ಶನಿವಾರ, ಮೇ 15, 2021
24 °C

ಮೈಸೂರಿನ ಮೃಗಾಲಯದಲ್ಲಿ...

ಸತ್ಯೇಶ್ ಎನ್.ಬೆಳ್ಳೂರ್ Updated:

ಅಕ್ಷರ ಗಾತ್ರ : | |

ಎಣಿಸಿದಂತೆಯೆ ಎಲ್ಲ ನಡೆಯದೆಯೆ ಇರುವಾಗ/

ಮಣಿಯದೆಯೆ ಅಡಚಣೆಗೆ, ದಣಿದು ಕೂರದೆಯೆ//

ಅಣಿಗೊಳಿಸು ಹೊಸತೊಂದು ಪರಿಹಾರವನು ಅಂದೆ/

ಮಣಿಮಕುಟ ನಿನ್ನದೆಲೊ!-ನವ್ಯಜೀವಿ//

ಈ ಹಿಂದೆಯೇ ತಿಳಿಸಿದ ಹಾಗೆ ಬೋರ್ಡ್‌ರೂಮಿನಲ್ಲಿ ಹೊರಹೊಮ್ಮುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಯದು. ಅಂದರೆ ಕಂಪನಿಯೊಂದರ ಹಿರಿಯ ಅಧಿಕಾರಿ ವರ್ಗದ್ದು.ಇವರಲ್ಲಿ ಐದು ವರ್ಷಗಳ ನಂತರದ `ದೂರದೃಷ್ಟಿ~ ಇಲ್ಲದಿದ್ದರೂ ನಾಳೆಯ ಕಾರ್ಯನಿರ್ವಹಣೆಯ ಸಂಪೂರ್ಣ ಜ್ಞಾನವಂತೂ ಇರಲೇಬೇಕು. ಇಡಿಯ ಕಂಪನಿಯ ಯಶಸ್ಸಿನ ಗುಟ್ಟನ್ನು ಗೊತ್ತುಮಾಡಿಕೊಂಡು ಅದನ್ನು ಪುಷ್ಟೀಕರಿಸುವಂತೆ ತಮ್ಮ ಗುಂಪನ್ನು ಮುನ್ನಡೆಸಿಕೊಂಡು ಹೋಗುವಂತಹ ಕುಶಲತೆ ಹಾಗೂ ಸಮಯಪ್ರಜ್ಞೆ ಇರಬೇಕು.`ಹನಿಹನಿಗೂಡಿದರೆ ಹಳ್ಳ~ವೆಂಬ ಗಾದೆಯ ತಳಹದಿಯಲ್ಲಿ ತನ್ನೆಲ್ಲ ಕೆಲಸಗಳನ್ನೂ ಒಂದೆಡೆ ಹನಿಗೂಡಿಸುವತ್ತ ಮುಂದಾಗಬೇಕು. ಬೋರ್ಡ್‌ರೂಮಿನಲ್ಲಿ ಕುಳಿತವನಿಗಿರಬೇಕಾದ ಗುಣಗಳೆಲ್ಲ ಬೋರ್ಡ್‌ರೂಮಿನ ಹೊರಗೆ ಕಾರ್ಯನಿರ್ವಹಿಸುವ ಇವನಲ್ಲೂ ಇರಬೇಕು. ಆದರೆ, ಇಬ್ಬರಲ್ಲೂ ಇರಬೇಕಾದ ಗುಣಗಳು ಮೇಲ್ನೋಟಕ್ಕೆ ಒಂದೇ ಎಂದು ತೋರಿಬಂದರೂ ಅವುಗಳೆರಡರ ಒಳಪದರಗಳಲ್ಲಿ ಸ್ವಲ್ಪ ವ್ಯತ್ಯಾಸವುಂಟು.