ಸೋಮವಾರ, ಮೇ 10, 2021
22 °C

ರಾಜೀನಾಮೆಗೆ ಚಿದಂಬರಂ ಸಿದ್ಧ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಹಣಕಾಸು ಸಚಿವಾಲಯದ ಟಿಪ್ಪಣಿ ವಿವಾದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿರಿಯ ಸಚಿವರಾದ ಪ್ರಣವ್ ಮುಖರ್ಜಿ ಮತ್ತು ಪಿ.ಚಿದಂಬರಂ ಅವರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಮಹತ್ತರ ಬೆಳವಣಿಗೆಯಾಗಿದೆ.ಈ ಮಾತುಕತೆಯಲ್ಲಿ ಚರ್ಚೆಯಾದ ವಿಷಯಗಳ ವಿವರ ಲಭ್ಯವಾಗಿಲ್ಲ. ಆದರೆ ತಮ್ಮ ಸುತ್ತ ಎದ್ದಿರುವ ವಿವಾದದಿಂದ ನೊಂದಿರುವ ಗೃಹ ಸಚಿವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಸೋನಿಯಾ ಅವರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ತಮ್ಮ ವಿರುದ್ಧ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದು ಅವರು ದೂರಿಕೊಂಡಿದ್ದಾರೆ; ಪ್ರಧಾನಿ ನ್ಯೂಯಾರ್ಕ್‌ನಿಂದ ವಾಪಸಾಗುವವರೆಗೂ ತಾಳ್ಮೆಯಿಂದ ಇರುವಂತೆ ಸೋನಿಯಾ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.ಚಿದಂಬರಂ ಪಕ್ಷದ ಅಧ್ಯಕ್ಷರ ಜತೆ ಸುಮಾರು 20 ನಿಮಿಷ, ಮುಖರ್ಜಿ  45 ನಿಮಿಷ ಮಾತುಕತೆ ನಡೆಸಿದರು. ಮಂಗಳವಾರ ರಾತ್ರಿ ನ್ಯೂಯಾರ್ಕ್‌ನಿಂದ ವಾಪಸಾದ ಕೂಡಲೇ ಪ್ರಧಾನಿ ಅವರು ಸೋನಿಯಾ ಬಳಿ ಚರ್ಚೆ ನಡೆಸಲಿದ್ದಾರೆ. ಇದಾದ ನಂತರ ಪ್ರಧಾನಿ ಅವರು ಮುಖರ್ಜಿ ಮತ್ತು ಚಿದಂಬರಂ ಅವರನ್ನು ಕರೆಸಿ ಮಾತನಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ವಿವರ ಪರಿಶೀಲನೆ: ಮುಖರ್ಜಿ ಸೋಮವಾರ ಸಂಜೆ ನ್ಯೂಯಾರ್ಕ್‌ನಿಂದ ಬಂದವರೇ ನೇರವಾಗಿ ನಾರ್ಥ್ ಬ್ಲಾಕ್‌ನ ತಮ್ಮ ಕಚೇರಿಗೆ ತೆರಳಿ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ಮಾರ್ಚ್ 25ರಂದು ತಮ್ಮ  ಸಚಿವಾಲಯ ಟಿಪ್ಪಣಿ ಕಳುಹಿಸಿದ ಸಂದರ್ಭ ಮತ್ತು ಇನ್ನಿತರ ವಿವರಗಳನ್ನು ಪರಿಶೀಲಿಸಿದರು.ಇದಾದ ನಂತರ ಅವರು ಜನಪಥ್‌ನ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದರು. ಅಷ್ಟರಲ್ಲಿ ಸೋನಿಯಾ ಮತ್ತು ಚಿದಂಬರಂ ಮಾತುಕತೆ ಮುಗಿದಿತ್ತು. ನಂತರ ಮುಖರ್ಜಿ ಅವರು ಪಕ್ಷದ ಅಧ್ಯಕ್ಷರ ಜತೆ ಚರ್ಚಿಸಿದರು.ಕಳೆದ ಮಾರ್ಚ್ 25ರಂದು ಹಣಕಾಸು ಸಚಿವಾಲಯವು ಪ್ರಧಾನಿ ಅವರ ಕಾರ್ಯಾಲಯಕ್ಕೆ ಕಳುಹಿಸಿದ ಟಿಪ್ಪಣಿಯಲ್ಲಿ, `ಚಿದಂಬರಂ ಅವರು 2008ರಲ್ಲಿ ಹಣಕಾಸು ಸಚಿವರಾಗಿದ್ದಾಗ ತರಂಗಾಂತರವನ್ನು ಹರಾಜಿನ ಮೂಲಕ ಮಾರಾಟ ಮಾಡುವುದಕ್ಕೆ ಸೂಚಿಸಿದ್ದರೆ ಹಗರಣವನ್ನು ತಪ್ಪಿಸಬಹುದಾಗಿತ್ತು~ ಎಂದು ತಿಳಿಸಿದ್ದೇ ದೊಡ್ಡ ವಿವಾದಕ್ಕೆ ಮೂಲ ಕಾರಣ.ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಪ್ರಧಾನಿ  ಕಾರ್ಯಾಲಯದಿಂದ ವಿವರ ಪಡೆದಿದ್ದೇ ವಿಷಯ ಬಹಿರಂಗಕ್ಕೆ ಕಾರಣ ಎಂದು ಮುಖರ್ಜಿ, ಸೋನಿಯಾ ಅವರಿಗೆ ವಿವರಿಸಿದ್ದಾರೆ; ಅಧಿಕಾರಗಳ ಜತೆ ಗಂಭೀರ ಚರ್ಚೆ ನಡೆಸಿದ ನಂತರವಷ್ಟೇ ಟಿಪ್ಪಣಿ ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.ಸಂಪುಟದ ಇಬ್ಬರು ಹಿರಿಯ ಸಚಿವರ ನಡುವಿನ ಭಿನ್ನಾಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ, ಇಬ್ಬರನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿಸಿ ಭಿನ್ನಾಭಿಪ್ರಾಯ ಶಮನಕ್ಕೆ ಯತ್ನಿಸಿದ್ದಾರೆನ್ನಲಾಗಿದೆ.ನ್ಯೂಯಾರ್ಕ್‌ನಿಂದ ವಾಪಸಾದ ಕೂಡಲೇ ಮುಖರ್ಜಿ ತಮ್ಮ ಸಹೋದ್ಯೋಗಿ ಜತೆ ರಾಜಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ `ಚಿದಂಬರಂ ಉತ್ತಮ ಸಹೋದ್ಯೋಗಿ ಮತ್ತು ಸರ್ಕಾರದ ಆಧಾರ ಸ್ತಂಭ~ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ವಾಪಸಾದ ಮೇಲೆ ಚರ್ಚಿಸಿ  ಹೇಳುವುದೆಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಹೇಳುವುದಾಗಿ ತಿಳಿಸಿದ್ದಾರೆ. ಆದರೆ ಚಿದಂಬರಂ ಇದುವರೆಗೆ ಹಣಕಾಸು ಸಚಿವಾಲಯ ಕಳುಹಿಸಿರುವ ಟಿಪ್ಪಣಿಯ ಬಗ್ಗೆ ಚಕಾರ ಎತ್ತಿಲ್ಲ.ಸರ್ಕಾರಕ್ಕೆ ಇಕ್ಕಟ್ಟು: ಚಿದಂಬರಂ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಆರಂಭಿಸಲಿದ್ದು, ಸರ್ಕಾರ ಮತ್ತು ಗೃಹ ಸಚಿವರಿಗೆ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ.ಗೃಹ ಸಚಿವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೋರ್ಟ್ ಆದೇಶಿಸಿದರೆ ರಾಜೀನಾಮೆ ನೀಡುವುದು ಚಿದಂಬರಂ ಅವರಿಗೆ ಅನಿವಾರ್ಯವಾಗುತ್ತದೆ. ಇದರ ಜತೆಗೆ ಪ್ರಧಾನಿ ಸೇರಿದಂತೆ ತರಂಗಾಂತರ ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರೆಲ್ಲರೂ ಮುಜುಗರ ಎದುರಿಸಬೇಕಾಗುತ್ತದೆ.ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ತಡರಾತ್ರಿ ಮುಖರ್ಜಿ ಅವರನ್ನು ಭೇಟಿ ಮಾಡಿ, ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಈ ನಡುವೆ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಚಿದಂಬರಂ ಅವರಿಗೆ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.