ಮಂಗಳವಾರ, ಮೇ 18, 2021
23 °C
ಸುದ್ದಿ ವಿಶ್ಲೇಷಣೆ

ರಾಜೀನಾಮೆ ಕೊಟ್ಟದ್ದೇಕೆ? ವಾಪಸ್ ತೆಗೆದುಕೊಂಡದ್ದೇಕೆ?

ಪ್ರಜಾವಾಣಿ ವಾರ್ತೆ/ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ನವದೆಹಲಿ: `ಎಲ್.ಕೆ. ಅಡ್ವಾಣಿ ರಾಜೀನಾಮೆ ಪ್ರಹಸನ'ವನ್ನು ಬಿಜೆಪಿ ಬಿಕ್ಕಟ್ಟು ಎನ್ನುವುದಕ್ಕಿಂತ `ರಾಜಕೀಯ ನಾಟಕ' ಎಂದು ವ್ಯಾಖ್ಯಾನಿಸುವುದೇ ಹೆಚ್ಚು ಸೂಕ್ತ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸುತ್ತಿದ್ದಂತೆ ಸಿಟ್ಟಿಗೆದ್ದ ಹಿರಿಯ ನಾಯಕ ರಾಷ್ಟ್ರೀಯ ಕಾರ್ಯಕಾರಿಣಿ, ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿ ತ್ಯಜಿಸಿದರು. ಅಷ್ಟಕ್ಕೆ ಸುಮ್ಮನಾಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರಿಗಿರುವ ಗೌರವವೂ ಹೆಚ್ಚುತಿತ್ತು. ಒಂದೇ ದಿನದಲ್ಲಿ ಬಣ್ಣ ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.ಲಾಲ್‌ಕೃಷ್ಣ ರಾಜೀನಾಮೆ ಕೊಟ್ಟಿದ್ದೇಕೆ? ಅದನ್ನು ವಾಪಸ್ ಪಡೆದಿದ್ದೇಕೆ? ರಾಜೀನಾಮೆ ವಾಪಸ್ ಪಡೆದಿದ್ದರಿಂದ ಅವರಿಗೆ ಏನಾದರೂ ಲಾಭವಾಗಿದೆಯೇ? ಅಥವಾ ಸಂಘ-ಪರಿವಾರದ ಒತ್ತಡಕ್ಕೆ ಮಣಿದರೇ? ಪಕ್ಷದೊಳಗೆ `ಆಟಕ್ಕುಂಟು ಲೆಕ್ಕಕ್ಕಿಲ್ಲ' ಎನ್ನುವ ಸ್ಥಿತಿಯಲ್ಲಿರುವ ಅಡ್ವಾಣಿ ಅವರಿಗೆ ಬೇರೆ ಆಯ್ಕೆಗಳಿಲ್ಲದೆ ತೀರ್ಮಾನ ಬದಲಿಸಿದ್ದಾರೆಯೇ ಎನ್ನುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿವೆ.ಸೋಮವಾರ ಅಡ್ವಾಣಿ ರಾಜೀನಾಮೆ ಪತ್ರವನ್ನು ರಾಜನಾಥ್‌ಸಿಂಗ್ ಅವರಿಗೆ ರವಾನಿಸಿದ ತಕ್ಷಣದಿಂದ ಬಿಜೆಪಿಯೊಳಗೆ ದೊಡ್ಡ `ರಾಜಕೀಯ ನಾಟಕ'ವೇ ನಡೆಯಿತು. ಅವರ ಆತ್ಮೀಯರು ಒಳಗೊಂಡಂತೆ ಪಕ್ಷದ ಬಹಳಷ್ಟು ಮುಖಂಡರು ಅವರ ಮನೆಗೆ ದೌಡಾಯಿಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಯಾರ ಮಾತಿಗೂ ಸೊಪ್ಪು ಹಾಕದೆ `ನೋ' ಎಂದು `ಖಡಕ್' ಆಗಿ ಮುಖ ತಿರುಗಿಸಿದ್ದ ಹಿರಿಯ ಬಿಜೆಪಿ ನಾಯಕ ಎರಡು ದಿನದ ಬಳಿಕ ಏಕೆ ನಿರ್ಧಾರ ಬದಲಿಸಿದರು ಎನ್ನುವುದು ನಿಗೂಢ.