ಸೋಮವಾರ, ಮಾರ್ಚ್ 8, 2021
31 °C

ವಂಚನೆಯ ಮಾಯಾಜಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಚನೆಯ ಮಾಯಾಜಾಲ

ಕಳೆದ ವಾರ ನನ್ನ ಪರಿಚಯದವರೊಬ್ಬರು ನಡೆಸುತ್ತಿರುವ ಖಾಸಗಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಆ ಶಾಲೆ ಸರ್ಕಾರದ ವೇತನಾನುದಾನಕ್ಕೆ ಒಳಪಡುತ್ತಿರುವುದರಿಂದ ಆಡಳಿತ ಮಂಡಳಿಯವರು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮುಗಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಮಾತಿನ ನಡುವೆ ನೇಮಕಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳು ಸ್ಥಾನ ಪಡೆದಿಲ್ಲದಿರುವುದು ನನ್ನ ಗಮನಕ್ಕೆ ಬಂತು.ಮೀಸಲಾತಿ ನಿಯಮದಂತೆ ರೋಸ್ಟರ್ ಪದ್ಧತಿ ಪ್ರಕಾರ ಪ್ರತಿಯೊಂದು ನೇಮಕಾತಿಯೂ ನಡೆಯಬೇಕಾದ ಅಗತ್ಯವಿದ್ದುದರಿಂದ `ಇದು ಹೇಗೆ ಸಾಧ್ಯ~ ಎಂದು ಪ್ರಶ್ನಿಸಿದೆ. ಶಾಲೆಯ ಆಡಳಿತ ಮಂಡಳಿಯವರು ಸರ್ಕಾರದ ಗೆಜೆಟ್ ಪ್ರತಿಯೊಂದನ್ನು ನನ್ನ ಕೈಗಿಟ್ಟರು. ನನಗೆ ದೊಡ್ಡ ಆಶ್ಚರ್ಯ-ಆಘಾತ. ಜೂನ್ 2, 2011ರ ಆ ರಾಜ್ಯಪತ್ರದಲ್ಲಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿನ ನೇಮಕಾತಿಯಲ್ಲಿ ಮೀಸಲಾತಿ ನಿಯಮ ಸಡಿಲಿಸಿ ಹೊರಡಿಸಿದ ಆದೇಶ ಅದಾಗಿತ್ತು.1994-95ನೇ ಸಾಲು ಮತ್ತು ಅದಕ್ಕೂ ಮೊದಲು ಆರಂಭವಾಗಿರುವ ಸಾವಿರಾರು ಶಾಲಾ-ಕಾಲೇಜುಗಳು ಈಗ ಸರ್ಕಾರದ ವೇತನಾನುದಾನಕ್ಕೆ ಒಳಪಡುತ್ತಿದ್ದು, ಅಂಥ ಸಂಸ್ಥೆಗಳಲ್ಲಿನ ನೇಮಕಗಳಲ್ಲಿ ಮೀಸಲಾತಿ ವಿನಾಯಿತಿ ನೀಡಿರುವುದರಿಂದ ಸಾವಿರಾರು ಮಂದಿ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.