ಶುಕ್ರವಾರ, ಮೇ 27, 2022
30 °C

ಲೈಂಗಿಕ ಕಿರುಕುಳ: ಅಸಹಾಯಕರ ಆತ್ಮನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಂಗಿಕ ಕಿರುಕುಳ: ಅಸಹಾಯಕರ ಆತ್ಮನಾಶ

ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಣ್ಯ ವರ್ಗದಲ್ಲಿ ಹೆಚ್ಚು ದಾಖಲಾಗುತ್ತಿವೆ. ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಲೈಂಗಿಕ ಹಗರಣ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿರುವಾಗ; ಮೇಲಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡಿದ್ದಂತಹ, ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಆಫೀಸರ್  ಅಂಜಲಿ ಗುಪ್ತಾ ಕಳೆದ ಸೆಪ್ಟೆಂಬರ್ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಜಲಿ ಗುಪ್ತಾ ಅವರು ಕೋರ್ಟ್ ಮಾರ್ಷಲ್‌ಗೆ ಒಳಗಾಗಿ 2006ರಲ್ಲಿ ಭಾರತೀಯ ವಾಯು ಸೇನೆಯ ಸೇವೆಯಿಂದ ವಜಾಗೊಂಡಿದ್ದರು.   ಅಶಿಸ್ತಿನ ವರ್ತನೆ; ಹಣ ದುರುಪಯೋಗ; ಮೇಲಧಿಕಾರಿಯ ತಿಂಡಿ ಡಬ್ಬಿಯನ್ನು ನೆಲಕ್ಕೆ ಬಿಸಾಕಿ ಅವಿಧೇಯತೆ, ಅಸಭ್ಯ ವರ್ತನೆ, ಕರ್ತವ್ಯಕ್ಕೆ ಹಾಜರಾಗದೇ ಇರುವುದು; ತರಬೇತಿಗೆ ಹಾಜರಾಗದೇ ಇರುವುದು-ಹೀಗೆ ಐದು ಕಾರಣ ಕೊಟ್ಟು ಕೆಲಸದಿಂದ ವಜಾ ಮಾಡಲಾಗಿತ್ತು. ಈ ಬಗೆಯ ಕೋರ್ಟ್ ಮಾರ್ಷಲ್‌ಗೆ ಒಳಗಾದಂತಹ ಭಾರತದ ಮೊದಲ ಮಹಿಳಾ ಅಧಿಕಾರಿ ಇವರು.  ಮೂವರು ಮೇಲಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಅಂಜಲಿ ಗುಪ್ತ ಮಾಡಿದ್ದರು. ಆದರೆ  ವಾಯುಪಡೆ ಈ ಆರೋಪಗಳನ್ನು ತಳ್ಳಿಹಾಕಿತ್ತು.  