ಮಂಗಳವಾರ, ಮಾರ್ಚ್ 2, 2021
31 °C

ರೋಗಿಗಳನ್ನು ದೇವರೆಂದ ಸಂತ

-ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ರೋಗಿಗಳನ್ನು ದೇವರೆಂದ ಸಂತ

ನಮ್ಮಲ್ಲಿರುವ ಆತ್ಮ ಇನ್ನೊಬ್ಬರಲ್ಲೂ ಇದೆ ಎಂಬುದನ್ನು ಮನಗಂಡಾಗ ಅವರು ಬೇರೆಯವರನ್ನು ದ್ವೇಷಿಸಲು ಅವಕಾಶವಿರದು. ಹಾಗೇನಾದರೂ ಇತರರಿಗೆ ಕೆಟ್ಟದ್ದನ್ನು ಮಾಡಿದ್ದಲ್ಲಿ ಅದು ತನಗೇ ಮಾಡಿಕೊಂಡಂತಾಗುತ್ತದೆ.

-ಸ್ವಾಮಿ ಶಿವಾನಂದ

ಇದು ತಾಮ್ರಪರ್ಣಿ ತಟದಿಂದ ಗಂಗೆಯವರೆಗೆ ಸಾಗಿದ ದಿವ್ಯತ್ವದ ಕತೆ. ಪುಟ್ಟ ಪುಸ್ತಕವೊಂದು ಇಡೀ ಬದುಕನ್ನೇ ಬದಲಿಸಿದ ಕತೆ. ವೈದ್ಯರೊಬ್ಬರು ವೇದಾಂತಿಯಾದ ಕತೆ. ಆ ಕತೆಯ ನಾಯಕರು ಸ್ವಾಮಿ ಶಿವಾನಂದ.ಹುಟ್ಟಿದ್ದು 1887ರಲ್ಲಿ. ತಾಮ್ರಪರ್ಣಿ ನದಿ ತಟದಲ್ಲಿರುವ ಪಟ್ಟಮಾಡೈ ಜನ್ಮಸ್ಥಳ. ಪೂರ್ವಾಶ್ರಮದ ಹೆಸರು ಕುಪ್ಪುಸ್ವಾಮಿ. ಶಿವಭಕ್ತಿಯೇ ಮನೆಯ ಮತ್ತೊಂದು ಮಗುವಾಗಿತ್ತು. ಬಾಲ ಕುಪ್ಪುಸ್ವಾಮಿ ಮಾಮೂಲಿ ಮಕ್ಕಳಂತೆ ಬದುಕಲಿಲ್ಲ. ಅಮ್ಮ ಸಿಹಿ ಮಾಡಿ ಕೊಟ್ಟರೆ ಅದರ ಒಂದು ತುಣಕನ್ನೂ ಮುಟ್ಟುತ್ತಿರಲಿಲ್ಲ. ಬದಲಿಗೆ ಪಶುಪಕ್ಷಿಗಳಿಗೆ, ಜೊತೆಗಾರರಿಗೆ ನೀಡುತ್ತಿದ್ದರು. ಆ ಹೊತ್ತಿಗಾಗಲೇ ತ್ಯಾಗ, ಅಧ್ಯಾತ್ಮದ ಆಲೋಚನೆ.ಇತ್ತ ಓದಿನಲ್ಲೂ ಮುಂದು. ಸೇರಿದ್ದು ತಂಜಾವೂರಿನ ವೈದ್ಯಕೀಯ ಶಾಲೆಗೆ. ರಜೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗೆ ಹೊರಡುತ್ತಿದ್ದರು. ಕುಪ್ಪುಸ್ವಾಮಿ ಮಾತ್ರ ಕುತೂಹಲಿ. ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದರು. ಯಾರ ಅನುಮತಿಯೂ ಇಲ್ಲದೆ ಶಸ್ತ್ರಚಿಕಿತ್ಸಾ ಸ್ಥಳಕ್ಕೆ ತೆರಳುವಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಗಿಟ್ಟಿಸಿಕೊಳ್ಳಲಾಗದಷ್ಟು ವೈದ್ಯಕೀಯ ಜ್ಞಾನ ಪ್ರಥಮ ವರ್ಷದಲ್ಲೇ ದಕ್ಕಿತ್ತು.