ಗುರುವಾರ , ಮೇ 6, 2021
33 °C

`ರೈಲ್ವೆ ಟ್ರ್ಯಾಕ್'ನಿಂದ ಎವರೆಸ್ಟ್ ಎತ್ತರಕ್ಕೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ಖಂಡಿತ ತೆರೆದಿರುತ್ತದೆ. ಆದರೆ ನಾವು ಮುಚ್ಚಿದ ಬಾಗಿಲೆಡೆಗೆ ನೋಡುತ್ತಿರುತ್ತೇವೆಯೇ ಹೊರತು ತೆರೆದ ಬಾಗಿಲಿನತ್ತ ಕಣ್ಣು ಹರಿಸುವುದೇ ಇಲ್ಲ' ಎಂಬ ಮಾತಿದೆ.ಆದರೆ, ಅರುಣಿಮಾ ಸಿನ್ಹಾ ಹಾಗಲ್ಲ. ದುಷ್ಕರ್ಮಿಗಳ ಅನುಚಿತ ವರ್ತನೆ ಕಾರಣ ರೈಲಿನಿಂದ ಕೆಳಗೆ ಬಿದ್ದು ಎಡಗಾಲ ಮೂಳೆ ಮುರಿದು ಆಸ್ಪತ್ರೆಯ ಹಾಸಿಗೆಯಲ್ಲಿ ನರಳಾಡುತ್ತಿದ್ದ ಈ ಹುಡುಗಿಯ ಗುರಿ ನೆಟ್ಟಿದ್ದು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ತುತ್ತತುದಿಯತ್ತ. ಆ ಕನಸಿನ ಬೆನ್ನಟ್ಟಿ ಒಂದು ಕಾಲು ಇಲ್ಲದೇ ಆ ಪರ್ವತ ಶಿಖರವೇರಿ ಜಗದ ಮನಸ್ಸು ಗೆದ್ದ ದಿಟ್ಟಗಿತ್ತಿ ಅರುಣಿಮಾ.ಒಂದು ಕಾಲು ಇಲ್ಲದಿದ್ದರೆ ಶಾಲೆಗೆ ಹೋಗಿ ಬರಲೂ ಪರಮ ಸಂಕಟಪಡಬೇಕಾಗುತ್ತದೆ. ಅಂಥದ್ದರಲ್ಲಿ  ಅರುಣಿಮಾ ಮಾಡಿರುವ ಈ ಸಾಧನೆ ಅಮೋಘ. ಈ ಪರ್ವತ ಶಿಖರವೇರಿದ ಭಾರತದ ಮೊದಲ ಅಂಗವಿಕಲ ಮಹಿಳೆ ಎನಿಸಿಕೊಂಡಿದ್ದಾರೆ. ಕಾಲಿಲ್ಲದೇ ಈ ಅಮೋಘ ಸಾಧನೆಗೆ ಕಾರಣವಾಗಿರುವ ಅವರಿಗೆ ಅದೆಷ್ಟು ಸಂತೋಷವಾಗಿರಬಹುದು ಊಹಿಸಿ.`ರೈಲಿನಿಂದ ಬಿದ್ದ ಬಳಿಕ ಆಸ್ಪತ್ರೆ ಸೇರಿದ್ದೆ. ವೈದ್ಯರು ಒಂದು ಕಾಲು ಕತ್ತರಿಸಿದರು. ಇನ್ನೊಂದು ಕಾಲಿಗೆ ರಾಡ್ ಹಾಕಿದರು. ನನ್ನ ಜೀವನ ಮುಗಿಯಿತು ಎಂದು ಒಂದು ಹಂತದಲ್ಲಿ ಭಾವಿಸಿದ್ದೆ. ಇನ್ನು ಮನೆ ಬಿಟ್ಟು ಹೊರ ಹೋಗುವುದು ಕೂಡ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ ನನ್ನನ್ನು ಈ ಸ್ಥಿತಿಗೆ ತಂದ ವ್ಯಕ್ತಿಗಳ ವಿರುದ್ಧ ಆಕ್ರೋಶ ಮೂಡಿತು. ಏನನ್ನಾದರೂ ಸಾಧಿಸಬೇಕು ಎಂಬ ಛಲ ಹಾಗೂ ಕನಸು ಶುರುವಾಗಿದ್ದೇ ಆಗ' ಎಂದು 26 ವರ್ಷ ವಯಸ್ಸಿನ ಅರುಣಿಮಾ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಉತ್ತರ ಪ್ರದೇಶದ ಅರುಣಿಮಾ ವಾಲಿಬಾಲ್ ಆಟಗಾರ್ತಿ. ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದವರು. ಆದರೆ 2011ರಲ್ಲಿ ಲಖನೌದಿಂದ ದೆಹಲಿಗೆ ರೈಲಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅನುಚಿತವಾಗಿ ವರ್ತಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರುಣಿಮಾ ಅವರನ್ನು ದುಷ್ಕರ್ಮಿಗಳು ಹೊರ ತಳ್ಳಿದ್ದರು. ಟ್ರ್ಯಾಕ್ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದ ಅವರು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಇರಬೇಕಾಯಿತು. ವಿಶೇಷವೆಂದರೆ ಅದಾದ ಎರಡೇ ವರ್ಷಗಳಲ್ಲಿ  ಪರ್ವತ ಶಿಖರವೇರಿ ಅಚ್ಚರಿ ಮೂಡಿಸಿದ್ದಾರೆ.ವಿಧಿ ಅವರ ಕಾಲನ್ನು ಕಿತ್ತುಕೊಂಡಿತೇ ಹೊರತು ಅವರ ಕನಸುಗಳನ್ನು ಅಲ್ಲ. ಎವರೆಸ್ಟ್ ಪರ್ವತ ಶಿಖರವೇರಿದ ಸಾಧನೆ, ಮುಂದಿನ ಗುರಿ ಸೇರಿದಂತೆ ಹಲವು ವಿಚಾರಗಳನ್ನು ಅರುಣಿಮಾ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.*ರೈಲಿನಲ್ಲಿ ನಡೆದ ದುರ್ಘಟನೆಯಿಂದ ಜರ್ಜರಿತರಾಗಿದ್ದ ನೀವು, ಆ ಬಳಿಕ ಪುಟಿದೆದ್ದು ಬಂದ ರೀತಿ ಬಗ್ಗೆ ಹೇಳಿ?ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೆಲ ಪುಸ್ತಕ ಓದುತ್ತಿದ್ದೆ. ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ನನಗೆ ಆಸಕ್ತಿ ಹುಟ್ಟಿತು. ಮೌಂಟ್ ಎವರೆಸ್ಟ್ ಶಿಖರವೇರಿದವರ ಬಗ್ಗೆಯೂ ಓದಿದೆ. ನಾನೇಕೇ ಈ ಸಾಧನೆ ಮಾಡಬಾರದು ಎಂಬ ಪ್ರಶ್ನೆ ಮೂಡಿತು. ಅದನ್ನೇ ಛಲವಾಗಿ ಸ್ವೀಕರಿಸಿದೆ.*ಒಂದು ಕಾಲು ಇಲ್ಲದಿದ್ದರೂ ಎವರೆಸ್ಟ್ ಪರ್ವತ ಶಿಖರವನ್ನೇರುವ ಛಲ ಮೂಡಿದ್ದು ಹೇಗೆ?

ನನ್ನನ್ನು ಈ ಪರಿಸ್ಥಿತಿಗೆ ತಂದವರ ಬಗ್ಗೆ ಮನಸ್ಸಿನಲ್ಲಿ ಆಕ್ರೋಶವಿತ್ತು. ಸಾವಿನಂಚಿನಿಂದ ಪಾರಾಗಿ ಬಂದಿದ್ದ ನನಗೆ ಇನ್ನು ಕಳೆದುಕೊಳ್ಳುವಂಥದ್ದು ಏನೂ ಇರಲಿಲ್ಲ.