ರಾಜಸ್ತಾನದ ಬಾಲ್ಯವಿವಾಹ ವಿರೋಧಿ ಆಂದೋಲನದಲ್ಲಿ ಕಾರ್ಯಕರ್ತೆಯಾಗಿ ಗ್ಯಾಂಗ್‌ರೇಪ್‌ಗೆ ಒಳಗಾದ ಅನಕ್ಷರಸ್ಥೆ ಭನ್ವರಿದೇವಿಯಿಂದ ಹಿಡಿದು, ಐಎಎಸ್ ಅಧಿಕಾರಿ ರೂಪನ್ ದೇವಲ್ ಬಜಾಜ್‌ವರೆಗೆ ಯಾರಿಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಗ್ಯಾರಂಟಿಯಿಲ್ಲ ಎನ್ನಿಸುವ ಸ್ಥಿತಿ  ಇದೆ. ಜಾಗತೀಕರಣದ ಸುಳಿಯಲ್ಲಿ ಹೆಣ್ಣು ದೇಹ ಮಾರಾಟದ ದಂಧೆಯ ಬಲಿಪಶು ಆಗುತ್ತಿರುವಾಗಲೇ ಪ್ರತಿಷ್ಠಿತ ಉದ್ಯೋಗದಲ್ಲಿರುವವರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ಮಹಿಳಾ ಸಬಲೀಕರಣ ಪ್ರಯತ್ನಕ್ಕೆ ಒಳ್ಳೆಯ ಸುದ್ದಿಯಂತೂ ಅಲ್ಲ.1991ರ ದಾಖಲಾತಿ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ 25 ನಿಮಿಷಕ್ಕೊಬ್ಬಳು ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ. ಆದರೆ ನೈಜ ಸಂಖ್ಯೆ ಇನ್ನೂ ಹೆಚ್ಚಿದೆ. ತಿಳಿವಳಿಕೆಯ ಕೊರತೆ, ಕೌಟುಂಬಿಕ ಒತ್ತಡ, ಪೋಲೀಸರ ಅಸಹಕಾರ, ಭಯ ಹೀಗೆ ನಾನಾ ಕಾರಣಗಳಿಂದ ಮಾನಹಾನಿ ಪ್ರಕರಣಗಳು ಕೋರ್ಟುಕಟ್ಟೆ ಹತ್ತುವುದಿಲ್ಲ.ಅತ್ಯಾಚಾರವು ಹೆಣ್ಣಿನ ದೇಹದ ಮೇಲೆ ಮಾಡುವ ಆಕ್ರಮಣವಷ್ಟೇ ಅಲ್ಲ, ಮಾನಸಿಕವಾಗಿ ಅವಳ ಸಮಗ್ರತೆಯನ್ನು ನಾಶಮಾಡುವುದಾಗಿದೆ. ಲೈಂಗಿಕ ಕಿರುಕುಳವು ಉದ್ಯೋಗ ಸ್ಥಳದ ಸುರಕ್ಷತೆಯ ಕೊರತೆಯ ಜೊತೆಗೇ ಮಹಿಳೆಗೆ ದೈಹಿಕ ಪರಿಪೂರ್ಣತೆಯ ಹಕ್ಕಿನ ನಿರಾಕರಣೆಯೂ ಆಗಿದೆ. ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ದೈಹಿಕವಾಗಿ ದುರ್ಬಲಳಾದವಳ ಮೇಲೆ ಪುರುಷ ತನ್ನ ಶಕ್ತಿ ಪ್ರದರ್ಶನ ಮಾಡುವುದನ್ನು ಒಳಗೊಂಡಿದೆ.ಲೈಂಗಿಕ ದೌರ್ಜನ್ಯ ಕುರಿತು ಹಲವು ಕಾನೂನುಗಳಿವೆ. ಕೆಲವು ಲ್ಯಾಂಡ್‌ಮಾರ್ಕ್ ಕೇಸು-ತೀರ್ಪುಗಳ ಸಮಯದಲ್ಲಿ ಎಷ್ಟೋ ನೀತಿ ನಿಯಮಾವಳಿಗಳನ್ನು ರೂಪಿಸಲಾಗಿದೆ. ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಮುನ್ನೆಲೆಗೆ ಬಂದಿದ್ದು `ವಿಶಾಖ~  ಎಂಬ ಲಿಂಗಸಮಾನತೆಯ ಕುರಿತು ಕೆಲಸ ಮಾಡುವ ಸಂಘಟನೆ ಭನ್ವರಿ ದೇವಿ ಕೇಸಿನಲ್ಲಿ ಕೋರ್ಟಿಗೆ ಹೋದಾಗ. ಭನ್ವರಿ ರಾಜಸ್ತಾನ ಸರ್ಕಾರದ ಬಾಲ್ಯವಿವಾಹ ವಿರೋಧಿ ಆಂದೋಲನದಲ್ಲಿ ತೊಡಗಿದ್ದಾಗ ಅತ್ಯಾಚಾರಕ್ಕೊಳಗಾದಳು.