ಇಂಥ ವಂಚನೆಯನ್ನು ಸರ್ಕಾರವೇ ಮುಂದೆ ನಿಂತು ಮಾಡುತ್ತಿದೆ. ಇದು ಮೀಸಲಾತಿ ವಂಚನೆಯ ತೀರಾ ಇತ್ತೀಚಿನ ಸ್ಯಾಂಪಲ್! ಸ್ವತಂತ್ರ ಭಾರತದಲ್ಲಿ ಮೀಸಲಾತಿ ಜಾರಿಯಾದಾಗ ಅಂಬೇಡ್ಕರ್ ಅವರು ಹತ್ತು ವರ್ಷಗಳ ಕಾಲಮಿತಿಯನ್ನು ಹಾಕಿದ್ದರು. ಅಂಬೇಡ್ಕರ್ ಲೆಕ್ಕಾಚಾರದಂತೆ ಮೀಸಲಾತಿ ಕಟ್ಟುನಿಟ್ಟಾಗಿ ಅದರ ಮೂಲಸ್ವರೂಪದಲ್ಲಿ ಜಾರಿಯಾಗಿದ್ದರೆ ಹತ್ತೇ ವರ್ಷ ಸಾಕಾಗಿತ್ತು.ಆದರೆ ಆದದ್ದೇನು? ದಶಕಗಳೇ ಕಳೆದರೂ ಮೀಸಲಾತಿ ಮೂಲ ಸ್ವರೂಪದಲ್ಲಿ ಪರಿಶಿಷ್ಟ ಜಾತಿ ವರ್ಗಗಳಿಗೆ ತಲುಪದಂತ ಅಮಾನವೀಯ ವ್ಯವಸ್ಥೆಯನ್ನು ಇಲ್ಲಿ ಸೃಷ್ಟಿಸಲಾಯಿತೇ ಹೊರತು ಮೀಸಲಾತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ನಡೆಯಲೇ ಇಲ್ಲ.ಒಂದು ಕಡೆ ಮೀಸಲಾತಿಯಿಂದ ದೇಶಕ್ಕೆ ದೇಶವೇ ಕೊಳ್ಳೆ ಹೋಗುತ್ತಿದೆ, ಪ್ರತಿಭಾ ಪಲಾಯನ ನಡೆಯುತ್ತಿದೆ ಎಂದು ಕೆಲವರು ಬೊಬ್ಬಿರಿಯುತ್ತಿದ್ದಾರೆ. ಮತ್ತೊಂದೆಡೆ ಮೀಸಲಾತಿ ನಮ್ಮ ಕಣ್ಣೆದುರೇ ಕರಗಿ ಹೋಗುತ್ತಿರುವುದನ್ನು ನಾವು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇವೆ. ಸಂವಿಧಾನ ದತ್ತವಾಗಿ ಬಂದ ಮೀಸಲಾತಿ ತನ್ನೆಲ್ಲ ಧ್ಯೇಯೋದ್ದೇಶಗಳನ್ನು ಕಳೆದು ಈಗ ಕನ್ನಡಿಯೊಳಗಿನ ಗಂಟಾಗಿ ಮಾತ್ರ ಕಾಣಿಸುತ್ತಿದೆ.ರಾಜಕೀಯ ಶಿಕ್ಷಣ ಮತ್ತು ಉದ್ಯೋಗ- ಈ ಮೂರು ಕ್ಷೇತ್ರಗಳಲ್ಲಿ ಮಾತ್ರ ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಾತಿ ಒದಗಿಸಲಾಗಿದೆ. ಸಾಂವಿಧಾನಿಕ ಕಟ್ಟುಪಾಡುಗಳಿಂದಾಗಿ ರಾಜಕೀಯ ಮೀಸಲಾತಿ ನೂರಕ್ಕೆ ನೂರು ಪ್ರಮಾಣದಲ್ಲಿ ಜಾರಿಯಾಗಿರುವುದನ್ನು ಬಿಟ್ಟರೆ, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಲ್ಲಿ ನಿರಂತರವಾಗಿ ವಂಚನೆ ಮಾಡಲಾಗುತ್ತಿದೆ.