ಉದಾಹರಣೆಗೆ ಬೋರ್ಡ್‌ರೂಮಿಗೆ ಬೆಂಗಳೂರಿನಿಂದ ಹಾಸನಕ್ಕೆ ಹೋಗಬೇಕೆಂಬ ಬಯಕೆ. ಅದಕ್ಕೆ ಬೇಕಾದ ಯೋಜನೆಯೊಂದನ್ನು ರೂಪಿಸಿಕೊಳ್ಳುತ್ತದೆ. ತನ್ನ ಜನರನ್ನು ಪ್ರೇರೇಪಿಸುತ್ತದೆ. ಯೋಜನೆಯ ಯಶಸ್ಸನ್ನು ನಿರ್ಧರಿಸುವ ಚೌಕಟ್ಟನ್ನು ನಿರ್ಮಿಸುತ್ತದೆ. ಬೆಂಗಳೂರಿನಿಂದ ಹಾಸನಕ್ಕೆ ತಲುಪಲು ಅಳವಡಿಸಿಕೊಳ್ಳಬೇಕಾದ ಎಲ್ಲ ನಿಯಮಾವಳಿಗಳನ್ನು ಉಲ್ಲೇಖಿಸುತ್ತದೆ. ಆ ಪ್ರಯಾಣಕ್ಕೆ ಬೇಕಾದ ಸವಲತ್ತುಗಳನ್ನು ಕಲ್ಪಿಸುತ್ತದೆ. ಅಲ್ಲಿಗೆ ಅದರ ಒಂದು ಹಂತದ ಕರ್ತವ್ಯ ಮುಗಿದಂತೆ.ಆದರೆ, ಬೆಂಗಳೂರಿನಿಂದ ಹಾಸನ ತಲುಪಲು ಹತ್ತು ಹಲವು ದಾರಿಗಳುಂಟು. ಬಸ್ಸು ಟ್ರೇನುಗಳಿಂದ ಹಿಡಿದು ಕಾಲ್ನಡಿಗೆಯವರೆಗೆ ಅದೆಷ್ಟೋ ವಿಧಾನಗಳುಂಟು. ಆದಿ ಅಂತ್ಯಗಳ ನಡುವೆ ವಿಶ್ರಮಿಸಿಕೊಳ್ಳಲು ಸಾಕಷ್ಟು ತಾಣಗಳುಂಟು. ಇವುಗಳಲ್ಲಿ ಸರಿ ಎಂದು ತೋರಿದುದನ್ನು ಆರಿಸಿಕೊಂಡು, ಒಂದಕ್ಕೊಂದನ್ನು ಜೋಡಿಸಿಕೊಂಡು ಬೋರ್ಡ್‌ರೂಮಿನ ನಿಯಮಾವಳಿಗಳ ಚೌಕಟ್ಟಿನಲ್ಲೇ ಅತ್ಯಂತ ಮಹತ್ತರವಾದ ಯಶಸ್ಸನ್ನು ಹೊಂದುವುದು ಬೋರ್ಡ್‌ರೂಮಿನ ಸುತ್ತಮುತ್ತಲಿನವರ ಕರ್ತವ್ಯಗಳಲ್ಲಿ ಪ್ರಾಮುಖ್ಯವಾದದ್ದು.ಒಬ್ಬ ನಿರ್ಮಾಪಕನಾದರೆ ಮತ್ತೊಬ್ಬ ನಿರ್ದೇಶಕ, ಇಬ್ಬರೂ ಕೈ ಮಿಲಾಯಿಸದೆ ಕೈ ಜೋಡಿಸಿದರೆ ನಟರ ಹಾಗೂ ತಾಂತ್ರಿಕ ವರ್ಗದವರೆಲ್ಲರ ಪ್ರಾಮಾಣಿಕ ಪರಿಶ್ರಮಕ್ಕೆ ತಕ್ಕ ಬೆಲೆ, ಒಳ್ಳೆಯ ಚಿತ್ರವೊಂದರ ನಿರ್ಮಾಣ.ಅದನ್ನು ನೋಡಲು ಬರುವ ಷೇರುದಾರರಿಗೆಲ್ಲ ಅವರು ಹಾಕಿದ ಹಣಕ್ಕೆ ಸೂಕ್ತ ಪ್ರತಿಫಲ! ಚಿತ್ರದ ಈ ಯಶಸ್ವೀ ತಂಡಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಪುರುಸೊತ್ತಿಲ್ಲದ ಕೆಲಸ. ಮತ್ತೊಂದು ಚಿತ್ರ ನಿರ್ಮಾಣ. ಹೀಗೇ ಮುಂದುವರೆಯುತ್ತದೆ.