ಮಂಗಳವಾರ, ಜೂನ್ 15, 2021
20 °C

ರಾಜಧಾನಿಯ ಕೇಂದ್ರ ಭಾಗದಲ್ಲಿ ಸದ್ದಿಲ್ಲದೇ ಸಾಗಿದೆ ಸ್ಫೋಟ!

ಪ್ರಜಾವಾಣಿ ವಾರ್ತೆ ಎನ್.ಸಿದ್ದೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯ ಕೇಂದ್ರ ಭಾಗದ ಮೂರು ಕಡೆಗಳಲ್ಲಿ ಕಳೆದ ಒಂದು ವರ್ಷದಿಂದ ಸ್ಫೋಟ ನಡೆಯುತ್ತಿದೆ! ಆದರೂ ಸ್ಫೋಟದ ಶಬ್ಧ ಯಾರಿಗೂ ಕೇಳುತ್ತಿಲ್ಲ; ಪರಿಣಾಮವೂ ಯಾರಿಗೂ ಗೊತ್ತಾಗುತ್ತಿಲ್ಲ!!

ಸುಗಮವೂ ಸುರಕ್ಷಿತವೂ ಆದ ಪ್ರಯಾಣ ಸೌಕರ್ಯ ಒದಗಿಸುವ ಭರವಸೆ ಹುಟ್ಟಿಸಿರುವ ಮೆಟ್ರೊ ರೈಲು ಸಂಚಾರ ವ್ಯವಸ್ಥೆಗಾಗಿ ನಿರಂತರ ಸ್ಫೋಟ ನಡೆದಿದೆ.`ನಮ್ಮ ಮೆಟ್ರೊ~ದ ಪೂರ್ವ- ಪಶ್ಚಿಮ ಕಾರಿಡಾರ್‌ನ ಸುರಂಗ ಮಾರ್ಗದ ಭಾಗವಾಗಿರುವ ಮಿನ್ಸ್ಕ್ ಚೌಕ, ವಿಧಾನ ಸೌಧ, ಸೆಂಟ್ರಲ್ ಕಾಲೇಜು ಬಳಿಯ ನೆಲದಡಿಯ ನಿಲ್ದಾಣಗಳ ನಿರ್ಮಾಣಕ್ಕಾಗಿ ಈ ಸ್ಫೋಟ ಕಾರ್ಯ  ಸಾಗಿದೆ.`ಟನೆಲ್ ಬೋರಿಂಗ್ ಮೆಷಿನ್~ನಿಂದ ಸುರಂಗವನ್ನು ಕೊರೆದು, ನಿರ್ಮಿಸಲಾಗುತ್ತಿದೆ. ಸುರಂಗ ಕೊರೆಯುವಾಗ ನೆಲದಾಳದಲ್ಲಿ ಸಿಗುವ ಕಲ್ಲು ಬಂಡೆಗಳನ್ನು ಯಂತ್ರಗಳೇ ಕತ್ತರಿಸಿ ಪುಡಿ ಪುಡಿ ಮಾಡುತ್ತವೆ. ಆದರೆ ಸುರಂಗ ಮಾರ್ಗದ ಭಾಗವಾಗಿ ನಿರ್ಮಾಣವಾಗಬೇಕಿರುವ ನಿಲ್ದಾಣಗಳಿಗಾಗಿ ನೆಲವನ್ನು ಅಗೆಯಬೇಕು. ನೆಲ ಅಗೆಯುವಾಗ ಸಿಗುವ ಕಲ್ಲು ಬಂಡೆಗಳನ್ನು ಸ್ಫೋಟದ ಮೂಲಕವೇ ತೆಗೆಯಬೇಕಾಗಿದೆ.ಸಾಂಪ್ರದಾಯಿಕ ವಿಧಾನದಲ್ಲಿ ಕಲ್ಲು ತೆಗೆಯಲು ಸ್ಫೋಟ ಮಾಡಿದರೆ ಭಾರಿ ಶಬ್ಧ ಉಂಟಾಗುವುದಲ್ಲದೇ ಚೂರು ಚೂರಾಗುವ ಕಲ್ಲುಗಳು ಬಹಳ ದೂರದವರೆಗೆ ಸಿಡಿಯುವುದು ಸಾಮಾನ್ಯ. ಜನರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಸ್ಫೋಟ ಕಾರ್ಯ ನಡೆಸುವುದು ಅಸಾಧ್ಯವೇ ಸರಿ.ವಿಧಾನಸೌಧ, ಹೈಕೋರ್ಟ್, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಕಬ್ಬನ್ ಉದ್ಯಾನ, ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು, ಸೆಂಟ್ರಲ್ ಕಾಲೇಜು- ಮೊದಲಾದ ಪ್ರಮುಖ ಪ್ರದೇಶಗಳ ನಡುವೆ ಸಾಂಪ್ರದಾಯಿಕ ಸ್ಫೋಟ ಸಾಧ್ಯವೇ ಇಲ್ಲ. ಇಂತಹ ಸ್ಫೋಟ ವಿಧಾನವನ್ನು ಅರಣ್ಯ ಪ್ರದೇಶದಲ್ಲೂ ಅನುಸರಿಸದಂತೆ ನಿರ್ಬಂಧ ಜಾರಿಗೆ ಬಂದಿದೆ. ಇದಕ್ಕೆ ಪರ್ಯಾಯವಾಗಿ `ತೀವ್ರವಲ್ಲದ ನಿಯಂತ್ರಿತ ಸ್ಫೋಟ~ (ಎಂಸಿಬಿ- ಮೈಲ್ಡ್ ಕಂಟ್ರೋಲ್ಡ್ ಬ್ಲಾಸ್ಟಿಂಗ್) ಎಂಬ ವಿಧಾನವನ್ನು ಬಳಸಲಾಗುತ್ತಿದೆ.