ಮಂಗಳವಾರ, ಮೇ 18, 2021
30 °C
ಮಾತೃ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನದ ಸಂಭ್ರಮ

ಯಾದಗಿರಿ ಜಿಲ್ಲೆಯಲ್ಲಿ ಭಣಭಣ

ಪ್ರಜಾವಾಣಿ ವಾರ್ತೆ/ಚಿದಂಬರಪ್ರಸಾದ್ Updated:

ಅಕ್ಷರ ಗಾತ್ರ : | |

ಯಾದಗಿರಿ: ಗಿರಿಗಳ ನಾಡು, ಸಗರನಾಡು ಎಂಬಿತ್ಯಾದಿ ಬಿರುದುಗಳಿಂದ ಅಲಂಕೃತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಬರಗಾಲ.ಬಿಸಿಲು ನಾಡಿನಲ್ಲಿ ಸಾಹಿತ್ಯವೂ ಮಳೆಯಂತಾಗಿರುವುದು ಸಾಹಿತಿಗಳ ವಲಯದಲ್ಲಿ ಬೇಸರ ಮೂಡಿಸಿದೆ. ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದರೂ ಹೇಳಿಕೊಳ್ಳುವಂತಹ ಸಾಹಿತ್ಯಿಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಗದೇ ಇರುವುದು ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.ಮಾತೃ ಜಿಲ್ಲೆಯಾದ ಗುಲ್ಬರ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ರಸದೌತಣ ಉಣಬಡಿಸುವ ಅನುಪಮ ಕಾರ್ಯ ನಡೆದಿದೆ.ಆದರೆ ಗುಲ್ಬರ್ಗದಿಂದ ವಿಭಜನೆಗೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ವಿಷಯವೇ ಪ್ರಸ್ತಾಪ ಆಗುತ್ತಿಲ್ಲ ಎನ್ನುವುದು ಸಾಹಿತಿಗಳ ಬೇಸರ.ಜಿಲ್ಲೆಯಲ್ಲಿ ಸಾಹಿತಿಗಳು ಹಾಗೂ ಸಾಹಿತ್ಯಕ್ಕೆ ಕೊರತೆ ಇಲ್ಲ. ಎಲ್ಲರೂ ಎಲೆಮರೆಯ ಕಾಯಿಯಂತೆಯೇ ತಮ್ಮ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಆದರೆ, ಅದನ್ನು ಅಭಿವ್ಯಕ್ತಗೊಳಿಸಲು ವೇದಿಕೆ ಒದಗಿಸಿಕೊಡಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ.ಇದರಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸಾಹಿತ್ಯ ಪರಿಷತ್ತಿನಿಂದ ಒಂದೇ ಒಂದು ಹೇಳಿಕೊಳ್ಳುವಂತಹ ಸಾಹಿತ್ಯದ ಕಾರ್ಯಕ್ರಮ ನಡೆದಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.`ಪಕ್ಕದ ಜಿಲ್ಲೆಗಳೂ ಸೇರಿದಂತೆ ಎಲ್ಲೆಡೆಯೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಮಾತ್ರ ಅದಾವುದೂ ಕಾಣುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಚರ್ಚೆಯೂ ಆಗಿದೆ. ಸಾಹಿತಿಗಳೂ ತಮ್ಮಳಗೇ ಆಕ್ರೋಶ ವ್ಯಕ್ತಪಡಿಸುವಂತಾಗಿದೆ' ಎನ್ನುತ್ತಾರೆ ಯುವ ಸಾಹಿತಿ ಡಾ. ಗಾಳೆಪ್ಪ ಪೂಜಾರಿ.`ಸಾಹಿತ್ಯದ ಬಗ್ಗೆ ತಿಳಿಯದವರೇ ಅಧ್ಯಕ್ಷ ಸ್ಥಾನ ವಹಿಸಿದ್ದು, ಅವರಿಂದ ಸಾಹಿತ್ಯ ಸಮ್ಮೇಳನದ ನಿರೀಕ್ಷೆ ಮಾಡುವುದೂ ತಪ್ಪು ಎನಿಸುತ್ತದೆ. ಚುನಾವಣೆಗಳಲ್ಲಿ ರಾಜಕೀಯ ಪ್ರಚಾರ ಮಾಡಲು ತೋರುವ ಕಾಳಜಿಯನ್ನು ಸಾಹಿತ್ಯ ಸಮ್ಮೇಳನದ ಬಗ್ಗೆ ತೋರುತ್ತಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಹೆಚ್ಚಾಗುತ್ತಿದೆ' ಎನ್ನುವುದು ಅವರ ಗಂಭೀರ ಆರೋಪ.ಸಮ್ಮೇಳನದ ಪ್ರಹಸನ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅನುದಾನ ನೀಡಲಾಗುತ್ತದೆ. ಅದರಂತೆ ಜಿಲ್ಲೆಗೂ ಅನುದಾನ ನೀಡುವ ಕುರಿತು ಕೇಂದ್ರ ಸಾಹಿತ್ಯ ಪರಿಷತ್ ಪತ್ರ ಬರೆದಿದ್ದು, ಜೂನ್ 15 ರೊಳಗೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವಂತೆ ಸೂಚನೆ ನೀಡಿತ್ತು.ಆದರೆ ಚುನಾವಣೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಸ್ಮರಣ ಸಂಚಿಕೆ ಹೊರತರುವುದು ಸೇರಿದಂತೆ ಬಹುತೇಕ ಕೆಲಸಗಳು ಇಷ್ಟು ಕಡಿಮೆ ಅವಧಿಯಲ್ಲಿ ಆಗುವುದಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಸಲು ಅವಕಾಶ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದು ಮನವಿ ಮಾಡಿದರು.ಆದರೆ ಅನುದಾನ ವಾಪಸ್ ಹೋಗಲಿದೆ ಎಂಬ ಮಾಹಿತಿ ಪಡೆದ ಕನ್ನಡ ಸಾಹಿತ್ಯ ಪರಿಷತ್ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷರು, ತರಾತುರಿಯಲ್ಲಿ ಜೂನ್ ಎರಡನೇ ವಾರದಲ್ಲಿ ಸುರಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿಯೇ ಬಿಟ್ಟರು.