ಎಲ್ಲರಂತೆ ವೈದ್ಯರಾಗಿ ಇರಬಹುದಾಗಿದ್ದ ಡಾ. ಕುಪ್ಪುಸ್ವಾಮಿ ಅಷ್ಟಕ್ಕೇ ಸೀಮಿತವಾಗಲಿಲ್ಲ. ತಿರುಚ್ಚಿಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದಾಗಲೇ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಯೊಂದನ್ನು ಹೊರತಂದರು. ಅದನ್ನು ಆಸಕ್ತರಿಗೆ ಉಚಿತವಾಗಿ ಹಂಚುತ್ತಿದ್ದರು.ಮಲೇಷ್ಯಾ ಪಯಣ ಅವರ ಬದುಕಿಗೆ ಮತ್ತೊಂದು ತಿರುವು ನೀಡಿತ್ತು. ಅಲ್ಲಿನ ರಬ್ಬರ್ ಎಸ್ಟೇಟ್‌ಗೆ ಸೇರಿದ ಆಸ್ಪತ್ರೆಯೊಂದನ್ನು ಅವರು ನೋಡಿಕೊಳ್ಳಬೇಕಿತ್ತು. `ಆಸ್ಪತ್ರೆ ನಿಭಾಯಿಸುವ ತಾಕತ್ತಿದೆಯಾ?' ಎಸ್ಟೇಟ್ ಅಧಿಕಾರಿಯ ಪ್ರಶ್ನೆ. ಇಂಥ ಮೂರು ಆಸ್ಪತ್ರೆಗಳನ್ನು ನಿಭಾಯಿಸಬಲ್ಲೆ... ಇತ್ತಲಿಂದ ಆತ್ಮವಿಶ್ವಾಸದ ದನಿ. ಮರುಕ್ಷಣದಲ್ಲೇ ಕೆಲಸ ದಕ್ಕಿತ್ತು.ಅಲ್ಲೆಲ್ಲಾ ದಯಾಪರತೆಯ ಮೆರವಣಿಗೆ. ಬಡವರು ಅಸಹಾಯಕರ ಬಗ್ಗೆ ಕಾಳಜಿ. ಆಸ್ಪತ್ರೆಯ ಹೊಣೆಗಾರಿಕೆಯ ನಡುವೆಯೇ ಸಾಧು ಸಂತರು, ಭಿಕ್ಷುಕರ ಸೇವೆ. ಒಮ್ಮೆ  ಸಾಧುವೊಬ್ಬರು `ಜೀವ ಬ್ರಹ್ಮ ಐಕ್ಯಂ' ಎಂಬ ಪುಸ್ತಕವನ್ನು ಡಾಕ್ಟರ್‌ಗೆ ನೀಡಿದರು. ಅದು ಸ್ವಾಮಿ ಸಚ್ಚಿದಾನಂದ ಬರೆದ ಪುಸ್ತಕ. ಓದುತ್ತ ಹೋದಂತೆ ಅಧ್ಯಾತ್ಮದ ಹಸಿವೆ ಹೆಚ್ಚತೊಡಗಿತ್ತು; ಜೀವ ಬ್ರಹ್ಮನಲ್ಲಿ ಐಕ್ಯವಾದಂತೆ! ನಂತರದ ಬಹುತೇಕ ಓದೆಲ್ಲಾ ಪರಮಾರ್ಥದ ಕುರಿತೇ.