ಶುಕ್ರವಾರ, ಫೆಬ್ರವರಿ 26, 2021
22 °C

ವರ್ತಮಾನದ ನಾಡಿ ಪರೀಕ್ಷೆ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ವರ್ತಮಾನದ ನಾಡಿ ಪರೀಕ್ಷೆ

ಬಿ. ಸುರೇಶ್‌ ನಿರ್ದೇಶನದ ‘ದೇವರ ನಾಡಲ್ಲಿ’ ಸಂಕ್ರಾಂತಿಯ ಸಂದರ್ಭದಲ್ಲಿ ತೆರೆಕಾಣಲಿದೆ. ಕರಾವಳಿಯಲ್ಲಿನ ಕ್ಷೋಭೆಯ ಚಿತ್ರಣದ ಈ ಸಿನಿಮಾ, ವರ್ತಮಾನದ ಅನೇಕ ಚರ್ಚೆಗಳನ್ನು ಹಿಡಿದಿಡಲು ಪ್ರಯತ್ನಿಸಿದೆ.‘‘ನಮ್ಮ ಸಿನಿಮಾದ ವಿಶಿಷ್ಟ ಗುಣ ಎಂದರೆ ಬಹುತ್ವದ ಸೂಚನೆಯಾಗಿ ಬಹುಭಾಷೆಗಳ ಬಳಕೆ. ತುಳುವಿನಲ್ಲಿ ಎರಡು ಬಗೆ– ಮೇಲ್ವರ್ಗ ಮತ್ತು ಕೆಳವರ್ಗದ ತುಳು. ಕೊಂಕಣಿ, ಹೊನ್ನಾವರ– ಕುಂದಾಪುರದ ನಡುವಿನ ಕನ್ನಡ, ಸಾಮಾನ್ಯ ಕನ್ನಡ, ಮಲಯಾಳಿ, ಮರಾಠಿ, ತೆಲುಗು... ಹೀಗೆ ಭಾಷೆಗಳಲ್ಲಿನ ಬಹುತ್ವವನ್ನು ಸಿನಿಮಾದ ಕಥನದಲ್ಲೂ ಕಾಣಬಹುದು.ಸಬ್ ಟೈಟಲ್ ಇಲ್ಲದಿದ್ದರೆ ಈ ಚಿತ್ರ ಕನ್ನಡಿಗರಿಗೂ ಪೂರ್ಣ ಅರ್ಥವಾಗುವುದಿಲ್ಲ. ನಮ್ಮ ನಡುವೆ ಬೀದಿ ನಾಟಕ–ಚಳವಳಿಗಳನ್ನು ಮಾಡಿಕೊಂಡು ಬದುಕುವ ಜನ ಇದ್ದಾರೆ. ಗೋ ಹತ್ಯೆ ಹೆಸರಿನಲ್ಲಿ ಚಳವಳಿ ಮಾಡುವವರೂ ಇದ್ದಾರೆ. ಇದ್ಯಾವುದಕ್ಕೂ ಸಂಬಂಧವಿಲ್ಲ ಎಂದು ಬದುಕುವವರೂ ಇದ್ದಾರೆ. ಈ ಎಲ್ಲ ಜನರನ್ನು ತೋರಿಸುವ ಜತೆಗೆ– ನಮ್ಮ ನೆಲದಲ್ಲಿ ಸೌಹಾರ್ದತೆ ಇದೆ, ಆದರೆ ನಾವು ವ್ಯಾಖ್ಯಾನಿಸುವ ಕ್ರಮದಲ್ಲಿ ಸೌಹಾರ್ದತೆ ಇಲ್ಲ ಎನ್ನುವುದನ್ನು ಹೇಳುತ್ತಿದ್ದೇವೆ’’.

