ಮಂಗಳವಾರ, ಮಾರ್ಚ್ 2, 2021
29 °C

ಯಕ್ಷ ಕಲಾವಿದರಿಗೆ ಶಕ್ತಿಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷ ಕಲಾವಿದರಿಗೆ ಶಕ್ತಿಮದ್ದು

ಕಲಾವಿದೆ ವೈಜಯಂತಿ ಕಾಶಿ ಅವರು ಕೂಚಿಪುಡಿಯಲ್ಲಿರುವ ಪೂರ್ವರಂಗ, ಒಡ್ಡೋಲಗ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ತೋರಿಸುವ ಮೂಲಕ ಯಕ್ಷಗಾನಕ್ಕೂ ಕೂಚಿಪುಡಿಗೂ ಇರುವ ಸಾಮ್ಯವನ್ನು ಸಾಬೀತುಪಡಿಸಿದರು. ಆ ಕ್ಷಣದಲ್ಲಿ, ಅಲ್ಲಿದ್ದ ಐವತ್ತು  ಯಕ್ಷಗಾನ ಕಲಾವಿದರಲ್ಲಿ ಕೆಲವರಿಗಾದರೂ, `ನಮ್ಮ ಯಕ್ಷಗಾನವೂ ಅದರಂತೆಯೇ ಶಾಸ್ತ್ರೀಯವಾಗಬೇಕಿತ್ತಲ್ಲ~ ಅಂತನ್ನಿಸಿರಬೇಕು.ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಅವರು ಅಭಿನಯ ಮತ್ತು ಅಭಿವ್ಯಕ್ತಿಗೆ ಯಕ್ಷಗಾನದ ವೇಷಭೂಷಣಗಳು ಹೇಗೆ ತೊಡಕಾಗುತ್ತವೆ ಎಂದು ವಾದಿಸುತ್ತ, ಯಕ್ಷಗಾನದ `ಆಹಾರ್ಯ~ವನ್ನು ಸರಳಗೊಳಿಸುವ ಸಾಧ್ಯತೆಯನ್ನು ನಯವಾಗಿ ಪ್ರತಿಪಾದಿಸಿದರು. `ಹೌದಲ್ಲ~ ಅಂತನ್ನಿಸಿರಬಹುದು ಕೆಲವರಿಗೆ.ಯಕ್ಷಗಾನಕ್ಕೆ ಇವೆರಡನ್ನು ಅನ್ವಯಗೊಳಿಸುವ `ದ್ವಂದ್ವ~ವನ್ನು ಎದುರಿಸುವುದು ಹೇಗೆ? ಇದನ್ನೇ ಮುಂದುವರಿದು, ಪರಂಪರೆ ಮತ್ತು ಪ್ರಯೋಗಶೀಲತೆಯ ನಡುವಿನ ಸಂಘರ್ಷವೆಂದು ಕರೆಯಬಹುದು. ಎಲ್ಲ ದೇಸಿ ಕಲೆಗಳು ಎದುರಿಸಲೇಬೇಕಾದ ಇಂಥ ದ್ವಂದ್ವವನ್ನು ಮುಂದಿಟ್ಟುಕೊಂಡೇ, ಅಸ್ಪಷ್ಟ ದಾರಿಯಿಂದ ಸ್ಪಷ್ಟವಾದ ಹೆದ್ದಾರಿಯತ್ತ ಹೊರಳುವುದನ್ನು `ಪುನಶ್ಚೇತನ~ವೆಂದು ಕರೆಯಬಹುದೇನೊ. ಇಂಥ ಪುನಶ್ಚೇತನದ ಪ್ರಯತ್ನವನ್ನು `ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ~ ಇತ್ತೀಚೆಗೆ ನಡೆಸಿತು.ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಅನ್ನಪೂಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನ ಶಿಬಿರದಲ್ಲಿ ಐವತ್ತು ವೃತ್ತಿಪರ  ಕಲಾವಿದರು, ತಮ್ಮ ಅರಿವನ್ನು `ಅಪ್‌ಡೇಟ್~ ಮಾಡಿಕೊಳ್ಳುವ ಪ್ರೇರಣೆಯನ್ನು ಪಡೆದುಕೊಂಡರು.