ಡಾಕ್ಟರ್ ಅದೆಷ್ಟು ಜೀವನ ಪ್ರೀತಿ ಹೊಂದಿದ್ದರು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ: ಅವರ ಅಡುಗೆಭಟ್ಟನೊಬ್ಬ ಒಮ್ಮೆ ಫೋಟೊ ತೆಗೆಸಿಕೊಳ್ಳುವ ಆಸೆ ವ್ಯಕ್ತಪಡಿಸಿದ. ಸರಿ ಕುಪ್ಪುಸ್ವಾಮಿ ಖುಷಿಯಲ್ಲಿ ಆತನನ್ನು ಸುಸಜ್ಜಿತ ಸ್ಟುಡಿಯೋಗೆ ಕರೆದೊಯ್ದರು. ಅಲ್ಲಿ ತಮ್ಮದೇ ಹ್ಯಾಟು- ಬೂಟು, ಪೋಷಾಕು ತೊಡಿಸಿ ಆತ ಮಿಂಚುವಂತೆ ಮಾಡಿದ್ದರು!ಅದು 1923. ಮಲೇಷ್ಯಾದಿಂದ ಮರಳಿದ್ದೇ ತಡ ಸ್ನೇಹಿತನ ಮನೆಯಲ್ಲಿ ತಮ್ಮ ಸರಕುಗಳನ್ನು ಎಸೆದರು. ಮುಂದಿನದೆಲ್ಲಾ ತೀರ್ಥಯಾತ್ರೆ. ಕಾಶಿ, ಧಲಾಜ್, ಹೃಷಿಕೇಶದಲ್ಲಿ ಅಲೆದಾಟ. 1924ರಲ್ಲಿ ಹೃಷಿಕೇಶದಲ್ಲಿ ನೆಲೆ. ಸ್ವಾಮಿ ವಿಶ್ವಾನಂದರ ಬಳಿ ಸನ್ಯಾಸ ದೀಕ್ಷೆ. ಅವರಿಂದಲೇ ಸ್ವಾಮಿ ಶಿವಾನಂದ ಸರಸ್ವತಿ ಎಂಬ ಹೆಸರು. ಸ್ವರ್ಗಾಶ್ರಮದಲ್ಲಿ ಅಲೌಕಿಕ ಬದುಕಿನ ಆರಂಭ.ಚೇಳುಗಳೇ ತುಂಬಿದ್ದ, ಮತ್ತೊಬ್ಬರು ಬಂದರೆ ಕುಳಿತುಕೊಳ್ಳಲು ತಾವಿಲ್ಲದ ಒಂದು ಕುಟೀರದಲ್ಲಿ ವಾಸ. ಅಲ್ಲೇ ತಪಸ್ಸು ಶುರು. ಧ್ಯಾನ- ತಪಸ್ಸಿನ ನಡುವೆಯೂ ರೋಗಿಗಳ ಆರೈಕೆ ನಿಲ್ಲಲಿಲ್ಲ. ಕಾಲರಾ, ಸಿಡುಬಿಗೆ ಮದ್ದು ನೀಡುತ್ತಿದ್ದರು. ವಿಮೆಯ ದುಡ್ಡಿನಲ್ಲಿ ದತ್ತಿ ಚಿಕಿತ್ಸಾಲಯವೊಂದನ್ನು ತೆರೆದರು.ಜೊತೆಗೆ ಸಾಗಿತ್ತು ಯೋಗಾಭ್ಯಾಸ, ತಾಳೆಗರಿಗಳ ಪಠಣ. ಪರಿವ್ರಾಜಕ ಹೊತ್ತಿನಲ್ಲಿ ದೇಶದ ಉದ್ದಗಲಕ್ಕೂ ಯಾನ. ಅರವಿಂದರ ಆಶ್ರಮ, ಮಹರ್ಷಿ ಶುದ್ಧಾನಂದ ಭಾರತಿ, ರಮಣ ಮಹರ್ಷಿ ಆಶ್ರಮಕ್ಕೆ ಭೇಟಿ. ಅಲ್ಲೆಲ್ಲಾ ಭಜನೆ- ಬೋಧೆ. ನಂತರದ ಯಾನ ಕೈಲಾಸ- ಮಾನಸ ಸರೋವರ ಹಾಗೂ ಬದರಿಗೆ.ಅಂಥ ಹೊತ್ತಿನಲ್ಲಿ ಶಿವಾನಂದರು ಹುಟ್ಟುಹಾಕಿದ ಸಂಘಟನೆಯೇ `ದಿ ಡಿವೈನ್ ಲೈಫ್ ಸೊಸೈಟಿ'. ಗಂಗೆಯ ತೀರದಲ್ಲಿದ್ದ ಪುಟ್ಟ ಕುಟೀರದಲ್ಲಿ ಅದರ ಜನನ. ವರ್ಷ ಕಳೆಯುವುದರಳೊಗೆ ಭಕ್ತರು ಅನುಯಾಯಿಗಳ ಮಹಾಪೂರ. ಹಾಗೆ ಪುಟ್ಟದಾಗಿ ಹುಟ್ಟಿದ ಅದರ ವ್ಯಾಪ್ತಿ ಈಗ ವಿಶ್ವವ್ಯಾಪಿ.