ಶನಿವಾರ, ಏಪ್ರಿಲ್ 17, 2021
23 °C

ಲೈಂಗಿಕ ಅಪರಾಧಗಳನ್ನು ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಚಾರಕ್ಕೆ ಹೊಸ ವ್ಯಾಖ್ಯೆ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. `ಅತ್ಯಾಚಾರ~ ಪದಕ್ಕೆ ಬದಲಾಗಿ `ಲೈಂಗಿಕ ಹಲ್ಲೆ~ ಎಂಬ ನುಡಿಗಟ್ಟು ಬಳಸಲು ಉದ್ದೇಶಿಸಿರುವುದು ಮಹತ್ವದ ಅಂಶ.

 

ಆಧುನಿಕ ಕಾಲದಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಬಗೆಯ ಲೈಂಗಿಕ ಹಿಂಸೆಗಳನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ. ಹೀಗಾಗಿ ಶಿಶ್ನ ಸಂಭೋಗ ಮಾತ್ರವಲ್ಲದೆ ಲೈಂಗಿಕ ಹಲ್ಲೆಯ ಎಲ್ಲಾ ಸ್ವರೂಪಗಳನ್ನೂ ಈ `2012ರ ಅಪರಾಧ ಕಾನೂನು (ತಿದ್ದುಪಡಿ) ಮಸೂದೆ~ ಒಳಗೊಳ್ಳಲಿದೆ.

 

ಸದ್ಯದಲ್ಲಿ ಇರುವ ಕಾನೂನಿನ ಪ್ರಕಾರ, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ಪುರುಷ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಮಾತ್ರ ಅದು ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್ ಅನ್ವಯ `ಅತ್ಯಾಚಾರ~ (ರೇಪ್) ಎನಿಸಿಕೊಳ್ಳುತ್ತದೆ.

 

ಈಗ, ಲೈಂಗಿಕ ಹಲ್ಲೆಯ ಬಲಿಪಶು ಮಹಿಳೆ ಮಾತ್ರವೇ ಆಗಿರಬೇಕಿಲ್ಲ. ಪುರುಷ ಕೂಡ ಬಲಿಪಶು ಆಗಿರಬಹುದು. ಎರಡೂ ಸಂದರ್ಭಗಳಲ್ಲಿ ಒಂದೇ ರೀತಿಯ ಕಾನೂನು ಅನ್ವಯಿಸುತ್ತದೆ ಎಂದೂ ಅತ್ಯಾಚಾರ ವ್ಯಾಖ್ಯೆಯನ್ನು ಈ ಪ್ರಸ್ತಾವ ವಿಸ್ತರಿಸಿರುವುದು ಮತ್ತೊಂದು ಹೊಸ ಅಂಶ.

 

ಪುರುಷ ಪುರುಷನಿಗೆ, ಮಹಿಳೆ ಮಹಿಳೆಗೆ ಅಥವಾ ಮಹಿಳೆ ಪುರುಷನಿಗೆ ನೀಡಬಹುದಾದ ಲೈಂಗಿಕ ಹಿಂಸೆಗಳನ್ನು ಇದು ಒಳಗೊಳ್ಳಲಿದೆ. ಈ ಪ್ರಸ್ತಾವಕ್ಕೆ ಅನೇಕ ಮಹಿಳಾ ಸಂಘಟನೆಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು ಜೆಂಡರ್ ಹಾಗೂ ಕಾನೂನಿನ ಕುರಿತಾಗಿ ಹೊಸ ಚರ್ಚೆಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ.ಅತ್ಯಾಚಾರಕ್ಕೊಳಗಾದವರ ಚಾರಿತ್ರ್ಯ ಹಾಗೂ ಅವರ ಹಿಂದಿನ ಲೈಂಗಿಕ ಅನುಭವಗಳ ವಿಚಾರಗಳನ್ನು ವಿಚಾರಣೆ ವ್ಯಾಪ್ತಿಗೆ ತರಲು ಅವಕಾಶ ನೀಡದಿರುವುದು ಈ ಮಸೂದೆಯ ಉತ್ತಮ ಅಂಶ. ತೀವ್ರತರದ ಲೈಂಗಿಕ ಆಕ್ರಮಣಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.

 

ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಪ್ರಾಬಲ್ಯ ಇರುವ ವ್ಯಕ್ತಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಲೈಂಗಿಕ ಹಲ್ಲೆ ನಡೆಸಿದ್ದಲ್ಲಿ ಶಿಕ್ಷೆಯ ಪ್ರಮಾಣ 10 ವರ್ಷದಿಂದ ಜೀವಾವಧಿವರೆಗೆ ಇದೆ.ವಿವಾಹದೊಳಗಿನ ಅತ್ಯಾಚಾರದ ಬಗ್ಗೆ ಈ ಮಸೂದೆ ಮೌನ ತಾಳಿದೆ. ಆದರೆ ಪರಸ್ಪರ ಒಪ್ಪಿತ ಲೈಂಗಿಕ ಕ್ರಿಯೆಗೆ `ವಿವಾಹಿತ ಮಹಿಳೆ~ ವಯಸ್ಸನ್ನು 15ರಿಂದ 16ಕ್ಕೆ ಹೆಚ್ಚಿಸಲು ಐಪಿಸಿ ಸೆಕ್ಷನ್ 375ಕ್ಕೆ ತಿದ್ದುಪಡಿ ತರಲು ಈ ಮಸೂದೆ ಉದ್ದೇಶಿಸಿದೆ. ಇದಕ್ಕೆ ತದ್ವಿರುದ್ಧವಾಗಿ, ಲೈಂಗಿಕ ಕ್ರಿಯೆಗೆ ಒಪ್ಪಿಗೆ ಸೂಚಿಸುವ ವಯಸ್ಸನ್ನು 16ರಿಂದ 18ಕ್ಕೆ ಏರಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.ಅನೇಕ ವೈರುಧ್ಯಗಳು ಇಲ್ಲಿ ಸ್ಪಷ್ಟ. ಬಾಲ್ಯ ವಿವಾಹ ಕಾಯಿದೆಯ ಪ್ರಕಾರ, ಹುಡುಗಿಯ ವಿವಾಹ ಯೋಗ್ಯ ವಯಸ್ಸು 18. ಹೀಗಿದ್ದೂ 16 ವಯಸ್ಸಿನ `ವಿವಾಹಿತ ಹುಡುಗಿ~ ಪರಸ್ಪರ ಒಪ್ಪಿಗೆಯ ಸೆಕ್ಸ್ ಹೊಂದುವುದು ಅಪರಾಧವಲ್ಲ.

 

ಈ ಗೊಂದಲಗಳ ಮಧ್ಯೆಯೂ, ಆ್ಯಸಿಡ್ ದಾಳಿಗಳನ್ನು ಪ್ರತ್ಯೇಕ ಅಪರಾಧವಾಗಿ ಪರಿಗಣಿಸುವ  ಪ್ರಸ್ತಾವ ಹಾಗೂ ಆ್ಯಸಿಡ್ ದಾಳಿಗೆ ಗರಿಷ್ಠ 10 ವರ್ಷಗಳಷ್ಟು ಜೈಲು ಶಿಕ್ಷೆ  ವಿಧಿಸಲು ಅವಕಾಶ ನೀಡಿರುವುದು ಮಹತ್ವದ ಹೆಜ್ಜೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.