ಶನಿವಾರ, ಮೇ 28, 2022
26 °C

ರಾಜೀನಾಮೆ: ದೊಡ್ಡತನಕ್ಕೆ ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ತಮ್ಮ ಮೇಲೆ ಆರೋಪ ಕೇಳಿ ಬಂದ ತಕ್ಷಣವೇ ಸಚಿವ ಸುರೇಶ್‌ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರ ದೊಡ್ಡತನ ತೋರುತ್ತದೆ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಟೆಲಿಕಾಂ ಬಡಾವಣೆಯಲ್ಲಿ ಭಾನುವಾರ ಪಿಂಚಣಿದಾರರ ಭವನವನ್ನು ಉದ್ಘಾಟಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದರು.`ಒಂದು ನಿವೇಶನ ಇದ್ದು, ಮತ್ತೊಂದು ನಿವೇಶನ ಪಡೆದಿರುವ ಬಗ್ಗೆ ನನಗೆ ಸರಿಯಾದ ಮಾಹಿತಿಯಿಲ್ಲ. ಹಾಗೇನಾದರೂ ಪಡೆದಿದ್ದರೆ ಅದು ತಪ್ಪಾಗುತ್ತದೆ. ಆದರೆ, ಈಗಾಗಲೇ ಹಲವು ಸಚಿವರು ಹಾಗೂ ಶಾಸಕರ ವಿರುದ್ಧ ದೊಡ್ಡ ದೊಡ್ಡ ಭ್ರಷ್ಟಾಚಾರದ ಆರೋಪಗಳಿದ್ದರೂ ಇದುವರೆಗೂ ಯಾರೂ ರಾಜೀನಾಮೆ ನೀಡಿಲ್ಲ. ಆದರೆ, ಸುರೇಶ್‌ಕುಮಾರ್ ಅವರು ತಮ್ಮ ಮೇಲೆ ಸಣ್ಣದೊಂದು ಆರೋಪ ಕೇಳಿ ಬಂದ ತಕ್ಷಣ ರಾಜೀನಾಮೆ ನೀಡಿ ದೊಡ್ಡತನ ತೋರಿಸುವ ಮೂಲಕ ಆದರ್ಶ ಮೆರೆದಿದ್ದಾರೆ~ ಎಂದು ಅವರು ಪ್ರತಿಕ್ರಿಯಿಸಿದರು.ಇದಕ್ಕೂ ಮುನ್ನ ಪಿಂಚಣಿದಾರರ ಭವನ ಉದ್ಘಾಟಿಸಿ ಮಾತನಾಡಿದ ಅವರು, `ಹೊರಗಿನಿಂದ ಬರುವ ಕೇಂದ್ರ ಸರ್ಕಾರಿ ಪಿಂಚಣಿದಾರರ ಸಂಘಗಳ ಸದಸ್ಯರು ಉಳಿದುಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಸಂಘದ ಪದಾಧಿಕಾರಿಗಳು ಭವನ ನಿರ್ಮಿಸಿರುವುದು ಒಳ್ಳೆಯ ಕೆಲಸ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಅಂಚೆ ಮತ್ತು ದೂರವಾಣಿ ಪಿಂಚಣಿದಾರರ ಸಂಘದ ಅಧ್ಯಕ್ಷ ಬಿ. ಸದಾಶಿವರಾವ್, ಜಂಟಿ ಕಾರ್ಯದರ್ಶಿ ಬಿ.ಕೆ.ಗುಂಡೂರಾವ್, ಉಪಾಧ್ಯಕ್ಷ ರಾಮಯ್ಯ, ಕಾರ್ಯದರ್ಶಿ ಎನ್.ಭಾಸ್ಕರನ್, ಖಜಾಂಚಿ ವಿಠಲರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.