ಲಿಬಿಯಾ:ಮತ್ತಷ್ಟು ಭಾರತೀಯರು ಸ್ವದೇಶಕ್ಕೆ
ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಮತ್ತೆ 1045 ಭಾರತೀಯರು ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳಲ್ಲಿ ಬುಧವಾರ ನವದೆಹಲಿಗೆ ಬಂದಿಳಿದಿದ್ದಾರೆ.
259 ಭಾರತೀಯರಿದ್ದ ಮೊದಲ ವಿಮಾನ ಬುಧವಾರ ಮುಂಜಾನೆ 1.45ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
391 ಭಾರತೀಯರಿದ್ದ ಏರ್ ಇಂಡಿಯಾದ ಎರಡನೇ ವಿಶೇಷ ವಿಮಾನ ಬೆಳಗ್ಗೆ 6 ಗಂಟೆಗೆ ಆಗಮಿಸಿದರೆ, 395 ಪ್ರಯಾಣಿಕರಿದ್ದ ಮೂರನೇ ವಿಮಾನ 6.45ಕ್ಕೆ ಆಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಬಿಯಾದಲ್ಲಿ ಉಳಿದಿರುವ ಇತರ ಭಾರತೀಯರನ್ನು ಕರೆ ತರುವುದಕ್ಕಾಗಿ ಬುಧವಾರ ಬೆಳಿಗ್ಗೆ ಮತ್ತೆ ಮೂರು ವಿಮಾನಗಳು ಟ್ರಿಪೊಲಿಗೆ ತೆರಳಿವೆ.
ಇದುವರೆಗೆ 2,128 ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳು ಲಿಬಿಯಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದಿವೆ.
ಲಿಬಿಯಾದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಸಹಕಾರ ನೀಡುವ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು ಮಂಗಳವಾರ ಅಲ್ಲಿನ ವಿದೇಶಾಂಗ ಸಚಿವ ಮುಸ್ಸಾ ಕುಸ್ಸಾ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಅಶಾಂತಿ ಪೀಡಿತ ಲಿಬಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಲವು ಭಾರತೀಯರು ಭೂ ಮಾರ್ಗದ ಮೂಲಕ ಈಜಿಪ್ಟ್ಗೆ ತೆರಳಿದ್ದರೆ, ಇನ್ನು ಕೆಲವರು ಸಮುದ್ರದ ಮೂಲಕ ಆ ರಾಷ್ಟ್ರವನ್ನು ತೊರೆದಿದ್ದಾರೆ.
ಮರಳಿದ 19 ತಮಿಳರು: ಲಿಬಿಯಾದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ 19 ಜನರ ತಂಡವೊಂದು ಏರ್ ಇಂಡಿಯಾ ವಿಮಾನದ ಮೂಲಕ ಬುಧವಾರ ಚೆನ್ನೈಗೆ ಬಂದಿಳಿದಿದೆ.
ರಾಜ್ಯ ಸರ್ಕಾರದ ಅಧಿಕಾರಿಗಳು ಇವರನ್ನು ಬರಮಾಡಿಕೊಂಡರು. ಈ ತಂಡವು ದೆಹಲಿಯಿಂದ ಚೆನ್ನೈಗೆ ಆಗಮಿಸಿತು.
ಭಾರತೀಯರ ಸ್ಥಳಾಂತರಕ್ಕೆ ಜೆಟ್ ಏರ್ವೇಸ್
ನವದೆಹಲಿ (ಐಎಎನ್ಎಸ್): ಅಶಾಂತಿ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ವಿಮಾನವೊಂದನ್ನು ಟ್ರಿಪೊಲಿಗೆ ಕಳುಹಿಸಲಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಬುಧವಾರ ಮಧ್ಯರಾತ್ರಿ ವೇಳೆಗೆ 178 ಪ್ರಯಾಣಿಕರ ಸಾಮರ್ಥ್ಯದ ವಿಮಾನವೊಂದನ್ನು ನಾವು ದೆಹಲಿಯಿಂದ ಟ್ರಿಪೊಲಿಗೆ ಕಳುಹಿಸಲಿದ್ದೇವೆ’ ಎಂದು ಜೆಟ್ ಏರ್ವೇಸ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಾಗಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯದಲ್ಲಿ ನಿರತವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.