ಅಡ್ವಾಣಿ ಜತೆ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಮಾತನಾಡಿದ ಬಳಿಕ ರಾಜನಾಥ್ ಸಿಂಗ್, ಅಡ್ವಾಣಿ ರಾಜೀನಾಮೆ ವಾಪಸ್ ಪಡೆದಿದ್ದಾರೆಂದು ಪ್ರಕಟಿಸಿದ್ದಾರೆ. ಇಬ್ಬರ ಮಧ್ಯೆ ಏನು ಚರ್ಚೆ ನಡೆದಿದೆ. ಷರತ್ತೇನಾದರೂ ಹಾಕಿದ್ದಾರೆಯೇ ಎಂಬ ಸಂಗತಿ ಬಹಿರಂಗವಾಗಬೇಕಿದೆ. `ನರೇಂದ್ರ ಮೋದಿ ಪಾತ್ರ ಪ್ರಚಾರಕ್ಕೆ ಮಾತ್ರ ಸೀಮಿತ. ಪ್ರಧಾನಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಮಯದಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುತ್ತೇವೆ' ಎಂದು ಹೇಳಿದ್ದಾರೋ ಅಥವಾ `ಇದು ಸಂಘ ಪರಿವಾರದ ತೀರ್ಮಾನ, ಅದನ್ನು ವಿರೋಧ ಮಾಡಬಾರದು ಎಂದು ಆದೇಶ ಕೊಟ್ಟಿದ್ದಾರೋ' ಎನ್ನುವುದು ರಹಸ್ಯವಾಗಿವೆ.ಭಾಗವತರ `ನೀಲಿಗಣ್ಣಿನ ಹುಡುಗ' ನಿತಿನ್ ಗಡ್ಕರಿ ಕಳೆದ ಡಿಸೆಂಬರ್‌ನಲ್ಲಿ ಎರಡನೇ ಸಲ ಬಿಜೆಪಿ ಅಧ್ಯಕ್ಷರಾಗುವ ಅವಕಾಶದಿಂದ ವಂಚಿತವಾದ ಬಳಿಕ  ಭಾಗವತ ಮತ್ತು ಅಡ್ವಾಣಿ ಪರಸ್ಪರ ಮುಖ ನೋಡದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಗಡ್ಕರಿ ಅವರಿಗೆ ಎರಡನೇ ಸಲ ಅವಕಾಶ ತಪ್ಪಲು ಅಡ್ವಾಣಿ ಅವರೇ ಕಾರಣ. ಅವರಿಗೆ ಅವಕಾಶ ತಪ್ಪಿಸಲು ಏನೇನು ಮಾಡಿದರೆಂದು ಸಂಘ ಪರಿವಾರದ ನಾಯಕರಿಗೆ ಗೊತ್ತಿದೆ. ಈಗ ಅನಿವಾರ್ಯವಾಗಿ ಮಾತನಾಡಿದ್ದಾರೆ. ಆರ್‌ಎಸ್‌ಎಸ್ ಜತೆ ಹಳಸಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಲು ಅಡ್ವಾಣಿ ಅವರೂ ಇಂಥ ಅವಕಾಶಕ್ಕಾಗಿ ಕಾದಿದ್ದರು. ಹೀಗಾಗಿ ಸಮಸ್ಯೆ ಪರಿಹಾರವಾಗಿದೆ ಎಂದು ಬಿಜೆಪಿ  ಮೂಲಗಳು ವಿಶ್ಲೇಷಿಸುತ್ತಿವೆ.ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷ. ಆದರೆ, ಈ ಪಕ್ಷದ ಮೂಗುದಾರ ಇರುವುದು ಸಂಘ ಪರಿವಾರದ ಕೈಯಲ್ಲಿ. ಕೇಸರಿ ಪಕ್ಷದೊಳಗೆ ದೊಡ್ಡ ನಾಯಕರ ದಂಡಿದೆ. ಆದರೆ ಅದು ತೋರಿಕೆಗೆ ಮಾತ್ರ. ನೀತಿ, ನಿಲುವು ತೀರ್ಮಾನಿಸುವುದು ಮೋಹನ್ ಭಾಗವತ್ ಮತ್ತು ಅವರ ತಂಡ. ಹತ್ತಾರು ಸಂದರ್ಭಗಳಲ್ಲಿ ಇದು ನಿರೂಪಿತವಾಗಿದೆ. ಮೊನ್ನೆ ಗೋವಾ ಕಾರ್ಯಕಾರಿಣಿಯಲ್ಲಿ ಮೋದಿ ಅವರಿಗೆ ಪ್ರಚಾರ ಸಾರಥ್ಯ ವಹಿಸುವ ನಿರ್ಧಾರವೂ ಸಂಘ ಪರಿವಾರದಿಂದಲೇ ಬಂದಿರುವ `ತೀರ್ಥ'.ಅಡ್ವಾಣಿ ಅವರಿಗಿರುವಷ್ಟು ರಾಜಕೀಯ ಅನುಭವ ಆ ಪಕ್ಷದಲ್ಲಿ ಮತ್ಯಾರಿಗೂ ಇಲ್ಲ. ಮೋದಿ ಹೆಸರನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸಂಸತ್ತಿನ ಅಧಿವೇಶನ ನಡೆಯುವಾಗ ಅಡ್ವಾಣಿ ಲೋಕಸಭೆಗೆ ಬಂದರೆಂದರೆ ಅವರಿಗೆ ಸಿಗುವ ಗೌರವವೇ ಬೇರೆ. ಸುಮಾರು ಆರೂವರೆ ದಶಕಗಳ ಸುದೀರ್ಘ ರಾಜಕೀಯ ಅನುಭವ ಪಡೆದಿರುವ ಲಾಲ್‌ಕೃಷ್ಣ 1927ರ ನವೆಂಬರ್ 8ರಂದು ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದ್ದು. ವಾಜಪೇಯಿ ನಂತರದ ಅತ್ಯಂತ ಹಿರಿಯ ನಾಯಕ. ರಾಷ್ಟ್ರೀಯ ಸ್ವಯಂ ಸೇವಕರಾಗಿ ದುಡಿದವರು. ಎರಡು ದಶಕದ ಹಿಂದೆ ರಾಮಜನ್ಮಭೂಮಿ ಹೋರಾಟದ ಮೂಲಕ ಹಿಂದೂಗಳನ್ನು ಸಂಘಟಿಸಿದವರು.2005ರಲ್ಲಿ ತಮ್ಮ ವಿಚಾರ ಲಹರಿ ಬದಲಿಸಿ ಅಡ್ವಾಣಿ ಕೊಂಚ ಎಡವಟ್ಟು ಮಾಡಿಕೊಂಡರು. ಪಾಕಿಸ್ತಾನಕ್ಕೆ ಹೋಗಿದ್ದಾಗ ಮಹಮದ್ ಅಲಿ ಜಿನ್ನಾ ಅವರನ್ನು ಜಾತ್ಯತೀತ ನಾಯಕ ಎಂದು ಹೊಗಳಿ ಆರ್‌ಎಸ್‌ಎಸ್ ಕೆಂಗಣ್ಣಿಗೆ ಗುರಿಯಾದರು. ಅಲ್ಲಿಂದಲೇ ಅವರಿಗೆ ಕೆಟ್ಟ ಕಾಲ ಶುರುವಾಗಿದ್ದು. ಬಿಜೆಪಿ ಅಧ್ಯಕ್ಷ ಸ್ಥಾನ ತಪ್ಪಿದ್ದು. ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಪಾಕಿಸ್ತಾನ ಕುರಿತು ಬರೆದ ಪುಸ್ತಕ ಬಿಡುಗಡೆ ಮಾಡುವಾಗಲೂ ಮತ್ತೆ ಅದೇ ತಪ್ಪು ಮಾಡಿದರು. ಆಗ ಅವರು ಜಿನ್ನಾ ಅವರನ್ನು ಹೊಗಳದಿದ್ದರೆ, ಗಡ್ಕರಿಗೆ ಅಧ್ಯಕ್ಷ ಸ್ಥಾನ ತಪ್ಪಿಸದಿದ್ದರೆ ಅವರನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿರಲಿಲ್ಲವೇನೋ! ಈಗ ಇವೆಲ್ಲ ಇತಿಹಾಸ. ಅಡ್ವಾಣಿ ಬೆಲೆ ಇಲ್ಲದ ಡಮ್ಮಿ ನಾಯಕ. ಮೋದಿ ಅಸಲಿ ನಾಯಕ. ಬಿಜೆಪಿಗೆ ರೇಸ್ ಗೆಲ್ಲಿಸಿಕೊಡಬಲ್ಲ ಜಾಕಿ.