‘ದೇವರ ನಾಡಲ್ಲಿ’ ಚಿತ್ರದ ಕುರಿತು ನಿರ್ದೇಶಕ ಬಿ. ಸುರೇಶ್ ಅವರ ವಿಶ್ಲೇಷಣೆ ಇದು. ಅಂದಹಾಗೆ, ‘ದೇವರ ನಾಡಲ್ಲಿ’ ಸಂಕ್ರಾಂತಿಯಂದು (ಜ.15) ತೆರೆ ಕಾಣುತ್ತಿದೆ. ಅಲ್ಲದೇ ಇದೇ ತಿಂಗಳ 28ರಿಂದ ಆರಂಭವಾಗುವ ಬೆಂಗಳೂರು ಅಂತರರಾಷ್ಟ್ರೀಯ ಸಿನೆಮೋತ್ಸವದಲ್ಲೂ ಪ್ರದರ್ಶನಗೊಳ್ಳಲಿದೆ.ಮನುಷ್ಯತ್ವ–ಮಾನವೀಯತೆಗೆ ಸವಾಲು ಎನ್ನುವಂತೆ ಕರಾವಳಿ ಭಾಗದಲ್ಲಿ ಕೋಮುವಾದ ಮತ್ತು ಮೂಲಭೂತವಾದ ವಿಜೃಂಭಿಸುತ್ತಿವೆ. ಈ ನೆಲ ಕೋಮುವಾದದ ಪ್ರಯೋಗ ಶಾಲೆ ಎನ್ನುವ ಆಪಾದನೆ ಹೊರುವ ಜತೆಗೆ ಬಹುತ್ವದ ಒಡಲಾಳಕ್ಕೆ ದ್ವೇಷದ ನಂಜು ಬೆರೆಸುತ್ತಿದೆ. ಹಾಗೆ ನೋಡುವುದಾದರೆ ಕರಾವಳಿ ಪ್ರಾಕೃತಿಕ, ಸಾಂಸ್ಕೃತಿಕವಾಗಿ ನಿಜಕ್ಕೂ ‘ದೇವರ ನಾಡೇ’. ಇಂಥ ನಾಡಿನಲ್ಲಿನ ಕಳೆದ ಹತ್ತು–ಹದಿನೈದು ವರ್ಷಗಳಲ್ಲಿನ ಧರ್ಮಾಧಾರಿತ ಪಲ್ಲಟ–ಸ್ಥಿತ್ಯಂತರಗಳನ್ನು ಮುಖ್ಯವಾಗಿಟ್ಟುಕೊಂಡು ಸುರೇಶ್ ಚಿತ್ರಕಟ್ಟಿದ್ದಾರೆ. ಉಡುಪಿ ಬಳಿಯ ಪಡುಬಿದ್ರೆಯಿಂದ ಆರಂಭವಾಗುವ ಕಥೆ ಹೊನ್ನಾವರದ ಅಪ್ಸರಕೊಂಡದವರೆಗೂ ಸಾಗುತ್ತದೆ.ಮಲ್ಪೆ, ಬಾರ್ಕೂರು, ಕುಂದಾಪುರದ ಆಸುಪಾಸಿನಲ್ಲಿ ಚಿತ್ರೀಕರಣ ನಡೆದಿದೆ. ಸಮಕಾಲೀನ ಸಂದರ್ಭಕ್ಕೆ ‘ದೇವರ ನಾಡು’ ಹಲವು ಹೊಳಹುಗಳನ್ನು ಮತ್ತು ಪೂರ್ವಗ್ರಹಗಳಿಂದ ಆಗುವ ಅನಾಹುತಗಳನ್ನು ಕಾಣಿಸುತ್ತದೆ ಎನ್ನುವ ಇಂಗಿತ ಅವರ ಮಾತುಗಳಲ್ಲಿ ಇಣುಕುತ್ತದೆ. ‘ಹಿಂದೂ ಅಥವಾ ಮುಸ್ಲಿಂ ಮೂಲಭೂತವಾದ ಎಂದು ಮಾತನಾಡುತ್ತಿಲ್ಲ. ಈ ಎಲ್ಲ ವಾದಗಳು ಸೃಷ್ಟಿಸಿರುವ ಪೂರ್ವಗ್ರಹಗಳ ನೋಟವಿದೆ. ಒಂದು ಸೂಕ್ಷ್ಮ ಅಪರಾಧವನ್ನು ಪೂರ್ವಗ್ರಹದಿಂದ ನೋಡಿದರೆ ನಿಜವಾದ ಆರೋಪಿ ತೇಲಿಹೋಗಿ ಮತ್ತೊಬ್ಬ ಆರೋಪಿಯಾಗುವ ಸಾಧ್ಯತೆ ಇದೆ.