ಕಂಪನಿಗಳ ವಹಿವಾಟು ಕೂಡ ಇದರಿಂದ ತೀರಾ ಹೊರತಾದುದೇನಲ್ಲ. ಇಲ್ಲಿನ ನಿರ್ಮಾಪಕನನ್ನು ಕೊಂಚ ಕಾಲ ಬದಿಗಿಟ್ಟು ನಮ್ಮೆಲ್ಲ ನಿರ್ದೇಶಕರಿಗೆ ಇರಬೇಕಾದ ಗುಣಗಳೇನು ಎಂಬುದನ್ನು ಮುಂದಿನ ಕೆಲ ಅಂಕಣಗಳಲ್ಲಿ ನೋಡೋಣ. ಬೋರ್ಡ್‌ರೂಮಿನ ಸುತ್ತಮುತ್ತಲಿನ ನಾಯಕರನ್ನು ಪರಿಚಯ ಮಾಡಿಕೊಳ್ಳೋಣ.ನನ್ನ ತಾತನ ಮನೆ ಇದ್ದದ್ದು ಮೈಸೂರಿನಲ್ಲಿ. ಹಾಗಾಗಿ ನಾನು ಪ್ರೈಮರಿ ಶಾಲೆಯಲ್ಲಿದ್ದ ದಿನಗಳಲ್ಲಿ ದಸರಾ ರಜೆಗೆ ಮೈಸೂರಿಗೆ ಹೋಗಿಬರುವ ವಾಡಿಕೆ ಇತ್ತು. ಅಲ್ಲಿನ ರೈಲು ನಿಲ್ದಾಣದಿಂದ ಶುರುವಾಗುತ್ತಿದ್ದ ಜಟಕಾ ಗಾಡಿಯ ಪ್ರಯಾಣದಿಂದಲೇ ಮೈಸೂರು ಮನಸ್ಸನ್ನು ಸೂರೆಗೊಳ್ಳುತ್ತಿತ್ತು.ನಂತರದ ದಿನಗಳ ಅಂಬಾರಿ ಮೆರವಣಿಗೆ, ಕಲಾಮೇಳಗಳು, ವಸ್ತುಪ್ರದರ್ಶನಗಳು, ಕುಸ್ತಿ ಆಟಗಳು ಹೀಗೆ ಎಲ್ಲವೂ ನನಗೆ ದಿನನಿತ್ಯದ ಸಂಭ್ರಮ, ಆದರೆ, ಈ ಎಲ್ಲ ವಿಶೇಷತೆಗಳನ್ನೂ ಮೀರಿಸಿದ ಮೈಸೂರಿನ ಆಕರ್ಷಣೆ ಎಂದರೆ ಅಲ್ಲಿನ ಮೃಗಾಲಯ, ಮೈಸೂರಿಗೆ ಹೋದಾಗಲೆಲ್ಲ ವಾರಕ್ಕೊಮ್ಮೆಯಾದರೂ ಮೃಗಾಲಯಕ್ಕೆ ಕರೆದೊಯ್ಯುವಂತೆ ಅಪ್ಪನನ್ನು ಪೀಡಿಸುತ್ತಿದ್ದೆ.ಮೃಗಾಲಯದಲ್ಲಿ ಗಂಟೆಗಳ ಕಾಲ ಅಡ್ಡಾಡುತ್ತ, ಜೇಬಿನಲ್ಲಿ ಪೇರಿಸಿಕೊಂಡಿದ್ದ ಕಡಲೇಕಾಯಿ ಬೀಜವನ್ನು ಮೆಲ್ಲುತ್ತ, ನೀರಿನಲ್ಲಿ ಮುಳುಗಿರುವ ಭಾರಿ ಗಾತ್ರದ ಹಿಪ್ಪೊ ಬಾಯಿ ತೆರೆಯುವುದನ್ನೇ ನಿಂತು ಕಾಯುವುದಿದೆಯಲ್ಲ ಅದೊಂದು ಅಮೋಘ ಅನುಭವ. ಕೈಯೊಳಗೆ ಕ್ಯಾಮೆರಾ ಇಲ್ಲದಿದ್ದರಿಂದ ಆ ಚಿತ್ರಗಳೆಲ್ಲ ಮನಸ್ಸಿನ ಹಾರ್ಡ್ ಡಿಸ್ಕಿನಲ್ಲಿ ಅಚ್ಚಳಿಯದೆ ಹೀಗೆಯೇ ಉಳಿದುಬಿಟ್ಟಿದೆ!