ಇದನ್ನು ಆಧಾರವಾಗಿಟ್ಟುಕೊಂಡು `ವಿಶಾಖ~ ಹಾಗೂ ಇನ್ನಿತರ ನಾಲ್ಕು ಸಂಘಟನೆಗಳು ರಾಜಸ್ತಾನ ಹಾಗೂ ಭಾರತ ಸರ್ಕಾರದ ವಿರುದ್ಧ ಕೋರ್ಟಿಗೆ ಹೋದವು. ಪ್ರಕರಣದ ವಿಚಾರಣೆಯ ವೇಳೆ ಕೋರ್ಟ್ `ವಿಶಾಖ ಗೈಡ್‌ಲೈನ್ಸ್~  ನಿರೂಪಿಸಿದ್ದು ಅದನ್ನು ಇಂದಿಗೂ ಅನುಸರಿಸಲಾಗುತ್ತಿದೆ. 1997ರ ತೀರ್ಪು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವ್ಯಾಖ್ಯೆ ನೀಡಿ ಅದನ್ನು ನಿಭಾಯಿಸುವುದರ ಕುರಿತು ನೀತಿ ನಿಯಮಾವಳಿ ರೂಪಿಸಿತು.ಲೈಂಗಿಕ ಕಿರುಕುಳವನ್ನು ಅತ್ಯಾಚಾರಕ್ಕಿಂತ ಬೇರೆಯೇ ಆಗಿ ವ್ಯಾಖ್ಯಾನಿಸಿದ್ದೂ ಇದೇ `ವಿಶಾಖ~  ಕೇಸಿನಲ್ಲಿ. ಜಸ್ಟಿಸ್ ಜೆ.ಎಸ್.ವರ್ಮಾ, ಸುಜಾತಾ ಮನೋಹರ್ ಮತ್ತು ಬಿ.ಎನ್.ಕೃಪಾಲ್ ಅವರನ್ನೊಳಗೊಂಡ ಪೀಠವು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಕೆಳಕಂಡ ವ್ಯಾಖ್ಯೆ ನೀಡಿತು. ಅಲ್ಲದೆ ಮಾನವ ಹಕ್ಕು ಮತ್ತು ಸಮಾನತೆಯ ಭಾಗವಾಗಿ ಲಿಂಗ ಸಮಾನತೆಯನ್ನು ಪರಿಭಾವಿಸುವ ಅವಶ್ಯಕತೆಯನ್ನು ಒತ್ತಿಹೇಳಿತು.ಲೈಂಗಿಕ ಕಿರುಕುಳದಲ್ಲಿ ಆರೋಪಿಯ ಉದ್ದೇಶ ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ನೊಂದ ವ್ಯಕ್ತಿಗೆ ಅದು ಇಷ್ಟವಿಲ್ಲದ ವರ್ತನೆಯಾಗಿತ್ತು ಎನ್ನುವುದೇ ಮುಖ್ಯ. ನೊಂದ ವ್ಯಕ್ತಿಯ ಮೇಲೆ ಕಿರುಕುಳ ನೀಡಿದಾತ ಮಾಡಿದ ಬಲ ಪ್ರದರ್ಶನ ಪ್ರಶ್ನಾರ್ಹವಾಗಿದೆ. ಮಹಿಳೆಯ ಮರ್ಯಾದೆಗೆ ಕುಂದು ತರುವಂತಹ, ಅವಳ ವೈಯಕ್ತಿಕತೆಗೆ ಭಂಗ ತರುವಂತಹ ಅಸಭ್ಯ ನಡವಳಿಕೆ/ ಅಸಭ್ಯ ಪದ/ಸನ್ನೆ/ಹಾಡುಗಳ ಬಳಕೆ ಇವೆಲ್ಲ ಮಹಿಳೆ ಇಷ್ಟಪಡದ ವರ್ತನೆಗಳಾಗಿದ್ದಲ್ಲಿ ಅವು ಶಿಕ್ಷಾರ್ಹವಾಗಿರುತ್ತವೆ.

