ಶನಿವಾರ, ಫೆಬ್ರವರಿ 27, 2021
31 °C

ರಥ ಕಟ್ಟುವ ಮುಸ್ಲಿಂ ಕುಟುಂಬ

ಪ್ರಜಾವಾಣಿ ವಾರ್ತೆ ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ರಥ ಕಟ್ಟುವ ಮುಸ್ಲಿಂ ಕುಟುಂಬ

ಶಿರಸಿ: ಹಿಂದುಗಳ ಶ್ರದ್ಧಾ ಕೇಂದ್ರ ಶಿರಸಿ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲೆ ಮಠದಲ್ಲಿ ಮೇ 4ರಂದು ನಡೆಯಲಿರುವ ಲಕ್ಷ್ಮೀನೃಸಿಂಹ ದೇವರ ರಥೋತ್ಸವಕ್ಕೆ ಸಿದ್ಧತೆ ಪ್ರಾರಂಭವಾಗಿದೆ. ರಥೋತ್ಸವದ ಸಿದ್ಧತೆಯಲ್ಲಿ ಸೋದೆಪೇಟೆಯ ಖಾಜಿ ಕುಟುಂಬದವರು ಸಹ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ.ಇದೊಂದು ಹಿಂದು-ಮುಸ್ಲಿಂ ಸಮುದಾಯದ ಭಾವನಾತ್ಮಕ ಸಂಬಂಧದ ಪ್ರತೀಕವಾಗಿದೆ. ಸುಮಾರು ಎರಡು ಶತಮಾನದ ಹಿಂದಿನಿಂದ ಇಂದಿನವರೆಗೂ ಲಕ್ಷ್ಮೀನೃಸಿಂಹ ದೇವರ ರಥ ಕಟ್ಟುವ ಕೈಂಕರ್ಯದಲ್ಲಿ ತಪ್ಪದೇ ತೊಡಗಿಕೊಂಡವರು ಖಾಜಿ ಕುಟುಂಬದವರು. ಜಾತ್ರೆಗೆ ವಾರ ಮುಂಚಿತವಾಗಿ ಮಠದ ಆವಾರಕ್ಕೆ ಬಂದು ರಥ ಕಟ್ಟುವ ಕಾರ್ಯಕ್ಕೆ ಅತ್ಯಂತ ಶ್ರದ್ಧೆಯಿಂದ ಖಾಜಿ ಕುಟುಂಬದವರು ತೊಡಗಿಕೊಳ್ಳುತ್ತಾರೆ. ಬೆಳಿಗ್ಗೆಯಿಂದ ಸಂಜೆ ತನಕ ಬೆವರು ಸುರಿಸಿ ರಥ ಸಿದ್ಧಪಡಿಸುತ್ತಾರೆ. ಮೂಲಸ್ಥಾನದಿಂದ ರಥವನ್ನು ರಥಬೀದಿಗೆ ತಂದು ಹಗ್ಗ ಬಿಗಿದು, ಪತಾಕೆ ಕಟ್ಟುವ ತನಕ ಹೆಗಲು ಕೊಟ್ಟು ಕೆಲಸ ಮಾಡುವ ಖಾಜಿ ಕುಟುಂಬದ ಸದಸ್ಯರು ರಥಕ್ಕೆ ಕಲಶ ಕಟ್ಟುವವರೆಗೂ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ. ಜಾತ್ರೆಯ ದಿನ ಇಡೀ ಖಾಜಿ ಕುಟುಂಬ ಪಾಲ್ಗೊಳ್ಳುತ್ತದೆ. ಖಾಜಿ ಕುಟುಂಬದ ನಾಲ್ವರು ಸದಸ್ಯರು ತೇರು ಎಳೆಯಲು ಪ್ರಾರಂಭಿಸುವ ರಥದ ಮುಂದೆ ಸನ್ನೆ ಹಿಡಿದು ಸಿದ್ಧರಾಗುತ್ತಾರೆ, ಮುಂದೆ ಸಾಗುವ ರಥವನ್ನು ನಿಯಂತ್ರಿಸುತ್ತಾರೆ, ರಥ ಸಾಗುವ ದಾರಿಗುಂಟ ಸನ್ನೆ ಹಾಕುತ್ತಾರೆ. ಪಟಾಕಿ ಸಿಡಿಸುತ್ತಾರೆ. ಜಾತ್ರೆಯ ನಂತರ ರಥದ ಭಾಗಗಳನ್ನು ಪ್ರತ್ಯೇಕಿಸಿ ಸ್ವ ಸ್ಥಾನದಲ್ಲಿ ಇಡುವ ತನಕ ಇವರು ಚಾಚೂ ತಪ್ಪದೆ ತಮ್ಮ ಹೊಣೆಗಾರಿಕೆ ನಿರ್ವಹಿಸುತ್ತಾರೆ.ಈಗ ರಥ ಕಟ್ಟುವವರಲ್ಲಿ ಹಿರಿಯ 65 ವರ್ಷದ ಅಬ್ದುಲ್ ರಖೀಬ. ಈ ಬಾರಿ ಅನಾನುಕೂಲತೆಯಿಂದ ಅಬ್ದುಲ್ ರಖೀಬ ಗೈರು ಹಾಜರಿದ್ದು, ಆತನ ತಮ್ಮ ಅಬ್ದುಲ್ ರೆಹಮಾನ್ ಮತ್ತು ಅವರ ಮಗ ಅಬ್ದುಲ್ ರವೂಫ್ ಒಟ್ಟಾಗಿ ಸೇರಿ ರಥ ಕಟ್ಟುವ ಕಾರ್ಯ ನಡೆಸಿದ್ದಾರೆ. ರಥ ಕಟ್ಟುವಿಕೆಯ ಗೌರವ ಸೂಚಕವಾಗಿ ಮಠದಲ್ಲಿ ತೆಂಗಿನಕಾಯಿ ಹಾಗೂ ನಗದು ಹಣ ನೀಡಿ ಖಾಜಿ ಕುಟುಂಬವನ್ನು ಗೌರವಿಸಲಾಗುತ್ತದೆ. ಮಠಕ್ಕೆ ಖಾಜಿ ಕುಟುಂಬದ ಸೇವೆ ಕೇವಲ ರಥೋತ್ಸವಕ್ಕೆ ಸೀಮಿತವಾಗಿಲ್ಲ, ನವರಾತ್ರಿಯಲ್ಲಿ ಗಜನಿ ಒಡೆಯಲು ಖಾಜಿ ಕುಟುಂಬದವರು ಆಗಮಿಸಬೇಕು ಎಂಬ ಪದ್ಧತಿ ತಲತಲಾಂತರದಿಂದ ರೂಢಿಯಲ್ಲಿದೆ.`ನಮ್ಮ ತಾತನ ಕಾಲದಿಂದ ತೇರು ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಎಷ್ಟು ವರ್ಷ ಹಿಂದಿನಿಂದ ಈ ಸಂಪ್ರದಾಯ ರೂಢಿಯಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಕುಟುಂಬದ ಎಲ್ಲ ಸದಸ್ಯರು ಸಕ್ರಿಯವಾಗಿ ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾನು ಒಂದು ದಶಕದಿಂದ ಪ್ರತಿ ವರ್ಷ ರಥ ಕಟ್ಟಲು ಬರುತ್ತೇನೆ~ ಎಂದು ಅಬ್ದುಲ್ ರೆಹಮಾನ್ ಹೇಳುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.