ಶಿಕ್ಷಣ ಕ್ಷೇತ್ರದಲ್ಲಿ ದಲಿತರಿಗೆ ಪ್ರವೇಶಾವಕಾಶಗಳಲ್ಲಿ ಸರಿಯಾದ ಪ್ರಾತಿನಿಧ್ಯ ನೀಡುತ್ತಿಲ್ಲವೆಂದು ದೂರುಗಳು ಯಾವಾಗಲೂ ಇದ್ದೇ ಇವೆ. ಅದರಲ್ಲೂ ಉನ್ನತ ಶಿಕ್ಷಣ ಪ್ರವೇಶದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ.ಐಐಟಿ/ಐಐಎಂಗಳಂಥ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾವತ್ತೂ ಮೀಸಲಾತಿಯನ್ನು ಪಾಲಿಸಿಯೇ ಇಲ್ಲ. ಮೀಸಲಾತಿ ವಂಚಿಸಲು ಹಲವು ಕಳ್ಳಕಿಂಡಿಗಳನ್ನು ಈ ಐಐಟಿ/ಐಐಎಂ ನ ಬುದ್ಧಿವಂತರು ಸೃಷ್ಟಿಸಿಕೊಂಡಿದ್ದಾರೆ. `ಅರ್ಹ ಅಭ್ಯರ್ಥಿಗಳಿಲ್ಲ~ ಎನ್ನುವುದು ಅದರಲ್ಲಿ ಮೊದಲನೆಯದು.ಮೆಡಿಕಲ್ - ಎಜಿನಿಯರಿಂಗ್‌ಗಳಲ್ಲೂ ಈ ವಂಚನೆ ಮುಂದುವರೆದೇ ಇದೆ. ಸರ್ಕಾರಿ ಕಾಲೇಜುಗಳಲ್ಲಿ ವಂಚನೆ ಪ್ರಮಾಣ ಕಡಿಮೆಯಾದರೂ ಖಾಸಗಿ ಕಾಲೇಜುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.ಆಡಳಿತ ಮಂಡಳಿಯವರು ಕೇಳಿದಷ್ಟು ದುಡ್ಡು ತೆತ್ತು ಸೇರುವ ದಲಿತ ವಿದ್ಯಾರ್ಥಿಗಳನ್ನು ಮೀಸಲಾತಿ ಕೋಟಾಗೆ ಸೇರಿಸಿ ವಂಚಿಸುವ ಸಂಸ್ಥೆಗಳ ಸಂಖ್ಯೆಯೇ ಹೆಚ್ಚು. ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದತ್ತ ಬಂದರೆ ದಲಿತರಿಗೆ ಸರ್ಕಾರಿ ಶಾಲೆಗಳೇ ಗತಿ! ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೆಲ್ಲೂ ಅವರಿಗೆ ಜಾಗ ಇಲ್ಲ. ಸರ್ಕಾರದ ಅನುಮತಿ ಪಡೆಯುವಾಗ ಪರಿಶಿಷ್ಟ ಜಾತಿ/ವರ್ಗದವರಿಗೆ ಮೀಸಲಾತಿ ನೀಡುವುದಾಗಿ ಬರೆದು ಕೊಡುವ ಈ ಸಂಸ್ಥೆಗಳು ಅಪ್ಪಿತಪ್ಪಿಯೂ ಈ ವಾಗ್ದಾನದತ್ತ ಗಮನ ಹರಿಸುವುದಿಲ್ಲ.ಅತ್ಯಂತ ಹೆಚ್ಚು ಮೀಸಲಾತಿ ವಂಚನೆ ನಡೆಯುತ್ತಿರುವುದು ಉದ್ಯೋಗ ಕ್ಷೇತ್ರದಲ್ಲಿ. ಬಹಳ ಜನ ಗಮನಿಸಿಲ್ಲದೆ ಇರುವುದು ಉದ್ಯೋಗಗಳ ಒಟ್ಟು ಪ್ರಮಾಣ. ಸರ್ಕಾರಿ ಉದ್ಯೋಗಗಳ ಸಂಖ್ಯೆ ಇರುವುದೇ ಶೇ. 