ಲೈಂಗಿಕ ಕಿರುಕುಳವೆಂದರೆ ಪ್ರತ್ಯಕ್ಷ ಅಥವಾ ಪರೋಕ್ಷವಾದ, ಇಷ್ಟಪಡದ ಕೆಳಗಿನ ವರ್ತನೆಗಳು:

* ಲೈಂಗಿಕ ಭಾವದ ಅಭಿಪ್ರಾಯ ವ್ಯಕ್ತಪಡಿಸುವುದು

* ದೈಹಿಕ ಸಂಪರ್ಕ ಮತ್ತು ಮುಂದುವರಿಕೆ

* ನಗ್ನ ಚಿತ್ರ ಪ್ರದರ್ಶನ

* ಲೈಂಗಿಕ ಅನುಕೂಲಗಳಿಗೆ ಒತ್ತಾಯಿಸುವುದು;

* ದೈಹಿಕ/ಮೌಖಿಕ/ಅಮೌಖಿಕ ಲೈಂಗಿಕ ಸನ್ನೆ ಮಾಡುವುದು

  ಉದ್ಯೋಗದಾತ ಅಥವಾ ಉದ್ಯೋಗದ ಜವಾಬ್ದಾರಿ ಹೊತ್ತ ವ್ಯಕ್ತಿ/ಸಂಸ್ಥೆಯು ಸರ್ಕಾರಿ/ಖಾಸಗಿ/ಸಂಘಟಿತ ಕ್ಷೇತ್ರದಲ್ಲಿ ನಿಯಮಿತ ಸಂಬಳ ಪಡೆಯುವ/ಗೌರವಧನ ಪಡೆಯುವ/ಸ್ವಯಂಸೇವಕ ಉದ್ಯೋಗಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ರಕ್ಷಣೆ ನೀಡಲು ಹೊಣೆಗಾರರಾಗಿರುತ್ತಾರೆ.ದೌರ್ಜನ್ಯ ತಡೆಗೆ ಉದ್ಯೋಗದಾತರು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ನೀತಿ ನಿಯಮಾವಳಿಗಳು ಈ ರೀತಿ ಇವೆ:ಎಲ್ಲ ಸರ್ಕಾರಿ/ಖಾಸಗಿ ಉದ್ಯೋಗದಾತರು ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯಲು ಬಾಧ್ಯಸ್ಥರಾಗಿದ್ದು ಅದಕ್ಕಾಗಿ ಅವರು-* ಲೈಂಗಿಕ ಕಿರುಕುಳ ತಡೆಯಲು ಮೇಲ್ಕಾಣಿಸಿದ ವ್ಯಾಖ್ಯೆಯನ್ನು ಪ್ರಚಾರ ಮಾಡಬೇಕು.* ಸರ್ಕಾರಿ/ಸಾರ್ವಜನಿಕ ನೌಕರರ ನಡವಳಿಕೆ ನೀತಿ ನಿಯಮಾವಳಿಗಳಲ್ಲಿ ಲೈಂಗಿಕ ಕಿರುಕುಳ ನಿಷೇಧ ಹಾಗೂ ಅದಕ್ಕೆ ನೀಡುವ ದಂಡ/ಶಿಕ್ಷೆ ಒಳಗೊಂಡಿರಬೇಕು.* ಖಾಸಗಿ ಉದ್ಯೋಗದಾತರೂ ನಡವಳಿಕೆ ನಿಯಮಾವಳಿಗಳಲ್ಲಿ ಲೈಂಗಿಕ ಕಿರುಕುಳ ನಿಷೇಧ ಸೇರಿಸಿಕೊಳ್ಳಬೇಕು.* ಕೆಲಸದ ಸ್ಥಳದಲ್ಲಿ ವಿರಾಮ, ಆರೋಗ್ಯವೂ ಸೇರಿದಂತೆ ಉತ್ತಮ ವಾತಾವರಣ ಇದ್ದು ಮಹಿಳೆ ಪ್ರತಿಕೂಲ ಎಂದು ಭಾವಿಸದಂತೆ ಇರಬೇಕು.* ಹಾಗೇನಾದರೂ ಲೈಂಗಿಕ ಕಿರುಕುಳದ ಆರೋಪ ಬಂದಲ್ಲಿ ಉದ್ಯೋಗದಾತ ಸೂಕ್ತ ಕ್ರಮ ಕೈಗೊಂಡು ಸಂಬಂಧಿಸಿದವರಿಗೆ ದೂರು ನೀಡಬೇಕು.* ನೊಂದ ವ್ಯಕ್ತಿಯು ಆರೋಪಿಗಳ ಅಥವಾ ತಮ್ಮ ವರ್ಗಾವಣೆ ಬಯಸಿದಲ್ಲಿ ಅದಕ್ಕೆ ಅವಕಾಶ ಇರಬೇಕು.ಲೈಂಗಿಕ ಕಿರುಕುಳದ ದೂರು ಬಂದಲ್ಲಿ ಅದನ್ನು ನಿಭಾಯಿಸಲು ಉದ್ಯೋಗದಾತರು-

