ಸೋಮವಾರ, ಏಪ್ರಿಲ್ 19, 2021
32 °C

ರಾಜ್ಯದಲ್ಲಿ ಯುನಿನಾರ್ ದೂರವಾಣಿ ಸೇವೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಓಡಿಶಾ ಸೇರಿದಂತೆ 4 ದೂರಸಂಪರ್ಕ ವೃತ್ತಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸುವುದಾಗಿ ನಾರ್ವೆ ಮೂಲದ ಮೊಬೈಲ್ ಸೇವಾ ಸಂಸ್ಥೆ ಯುನಿನಾರ್ ಹೇಳಿದೆ.ದೇಶದ 13 ದೂರಸಂಪರ್ಕ ವೃತ್ತಗಳಲ್ಲಿ  ಯುನಿನಾರ್ ಸೇವೆ ಒದಗಿಸುತ್ತಿತ್ತು. ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಬಂಡವಾಳ ಕ್ರೋಡೀಕರಣದ ಸಮಸ್ಯೆಯಿಂದ ಆಯ್ದ ವೃತ್ತಗಳಲ್ಲಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.ಈಗಾಗಲೇ ಚಂದಾದಾರರಿಗೆ ಮಾಹಿತಿ ನೀಡಲಾಗಿದ್ದು, ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಮೂಲಕ ಸೇವಾ ಸಂಸ್ಥೆ ಬದಲಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ವೃತ್ತಗಳಲ್ಲಿ ಒಟ್ಟು 6.8 ದಶಲಕ್ಷ ಗ್ರಾಹಕರನ್ನು ಕಂಪೆನಿ ಹೊಂದಿದ್ದು, ಹೊಸ ಚಂದಾದಾರರ ನೋಂದಣಿ ಸ್ಥಗಿತಗೊಳಿಸಲಾಗಿದೆ.ಕರ್ನಾಟಕದಲ್ಲಿ ಸ್ಥಗಿತ: ರಾಜ್ಯದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರವು ಕಂಪೆನಿಯ ಆಯ್ಕೆಯಲ್ಲ. ಪರಿಸ್ಥಿತಿಯ ಒತ್ತಡದ ಅನಿವಾರ್ಯತೆಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಂಪೆನಿ ಆಡಳಿತ ಮಂಡಳಿ ಹೇಳಿದೆ.

 

ಫೆಬ್ರುವರಿಯಲ್ಲಿ ಪರವಾನಗಿ ರದ್ದುಗೊಂಡ ಸಂದರ್ಭದಿಂದಲೂ ಕಂಪೆನಿ ಪರ್ಯಾಯ ಮಾರ್ಗಗಳ ಕುರಿತು ಚಿಂತಿಸುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿನ ವಿಳಂಬ ಧೋರಣೆಯು ಬಂಡವಾಳ ಕ್ರೋಡೀಕರಣಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಇದರಿಂದ ಅನಿವಾರ್ಯವಾಗಿ  ಬೇರೆ ದಾರಿಯಿಲ್ಲದೆ ಕಾರ್ಯಾಚರಣೆ ನಿಲ್ಲಿಸುತ್ತಿದ್ದೇವೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಸಿಗ್ವ್ ಬ್ರೆಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರ್ಯಾಯ ಉದ್ಯೋಗ ವ್ಯವಸ್ಥೆ: ಕಂಪೆನಿಯ ನಿರ್ಧಾರವು ರಾಜ್ಯದಲ್ಲಿ ನೇರವಾಗಿ  210 ಮತ್ತು ಪರೋಕ್ಷವಾಗಿ 491 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದ್ದು, ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ. ಇತರೆ ದೂರವಾಣಿ ಸೇವಾ ಸಂಸ್ಥೆಗಳ `ಸಿಇಒ~ಗಳ ಜತೆ ಮಾತುಕತೆ ನಡೆಸಲಾಗಿದ್ದು, ಯುನಿನಾರ್ ಸಂಸ್ಥೆಯ ಉದ್ಯೋಗಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

 

ಕೆಲವು ಉದ್ಯೋಗಿಗಳನ್ನು ಕಂಪೆನಿಯ ಉಳಿದ 9 ದೂರವಾಣಿ ವೃತ್ತಗಳಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಉದ್ಯೋಗಿಗಳ ಮರು ನೇಮಕಕ್ಕೆ ಸಂಬಂಧಿಸಿದಂತೆ `ನೌಕರಿ ಡಾಟ್‌ಕಾಂ~ ನೆರವು ಪಡೆಯಲಾಗಿದೆ.  ಕಂಪೆನಿಯ ಮಾನವ ಸಂಪನ್ಮೂಲ ವಿಭಾಗವೇ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.ಉದ್ಯೋಗಿಗಳಿಗೆ ಜೂನ್ ತಿಂಗಳ ವೇತನವನ್ನು ಈಗಾಗಲೇ ಪಾವತಿ ಮಾಡಲಾಗಿದೆ. ಜುಲೈ ತಿಂಗಳ ವೇತನ ಆಗಸ್ಟ್ 10ರೊಗಳಗೆ ಪಾವತಿ ಮಾಡುವುದಾಗಿಯೂ ಕಂಪೆನಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.