ಆದರೆ ಇನ್ನು ಬದುಕಿದರೆ ಧೈರ್ಯದಿಂದ, ಚೆನ್ನಾಗಿ ಜೀವನ ನಡೆಸಬೇಕು ಎಂಬ ಛಲ ಮೂಡಿತು. ಕಾಲಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸುವ ಬದಲು ನನ್ನದೇ ಆದ ಒಂದು ಬದುಕು ರೂಪಿಸಿಕೊಳ್ಳಬೇಕು ಎನಿಸಿತು. ಯುವರಾಜ್ ಸಿಂಗ್ ಕ್ಯಾನ್ಸರ್ ಗೆದ್ದು ಬಂದು ಮತ್ತೆ ಕ್ರಿಕೆಟ್ ಆಡಿದ್ದು ನನ್ನಲ್ಲಿ ಸ್ಫೂರ್ತಿ ತಂದಿತು.*ಆ ಗುರಿಯೆಡೆಗಿನ ಪಯಣ ಹೇಗಿತ್ತು?ನನ್ನ ಈ ಸಾಧನೆಗೆ ಕಾರಣರಾಗಿದ್ದು ಮೊದಲ ಬಾರಿ ಶಿಖರವೇರಿದ ಭಾರತದ ಮಹಿಳೆ ಬಚೇಂದ್ರಿ ಪಾಲ್. ಟಾಟಾ ಸ್ಟೀಲ್ ಸಾಹಸ ಅಕಾಡೆಮಿಯಲ್ಲಿ ಬಚೇಂದ್ರಿ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ತರಬೇತಿ ಪಡೆದೆ.ಶಿಖರವೇರಲು ಒಟ್ಟು 52 ದಿನ ತೆಗೆದುಕೊಂಡೆವು. ವೈದ್ಯರು ನನಗೆ ಕೃತಕ ಕಾಲು ಅಳವಡಿಸಿದ್ದರು. ನಾವು ಒಟ್ಟು ಆರು ಮಂದಿ ಕಠ್ಮಂಡುವಿನಿಂದ ಪಯಣ ಬೆಳೆಸಿದೆವು. ಆ ಹಾದಿಯಲ್ಲಿ ನಾವು ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ಸಾಧನೆ ಮಾಡಲು ಹೋಗಿ ಜೀವ ತೆತ್ತವರ ಶವಗಳು ಎದುರಾದವು. ಆದರೆ ಹಿಂದಿನ ಕಷ್ಟದ ದಿನಗಳು ನೆನಪಾದವು. ಮತ್ತೆ ತಿರುಗಿ ನೋಡಲಿಲ್ಲ.*ಗುರಿ ಮುಟ್ಟಿದ ಆ ಕ್ಷಣದ ಬಗ್ಗೆ ಹೇಳಿ?ಶಿಖರದ ತುತ್ತತುದಿಯಲ್ಲಿ ತ್ರಿವರ್ಣ ಧ್ವಜದೊಂದಿಗೆ ನಿಂತಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ. ಅಂಗವಿಕಲೆ ಎಂಬ ನೋವನ್ನು ಕೂಡ ಅದು ಮರೆಸಿತು. ಮುಂದಿನ ದಿನಗಳಲ್ಲಿ ಧೈರ್ಯದಿಂದ ಬದುಕಲು ಸ್ಫೂರ್ತಿ ಸಿಕ್ಕಿತು.*ದೇಹದ ಅಂಗಾಂಗ ದಾನ ಮಾಡಿದ್ದೀರಿ. ಇದರ ಹಿಂದಿನ ಉದ್ದೇಶ?ಆಸ್ಪತ್ರೆಯಲ್ಲಿ ಗಾಯಗೊಂಡು ಮಲಗಿದ್ದ ನನಗೆ ರಕ್ತ ಬೇಕಿತ್ತು. ಆಗ ತುಂಬಾ ಜನರು ಸಹಾಯ ಮಾಡಲು ಬಂದರು. ನಾನು ಕೂಡ ಅಂಗಾಂಗಗಳನ್ನು ದಾನ ಮಾಡಬೇಕು ಎನಿಸಿತು. ಸತ್ತ ಮೇಲೆ ದೇಹ ಸುಟ್ಟು ಹಾಕುತ್ತಾರೆ. ದಾನ ಮಾಡಿದರೆ ಒಂದಿಬ್ಬರಿಗೆ ಉಪಯೋಗವಾದರೂ ಆಗುತ್ತೆ. ಬೇರೆಯವರ ದೇಹದಲ್ಲಿಯಾದರೂ ನಾನು ಬದುಕಬಹುದು. ಪ್ರೇಮಲತಾ ಅಗರವಾಲ್ ಎಂಬ ಸಾಧಕಿ...