ಮೃಗಾಲಯವನ್ನು ಹೊಕ್ಕ ತಕ್ಷಣಕ್ಕೆ ಎಡಕ್ಕೆ ತಿರುಗಬೇಕು. ಆದರೂ ಬಲ ದಿಕ್ಕಿನಲ್ಲಿ ಅನತಿ ದೂರದಲ್ಲಿ ಒಂದು ಸುಂದರ ಪ್ರಾಣಿ ಆಗಸವನ್ನು ಚುಂಬಿಸುತ್ತಿರುವಂತೆ ಕಾಣಿಸುತ್ತದೆ. ಅದರ ಸಮ್ಮೊಹನಾ ಶಕ್ತಿ ಅಷ್ಟಿಷ್ಟಲ್ಲ. ಆದರೂ ಆ ಕ್ಷಣಕ್ಕೆ ಅದರ ಹತ್ತಿರ ಹೋಗುವಂತಿಲ್ಲ. ಎಡಕ್ಕೆ ತಿರುಗಿ ಎಂಬ ಸಂಕೇತವನ್ನನುಸರಿಸಿ ನಾವು ಬರುವುದು ಮೃಗಾಲಯದ ಪ್ರಾಣಿ ಸಂಗ್ರಹಾಲಯಕ್ಕೆ. ಸಂಗ್ರಹಾಲಯದ ಬಾಗಿಲನ್ನು ಸೇರುವವರೆಗೂ ಹಿಂತಿರುಗಿ ನೋಡುತ್ತ ಆ ಪ್ರಾಣಿಯ ಅಮೋಘ ದೃಶ್ಯವನ್ನು ಸವಿಯುತ್ತಿರುತ್ತಿದೆ.ತದನಂತರ ಪುಟ್ಟ ಪ್ರಾಣಿಗಳ, ಪಕ್ಷಿಗಳ, ಹಾವುಗಳ ಸಾಲು ಸಾಲು ಬೋನುಗಳು. ಅವುಗಳನ್ನೆಲ್ಲ ದಾಟಿ ಬಂದಾಗ ಹುಲಿರಾಯನ ಹೀಗೂ ವನರಾಜನ ದರ್ಶನ, ಆಮೇಲೆ ಗಜರಾಜನನ್ನು ಹತ್ತಿ ಇಳಿದು ಚಿರತೆಗಳ ಬೆನ್ನು ತಟ್ಟಿ ದೂರದಲ್ಲಿ ನಿಂತ ಘೇಂಡಾಮೃಗವನ್ನು ಕಾಣುತ್ತ ಅದರ ಮುಖಕ್ಕೆ ಇನ್ನೂ ಅಂಟಿರುವ ಕೊಂಬನ್ನು ವೀಕ್ಷಿಸಿ ನಿಟ್ಟುಸಿರೊಂದನ್ನು ಬಿಡುವ ಸರಿ ಹೊತ್ತಿಗೆ ಜಿಂಕೆಗಳ ಮಹಾಪೂರ.ಇವೆಲ್ಲವನ್ನೂ ಕಣ್ಣುಗಳಲ್ಲಿ ತುಂಬಿಸಿಕೊಂಡು ಹೀಗೆಯೇ ಹೊರ ಬಂದುಬಿಟ್ಟೆವು ಎನ್ನುವಷ್ಟರಲ್ಲಿ ಮತ್ತೆ ಮೊದಲಲ್ಲಿ ನೋಡಿದ್ದ ಆ ಸುಂದರ ಪ್ರಾಣಿಯ ದರ್ಶನ. ಆದರೆ ಈಗ ತೀರಾ ಹತ್ತಿರದಲ್ಲಿ, ನಾವು ಚಿಕ್ಕವರಿದ್ದಾಗ ಅದರ ಮೈ ಮುಟ್ಟುವಷ್ಟು ಹತ್ತಿರ ಹೋಗುವಂತಹ ಅವಕಾಶವಿತ್ತು. ಆದರೆ ಈಗೆಲ್ಲ ನಮ್ಮಿಬ್ಬರ ನಡುವೆ ದೊಡ್ಡ ಕಂದಕ. ಆಳೆತ್ತರದ ಬೇಲಿ!