2ರಿಂದ 2.5ರಷ್ಟು ಮಾತ್ರ. ಇದರಲ್ಲಿ ದಲಿತರಿಗೆ ಸಿಗಬೇಕಿರುವ ಶೇ. 18ರಷ್ಟನ್ನೂ ಪ್ರಾಮಾಣಿಕವಾಗಿ ನೀಡಿದರೂ ದಲಿತರಿಗೆ ಸಿಗುವುದು ಅತ್ಯಲ್ಪ ಮಾತ್ರ. ಈ ಅಲ್ಪ ಉದ್ಯೋಗಾವಕಾಶದಲ್ಲೂ ನಿರಂತರ ವಂಚನೆ ನಡೆಯುತ್ತಿದೆ.`ಸಿ~ ಮತ್ತು `ಡಿ~ ಗುಂಪಿನ ಉದ್ಯೋಗದಲ್ಲಿ ಮಾತ್ರ ಅಗತ್ಯ ಮೀಸಲಾತಿಯನ್ನು ತುಂಬಲಾಗಿದೆಯೇ ಹೊರತು `ಎ~ ಮತ್ತು `ಬಿ~ ಗುಂಪಿನವಾಗಲೀ ಅಖಿಲ ಭಾರತ ಸೇವೆಗಳಲ್ಲಾಗಲೀ ಇನ್ನೂ ಪೂರ್ಣ ಪ್ರಮಾಣದ ಮೀಸಲಾತಿಯನ್ನು ನೀಡಿಲ್ಲ. ಈಗಲೂ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಹಾಗೇ ಉಳಿದಿವೆ.

 

ವಿವಿಧ ವಿಶ್ವವಿದ್ಯಾಲಯ ಐಐಟಿ/ಐಐಎಂಗಳಲ್ಲಂತೂ ಈ ಪ್ರಮಾಣ ಶೇ. 8-9ರ ಪ್ರಮಾಣವನ್ನು ಮೀರಿಲ್ಲ. ರಕ್ಷಣಾ ಇಲಾಖೆ, ನ್ಯಾಯಾಂಗಗಳಲ್ಲಿ ಯಾವತ್ತೂ ಮೀಸಲಾತಿಯನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.ಸೋಜಿಗವೆಂದರೆ ಸರ್ಕಾರಿ ಉದ್ಯೋಗಾವಕಾಶಗಳ ಹೊರತಾಗಿ, ದೇಶದ ಒಟ್ಟು ಉದ್ಯೋಗಗಳಲ್ಲಿ ಶೇ. 97-98ರಷ್ಟು ಉದ್ಯೋಗಗಳಿರುವುದು ಖಾಸಗಿ ಕ್ಷೇತ್ರಗಳಲ್ಲಿ. ಮೀಸಲಾತಿ ನೀತಿ ಜಾರಿಯಾಗಿಲ್ಲದ ಕಾರಣ ಅಲ್ಲಿ ದಲಿತರಿಗೆ ಅವಕಾಶವೇ ಇಲ್ಲ. ತಾಂತ್ರಿಕ ಕೌಶಲ್ಯ ಹೊಂದಿದ ಕೆಲವೇ ಕೆಲವರಿಗೆ ಮಾತ್ರ ಖಾಸಗಿ ಕ್ಷೇತ್ರದಲ್ಲಿ ಅಲ್ಲಲ್ಲಿ ಅವಕಾಶಗಳು ಲಭ್ಯವಾಗಿವೆ.ಉಳಿದಂತೆ ದಲಿತರಿಗೆ ಉದ್ಯೋಗ ನೀಡಿದ್ದ  ಬಹುತೇಕ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಆಗಿರುವುದರಿಂದ ಅಲ್ಲಿ ದಲಿತರಿಗೆ ಅವಕಾಶ ಇಳಿಕೆಯಾಗಿದೆ. ಸರ್ಕಾರಿ ಇಲಾಖೆಗಳಾದ ದೂರವಾಣಿ, ವಿದ್ಯುತ್, ನೀರು ಸರಬರಾಜು, ಆಸ್ಪತ್ರೆ ಮೊದಲಾದ ಅಗತ್ಯ ಸೇವೆಗಳೂ ಈಗ ಖಾಸಗಿ ಸೊತ್ತಾಗುತ್ತಿರುವುದರಿಂದ ಅ್ಲ್ಲಲೂ ದಲಿತರಿಗೆ ಅವಕಾಶ ಇಲ್ಲದಂತಾಗಿದೆ. ಇದರ ಜತೆಗೆ ಸರ್ಕಾರಿ ಉದ್ಯೋಗಗಳ ಸಂಖ್ಯೆಯಲ್ಲಿಯೂ ಸತತ ಇಳಿಕೆಯಾಗುತ್ತಿದೆ.