ಶನಿವಾರ, ಏಪ್ರಿಲ್ 17, 2021
27 °C

ಲೋಕಪಾಲ ವ್ಯಾಪ್ತಿಗೆ ಪ್ರಧಾನಿಯೂ ಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಪಾಲ ವ್ಯಾಪ್ತಿಗೆ ಪ್ರಧಾನಿಯೂ ಬರಲಿ

ನವದೆಹಲಿ: ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ  ವಿಷಯಗಳನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಪ್ರಧಾನಿ ಅವರನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ಒಳಪಡಿಸಲು ರಾಜ್ಯಸಭೆ ಸಮಿತಿಯು (ಸೆಲೆಕ್ಟ್ ಕಮಿಟಿ) ಮಹತ್ವದ ಶಿಫಾರಸು ಮಾಡಿದೆ.ಸತ್ಯವ್ರತ ಚತುರ್ವೇದಿ ನೇತೃತ್ವದ ಸಮಿತಿಯ ಶಿಫಾರಸುಗಳು ಸರ್ಕಾರದ ಕೈಗೆ ತಲುಪಿದ್ದು, ಇದೇ 22ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸುವ ನಿರೀಕ್ಷೆ ಇದೆ. ಲೋಕಪಾಲದ ವ್ಯಾಪ್ತಿಗೆ ಪ್ರಧಾನಿ ಕಚೇರಿ ಅಧಿಕಾರಿಗಳನ್ನು ಸೇರ್ಪಡೆ ಮಾಡಬೇಕೆಂದು ಕಾನೂನು ಸಚಿವಾಲಯದ ಅಧಿಕಾರಿಗಳು ನೀಡಿರುವ ಅಭಿಪ್ರಾಯವನ್ನು ಸಮಿತಿಯು ಮಾನ್ಯ ಮಾಡಿಲ್ಲ.  ಕಳೆದ ವರ್ಷದ ಚಳಿಗಾಲ ಅಧಿವೇಶದನಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾದ ಲೋಕಪಾಲ ಮಸೂದೆಗೆ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತವಾದ ಬಳಿಕ ಹಲವು ವಿವಾದಿತ ಅಂಶಗಳನ್ನು  ಪರಿಶೀಲಿಸಿ, ಪರಿಹಾರ ಸೂಚಿಸಲು ಸಮಿತಿಗೆ ಒಪ್ಪಿಸಲಾಗಿತ್ತು. ವಿವಿಧ ಪಕ್ಷಗಳ ಸದಸ್ಯರಿರುವ ಸಮಿತಿಯು ಅಗತ್ಯ ಶಿಫಾರಸುಗಳನ್ನು ಸೂಚಿಸಿದೆ.ಕೇಂದ್ರದ ಲೋಕಪಾಲ ಕಾಯ್ದೆಯನ್ನು ರಾಜ್ಯಗಳ ಮೇಲೆ ಕಡ್ಡಾಯವಾಗಿ ಹೇರಬಾರದು. ಲೋಕಪಾಲ ಮಸೂದೆಯಿಂದ ಲೋಕಾಯುಕ್ತ  ಬೇರ್ಪಡಿಸಿ ರಾಜ್ಯಗಳು ತಮ್ಮದೇ ಕಾಯ್ದೆ ರೂಪಿಸಿ ಜಾರಿಗೆ ತರಲು ಅವಕಾಶ ಕೊಡಬೇಕು. ಲೋಕಪಾಲ ಕಾನೂನು ಜಾರಿಗೆ ಬಂದ ಒಂದು ವರ್ಷದೊಳಗೆ ಲೋಕಾಯುಕ್ತರ ನೇಮಕಾತಿ ನಡೆಯಬೇಕೆಂದು ಸಮಿತಿ ಹೇಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಅಂಗ ಪಕ್ಷಗಳೂ ಇದಕ್ಕೆ ಒಲವು ತೋರಿವೆ.ಆರೋಪಗಳ ತನಿಖೆ ನಡೆಸುವ ಕೇಂದ್ರ ತನಿಖಾ ದಳವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಪರಿಶೀಲಿಸಿರುವ ಸಮಿತಿಯು ಲೋಕಪಾಲದಿಂದ ಸಿಬಿಐಗೆ ಬರುವ ಪ್ರಕರಣಗಳ ಮೇಲುಸ್ತುವಾರಿಯನ್ನು ಲೋಕಪಾಲರೇ ನಡೆಸಬೇಕು. ಸಿಬಿಐಗೆ ಯಾವ ಪ್ರಮಾಣದಲ್ಲಿ ಸ್ವಾಯತ್ತತೆ ನೀಡಬೇಕೆಂಬ ಬಗೆಗಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಲಾಗಿದೆ.ಕೇಂದ್ರ ತನಿಖಾ ದಳ ಮುಕ್ತವಾಗಿ ಕೆಲಸ ಮಾಡಬೇಕಾದರೆ ಅದರ ಮುಖ್ಯಸ್ಥರನ್ನು ಲೋಕಪಾಲ ಸಂಸ್ಥೆ ಆಯ್ಕೆ ಮಾಡಬೇಕೆಂದು ಬಿಜೆಪಿ ಅಭಿಪ್ರಾಯಪಟ್ಟಿದೆ. ಆದರೆ, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ `ಉನ್ನತ ಸಮಿತಿ~ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.ಸಿಬಿಐ: ಸಿಬಿಐ ನಿರ್ದೇಶಕರಿಗೆ ನಿರ್ದಿಷ್ಟ ಅಧಿಕಾರಾವಧಿ ನಿಗದಿಪಡಿಸಬೇಕು. ಪ್ರಾಸಿಕ್ಯೂಷನ್‌ಗೆ ಪ್ರತ್ಯೇಕ ನಿರ್ದೇಶಕರು ಇರಬೇಕು. ಇವರನ್ನು `ಕೇಂದ್ರ ಜಾಗೃತ ಆಯೋಗ~ (ಸಿವಿಸಿ) ನೇಮಿಸಬೇಕು. ಆರೋಪಗಳ ತನಿಖೆಗೆ ನೇಮಕವಾಗುವ ಅಧಿಕಾರಿಗಳನ್ನು ಮಧ್ಯದಲ್ಲೇ ವರ್ಗ ಮಾಡಬಾರದು. ಸಿಬಿಐ ತನಿಖೆಗೆ ಹಣ ಬಿಡುಗಡೆ ಕಡ್ಡಾಯವಾಗಬೇಕು. ಲೋಕಪಾಲ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ಯಾವುದೇ ಸಲಹೆ ನೀಡಿಲ್ಲ.ಉನ್ನತ ಸಂಸ್ಥೆಯಲ್ಲಿ ಮೀಸಲಾತಿ ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅದು ಕಾರ್ಯಸಾಧು ಆಗುವುದಿಲ್ಲ. ಆದರೆ, ಸಮಾಜದ ವಿವಿಧ ವರ್ಗಗಳಿಗೆ ಪ್ರಾತಿನಿಧಿಕವಾಗಿ ಅವಕಾಶ ಒದಗಿಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪ್ರಾತಿನಿಧಿಕವಾಗಿ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ಯಾವುದೇ ಬದಲಾವಣೆ ಸೂಚಿಸಿಲ್ಲ. ಆದರೆ, ಬಿಜೆಪಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಹಾಗೂ ವಿದೇಶದಿಂದ ನೆರವು ಪಡೆಯುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಗಳನ್ನು ಮಸೂದೆ ವ್ಯಾಪ್ತಿಗೊಳಪಡಿಸಲು ಸಮಿತಿ ಹೇಳಿದೆ.  ಮಸೂದೆ ವ್ಯಾಪ್ತಿಗೆ ಖಾಸಗಿ  ವಲಯ  ತರಬೇಕೆಂಬ ಬೇಡಿಕೆಯನ್ನು ಎಡ ಪಕ್ಷಗಳು ಮುಂದಿಟ್ಟಿವೆ. ಹಿಂದಿನ ವರ್ಷದ ಚಳಿಗಾಲದ ಅಧಿವೇಶನದ ಕೊನೆಯ ದಿನ ಲೋಕಪಾಲ ಮಸೂದೆ ಮೇಲೆ ಚರ್ಚೆ ನಡೆದು ಕೋಲಾಹಲ  ನಡೆದ ಬಳಿಕ ಅದನ್ನು ರಾಜ್ಯಸಭೆಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.