ಭಾನುವಾರ, ಫೆಬ್ರವರಿ 28, 2021
23 °C
ಹೈನುಗಾರಿಕೆಯಷ್ಟೇ ಆದಾಯದ ಮೂಲವಾದ ಮೊಲಗಳು

ಮೊಲ ಸಾಕಣೆಯಿಂದ ಭಾರಿ ಆದಾಯ

ವಿ.ಶ್ರೀನಿವಾಸಾಚಾರಿ ಬಾಬು Updated:

ಅಕ್ಷರ ಗಾತ್ರ : | |

ಮೊಲ ಸಾಕಣೆಯಿಂದ ಭಾರಿ ಆದಾಯ

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ರಾಸುಗಳು ಮತ್ತು ಕೋಳಿ ಸಾಕಾಣಿಕೆಯಷ್ಟೇ ಅಲ್ಲ, ಮೊಲಗಳ ಸಾಕಾಣಿಕೆಯು ಮಹತ್ವ ಪಡೆದಿದೆ. ರಾಸುಗಳ ಸಾಕಾಣಿಕೆಯಿಂದ ಹೈನುಗಾರಿಕೆ ಪ್ರಮುಖ್ಯತೆ ಗಳಿಸಿದರೆ, ಕೋಳಿ ಮಾಂಸಕ್ಕೂ ಸಾಕಷ್ಟು ಬೇಡಿಕೆಯಿದೆ. ಇವುಗಳ ಮಧ್ಯೆ ಮೊಲಗಳ ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆಯತೊಡಗಿದೆ. 8ರಿಂದ 10 ಮೊಲಗಳು ಸಾಕಣೆ ಮಾಡಿಕೊಂಡು ಕೆಲವರು ಬದುಕು ಕಂಡುಕೊಂಡಿದ್ದಾರೆ.ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಸಮೀಪದ ಅರೂರು ಗ್ರಾ.ಪಂ. ವ್ಯಾಪ್ತಿಯ ಬಸವನಪತಿ ಗ್ರಾಮದಲ್ಲಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಬಿ.ಎನ್‌.ಚನ್ನಪ್ಪರೆಡ್ಡಿ ಅವರು ಹವ್ಯಾಸಿ ರೂಪದಲ್ಲಿ ಮೊಲ ಸಾಕಣೆ ನಡೆಸಿದ್ದಾರೆ. ಕುರಿ, ಕೋಳಿ ಮತ್ತು ಮೇಕೆ ಮಾಂಸಕ್ಕೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಿದೆ. ಜನರು ಅವುಗಳನ್ನು ಕೊಳ್ಳುತ್ತಾರೆ. ಮೊಲದ ಮಾಂಸ ಕೊಬ್ಬುರಹಿತವಾಗಿರುವ ಕಾರಣ ಉತ್ತಮ ಆರೋಗ್ಯಕ್ಕೂ ಪೂರಕ ಎಂದು ಬಿ.ಎನ್‌.ಚನ್ನಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.ಮೊಲಗಳು ಎಲ್ಲ ರೀತಿಯ ಹುಲ್ಲು, ಹಸಿರೆಲೆ, ಸೊಪ್ಪು, ತರಕಾರಿ ಗಡ್ಡೆಗೆಣಸು, ಮೊಳಕೆಕಾಳುಗಳು ತಿನ್ನುತ್ತವೆ. ಮನೆಯಲ್ಲೂ ಕೂಡ ಧಾನ್ಯ ಮಿಶ್ರಣ ತಯಾರಿಸಿ ಕೊಡಬಹುದು. ಬೆಳೆಯುವ ಮರಿಗಳಿಗೆ ಶೇ 20ರಷ್ಟು ಮತ್ತು ತಾಯಿ ಮೊಲಗಳಿಗೆ ಶೇ 16ರಷ್ಟು ಪೌಷ್ಟಿಕಾಂಶ ನೀಡಬೇಕು. ಅವುಗಳನ್ನು ಉತ್ತಮ ರೀತಿಯಲ್ಲಿ ಸಾಕಾಣಿಕೆ ಮಾಡಿದ್ದಲ್ಲಿ, ಉದ್ಯಮ ಬೆಳೆಯುತ್ತದೆ ಎಂದು ತಿಳಿಸಿದರು.ಮೊಲ ಸಾಕಲು ಕಡಿಮೆ ಸ್ಥಳಾವಕಾಶ ಸಾಕು. ಮನೆಯ ಹಿತ್ತಲಲ್ಲೂ ಸ್ಥಳ ಕಲ್ಪಿಸಬಹುದು. ಮೊಲಗಳ ವಂಶಾಭಿವೃದ್ಧಿ ಇತರ ಪ್ರಾಣಿಗಳಿಂತ ಅತಿ ವೇಗವಾಗಿದ್ದು, 5ರಿಂದ 6 ತಿಂಗಳು ಅವಧಿಯಲ್ಲಿ ಪ್ರಾಯಕ್ಕೆ ಬರುತ್ತವೆ. ವರ್ಷಕ್ಕೆ 6 ಬಾರಿ ಮರಿ ಹಾಕುತ್ತವೆ. ಒಂದು ವರುಷಕ್ಕೆ ಒಂದು ಮೊಲದಿಂದ 30ರಿಂದ 40 ಮರಿಗಳನ್ನು ಪಡೆಯಬಹುದು. ಹುಟ್ಟಿದ ಮರಿಗಳನ್ನು ತಾಯಿಯಿಂದ 30ರಿಂದ 45 ದಿನಗಳ  ಅವಧಿಯಲ್ಲಿ ಬೇರ್ಪಡಿಸಬಹುದು ಎಂದು ತಿಳಿಸಿದರು.ಒಟ್ಟು 7 ಹೆಣ್ಣು ಮೊಲಗಳು ಸರಾಸರಿ ಒಂದು ಬಾರಿಗೆ 6 ಮರಿಗಳನ್ನು ಹಾಕಿದರೆ, ಒಟ್ಟು 42 ಮರಿಗಳು ಆಗುತ್ತವೆ. ಮೂರು ತಿಂಗಳ ಅವಧಿಯಲ್ಲಿ ಒಂದೊಂದು ಮರಿ ಸುಮಾರು 2 ಕೆ.ಜಿ. ತೂಗುತ್ತವೆ. 1 ಕೆ.ಜಿ. ಮೊಲದ ಮಾಂಸ ದರ ₹ 160. ಇದರಿಂದ ಉತ್ತಮ ಆದಾಯ ಗಳಿಸಬಹುದು ಎಂದು ಅವರು  ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.