ಶುಕ್ರವಾರ, ಏಪ್ರಿಲ್ 23, 2021
22 °C

ಯಡಿಯೂರಪ್ಪ ಬೆಂಬಲಕ್ಕೆ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪ ಬೆಂಬಲಕ್ಕೆ ಈಶ್ವರಪ್ಪ

ಬೆಂಗಳೂರು: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದ್ರೋಹ ಬಗೆದರೆ ಹೆತ್ತವರಿಗೆ ದ್ರೋಹ ಬಗೆದಂತೆ. ಆದರೆ ಹೆತ್ತವರೇ ತಪ್ಪು ಮಾಡಿದರೆ ನಾನು ಸುಮ್ಮನಿರುವವನಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾರ್ಮಿಕವಾಗಿ ಮಾತನಾಡಿದರು.ಇದೇ ವೇಳೆ ಮಾಧ್ಯಮಗಳ ಮೇಲೆ ಹರಿಹಾಯ್ದ ಅವರು ‘ಪಕ್ಷದ ಕೆಲವರೊಂದಿಗೆ ಗುಪ್ತ ಸಮಾಲೋಚನೆ ನಡೆಸಿರುವುದಾಗಿ ಪತ್ರಿಕೆಗಳು ಹಾಗೂ ಟಿವಿಗಳಲ್ಲಿ ಬಿತ್ತರವಾಗುತ್ತದೆ. ಗುಪ್ತ ಸಮಾಲೋಚನೆ ಮಾಡಲು ನಾವೇನು ಪ್ರೇಮಿಗಳೇ?’ ಎಂದು ಪ್ರಶ್ನಿಸಿದರು. ೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಮೈತ್ರಾದೇವಿ ಯಡಿಯೂರಪ್ಪ ಕನ್ವೆನ್ಷನ್ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಅವರು ಈ ವಿಷಯ ತಿಳಿಸಿದರು.‘ಗೋಹತ್ಯೆ ನಿಷೇಧಿಸಿ ಮಸೂದೆ ಮಂಡಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಬೇರೆ ಪಕ್ಷಗಳ ಕಾರ್ಯಕರ್ತರು ಕೂಡ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ರೈತ ಸಮುದಾಯವನ್ನು ಬಿಜೆಪಿ ಪರವಾಗಿ ತಿರುಗಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಸ್ಥಳೀಯ ಸಂಸ್ಥೆ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಪಕ್ಷಕ್ಕೆ ಜನಬೆಂಬಲ ಇರುವುದು ಇದರಿಂದಲೇ ತಿಳಿಯುತ್ತದೆ’ ಎಂದು ಹೇಳಿದರು.‘ಸರ್ಕಾರದಲ್ಲಿ ಹಲವಾರು ದೋಷ ಇರಬಹುದು. ಆದರೆ ಜಾತಿಯ ವಿಷಬೀಜವನ್ನು ಬಿತ್ತಿ ಯಡಿಯೂರಪ್ಪ ಅವರನ್ನು ಬದಲಿಸುವ ಕಲ್ಪನೆ ಯಾರಿಗೂ ಇಲ್ಲ. ಯಡಿಯೂರಪ್ಪ ಅವರು ನನ್ನಂತಹ ಅನೇಕ ಕಾರ್ಯಕರ್ತರನ್ನು ನಾಯಕ ರನ್ನಾಗಿ ಬೆಳೆಸಿದ್ದಾರೆ. ಅವರ ಪ್ರೋತ್ಸಾಹದಿಂದಾಗಿ ನಾನಿಲ್ಲಿ ನಿಂತು ಮಾತನಾಡುವ ಅರ್ಹತೆ ಪಡೆದಿದ್ದೇನೆ. ಂದರು.‘ಯಡಿಯೂರಪ್ಪ ಅವರ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಸುವವರು ಹೆತ್ತವರಿಗೆ ದ್ರೋಹ ಬಗೆದಂತೆ. ಆದರೆ ರಾಜ್ಯದ ಪರಮೋಚ್ಚ ನಾಯಕ ತಪ್ಪು ಮಾಡಿದರೆ ಅದನ್ನು ಸಹಿಸುವುದು ಸಾಧ್ಯವಿಲ್ಲ. ತಪ್ಪು ಮಾಡಿದ್ದು ಸ್ವತಃ ತಂದೆಯೇ ಆದರೂ ಕ್ಷಮಿಸದ ಒರಟ ನಾನು. ಯಡಿಯೂರಪ್ಪ ತಪ್ಪು ಮಾಡಿದರೆ ಅದು ಕೇವಲ ಅವರೊಬ್ಬರಿಗೆ ಮಾತ್ರ ಸೀಮಿತವಾಗುವುದಿಲ್ಲ. ಅದರಿಂದ ಅವರ ಕುಟುಂಬಕ್ಕೆ, ಪಕ್ಷಕ್ಕೆ ಹಾಗೂ ಇಡೀ ರಾಜ್ಯಕ್ಕೆ ಅನ್ಯಾಯವಾಗಲಿದೆ. ಇದನ್ನು ತಡೆಯುವ ಉದ್ದೇಶದಿಂದ ನಾವು ಆಗಾಗ ಜಗಳ ಆಡಿಕೊಳ್ಳುತ್ತಿದ್ದುದು ನಿಜ’ ಎಂದರು.‘ಸರ್ಕಾರದಲ್ಲಿ ಸಮಸ್ಯೆಗಳಿವೆ. ಆದರೆ ಅವುಗಳನ್ನು ಬಗೆಹರಿಸಲು ಪಕ್ಷದ ಹಿರಿಯರು, ಸಂಘ ಪರಿವಾರದ ಪ್ರಮುಖರು ಇದ್ದಾರೆ. ಕೆಲವು ಶಾಸಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನನ್ನ ಮುಂದೆ ಇಟ್ಟಾಗ ಪಕ್ಷದ ಅಧ್ಯಕ್ಷನಾಗಿ ಅವರ ಪರ ದೆಹಲಿಗೆ ತೆರಳಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಯಡಿಯೂರಪ್ಪ ಅವರು ಕೂಡ ಪರಿಹಾರ ಬಯಸಿ ದೆಹಲಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ. ದೆಹಲಿಗೆ ತೆರಳಿದ ಮಾತ್ರಕ್ಕೆ ಭಿನ್ನಮತ ಚಟುವಟಿಕೆ ಇದೆ ಎಂದು ಭಾವಿಸುವುದು ತಪ್ಪು’ ಎಂದು ತಿಳಿಸಿದರು.ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ‘ಹಿಂದೆ ಆಳಿದ ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ರಾಜಕೀಯ ಪಿತೂರಿ ನಡೆದಿದೆ. ಆದರೆ ಯಡಿಯೂರಪ್ಪನನ್ನು ಬಗ್ಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ನಾನು ಯಾವುದೇ ಕಾರಣದಿಂದ ಬೆನ್ನು ತೋರಿಸುವುದಿಲ್ಲ. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ವೀರನೂ ಅಲ್ಲ ಎಂಬ ಮಾತಿದೆ. ರಾಜ್ಯದ ಒಳಿತಿಗಾಗಿ ಕೆಲವೊಮ್ಮೆ ಚಾಣಾಕ್ಷ ರೀತಿಯಲ್ಲಿ ವರ್ತಿಸಿದ್ದು ಇದರ ಹಿಂದೆ ಯಾವುದೇ ಸ್ವಹಿತಾಸಕ್ತಿ ಇಲ್ಲ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.