ಮೈಸೂರಿನ ಮೃಗಾಲಯವನ್ನು ಆನಂದಿಸಿರುವ ಎಲ್ಲರಿಗೂ ನಾನು ಹೇಳುತ್ತಿರುವ ಪ್ರಾಣಿಯ ಪರಿಚಯ ಇಷ್ಟರ ಹೊತ್ತಿಗೆ ಆಗಿರುತ್ತದೆ. ಪ್ರಾಣಿಲೋಕದ ಅತ್ಯಂತ ಎತ್ತರದ ಜೀವಿಯೆಂಬ ಅರ್ಹತೆಗೆ ಪಾತ್ರವಾದ ಜಿರಾಫೆ!ಜಿರಾಫೆಯ ಬಗ್ಗೆ ಒಂದು ಕತೆಯುಂಟು. ಆಫ್ರಿಕಾದ ಮೂಲದ ಈ ಪ್ರಾಣಿಗೆ ಮೊದಲಲ್ಲಿ, ಅಂದರೆ ಶತಮಾನಗಳ ಹಿಂದೆ ಪುಟ್ಟದೊಂದು ಕುತ್ತಿಗೆ ಇತ್ತಂತೆ. ನಮ್ಮ ಹಸುಗಳಿಗೆ ಇರುವ ಹಾಗೆ, ನೆಲದ ಮೇಲಿನ ಆಹಾರವನ್ನೆಲ್ಲ ಬೇರೆ ಪ್ರಾಣಿಗಳು ಕಬಳಿಸಿದ್ದರಿಂದ ಈ ದೊಡ್ಡ ಗಾತ್ರದ, ಪುಟ್ಟ ಕೊರಳಿನ ಜಿರಾಫೆಗೆ ಆಹಾರದ ಕೊರತೆಯುಂಟಾಯಿತು.ಆದರೆ, ತನಗೆ ಬೇಕಾದಷ್ಟು ಪ್ರಮಾಣದ ರುಚಿಕರವಾದ ಎಲೆಬಳ್ಳಿಗಳು, ಹಣ್ಣುಗಳು ಅದಕ್ಕೆ ಎತ್ತರದ ಮರಗಳಲ್ಲಿ ಕಾಣಿಸಿತು. ದಿನೇ ದಿನೇ ಆ ಮರಗಳ ಕೊಂಬೆಗಳನ್ನು ಸಮೀಪಿಸಬೇಕೆಂಬ ಸನ್ನಾಹದಲ್ಲಿ ಜಿರಾಫೆಯ ಪುಟ್ಟ ಕೊರಳು ಎಳೆಯುತ್ತ, ಬೆಳೆಯುತ್ತ ನೀಳವಾಯಿತಂತೆ, ಮನುಜ ವಿಕಸನವಾದದ ಅನೇಕ ದಾರ್ಶನಿಕರು ಈ ಕತೆಯನ್ನು ಪುಷ್ಟೀಕರಿಸಿದರೂ ಈ ಕತೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವವರೂ ಅನೇಕರಿದ್ದಾರೆ. ಆದ್ದರಿಂದ ಆ ಚರ್ಚೆಗೆ ಅನುವು ಮಾಡಿಕೊಡದೆ ನಮ್ಮದೇ ನಿಟ್ಟಿನಲ್ಲಿ ಸ್ವಲ್ಪ ಯೋಚಿಸೋಣ.