ಜಾರ್ಖಂಡ್‌ನ ಪ್ರೇಮಲತಾ ಇಬ್ಬರ ಮಕ್ಕಳ ತಾಯಿ. ಮೌಂಟ್ ಎವರೆಸ್ಟ್ ಪರ್ವತ ಶಿಖರವೇರಿದ ಭಾರತದ ಹಿರಿಯ ಮಹಿಳೆ ಕೂಡ. 45ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಹಲವು ಸಾಹಸಮಯ ದಾಖಲೆಗಳು ಇವರ ಹೆಸರಲ್ಲಿವೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕೂಡ. ಅವರಿಗೀಗ 48 ವರ್ಷ ವಯಸ್ಸು. ಇತ್ತೀಚೆಗೆ ಅವರು ಅಲಸ್ಕಾ ಮೆಕಿನ್ಲೆ ತುತ್ತತುದಿ ಏರಿದ್ದರು. ಆ ಮೂಲಕ ಏಳು ಖಂಡಗಳ ಪರ್ವತ ಶಿಖರವನ್ನೇರಿದ ಸಾಧನೆಗೆ ಕಾರಣರಾಗಿದ್ದಾರೆ. ಮೌಂಟ್ ಎವರೆಸ್ಟ್ ಪರ್ವತ ಶಿಖರವೇರಿದ (8848 ಮೀ. ಎತ್ತರ) ಬಳಿಕ ಅವರು ಯುರೋಪ್‌ನಲ್ಲಿರುವ ಮೌಂಟ್ ಕಿಲಿಮಂಜರೊ (5895 ಮೀ.), ಮೌಂಟ್ ಅಕೊನ್‌ಕಗುವಾ (6962 ಮೀ.), ಮೌಂಟ್ ಎಲಬ್ರಸ್ (5642 ಮೀ.) ಏರಿದರು.ಆ ನಂತರ ಇಂಡೊನೇಷ್ಯಾದ ಮೌಂಟ್ ಕಾರ್ಸ್ಟೆನ್ಜ್ ಪಿರಾಮಿಡ್ (4884 ಮೀ.), ಅಂಟಾರ್ಟಿಕದ ಮೌಂಟ್ ವಿನ್ಸನ್ ಮಾಸಿಫ್ (4892 ಮೀ.), ಉತ್ತರ ಅಮೆರಿಕದ ಮೌಂಟ್ ಮೆಕಿನ್ಲೆ (6194 ಮೀ.) ಪರ್ವತವೇರಿದರು. ನೇಪಾಳದ `ಐಸ್ಲೆಂಡ್ ಪೀಕ್' ಹಾಗೂ ಕಾರಕೊರಮ್ ಪಾಸ್ ಎಕ್ಸ್‌ಪಿಡಿಷನ್, ಮೌಂಟ್ ಸ್ಟಾಕ್ ಕಾಂಗ್ರಿ ಪರ್ವತ ಕೂಡ ಏರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.