* ದೂರು ಸಮಿತಿ ಇಟ್ಟಿರಬೇಕು. ಮಹಿಳೆಯೇ ಅದರ ಮುಖ್ಯಸ್ಥೆಯಾಗಿರಬೇಕು. ಅರ್ಧ ಸದಸ್ಯರು ಮಹಿಳೆಯರೇ ಇರಬೇಕು.* ಸಮಿತಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕೆಲಸ ಮಾಡುವ ಯಾವುದಾದರೂ ಸರ್ಕಾರೇತರ ಸಂಘಟನೆ ಅಥವಾ ಇನ್ನಿತರ ಸಂಘಟನೆ ಇರಬೇಕು.* ಪ್ರೊಸೀಜರ್ ಕಾಲಮಿತಿಗೊಳಪಡಬೇಕು.* ಗೌಪ್ಯತೆ ಕಾಪಾಡಬೇಕು.* ದೂರಿತ್ತ ವ್ಯಕ್ತಿ ಅಥವಾ ಅವರ ಪರವಾದ ಸಾಕ್ಷಿ ತಾರತಮ್ಯಕ್ಕೊಳಗಾಗದಂತೆ, ಬಲಿಪಶುವಾಗದಂತೆ ನೋಡಿಕೊಳ್ಳಬೇಕು.* ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಈ ಕುರಿತು ವಾರ್ಷಿಕ ವರದಿ ಸಲ್ಲಿಸಬೇಕು.* ಮಹಿಳಾ ಉದ್ಯೋಗಿಗಳ ಹಕ್ಕುಗಳು ಎಲ್ಲರಿಗೂ ತಿಳಿಯುವಂತೆ ಸೂಕ್ತ ಸ್ಥಳದಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು.* ಉದ್ಯೋಗಿಯು ಹೊರಗಿನವರಿಂದ/ ಮೂರನೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಉದ್ಯೋಗದಾತ ಸಹಾಯ ಮಾಡಬೇಕು.* ನೌಕರರ ಸಭೆಗಳಲ್ಲಿ ಈ ವಿಷಯ ಚರ್ಚೆಯಾಗಬೇಕು* ಇವು ಖಾಸಗಿ ಕ್ಷೇತ್ರಕ್ಕೂ ಅನ್ವಯಿಸುತ್ತವೆ ಎಂದು ಕೇಂದ್ರ/ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಬೇಕು.`ವಿಶಾಖ~ ಪ್ರಕರಣದಲ್ಲಿ ರೂಪಿಸಿದ ನೀತಿನಿಯಮಗಳಂತೆ ಎ.ಸಿ. ಚೋಪ್ರಾ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿತು. ದೆಹಲಿಯ ಪ್ರಮುಖ ರಫ್ತು ಸಂಸ್ಥೆಯ ಮೇಲ್‌ದರ್ಜೆಯ ಉದ್ಯೋಗಿಯೊಬ್ಬ ಕೆಳದರ್ಜೆ ನೌಕರಳೊಬ್ಬಳಿಗೆ ಉದ್ಯೋಗ ಸ್ಥಳದಲ್ಲಿ ನೀಡಿದ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ನೌಕರಳ ಪರವಾಗಿ ತೀರ್ಪು ಬಂದಿತು.