾ ವಿಶೇಷ ವಾಹನಗಳು ಎಡೆಬಿಡದೆ ಸಂಚರಿಸಿದವು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.