ಮೆಟ್ರೊ ನಿಲ್ದಾಣಗಳಿಗಾಗಿ ನೆಲವನ್ನು ಅಗೆಯುವಾಗ ಸಿಗುವ ಕಲ್ಲುಗಳನ್ನು ಹೊರಕ್ಕೆ ತೆಗೆಯಲು `ಎಂಸಿಬಿ~ ವಿಧಾನವನ್ನು ಅನುಸರಿಸಲಾಗುತ್ತಿದೆ. ಈ ವಿಧಾನದಿಂದ ಸ್ಫೋಟ ಮಾಡಿದಾಗ ಶಬ್ಧ ಆಗುವುದಿಲ್ಲ; ಕಲ್ಲಿನ ಚೂರುಗಳು ಸಿಡಿಯುವುದಿಲ್ಲ. ಸಾರ್ವಜನಿಕರ ಅರಿವಿಗೇ ಬಾರದಂತೆ, ಬ್ಯಾರಿಕೇಡ್‌ಗಳ ನಡುವೆ ಸ್ಫೋಟವು ನಡೆದಿದೆ.ಇದು ಹೇಗೆ ಸಾಧ್ಯ?: ಒಂದು ಸಣ್ಣ ಪಟಾಕಿ ಸಿಡಿಸಿದರೆ ಜೋರು ಸದ್ದಾಗುವುದು ಸಾಮಾನ್ಯ! ಅಂತುಹುದರಲ್ಲಿ ಕಲ್ಲು ಬಂಡೆಗಳನ್ನು ಪುಡಿ ಪುಡಿ ಮಾಡಲು ಸ್ಫೋಟಿಸಿದರೆ ಶಬ್ಧವೇ ಆಗುವುದಿಲ್ಲ ಎಂದರೆ ಅದು ಹೇಗೆ ಸಾಧ್ಯ? ಸ್ಫೋಟ ಪ್ರಕ್ರಿಯೆಯಲ್ಲಿ ಮೊದಲ ಅರ್ಧ ಭಾಗ ಸಾಂಪ್ರದಾಯಿಕ ವಿಧಾನವನ್ನೇ ಅನುಸರಿಸಲಾಗುತ್ತದೆ. ಅಂದರೆ ಬಂಡೆ ಅಥವಾ ಶಿಲಾ ಪದರಕ್ಕೆ ನಿರ್ದಿಷ್ಟ ಅಂತರದಲ್ಲಿ ಗುಳಿಗಳನ್ನು ಕೊರೆದು ಅವುಗಳಿಗೆ ಸ್ಫೋಟಕ ವಸ್ತು  ತುಂಬಲಾಗುವುದು. ಅದಕ್ಕೆ ಡಿಟೋನೇಟರ್ ಸಿಕ್ಕಿಸಿ, ಅವನ್ನು ವೈರ್‌ಗಳ ಸಹಾಯದೊಂದಿಗೆ ಜೋಡಿಸಿ ಸಂಪರ್ಕ ಜಾಲ ನಿರ್ಮಿಸಲಾಗುವುದು.ಈ ಹಂತದಲ್ಲಿಯೇ ಸ್ಫೋಟಿಸಿದರೆ ಭಾರಿ ಪ್ರಮಾಣದ ಶಬ್ಧ ಉಂಟಾಗುವುದಲ್ಲದೇ, ಕಲ್ಲಿನ ಚೂರುಗಳು ನೂರಾರು ಮೀಟರ್ ದೂರದವರೆಗೆ ಸಿಡಿಯುತ್ತವೆ. ಗುಳಿಗಳ ಮೇಲೆ ಮರಳು ತುಂಬಿದ ಚೀಲಗಳನ್ನು ಇರಿಸಿ, ಅದರ ಮೇಲೆ ಕಬ್ಬಿಣದ ತಂತಿಗಳಿಂದ ಮಾಡಿದ ಜಾಲರಿಯನ್ನು ಹೊದಿಸಲಾಗುವುದು. ಅದರ ಮೇಲೆ ಭಾರಿ ಗಾತ್ರದ ರಬ್ಬರ್ ಚಾಪೆಗಳನ್ನು ಜೋಡಿಸಲಾಗುವುದು. ನಂತರ ರಿಮೋಟ್‌ನಿಂದ ಸ್ಫೋಟಿಸಲಾಗುತ್ತದೆ. ಕಲ್ಲಿನ ಚೂರುಗಳು ಸಿಡಿಯುವುದನ್ನು ಜಾಲರಿ ತಪ್ಪಿಸುತ್ತದೆ. ಶಬ್ಧ ಉಂಟಾಗುವುದನ್ನು ರಬ್ಬರ್ ಚಾಪೆಯು ನಿಯಂತ್ರಿಸುತ್ತದೆ. ಇದನ್ನೇ ತೀವ್ರವಲ್ಲದ ನಿಯಂತ್ರಿತ ಸ್ಫೋಟ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಲಾ ಯಂತ್ರವಿಜ್ಞಾನ ಸಂಸ್ಥೆಯ (ಎನ್‌ಐಆರ್‌ಎಂ) ಮಾರ್ಗದರ್ಶನದಲ್ಲಿ ಈ ಸ್ಫೋಟ ಕಾರ್ಯ ಕೈಗೊಳ್ಳಲಾಗಿದೆ ಎಂದು ತಂತ್ರಜ್ಞರೊಬ್ಬರು ತಿಳಿಸಿದರು.

ವಿಧಾನಸೌಧದ ಬಳಿ ವಿಳಂಬ

ಸೆಂಟ್ರಲ್ ಕಾಲೇಜಿನಲ್ಲಿ ಸ್ಫೋಟ ಕಾರ್ಯ ಅಂತಿಮ ಹಂತದಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಆಗದೇ ಇರುವ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದ ನೆಲದಡಿಯ ನಿಲ್ದಾಣಕ್ಕಾಗಿ ನೆಲ ಅಗೆಯುವ ಕಾರ್ಯ ವಿಳಂಬವಾಗಿದೆ. ಮಿನ್ಸ್ಕ್ ಚೌಕದಲ್ಲಿ ಇತ್ತೀಚೆಗಷ್ಟೇ ಸ್ಫೋಟ ಕಾರ್ಯ ಪ್ರಾರಂಭಿಸಲಾಗಿದೆ.ನಗರ ರೈಲು ನಿಲ್ದಾಣ ಮತ್ತು ಮಾಗಡಿ ರಸ್ತೆ ಪ್ರವೇಶ ದ್ವಾರದ ನಡುವೆ ನಿರ್ಮಾಣವಾಗುತ್ತಿರುವ ನಿಲ್ದಾಣದ ಜಾಗದಲ್ಲಿ ಕಲ್ಲಿನ ಪ್ರಮಾಣ ತೀರಾ ಕಡಿಮೆ ಇದ್ದುದರಿಂದ ಅಲ್ಲಿ ಸ್ಫೋಟದ ಅಗತ್ಯ ಬೀಳಲಿಲ್ಲ. ಮೆಜೆಸ್ಟಿಕ್‌ನಲ್ಲಿ ಪೂರ್ವ- ಪಶ್ಚಿಮ ಹಾಗೂ ಉತ್ತರ- ದಕ್ಷಿಣ ಕಾರಿಡಾರ್‌ಗಳ ಎರಡು ನಿಲ್ದಾಣಗಳು ಒಂದರ ಮೇಲೊಂದು ನಿರ್ಮಾಣವಾಗಬೇಕಿದ್ದು, ಅದರ ಆರಂಭಿಕ ಕಾಮಗಾರಿಗಳು ಈಚೆಗಷ್ಟೇ ಶುರುವಾಗಿವೆ.ಇನ್ನು ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಸುರಂಗ ಮಾರ್ಗದ ಭಾಗವಾಗಿ ಚಿಕ್ಕಪೇಟೆ, ಸಿಟಿ ಮಾರ್ಕೆಟ್‌ನಲ್ಲಿ ಎರಡು ನೆಲದಡಿಯ ನಿಲ್ದಾಣಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭದ ಹಂತದಲ್ಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.