ಕಾನೂನಿನ ರಕ್ಷಣೆ ಇದ್ದಾಗ್ಯೂ ಎಲ್ಲ ಪ್ರಕರಣದಲ್ಲೂ ಆಪಾದಿತರು ಶಿಕ್ಷೆ ಅನುಭವಿಸುವರೆಂದು ಹೇಳಬರುವುದಿಲ್ಲ. ಅಪೂರ್ಣ ಅಸಮರ್ಪಕ ತನಿಖೆ, ಲಿಂಗಾಧಾರಿತ ಪೂರ್ವಗ್ರಹ, ಪೊಲೀಸರ ಅದಕ್ಷತೆ, ಎಫ್‌ಐಆರ್ ದಾಖಲಿಸಲು ನಿರಾಕರಿಸುವುದು/ವಿಫಲವಾಗುವುದು, ಸಣ್ಣ ಕಾರಣಗಳಿಗೆಲ್ಲ ಕೇಸು ಮುಂದೂಡುತ್ತ ದಶಕಗಟ್ಟಲೆ ವಿಳಂಬ ಮಾಡುವುದು, ಸಾರ್ವಜನಿಕರ ಎದುರು ನೊಂದ ಮಹಿಳೆ ಹೇಳಿಕೆ ನೀಡುವಂತೆ ಮಾಡುವುದು, ವಿರೋಧಿ ವಕೀಲರು ಇರುಸುಮುರುಸಾಗುವ ಪ್ರಶ್ನೆ ಕೇಳಿ ಉತ್ತರಿಸಲು ತೊಡಕಾಗುವುದು ಇವೇ ಮೊದಲಾದವು ನ್ಯಾಯದಾನ ಸಾಧ್ಯವಾಗದೇ ಇರಲು ಕಾರಣವಾಗಿವೆ.ಲೈಂಗಿಕ ಕಿರುಕುಳವಿರಲಿ, ಅತ್ಯಾಚಾರ ಪ್ರಕರಣವಿರಲಿ ಹೆಚ್ಚಿನ ಕೇಸುಗಳಲ್ಲಿ ಆರೋಪಿಯು ಸಣ್ಣ ಮೊತ್ತದ ದಂಡ, ಕೆಲ ವರ್ಷ ಜೈಲು ಅಥವಾ ಹೆಚ್ಚೆಂದರೆ ದೊಡ್ಡ ಮೊತ್ತವನ್ನು ಕೋರ್ಟ್ ಹೊರಗಿನ ಸೆಟ್ಲ್‌ಮೆಂಟ್‌ಗೆ ನೀಡಿ ಕೆಲದಿನ ಜೈಲಲ್ಲಿದ್ದು ಪರಾರಿಯಾಗುತ್ತಾನೆ. ಆದರೆ ಬಲಿಪಶುವನ್ನು ಮಾನವೀಯತೆಯ ಸೋಂಕಿಲ್ಲದೆ ಹಿಂಸಿಸಬಲ್ಲ ವ್ಯಕ್ತಿ ಸಾಂಕೇತಿಕ ಜೈಲುವಾಸದಿಂದ, ದಂಡದ ಹಣ ನೀಡುವುದರಿಂದ ಬದಲಾಗುವನೆಂದು ಭಾವಿಸಬಹುದೆ?ನ್ಯಾಯಾಧೀಶರು-ವಕೀಲರು-ಪೋಲೀಸರು ಈ ಮೂವರೂ ಪುರುಷ ಪ್ರಾಬಲ್ಯದ, ಜೊತೆಗೆ ಅಷ್ಟೇ ಪೂರ್ವಗ್ರಹದಿಂದ ತುಂಬಿದ ಮನಸ್ಸುಗಳಿರುವ ನ್ಯಾಯ ವ್ಯವಸ್ಥೆಯ ಸ್ಥಂಭಗಳು. ಈ ದೇಶದ ಸಾಮಾನ್ಯ ಮಹಿಳೆಯೂ ನ್ಯಾಯ ಪಡೆಯಬೇಕಾದರೆ ನ್ಯಾಯದಾನ ವ್ಯವಸ್ಥೆಯ ಮೂಲ ಮನಸ್ಥಿತಿ ಬದಲಾಗಬೇಕು, ಮಹಿಳೆಯ ಕುರಿತ ಒಟ್ಟಾರೆ ಸಮಾಜದ ಧೋರಣೆಯೂ ಬದಲಾಗಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.