ಆರ್‌ಎಸ್‌ಎಸ್ ಪೂರ್ಣಾವಧಿ ಕಾರ್ಯಕರ್ತರಾದ ಮೋದಿ ಪ್ರವರ್ಧಮಾನಕ್ಕೆ ಬಂದಿದ್ದು ಗೋದ್ರಾ ಹಿಂಸಾಚಾರಕ್ಕೆ ಪ್ರತಿಯಾಗಿ ನಡೆದ ನರೋಡ ಪಾಟಿಯಾ ಹತ್ಯಾಕಾಂಡದ ಬಳಿಕ. ಗುರು, ಬಾಬ್ರಿ ಮಸೀದಿ ನೆಲಸಮಕ್ಕೆ ಪಿತೂರಿ ಮಾಡಿ ಖ್ಯಾತರಾದವರು. ಶಿಷ್ಯ `ನರಮೇಧ' ಪಿತೂರಿಯಿಂದ ಜಗತ್ಪ್ರಸಿದ್ಧರಾದವರು. 2001ರಲ್ಲಿ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದವರೇ ಅಡ್ವಾಣಿ. ಭ್ರಷ್ಟಾಚಾರ- ದುರಾಡಳಿತದ ಆರೋಪಕ್ಕೆ ಸಿಕ್ಕಿ ಕೇಶುಭಾಯ್ ಪಟೇಲ್ ಉಪ ಚುನಾವಣೆಗಳನ್ನು ಸೋತಾಗ ಮೋದಿ ಹೆಗಲಿಗೆ ಹೊಣೆ ಬಿತ್ತು.ಸತತ ಮೂರು ಚುನಾವಣೆ ಗೆದ್ದಿರುವ ಮೋದಿ ಬಿಜೆಪಿ ಹೀರೊ. ಅವರು ಹೋಗುತ್ತಿರುವ ವೇಗ ನೋಡಿದರೆ ಅವರನ್ನು ಹಿಡಿಯುವುದು ಕಷ್ಟ. ಈ ಸತ್ಯ ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರಿಗೂ ಗೊತ್ತಿದೆ. ಆದರೆ, ಏನೂ ಮಾಡುವಂತಿಲ್ಲ. ಮುಂದಿನ ವರ್ಷದ ಚುನಾವಣೆ ಗೆಲ್ಲಲು ಮೋದಿ ಜನಪ್ರಿಯತೆಯನ್ನು ಪಣಕ್ಕಿಡಬೇಕೆಂಬ ಒತ್ತಾಯ ಪಕ್ಷದೊಳಗಿದೆ. ಬಿಜೆಪಿ ಕಾರ್ಯಕರ್ತರಂತೂ ಮೋದಿ ಹೆಸರು ಕೇಳಿದರೆ ಸಾಕು ಹುಚ್ಚೆದ್ದು ಕುಣಿಯುತ್ತಾರೆ. ಅಡ್ವಾಣಿ ಅವರಿಗೆ ಮೋದಿ ಅವರಿಗಿಂತ ಪ್ರಧಾನಿ ಹುದ್ದೆ ಅಲಂಕರಿಸುವ ಯೋಗ್ಯತೆ ಹೆಚ್ಚಿಗೆ ಇದೆ.ಆದರೆ, ಪಕ್ಷದ ನಾಯಕತ್ವಕ್ಕಾಗಿ ನಡೆದಿರುವ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ.

ಅನಿವಾರ್ಯವಾಗಿ ಅಡ್ವಾಣಿ ರಾಜೀನಾಮೆ ಹಿಂದಕ್ಕೆ ಪಡೆದು ಸಂಘ- ಪರಿವಾರಕ್ಕೆ ಶರಣಾಗಿದ್ದಾರೆ. ರಾಜೀನಾಮೆ ತೀರ್ಮಾನ ಬದಲಾವಣೆ ಮಾಡದಿದ್ದರೆ ರಾಜಕೀಯ ಜೀವನ ಅಂತ್ಯ ಆಗುತ್ತಿತ್ತು. ನಿಲುವು ಬದಲಿಸುವ ಮೂಲಕ ಉಳಿದ ನಾಯಕರಿಗಿಂತ ತಾವು ಭಿನ್ನರಲ್ಲ ಎಂದು ನಿರೂಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.