ಹೆಜ್ಜೆ ಹೇಳಿಕೊಡಲು ಇಬ್ಬರು ಗುರುಗಳಿದ್ದರು. ಗುರು ಬನ್ನಂಜೆ ಸಂಜೀವ ಸುವರ್ಣರ ಪಾದಗಳ ಘಾತಗಳು, ಚೆಂಡೆಮದ್ದಲೆಯ ನುಡಿತಗಳಷ್ಟೇ ಸ್ಪಷ್ಟ. ಅಭಿನಯವನ್ನೂ ಹೆಜ್ಜೆಗಾರಿಕೆಯನ್ನೂ ಜತೆಜತೆಗೇ ನಿರ್ವಹಿಸುವ ಅವರ ಕೌಶಲವನ್ನು ಶಿಬಿರಾರ್ಥಿಗಳು ಸಾಧ್ಯವಾದಷ್ಟು ಅರಗಿಸಿಕೊಳ್ಳಲು ಪ್ರಯತ್ನಿಸಿದರು. `ಮಾತಿನ ಭರದಲ್ಲಿ ತೆಂಕುತಿಟ್ಟು ಮರೆತ ರಂಗನಡೆ~ಗಳನ್ನು ಮತ್ತೆ ನೆನಪಿಸಿಕೊಳ್ಳಲು ಕಾರಣರಾದವರು ಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರು. ಅವರು ಧಿಗಿಣ ಅಥವಾ ಲಾಗಗಳ ವೈವಿಧ್ಯಗಳನ್ನು ವಿವರಿಸುವ ರೀತಿಗೆ ಶಿಬಿರಾರ್ಥಿಗಳಿಗೆ ಬೆರಗು.ಹೆಜ್ಜೆಗಾರಿಕೆ ಮತ್ತು ಅಭಿನಯಗಳ ಪಾಠ ಶಿಬಿರದ ಮುಖ್ಯ ಕಲಾಪಗಳಾದರೆ, ಸಮಕಾಲೀನ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಂಗಡ ಬೆರೆಯುವ ಅವಕಾಶವೂ ಶಿಬಿರದಲ್ಲಿತ್ತು. ಮೊದಲ ದಿನ ರಂಗನಿರ್ದೇಶಕ ಚಿದಂಬರ ರಾವ್ ಜಂಬೆ, `ಕೂಡಿಯಾಟ್ಟಂ~ನ ಸೂಕ್ಷ್ಮ ಅಭಿನಯಗಳ ಬಗ್ಗೆ ಹೇಳಿದರೆ, ಪ್ರತಿಭಾ ಸಾಮಗ ಅವರಿಂದ ಭರತ ನಾಟ್ಯದ ಪಾಠ ನಡೆಯಿತು. ಮತ್ತೊಂದು ದಿನ ಡಾ. ಎ.ನಾರಾಯಣ, ಎನ್.ಎ.ಎಂ. ಇಸ್ಮಾಯಿಲ್ `ಕಂಪ್ಯೂಟರ್- ಇಂಟರ್ನೆಟ್~ ಎಂಬ ಕಿನ್ನರಲೋಕಗಳ ಪರಿಚಯ ನೀಡಿದರು. ಪುರುಷೋತ್ತಮ ಅಡ್ವೆಯವರು ಕೆಲವು ಶಿಲ್ಪಗಳನ್ನು ಪ್ರದರ್ಶಿಸಿ ಅವುಗಳ ಪ್ರೇರಣೆಯಿಂದ ಆಹಾರ್ಯವನ್ನು ಹೇಗೆ ಮರುರೂಪಿಸಬಹುದು ಎಂಬ ಬಗ್ಗೆ ಬೆಳಕು ಚೆಲ್ಲಿದರು. ಅರ್ಥಗಾರಿಕೆಯ ಸಾಧ್ಯತೆಗಳ ಬಗ್ಗೆ ಡಾ. ಪ್ರಭಾಕರ ಜೋಶಿ, ಚಿತ್ರಕಲೆಯಲ್ಲಿ ಬಣ್ಣಗಾರಿಕೆಯ ಬಳಕೆಯ ಬಗ್ಗೆ ವಿ.ಟಿ.ಕಾಳೆ, ಭಾರತೀಯ ಪರಂಪರೆಯಲ್ಲಿ ಯಕ್ಷಗಾನದ ಅನನ್ಯತೆಯ ಬಗ್ಗೆ ಎ.ಈಶ್ವರಯ್ಯ ತಮ್ಮ ತಿಳಿವಳಿಕೆ ಹಂಚಿಕೊಂಡರು. ಟಿ.ನರಸೀಪುರದ ದೊಡ್ಡಾಟ ಸಂಘದವರಿಂದ ಸಣ್ಣಾಟ ಪ್ರದರ್ಶನ ಹಾಗೂ ಕೇಳು ಚರಣ ಮಹಾಪಾತ್ರ ಅವರ ಒಡಿಸ್ಸಿ ನೃತ್ಯ ಪ್ರದರ್ಶನದ ದೃಶ್ಯಸುರುಳಿ ವೀಕ್ಷಣೆಯೂ ಶಿಬಿರದಲ್ಲಿತ್ತು.

