ಶುಕ್ರವಾರ, ಮೇ 27, 2022
28 °C

ಯಲಬುರ್ಗಾ ಬಂದ್ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಆಯೋಜಿಸಿದ್ದ ಯಲಬುರ್ಗಾ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಬೆಳಿಗ್ಗೆಯಿಂದ ಸಂಜೆವರೆಗೂ ಪಟ್ಟಣದ ಅನೇಕ ಬೀದಿಗಳಲ್ಲಿ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಂಚಾರ ನಡೆಸಿದ ಕರವೇ ಕಾರ್ಯಕರ್ತರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಆದರೆ ಈಡೀ ದಿನ ನಡೆದ ಈ ಬಂದ್ ಕಾರ್ಯಕ್ರಮದಿಂದ ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಯಿತು.ಆಗಾಗ ನಡೆಯುತ್ತಿದ್ದ ಬಂದ್ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳು ಕೇವಲ ಒಂದೆರಡು ಗಂಟೆಗೆ ಸೀಮಿತಗೊಳ್ಳುತ್ತಿದ್ದವು. ಅಲ್ಲದೇ ಎರಡು ಗಂಟೆ ಕಳೆಯುತ್ತಿದ್ದಂತೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಗುರುವಾರ ನಡೆದ ಪ್ರತಿಭಟನಾ ಕಾರ್ಯಕ್ರಮ ದಿನವೀಡಿ ನಡೆದದ್ದು ವಿಶೇಷವಾಗಿತ್ತು. ಇದರಿಂದ ಸಾರ್ವಜನಿರು ವಿವಿಧ ರೀತಿಯಲ್ಲಿ ತೊಂದರೆ ಹಾಗೂ ಕಿರಿಕಿರಿ ಅನುಭವಿಸಿದ್ದು ಕಂಡು ಬಂತು.ಸ್ಥಳೀಯ ಸಾರಿಗೆ ಸಂಸ್ಥೆಯವರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ಇದರಿಂದ ವಾಹನಗಳು ಹಾಗೂ ಪ್ರಯಾಣಿಕರಿಲ್ಲದೇ ಬಸ್‌ನಿಲ್ದಾಣ ಬೀಕೋ ಎನ್ನುತ್ತಿತ್ತು. ಆದರೂ ಪಟ್ಟಣದ ಸ್ವಲ್ಪ ದೂರದ ಹೊರವಲಯದಲ್ಲಿಯೇ ಖಾಸಗಿ ವಾಹನಗಳಾದ ಟಂ ಟಂ, ಟ್ರ್ಯಾಕ್ಸ್, ಜೀಪು ಇನ್ನಿತರ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಬರುತ್ತಿದ್ದವು. ಸುಮಾರು ಒಂದು ಕಿ.ಮೀ ದೂರದಲ್ಲಿಯೇ ಪ್ರಯಾಣಿಕರು ಇಳಿದು ಪಟ್ಟಣ ಸೇರುತ್ತಿದ್ದರು. ಮತ್ತೆ ಸ್ವಲ್ಪ ದೂರ ನಡೆದು ಬೇರೆ ಊರಿನ ಕಡೆ ಪ್ರಯಾಣ ಬೆಳೆಸುತ್ತಿರುವುದು ಸಾಮಾನ್ಯವಾಗಿತ್ತು.ಹಾಗೆಯೇ ಸಂಜೆವರೆಗೂ ಯಾವೊಂದು ಅಂಗಡಿ ತೆರೆಯಲು ಅವಕಾಶ ಮಾಡಿಕೊಡದೇ ಇದ್ದುದರಿಂದ ಬಹುತೇಕ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಪ್ರೋತ್ಸಾಹಿಸಿದರು.

ಪ್ರತಿಭಟನಾಕಾರರು ಕಿತ್ತೂರು ಚನ್ನಮ್ಮ ವೃತ್ತದ ಬಳಿ ಮಾನವ ಸರಪಳಿ ಮಾದರಿಯಲ್ಲಿ ವಾಹನ ಸರಪಳಿ ನಿರ್ಮಿಸಿ ದ್ವಿಚಕ್ರ ವಾಹನಗಳು ಅತ್ತಿತ್ತ ಓಡಾಡದಂತೆ ಬಂದ್ ಮಾಡಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಪೊಲೀಸ್‌ಪಾಟೀಲ, ತಾಲ್ಲೂಕು ಅಧ್ಯಕ್ಷ ಕಳಕಪ್ಪ ಹೂಗಾರ ಇವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಹೋಬಳಿ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಈ ಯಲಬುರ್ಗಾ ಬಂದ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್‌ರು ವ್ಯಾಪಕ ಬಿಗೀ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.