ಸ್ವಾತಂತ್ರ್ಯಾನಂತರದ ಆರು ದಶಕಗಳಲ್ಲಿ ದಲಿತರಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಎಷ್ಟು ವೇಗದಲ್ಲಿ ಬೆಳೆಯುತ್ತಿದೆಯೋ, ಅಷ್ಟೇ ವೇಗವಾಗಿ ಉದ್ಯೋಗಗಳ ಸಂಖ್ಯೆ ಇಳಿಯುತ್ತಿದೆ. ಆಂತರಿಕ ಸ್ಪರ್ಧೆ ತೀವ್ರಗೊಂಡಿರುವುದರಿಂದ ದಲಿತರೊಳಗಿನ ಜಾತಿಗಳಲ್ಲಿ ಪೈಪೋಟಿ-ಸಂಘರ್ಷಗಳೂ ಹೆಚ್ಚುತ್ತಿವೆ.ಮೀಸಲಾತಿ ವಂಚನೆಯ ಮತ್ತೊಂದು ಘೋರ ಮುಖ ಪರಿಶಿಷ್ಟ ಜಾತಿಗಳಲ್ಲದವರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಿಕ್ಕುವ ಕೆಲವು ಅವಕಾಶಗಳನ್ನೂ ಲಪಟಾಯಿಸುತ್ತಿರುವುದು. ಜಾತಿಯಲ್ಲಿ ಬಲಾಢ್ಯರಾದ ಕೆಲವರು ತಮಗಿರುವ ರಾಜಕೀಯ ಹಾಗೂ ಅಧಿಕಾರದ ಪ್ರಾಬಲ್ಯ ಬಳಸಿಕೊಂಡು, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು, ವಂಚಿಸುವ ಪ್ರಕ್ರಿಯೆ ಈಗ ಬಹಿರಂಗವಾಗಿಯೇ ನಡೆಯುತ್ತಿದೆ.ಇಂಥ ಸುಳ್ಳು ಪ್ರಮಾಣ ಪತ್ರಗಳಿಂದಾಗಿ ಸಾವಿರಾರು ದಲಿತರು ಅವಕಾಶ ವಂಚಿತರಾಗುತ್ತಿದ್ದಾರೆ.ಇಷ್ಟೆಲ್ಲ ಮೀಸಲಾತಿ ವಂಚನೆಯ ನಡುವೆ ಸಿಕ್ಕಿದ ಕೆಲ ಅವಕಾಶಗಳನ್ನು ಬಳಸಿಕೊಂಡು ದಲಿತ ಜನಾಂಗ ತಲೆ ಎತ್ತಿ ನಡೆಯುವಂತಾಗಿರುವುದು ಸುಳ್ಳಲ್ಲ.ನ್ಯಾಯಬದ್ಧವಾಗಿ ಸಿಗಬೇಕಾದ ಪಾಲು ಸಿಕ್ಕಿದ್ದರೆ ಬಹುಶಃ ದಲಿತರೇ ಇಷ್ಟರಲ್ಲಿ ಮೀಸಲಾತಿಯನ್ನು ತಿರಸ್ಕರಿಸುತ್ತಿದ್ದರೋ ಏನೋ? ಇಂದು ದಲಿತ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಅಂಕಗಳನ್ನು ಪಡೆಯುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಇಂಥ ಸ್ಥಿತಿ ಬಂದೇ ಬರುತ್ತದೆ. ಅದುವರೆಗೆ ಸಮಾಜ ಕಾಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.