ಶುಕ್ರವಾರ, ಮಾರ್ಚ್ 5, 2021
21 °C
ರಿಯೊದಲ್ಲಿ ಮರುಕಳಿಸಿದ ಶೀತಲ ಸಮರದ ನೆನಪು

ರಷ್ಯಾ– ಅಮೆರಿಕ ಈಜು ಸ್ಪರ್ಧಿಗಳ ಜಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಷ್ಯಾ– ಅಮೆರಿಕ ಈಜು ಸ್ಪರ್ಧಿಗಳ ಜಗಳ

ರಿಯೊ ಡಿ ಜನೈರೊ (ಪಿಟಿಐ):  ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿದ್ದ ಅವಧಿಯಲ್ಲಿ   ಅದರ ಛಾಯೆ ಒಲಿಂಪಿಕ್ಸ್‌ನಲ್ಲೂ ಕಂಡು ಬಂದಿತ್ತು. 1970 ಮತ್ತು 80ರ ದಶಕ ದಲ್ಲಿ ನಡೆದಿದ್ದ ಒಲಿಂಪಿಕ್‌ ಕೂಟಗಳಲ್ಲಿ  ಶೀತಲ ಸಮರ ಪ್ರತಿಫಲಿಸಿತ್ತು.

ಇದೀಗ ರಿಯೊ ಒಲಿಂಪಿಕ್‌ ಕೂಟದಲ್ಲೂ ಶೀತಲ ಸಮರದ ನೆನಪು ಮರುಕಳಿಸಿದೆ. ಕ್ರೀಡಾ ಜಗತ್ತಿನ ಎರಡು ದಿಗ್ಗಜ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ರಷ್ಯಾ ಸ್ಪರ್ಧಿಗಳು ರಿಯೊದಲ್ಲಿ ಪರಸ್ಪರ ದುರುಗುಟ್ಟಿ ನೋಡುವುದು, ಮಾತಿನ ಚಕಮಕಿ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ.

ಉದ್ದೀಪನಾ ಮದ್ದು ವಿವಾದಕ್ಕೆ ಸಿಲುಕಿದ್ದ ರಷ್ಯಾ ತಂಡವನ್ನು ಒಲಿಂಪಿಕ್ಸ್‌ನಿಂದಲೇ ನಿಷೇಧಿಸಬೇಕು ಎಂದು ಅಮೆರಿಕ ಆಗ್ರಹಿಸಿತ್ತು. ಇದರಿಂದ ಎರಡೂ ದೇಶಗಳ ಸ್ಪರ್ಧಿಗಳ ಸಂಬಂಧ ಹಳಸಿತ್ತು. ಸೋಮವಾರ ನಡೆದ ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯ ಬಳಿಕ ವಿವಾದ ತಾರಕ ಕ್ಕೇರಿದೆ.  ಈ ಸ್ಪರ್ಧೆಯು ಅಮೆರಿಕದ ಲಿಲ್ಲಿ ಕಿಂಗ್‌ ಮತ್ತು ರಷ್ಯಾದ ಯೂಲಿಯಾ ಎಫಿಮೋವಾ ನಡುವಿನ ಪೈಪೋಟಿ ಎಂದು ಬಿಂಬಿಸಲಾಗಿತ್ತು.

24ರ ಹರೆಯದ ಎಫಿಮೋವಾ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳು ವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅವರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಗಿಟ್ಟಿಸಿಕೊಂಡಿದ್ದರು.

ಎಫಿಮೋವಾ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದನ್ನು ಲಿಲ್ಲಿ ಕಿಂಗ್‌ ಒಳಗೊಂಡಂತೆ ಅಮೆರಿಕದ ಸ್ಪರ್ಧಿಗಳು ಪ್ರಶ್ನಿಸಿದ್ದರು. ಸ್ಪರ್ಧೆಯಲ್ಲಿ ಲಿಲ್ಲಿ ಚಿನ್ನ ಗೆದ್ದರೆ, ಎಫಿಮೋವಾ ಎರಡನೇ ಸ್ಥಾನ ಪಡೆದರು. ಅಮೆರಿಕದ ಕೇಟಿ ಮಿಲಿ ಕಂಚು ತಮ್ಮದಾಗಿಸಿಕೊಂಡರು.

ಒಲಿಂಪಿಕ್‌ ಅಕ್ವಟಿಕ್‌ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯ ವೇಳೆ ಪ್ರೇಕ್ಷಕರು ಎಫಿಮೋವಾ ಅವರನ್ನು ಹೀಯಾಳಿಸಿದ್ದಾರೆ. ಕಿಂಗ್‌ ಅಗ್ರಸ್ಥಾನ ಪಡೆದಾಗಲಂತೂ ಯುಎಸ್‌ಎ.. ಯುಎಸ್‌ಎ.. ಎಂಬ ಕೂಗು ಮುಗಿಲುಮುಟ್ಟಿದೆ.

ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಗೆದ್ದಾಗ ಎಫಿಮೋವಾ ಗೆಲುವಿನ ಚಿಹ್ನೆ ತೋರಿಸಿ ಸಂಭ್ರಮಿಸಿದ್ದರು. ಅದಕ್ಕೆ ಲಿಲ್ಲಿ, ‘ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದವರು ಈಗ ಗೆಲುವಿನ ಚಿಹ್ನೆ ತೋರಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.