ಪುನಶ್ಚೇತನ-ಸಮಕಾಲೀನತೆ

ಅರವತ್ತರ ದಶಕದ ಸುಮಾರಿಗೆ ಯಕ್ಷಗಾನ ಕಂಪನಿ ನಾಟಕಗಳ ಪ್ರಭಾವಕ್ಕೆ ಒಳಗಾದುದರಿಂದ ಅದರ ಸಾಂಪ್ರದಾಯಿಕ ಸೌಂದರ್ಯ ಹಾಳಾಯಿತು ಎನ್ನುವ ವಾದವಿದೆ. ಆದರೆ, 60-70ರ ದಶಕದಲ್ಲಿ ಈ ಕಲೆಯು `ನಾಟಕೀಯ~ ಪ್ರಭಾವಕ್ಕೊಳಗಾಗುವುದರ ಮೂಲಕ ಆ ಮಟ್ಟದ ಜನಪ್ರಿಯತೆಯನ್ನು ಸಾಧಿಸದೇ ಇರುತ್ತಿದ್ದರೆ ಇವತ್ತಿಗೆ ಈ ಕಲೆ ಉಳಿಯುತ್ತಿತ್ತೆ ಎಂಬ ಪ್ರಶ್ನೆಯನ್ನು ಇದರ ಜೊತೆಗೇ ಹಾಕಿಕೊಳ್ಳಬೇಕಾಗುತ್ತದೆ. ಟೆಂಟ್ ಯಕ್ಷಗಾನವನ್ನು ವಾಣಿಜ್ಯೀಕರಣದ ಒಂದು ಮುಖ ಒಂದು ವಾದಿಸುವುದು ಸಮಂಜಸವೇ. ಆದರೆ, ಯಕ್ಷಗಾನವನ್ನು ಶೈಲೀಕರಣಗೊಳಿಸಿ ಸೀಮೋಲ್ಲಂಘನಗೊಳಿಸುವ ಮತ್ತು ಕಲೆಯ ಪ್ರಾದೇಶಿಕ `ಅರ್ಥದ~ ಸೀಮೆಯನ್ನು ಮೀರಿ ಕನ್ನಡ ಬಾರದವರಿಗೂ ಅದನ್ನು ಸಂವಹನಗೊಳಿಸುವ ಗಂಭೀರ ಪ್ರಯತ್ನಗಳು ಆರಂಭವಾದುವಲ್ಲ, ಈ ಮೂಲಕ ಯಕ್ಷಗಾನವನ್ನು ಪ್ರಾದೇಶಿಕತೆಯಿಂದ ದೂರಗೊಳಿಸಿ ಸಾಮಾನ್ಯೀಕರಣಕ್ಕೆ ಒಳಗಾಗಿಸಿದ ಹಾಗಾಗಲಿಲ್ಲವೆ; ಇದಕ್ಕೆ ಏನನ್ನುವುದು? `ನವವಾಣಿಜ್ಯೀಕರಣ~ ಎನ್ನುವುದೇ? ಸರಳವಾಗಿ ಶಾಸ್ತ್ರೀಯತೆ ಎಂದರೆ, ಮತ್ತೇನು, ಸಿದ್ಧ ಚೌಕಟ್ಟಿನೊಳಗೆ ಬದ್ಧಸೂತ್ರಗಳಲ್ಲಿ ಕಲೆಯನ್ನು ವಿನ್ಯಾಸಗೊಳಿಸುವುದು. ಹಾಗಾಗಿ, ಯಕ್ಷಗಾನದವರು `ಕಥಕಳಿ~ಯನ್ನು ಅನುಸರಿಸಿ ವಿಶ್ವಖ್ಯಾತಿಯನ್ನು ಪಡೆಯುವ ಆಸಕ್ತಿಯನ್ನು ಹೊಂದುವುದಾದರೆ, ಬರ್ಟೊಲ್ಟ್ ಬ್ರೆಕ್ಟ್‌ನ `ಎಪಿಕ್ ಥಿಯೇಟರ್~ಗೆ ಯಕ್ಷಗಾನ ನಿಕಟವಾಗಿದೆ ಎಂದು ಹೆಮ್ಮೆಪಡುವುದನ್ನು ಮರೆಯಬೇಕಾಗುತ್ತದೆ. ಭೂತದ ಕೋಲದಿಂದ ಭರತನ ನಾಟ್ಯಶಾಸ್ತ್ರದವರೆಗೆ, ಮಾಸ್‌ನಿಂದ ಕ್ಲಾಸ್‌ವರೆಗೆ ಪರಸ್ಪರ ವಿರುದ್ಧವೆಂದು ಭಾವಿಸಲಾದ ಎರಡು ಬಿಂದುಗಳ ನಡುವೆ ಓಲಾಡುತ್ತಿರುವ ಯಕ್ಷಗಾನದ ಮೇಲೆ ವಾಣಿಜ್ಯೀಕರಣ, ಪರಂಪರೆ ಸಂರಕ್ಷಣೆ, ಶೈಲೀಕರಣ, ಜನಪದೀಕರಣ, ಶಾಸ್ತ್ರೀಯತೆ, ಸಮಕಾಲೀನತೆ ಮುಂತಾದ ಯಾವ ಪರಿಭಾಷೆಗಳನ್ನೂ ಅನ್ವಯಗೊಳಿಸಬಹುದು ಎಂಬಷ್ಟರಮಟ್ಟಿಗೆ ಈ ಕಲೆ `ಉದಾರ~ವಾಗಿದೆ! ಇದು ಯಕ್ಷಗಾನದ ಮಿತಿಯೂ ಹೌದು, ಸಾಧ್ಯತೆಯೂ ಹೌದು.ಹಾಗಾಗಿಯೇ ಪುನಶ್ಚೇತನ ಶಿಬಿರವೆಂದಾಗ- ಈ ಪುನಶ್ಚೇತನ ಕಲೆಯದ್ದೋ ಲಾವಿದರದ್ದೋ ಎಂಬ ಪ್ರಶ್ನೆ ಎದುರಾಗುತ್ತದೆ. ಕಲಾವಿದರು ಪುನಶ್ಚೇತನಗೊಂಡರೆ ತಾನೇ ಕಲೆ ನವೀಕರಣಗೊಳ್ಳುವುದು? ಜಡತೆಯನ್ನು ಗೆದ್ದು ಸಮಕಾಲೀನತೆಯತ್ತ ಚಲಿಸುವುದು `ಪುನಶ್ಚೇತನ~ದ ಮುಖ್ಯ ಉದ್ದೇಶವೆಂಬ ವಿಷನ್‌ನಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು. ಶಿವರಾಮ ಕಾರಂತರು ರೂಪಿಸಿದ ಯಕ್ಷಗಾನ ಬ್ಯಾಲೆ, ಶೇಣಿ ಗೋಪಾಲಕೃಷ್ಣ ಭಟ್ಟರು ವಿಸ್ತರಿಸಿದ `ಅರ್ಥ~ ಸಾಧ್ಯತೆಗಳು, ಕುರಿಯ ವಿಠಲ ಶಾಸ್ತ್ರಿಗಳು ಕಂಸನ ಕಿರೀಟ ಕಳಚಿ ಟೋಪನ್ ತೊಡಿಸಿದಂಥ ಬದಲಾವಣೆಗಳು, ಕೆರೆಮನೆ ಶಂಭು ಹೆಗಡೆಯವರು ಅಳವಡಿಸಿದ ಕೊರಿಯೋಗ್ರಫಿ ತತ್ತ್ವಗಳು, ಕರ್ನಾಟಕ ಯಕ್ಷಗಾನ ನಾಟಕ ಸಭಾದವರ ತುಳು ಸಾಮಾಜಿಕ ಪ್ರಸಂಗಳು- ಈ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜಡತೆಯನ್ನು ಮೀರಿ ಮತ್ತೆ ಚೇತನಶೀಲವಾಗುವ ತುಡಿತಗಳಾಗಿ ಕಾಣಿಸುತ್ತವೆ. ಇವುಗಳಲ್ಲಿ ಸ್ಪಷ್ಟ ಕಾಣ್ಕೆ ಇರುವಂಥವು ಗೆದ್ದಿವೆ. ತತ್ಕಾಲದ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ರೂಪುಗೊಂಡವು ಕಾಲಗರ್ಭದೊಳಗೆ ಕರಗಿಹೋಗುತ್ತವೆ.