ಎರಡನೇ ಮಹಾಯುದ್ಧದ ಹಿಡಿತದಲ್ಲಿ ಜಗತ್ತು ಸಿಲುಕಿದ್ದಾಗ ಶಿವಾನಂದರು ಶಾಂತಿ ಹರಡಲು ಅಖಂಡ ಮಹಾಮಂತ್ರ ಪಠಿಸುವ ಹಾದಿ ಹಿಡಿದರು. ಅಲೋಪಥಿ ಚಿಕಿತ್ಸೆ ನೀಡುತ್ತಿದ್ದ ಅವರು ಆಯುರ್ವೇದದ ಮಹತ್ವ ಸಾರಿದ್ದು ಮತ್ತೊಂದು ಅಧ್ಯಾಯ. ಹಿಮಾಲಯದ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಚಿಕಿತ್ಸೆ ನೀಡತೊಡಗಿದರು. 1945ರಲ್ಲಿ ಶಿವಾನಂದ ಆಯುರ್ವೇದ ಫಾರ್ಮಸಿ ಆರಂಭವಾಯಿತು. ಅಲ್ಲದೆ ಸಾಧಕರಿಗೆ ವ್ಯವಸ್ಥಿತ ರೀತಿಯಲ್ಲಿ ಅಧ್ಯಾತ್ಮವನ್ನು ಸಾರುವ ಯೋಗ ವೇದಾಂತ ಫಾರೆಸ್ಟ್ ಅಕಾಡೆಮಿಯನ್ನು ಸ್ಥಾಪಿಸಿದರು.ದಿವ್ಯತ್ವದ ಗರಿ ಹಿಡಿದು ಶ್ರೀಲಂಕಾ ಪ್ರವಾಸ ನಡೆಸಿದರು. 1953ರಲ್ಲಿ ವಿಶ್ವ ಧಾರ್ಮಿಕ ಸಂಸತ್ತನ್ನು ಆಯೋಜಿಸಿದರು. ಅವರು ಬರೆದ ಪುಸ್ತಕಗಳು ಮುನ್ನೂರಕ್ಕೂ ಹೆಚ್ಚು. ಆ ನಂತರ  ಶಿವಾನಂದರ ಹೆಸರಿನಲ್ಲಿ ಆಸ್ಪತ್ರೆ, ನೇತ್ರ ಚಿಕಿತ್ಸಾ ಕೇಂದ್ರಗಳು ಆರಂಭವಾದವು. ಸ್ವಾಮಿ ಶಿವಾನಂದ ಅಂತರರಾಷ್ಟ್ರೀಯ ಯೋಗ ವೇದಾಂತ ಕೇಂದ್ರ 26 ಸಾವಿರ ಯೋಗ ಶಿಕ್ಷಕರನ್ನು ರೂಪಿಸಿದೆ. ಸ್ವಾಮಿಯವರ ಚಿಂತನೆಗಳನ್ನು ಪಾಶ್ಚಾತ್ಯ ಜಗತ್ತಿಗೂ ಪಸರಿಸಿದೆ.ಜಾತಿ ಮತ ಮೀರಿದ ಧರ್ಮವನ್ನು ಪ್ರತಿಪಾದಿಸಿದ, ಮಾನವೀಯತೆಯನ್ನು ಉಣಬಡಿಸಿದ, ರೋಗಿಗಳ ಮೂಲಕವೇ ನಾರಾಯಣನನ್ನು ಕಂಡ ಕಾರಣಕ್ಕೆ ಸ್ವಾಮಿ ಶಿವಾನಂದ ಭಿನ್ನವಾಗಿ ನಿಲ್ಲುತ್ತಾರೆ. 20ನೇ ಶತಮಾನದ ಆಧ್ಯಾತ್ಮಿಕ ಗುರುಗಳಲ್ಲಿ ಅವರು ಪ್ರಮುಖರು ಎಂದು ಲೋಕ ಕೊಂಡಾಡಿದೆ. 14 ಜುಲೈ 1963 ಅವರು ಮಹಾಸಮಾಧಿಯಾದ ದಿನ. ಈಗ `ದಿ ಡಿವೈನ್ ಲೈಫ್ ಸೊಸೈಟಿ' ಆ ದಿನದ ಸುವರ್ಣೋತ್ಸವ ಆಚರಿಸುತ್ತಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.