ಸ್ಪರ್ಧೆ ಕೊನೆಗೊಂಡ ಬಳಿಕ ಲಿಲ್ಲಿ ಮತ್ತು ಕೇಟಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಆದರೆ ಅಮೆರಿಕದ ಇಬ್ಬರು ಸ್ಪರ್ಧಿಗಳು ಎಫಿಮೋವಾ ಅವ ರನ್ನು ಅಭಿನಂದಿಸಲು ಮುಂದಾಗಲಿಲ್ಲ.

ಅಮೆರಿಕದ ಸ್ಪರ್ಧಿಗಳ ಹಾಗೂ ಪ್ರೇಕ್ಷಕರ ವರ್ತನೆಯಿಂದ ನೊಂದು ಕೊಂಡಿದ್ದರೂ ಎಫಿಮೋವಾ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಆದರೆ ಸ್ಪರ್ಧೆ ಕೊನೆಗೊಳ್ಳುತ್ತಿದ್ದಂತೆಯೇ ಅವರು ದುಃಖ ತಡೆಯಲಾಗದೆ ಬಿಕ್ಕಿಬಿಕ್ಕಿ ಅತ್ತರು.

ಪತ್ರಿಕಾಗೋಷ್ಠಿಯಲ್ಲೂ ಅವರು ಕಣ್ಣೀರು ತಡೆಯಲು ಸಾಕಷ್ಟು ಪ್ರಯತ್ನಪಟ್ಟರು. ‘ಒಮ್ಮೆ ತಪ್ಪು ಮಾಡಿದ್ದೆ. ಅದಕ್ಕೆ ಶಿಕ್ಷೆಯನ್ನೂ ಅನುಭವಿಸಿದ್ದೆ’ ಎಂದು ಹೇಳಿದ್ದಾರೆ. ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಎಫಿಮೋವಾ ಈ ಹಿಂದೆ 16 ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು.

‘ಕ್ರೀಡೆಯಲ್ಲಿ ರಾಜಕೀಯದ ಹಸ್ತಕ್ಷೇಪ ಇರಬಾರದು. ಕ್ರೀಡಾಪಟು ಗಳು ಪರಸ್ಪರರ ಸಮಸ್ಯೆಗಳನ್ನು ಅರ್ಥೈಸಿ ಕೊಳ್ಳಬೇಕು. ಅದರ ಬದಲು ರಾಜ ಕೀಯ ನಡೆಸಬಾರದು’ ಎಂದಿದ್ದಾರೆ.

‘ನಾನು ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲೇ ತರಬೇತಿ ಪಡೆಯುತ್ತಿದ್ದೇನೆ. ವರ್ಷದಲ್ಲಿ ಒಂದು ತಿಂಗಳನ್ನು ಮಾತ್ರ ರಷ್ಯಾದಲ್ಲಿ ಕಳೆಯುವೆ. ರಷ್ಯಾದ ಕ್ರೀಡೆಯಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿಲ್ಲ’ ಎಂದೂ ಅವರು ನುಡಿದಿದ್ದಾರೆ.

ಮೈಕೆಲ್ ಫೆಲ್ಪ್ಸ್‌ ಬೆಂಬಲ

ರಿಯೊ ಡಿ ಜನೈರೊ (ರಾಯಿಟರ್ಸ್‌):   ಲಿಲ್ಲಿ ಕಿಂಗ್‌ ಅವರು ರಷ್ಯಾದ ಎಫಿಮೋವಾ ಅವರೊಂದಿಗೆ ನಡೆದುಕೊಂಡ ರೀತಿಯನ್ನು ಅಮೆರಿಕದ ಚಾಂಪಿಯನ್‌ ಈಜುಪಟು ಮೈಕಲ್‌ ಫೆಲ್ಪ್ಸ್‌ ಸಮರ್ಥಿಸಿಕೊಂಡಿದ್ದಾರೆ.

‘ಉದ್ದೀಪನಾ ಮದ್ದು ಸೇವನೆ ವಿರುದ್ಧ ಜನರು ಈಗ ಹೆಚ್ಚೆಚ್ಚು ಮಾತನಾಡುತ್ತಿದ್ದಾರೆ. ಲಿಲ್ಲಿ  ಸರಿಯಾದುದನ್ನೇ ಮಾಡಿದ್ದಾರೆ. ಉದ್ದೀಪನಾ ಮದ್ದು ವಿರುದ್ಧ ಎಲ್ಲ ಅಥ್ಲೀಟ್‌ಗಳು ಧ್ವನಿ ಎತ್ತಬೇಕು’ ಎಂದಿದ್ದಾರೆ.

‘ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಇದು ದುರದೃಷ್ಟಕರ’ ಎಂದು ಹೇಳಿದ್ದಾರೆ.

‘ಲಿಲ್ಲಿ ಅವರಂತೆ ಧೈರ್ಯದಿಂದ ಮಾತನಾಡುವ ಹಲವು ಯುವ ಅಥ್ಲೀಟ್‌ಗಳು ತಂಡದಲ್ಲಿದ್ದಾರೆ. ಇದು ಅಮೆರಿಕ ತಂಡದ ವಿಶೇಷ’ ಎಂದು ಫೆಲ್ಪ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.