ಆಶ್ಚರ್ಯವೆಂದರೆ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷ ನಿರ್ಧಾರ, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗಮನಕ್ಕೂ ಬಂದಿರಲಿಲ್ಲ. ಈ ಬಗ್ಗೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ತಕ್ಷಣ ಪ್ರತಿಕ್ರಿಯೆಯನ್ನೂ ನೀಡಿದರು.ಕೊನೆಗೆ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷರೇ, ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಹಸನಕ್ಕೆ ತೆರೆ ಎಳೆದು ಬಿಟ್ಟರು.ಜಿಲ್ಲಾ ಘಟಕದ ಗಮನಕ್ಕೆ ತರದೇ, ತಾಲ್ಲೂಕು ಘಟಕದ ಅಧ್ಯಕ್ಷರೇ ಘೋಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸದೇ, ಸಾಹಿತ್ಯ ಸಮ್ಮೇಳನ ನಡೆಸುವುದಾದರೂ ಹೇಗೆ ಎನ್ನುವ ಮಾತುಗಳು ಇನ್ನೊಂದೆಡೆ. ಹೀಗಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳಿಗೆ ಅಲ್ಲಿಯೇ ವಿರಾಮ ನೀಡಲಾಯಿತು.ಕಟ್ಟಡವೂ ಇಲ್ಲ: ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಒಂದು ಸುಸಜ್ಜಿತವಾದ ಕಟ್ಟಡವೂ ಇದುವರೆಗೆ ನಿರ್ಮಾಣವಾಗಿಲ್ಲ.

ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಚೇರಿಯನ್ನೂ ಹಿಂದಿ ಪ್ರಚಾರ ಸಭಾದ ಕೋಣೆಯಲ್ಲಿ ನಡೆಸಲಾಗುತ್ತಿದ್ದು, ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೆ ಕಲ್ಯಾಣ ಮಂಟಪಗಳನ್ನು ಬಾಡಿಗೆ ಪಡೆಯುವ ಸ್ಥಿತಿ ಇದೆ.ಸಾಹಿತ್ಯ ಪರಿಷತ್ ಭವನವಾಗಲಿ, ಕನ್ನಡ ಭವನ ನಿರ್ಮಾಣಕ್ಕಾಗಲಿ ಇದುವರೆಗೆ ಚಾಲನೆ ಸಿಕ್ಕಿಲ್ಲ. ಕನ್ನಡ ಭವನಕ್ಕಾಗಿ ಸರ್ಕಾರದಿಂದ ರೂ.1 ಕೋಟಿ ಮಂಜೂರಾಗಿದ್ದರೂ, ನಿವೇಶನ ಗುರುತಿಸುವುದು ಇನ್ನೂ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಸರ್ಕಾರದ ಅನುದಾನ ಮರಳಿ ಹೋದೀತು ಎನ್ನುವ ಆತಂಕ ಸಾಹಿತಿಗಳದ್ದು.

`ಯಾದಗಿರಿಯಲ್ಲೇ ಸಮ್ಮೇಳನ ನಡೆಸಿ'

ಯಾದಗಿರಿ: ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿಯೇ ನಡೆಸುವಂತೆ ಹಿರಿಯ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಅದನ್ನು ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿಯೇ ಏರ್ಪಡಿಸುವಂತೆ ಆಗ್ರಹಿಸಿದ್ದಾರೆ.ಜಿಲ್ಲಾ ಘಟಕದ ವತಿಯಿಂದ ನಡೆಯುವ ಕಾರ್ಯಕ್ರಮಗಳ ಮಾಹಿತಿ ಕಾಲಕಾಲಕ್ಕೆ ಲಭ್ಯವಾಗುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಡಿನ ಎಲ್ಲೆಡೆ ತಾಲ್ಲೂಕು, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿವೆ. ಆದರೆ ತಮ್ಮಿಂದ ಯಾವುದೇ ಅಭಿಪ್ರಾಯ ವ್ಯಕ್ತವಾಗಿಲ್ಲ.ಜಿಲ್ಲಾ ಸಮ್ಮೇಳನ ನಡೆಸಲು ಆದಷ್ಟು ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಹಿರಿಯ ಸಾಹಿತಿಗಳಾದ ಬಸವರಾಜ ಶಾಸ್ತ್ರಿ, ನರಸಿಂಹ ಗುಪ್ತ ಬಳಿಚಕ್ರ, ಸಂಗಣ್ಣ ಹೋತಪೇಟ, ಜ್ಞಾನೇಶ್ವರ ಸಂದೇನಕರ, ವೆಂಕಟರಾವ ಕುಲಕರ್ಣಿ ಮುಂತಾದವರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.