ನಾಲ್ಕು ಕಂಬಗಳ ರಂಗಸ್ಥಳದ ನಡುವೆ ಸೀಮಿತರಾಗಿರುವ ಕಲಾವಿದರು, ಚಲನಶೀಲವಾಗುವಲ್ಲಿ ಸ್ಪಷ್ಟ ದಾರಿಯನ್ನು ಹಾಗೂ ತಾತ್ತ್ವಿಕತೆಯನ್ನು ಕೊಡುವಲ್ಲಿ ಈ ಶಿಬಿರ ಬಹುಮಟ್ಟಿಗೆ ಯಶಸ್ವಿಯಾುತು. `ಸಂಜೀವ ಗುರುಗಳು ಹೇಳಿಕೊಟ್ಟ ಅಭಿನಯದ ಅಂಶಗಳನ್ನು ಸಾಧ್ಯವಾದಷ್ಟು ಅಳವಡಿಸಿಕೊಳ್ಳಬೇಕು~ ಎಂದು ಶಿಬಿರಾರ್ಥಿ ಸುರೇಂದ್ರ ಆಲೂರು ಹೇಳಿರುವುದು, `ಕರ್ಗಲ್ಲು ಗುರುಗಳು ತೋರಿಸಿಕೊಟ್ಟ ರಂಗನಡೆಯ ಲೆಕ್ಕಾಚಾರಗಳನ್ನು ಸಾಧ್ಯವಾದಷ್ಟು ಅನುಸರಿಸಬೇಕು~ ಎಂದು ಇನ್ನೋರ್ವ ಶಿಬಿರಾರ್ಥಿ ಈಶ್ವರಪ್ರಸಾದ್ ಉತ್ಸಾಹ ತಳೆದಿರುವುದು, `ಇಂಟರ್ನೆಟ್‌ನಲ್ಲಿ ನನ್ನದೂ ಒಂದು ಬ್ಲಾಗ್ ಓಪನ್ ಮಾಡಿಕೊಂಡೆ~ ಎಂದು ಶಶಿಕಾಂತ ಶೆಟ್ಟಿ ಕಾರ್ಕಳ ಸಂತೋಷದಿಂದ ಉದ್ಗರಿಸಿರುವುದು- ಇವೆಲ್ಲ ಪುನಶ್ಚೇತನದತ್ತ ಹೆಜ್ಜೆ ಹಾಕುವ ಸೂಚನೆಗಳೇ ಆಗಿವೆ.ಯಕ್ಷಗಾನದ ಕಲಾವಿದರಂತೆಯೇ ಬಯಲುಸೀಮೆಯ ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆ ಮುಂತಾದ ವಿವಿಧ ಕಲಾಪ್ರಕಾರಗಳ ಕಲಾವಿದರಿಗೆ ಇಂಥದ್ದೊಂದು `ಪುನಶ್ಚೇತನ ಶಿಬಿರದ~ ಅಗತ್ಯವಿದೆ ಅನ್ನಿಸುತ್ತದೆ. ಆದರೆ, ಆಯೋಜಕರಿಗೆ ಯಾಕೆ ಶಿಬಿರವನ್ನು ಸಂಯೋಜಿಸುತ್ತಿದ್ದೇವೆ ಎಂಬ ನಿಟ್ಟಿನಲ್ಲಿ ಸ್ಪಷ್ಟವಾದ `ತಾತ್ತ್ವಿಕ ದರ್ಶನ~ ಬೇಕಾಗುತ್ತದೆ. ಅದು, ಅಕಾಡೆಮಿಯ ಅಧ್ಯಕ್ಷರಾದ ಕುಂಬ್ಳೆ ಸುಂದರ ರಾಯರಿಗೆ ಮತ್ತು ಸದಸ್ಯ-ಸಂಚಾಲಕರಾದ ಮುರಲಿ ಕಡೆಕಾರ್ ಅವರಿಗಿತ್ತು.ಕೊನೆಗೊಂದು ಮಾತು, ಆಮಂತ್ರಿತ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನವೇರ್ಪಡಿಸುವ ಬದಲು ಶಿಬಿರಾರ್ಥಿಗಳು ರಂಗಸ್ಥಳವೇರಿ, ಹಿರಿಯ ಕಲಾವಿದರು ಆ ಪ್ರದರ್ಶನದ ವೀಕ್ಷಕರಷ್ಟೇ ಆಗಿದ್ದರೆ ಶಿಬಿರದ ಪರಿಣಾಮ ಮತ್ತೂ ಹೆಚ್ಚುತ್ತಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.