ಈ ಕತೆ ನಿಜವೇ ಆದ ಪಕ್ಷದಲ್ಲಿ, ಆ ಕಾಲಕ್ಕೆ ಜಿರಾಫೆಯ ಜೊತೆ ಅದೆಷ್ಟು ಇನ್ನಿತರ ಪ್ರಾಣಿಗಳಿದ್ದವು. ಅವೆಲ್ಲಕ್ಕೂ ನೆಲದಲ್ಲೇ ಆಹಾರ ಸಿಕ್ಕಿರುವ ಸಾಧ್ಯತೆ ಕಡಿಮೆ. ಆದರೆ ನೆಲ ಬಿಟ್ಟು ಮೇಲೆ ನೋಡುವ ಪ್ರಯತ್ನವನ್ನು ಮೊದಲು ಮಾಡಿದ್ದು ಜಿರಾಫೆ.ಆದ್ದರಿಂದಲೇ ಅದಕ್ಕೆ ಇಲ್ಲಿ ಕ್ಷೀಣಿಸುತ್ತಿದ್ದ ಆಹಾರ ಮೇಲೆಯೇ ಸಮೃದ್ಧಿಯಾಗಿರುವುದು ಕಾಣಿಸಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಆ ಆಹಾರವನ್ನು ತನ್ನದಾಗಿಸಿಕೊಂಡರೆ ಜೀವ ಉಳಿಸಿಕೊಳ್ಳುವುದರ ಜೊತೆಯಲ್ಲೇ ಸಂತೋಷವಾಗಿಯೂ ಬದುಕಬಲ್ಲೆ ಎಂದೆನಿಸಿದ್ದೇ ತಡ ಅದರ ಅನುಷ್ಠಾನದಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿತು.ತನ್ನೆಲ್ಲ ಚೈತನ್ಯವನ್ನೂ ಆ ಒಂದೇ ನಿಟ್ಟಿನಲ್ಲಿ ಕೇಂದ್ರೀಕರಿಸಿಕೊಂಡು ತನ್ನ ಪುಟ್ಟ ಕೊರಳನ್ನು ಮೇಲಿರುವ ಆಹಾರದೆಡೆಗೆ ನಿರಂತರವಾಗಿ ಚಾಚುತ್ತ ಬಂದಿದೆ. ಮರದ ಫಲ ತನ್ನೆಡೆಗೆ ಬಾಗದಿದ್ದರೇನಂತೆ, ಜಿರಾಫೆಯ ಸಂಕಲ್ಪಕ್ಕೆ, ನಿರಂತರ ಪರಿಶ್ರಮಕ್ಕೆ ಅದರ ಕೊರಳೇ ನೀಳವಾಗುತ್ತ ಎತ್ತರದಲ್ಲಿದ್ದ. ಆಹಾರವನ್ನು ದಕ್ಕಿಸಿಕೊಂಡಿದೆ.ಇದೊಂದು ಅದ್ಭುತ. ಸಾಯುವ ಹೊತ್ತಿನಲ್ಲಿದ್ದರೂ ಮನಸ್ಸು ಮಾಡಿದರೆ ಹೇಗೆ ಪರಿಹಾರಗಳು ಕಾಣಿಸಿಕೊಂಡಾವು ಎಂಬುದಕ್ಕೆ ಒಳ್ಳೆಯ ನಿದರ್ಶನ!ಬೆಂಗಳೂರಿನಿಂದ ಹಾಸನಕ್ಕೆಂದು ಬಸ್ಸಿನಲ್ಲಿ ಹೊರಟಾಗ ಮಾರ್ಗಮಧ್ಯದ ಬೆಳ್ಳೂರ್ ಕ್ರಾಸಿನಲ್ಲಿ ಅದೇನೋ ಮುಷ್ಕರದಿಂದಾಗಿ ದಾರಿ ಬಂದಾಗಿದೆ. ಅಲ್ಲೇ ಕೈಚೆಲ್ಲಿ ಮರದಡಿಯಲ್ಲಿ ಮೈಚೆಲ್ಲಿ ಮಲಗಿಬಿಡುವುದು ಒಂದು ದಾರಿ.

