ಶನಿವಾರ, ಜೂಲೈ 11, 2020
28 °C

ಲೋಕಾಯುಕ್ತ ತನಿಖೆ: ಸಚಿವಶೆಟ್ಟರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಜಲಮಂಡಳಿಯವರು ಅವಳಿನಗರದ ವಿವಿಧ ಪ್ರದೇಶಗಳಲ್ಲಿ ಮಾಡಿರುವ ಪೈಪ್‌ಲೈನ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇದನ್ನು ಲೋಕಾಯುಕ್ತರಿಂದ ತನಿಖೆ ನಡೆಸಲಾಗುವುದು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.ಮಲಪ್ರಭಾ ಮೂರನೇ ಹಂತದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಂತರ, ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಹಾಕಲಾಗಿದೆ. ಆದರೆ ಈ ಪೈಪ್‌ಲೈನ್ ಹಾಕಲು ತಮ್ಮನ್ನು, ಜನಪ್ರತಿನಿಧಿಗಳನ್ನು, ಪಾಲಿಕೆಯನ್ನು ಸಂಪರ್ಕಿಸಿಲ್ಲ. ವೈಯಕ್ತಿಕ ಲಾಭ ಇದರಲ್ಲಿ ಪಡೆಯಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ ಸಚಿವರು, ಲೋಕಾಯುಕ್ತರಿಂದಲೇ ತನಿಖೆ ನಡೆಸಲಾಗುವುದು ಎಂದರು.‘ಜಲಮಂಡಳಿಯ ಹಿಂದಿನ ಮುಖ್ಯ ಎಂಜಿನಿಯರ್ ರವೀಂದ್ರ ಭಟ್ ಅವರು ಅವ್ಯವಹಾರ ನಡೆಸಿದ್ದಾರೆ. ಅವರ ಸಮಯದಲ್ಲಿಯೇ ಈ ಎಲ್ಲ ಕಾಮಗಾರಿಗಳು ನಡೆದಿವೆ. ಭಟ್ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ ಒತ್ತಾಯಿಸಿದರು.ಜಲಮಂಡಳಿಯವರ ಕಾರ್ಯವೈಖರಿ ವಿರುದ್ಧ ಸಿಡಿಮಿಡಿಗೊಂಡ ಸಚಿವ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ‘ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ಬೇರೆ ಕಡೆಗೆ ಹೋಗಿ. ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ನಿಮಗೆ ಗೊತ್ತಾಗಿಲ್ಲ. ನೀರು ಪೂರೈಕೆ ಸರಿಯಾಗುವವರೆಗೆ ನಾವು ಸುಮ್ಮನಿರುವುದಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮಲಪ್ರಭಾ ಮೂರನೇ ಹಂತದ ಕಾಮಗಾರಿಗೆ ಒಮ್ಮೆ 50 ಕೋಟಿ ರೂ. ಹಾಗೂ ಮತ್ತೊಮ್ಮೆ 152 ಕೋಟಿ ರೂ. ಹಣ ತರಲಾಗಿದೆ. 2009 ರಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ ಇನ್ನೂವರೆಗೆ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಏಪ್ರಿಲ್ ಅಂತ್ಯದೊಳಗೆ ಮೂರನೇ ಹಂತದ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.ಅವಳಿನಗರದಲ್ಲಿ ನೀರು ಪೂರೈಕೆಯನ್ನು ಸರಿಪಡಿಸಬೇಕು. ಧಾರವಾಡದಲ್ಲಿ 4-5 ದಿನಕ್ಕೊಮ್ಮೆ ನೀರು ಪೂರೈಕೆಯಾದರೆ, ಹುಬ್ಬಳ್ಳಿಯಲ್ಲಿ 7-8 ದಿನಕ್ಕೊಮ್ಮೆ ಪೂರೈಕೆ ಆಗುತ್ತಿದೆ. ಒಂದು ವಾರದೊಳಗೆ ಇದನ್ನು ಸರಿಪಡಿಸಿ 3-4 ದಿನಕೊಮ್ಮೆ ನೀರು ಪೂರೈಸಬೇಕು. ಈ ಮೊದಲು 2-3 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು ಎಂದ ಶೆಟ್ಟರ, ಸುಮ್ಮನಿದ್ದರೆ ಜಲಮಂಡಳಿಯವರು 10-12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಾರೆ ಎಂದರು.‘ಸಧ್ಯ ಜಲಮಂಡಳಿಯಲ್ಲಿರುವ 212 ಕೋಟಿ ರೂ. ಹಣವನ್ನು ಯಾವುದೇ ಕಾಮಗಾರಿಗೆ ಬಳಸಬೇಕಾದರೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರ ಅನುಮತಿ ಪಡೆಯಬೇಕು. ಈ ಮೊದಲಿನ ಯೋಜನೆಯಂತೆ ಉಳಿತಾಯವಾಗುವ 30 ಕೋಟಿ ರೂ. ಹಣವನ್ನು ಯಾವುದೇ ಕಾರಣಕ್ಕು ಬಳಸಬಾರದು. ಈ ಹಣವನ್ನು ನಿರಂತರ ನೀರು ಪೂರೈಕೆ ಕಾಮಗಾರಿಗೆ ಮೀಸಲಿಡಬೇಕು’ ಎಂದು ಸಂಸದರು ತಿಳಿಸಿದರು.ಮಲಪ್ರಭಾ ಮೂರನೇ ಹಂತದ ಯೋಜನೆಗೆ 20 ಕಿಮೀ ಉದ್ದದ ಪೈಪ್‌ಲೈನ್ ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ 9 ಕಿಮೀ ಪೈಪ್‌ಲೈನ್ ಅಳವಡಿಕೆ ಬಾಕಿ ಇದೆ ಎಂದು ಜಲಮಂಡಳಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.ಮುಂದಿನ ವಾರ ಮತ್ತೆ ಸಭೆ ನಡೆಸಲಾಗುವುದು. ಆ ಸಂದರ್ಭದಲ್ಲಿ ನೀರು ಪೂರೈಕೆ ಸರಿಪಡಿಸಿರುವ ಬಗ್ಗೆ ಎಲ್ಲ ಮಾಹಿತಿ ಒದಗಿಸಬೇಕು ಎಂದು ಶೆಟ್ಟರ ಸೂಚಿಸಿದರು. ಜಿಲ್ಲಾಧಿಕಾರಿ ದರ್ಪಣ ಜೈನ್, ಪಾಲಿಕೆ ಆಯುಕ್ತ ಡಾ. ಕೆ.ವಿ.ತ್ರಿಲೋಕಚಂದ್ರ, ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಮೋಹನ ಲಿಂಬಿಕಾಯಿ, ವೀರಭದ್ರಪ್ಪ ಹಾಲಹರವಿ, ಮೇಯರ್ ವೆಂಕಟೇಶ ಮೇಸ್ತ್ರಿ, ಉಪಮೇಯರ್ ಭಾರತಿ ಪಾಟೀಲ, ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ರಾಧಾಬಾಯಿ ಸಫಾರೆ, ಜಲಮಂಡಳಿ ಮುಖ್ಯ ಎಂಜಿನಿಯರ್ ದಯಾನಂದ, ಕಾರ್ಯಪಾಲಕ ಎಂಜಿನಿಯರ್ ಕೃಷ್ಣಮೂರ್ತಿ ಮತ್ತಿತರರು ಸಭೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.