ಮುಷ್ಕರ ಮುಗಿಯುವವರೆಗೂ ಅಲ್ಲೇ ಕುಳಿತಿರಬಹುದು! ಆದರೆ, ಬಸ್ಸಿನಿಂದ ಇಳಿದು, ಅಲ್ಲಿಂದ ಸುಮಾರು ದೂರ ನಡೆದು, ಯಾವುದೋ ಎತ್ತಿನ ಬಂಡಿಯಲ್ಲಿ ಸಕಲೇಶಪುರ ಸೇರಿ, ಅಲ್ಲಿಂದ ಹಾಸನಕ್ಕೆ ಆಟೋ ಹಿಡಿದು ಹೋಗುವವನು ಜಿರಾಫೆಯ ವಂಶಜ!ದೈವದತ್ತ ಇತಿಮಿತಿ ಕೂಡ ಹಿಡಿದ ಗುರಿ ಸಾಧನೆಯಲ್ಲಿ ಅಡಚಣೆ ಆದಾಗ, ಅವುಗಳನ್ನೇ ಅತ್ಯಂತ ಹಿತವಾಗಿಸಿಕೊಂಡು ಬಳಸುತ್ತ ಮತ್ತೆ ಗುರಿ ಸಾಧನೆಯ ಪಥದಲ್ಲಿ ತೊಡಗುವುದು ಹಾಗೂ ಆ ಗುರಿಯನ್ನು ಸಾಧಿಸಿಕೊಳ್ಳುವುದು, ನಮ್ಮೆಲ್ಲರಿಗೂ ಜಿರಾಫೆ ಹೇಳಿಕೊಡುವ ಪಾಠ.ಬೋರ್ಡ್‌ರೂಮಿನ ಯೋಜನೆಗಳೆಲ್ಲ ಎಲ್ಲ ಕಾಲಕ್ಕೂ ವಾಸ್ತವದಲ್ಲಿ ಸರಾಗವಾಗಿ ಸಾಗುವುದಿಲ್ಲ. ಆ ಹಾದಿಯಲ್ಲಿ ಅಡಚಣೆಗಳುಂಟಾದಾಗ ಆ ಅಡಚಣೆಯನ್ನು ಸುತ್ತಿ ಬಳಸಿ, ಹಿಂದಕ್ಕಟ್ಟಿ, ಮೆಟ್ಟಿ ಮುಂದೆ ಸಾಗುವುದು ಬೋರ್ಡ್‌ರೂಮಿನ ಸುತ್ತಮುತ್ತಲಿನವರ ಪ್ರಯತ್ನವಾಗಿರಬೇಕು. ಆ ಪ್ರಯತ್ನದಲ್ಲಿ ಅವರಿಗೆ ಜಿರಾಫೆಯ ನೀಳ ಕೊರಳು ಸರ್ವದಾ ನೆನಪಿರಲಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.