ಇಲ್ಲಿ ಬಣ ಬದಲಾವಣೆಯ ಪಕ್ಷಾಂತರದ ಕುರಿತೂ ನೋಡಬಹುದು– ಅಂದರೆ ಗಾಳಿ ಬೀಸಿದ ಕಡೆ ತೂರಿಕೊ, ಸದ್ಯಕ್ಕೆ ಬಜಾವ್ ಆದರೆ ಸಾಕು ಎನ್ನುವಂತೆ. ನಮ್ಮಲ್ಲಿ ಒಂದೊಂದು ಬಣಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಪ್ರತಿ ಬಾರಿ ಆ ಪ್ರವಚನ ಕೇಳಿದವರು ಪೂರ್ವಗ್ರಹಕ್ಕೆ ಸಿಲುಕುತ್ತಾರೆ’ ಎಂದು ತಮ್ಮ ಸಿನಿಮಾದ ಸಾಧ್ಯತೆಗಳನ್ನು ಸೂಚಿಸುವ ಸುರೇಶ್‌– ಪತ್ರಿಕೆಯಲ್ಲಿನ ಒಂದು ಸುದ್ದಿಯನ್ನು ಆಧರಿಸಿ ಕಥೆ ಹೆಣೆದಿದ್ದಾರಂತೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಸಾಮಾಜಿಕ ಜಾಲತಾಣಗಳು ಸೇರಿದಂತೆ ಹಲವು ಕಡೆಗಳಲ್ಲಿ ಕೋಮುವಾದದ ಪರ–ವಿರೋಧದ ಚರ್ಚೆಗಳು ತೀವ್ರ ಸ್ವರೂಪ ಪಡೆದಿವೆ.ಇಂಥ ಮಂಥನವನ್ನು ದೇವರ ನಾಡು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ ಚಿತ್ರದ ಕಥೆ ಹೆಚ್ಚು ಪ್ರಸ್ತುತ ಎನ್ನುವುದನ್ನು ಸುರೇಶ್ ಒತ್ತಿ ಹೇಳುತ್ತಾರೆ. ‘2014ರಲ್ಲಿ ಈ ಸಿನಿಮಾ ಮುಗಿಯಿತು. ಆ ಸಮಯದಲ್ಲಿ ಕಂಡ ಬದಲಾವಣೆಯನ್ನು ಮಾತ್ರ ಇಲ್ಲಿ ತೋರಿಸಿದ್ದೇನೆ. ಚಿತ್ರ ನೋಡಿದವರಿಗೆ ಮತ್ತಷ್ಟು ಹೇಳಬಹುದಿತ್ತು ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಣ್ಣ  ಪ್ರಕರಣ–ಘಟನೆಗಳು ತೆಗೆದುಕೊಳ್ಳುತ್ತಿರುವ ಸ್ವರೂಪ–ಚರ್ಚೆಗಳು ದೊಡ್ಡವು. ಇದನ್ನು ಪ್ರಧಾನವಾಗಿ ಇಟ್ಟುಕೊಂಡು ಕಟ್ಟಿರುವ ಕಥೆ ಇದು. ನನಗೆ ವೈಯಕ್ತಿಕವಾಗಿಯೂ ಸವಾಲು ಮತ್ತು ಸಾಹಸ ಎನಿಸಿತು.ಏಕ ಕಾಲಕ್ಕೆ ಮೂರು ಕಾಲಗಳನ್ನು ಒಂದೇ ಸಮಯದಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದೇನೆ. ನಿನ್ನೆ, ಇವತ್ತು ಮತ್ತು ಕಲ್ಪನೆ– ಈ ಮೂರೂ ಇಲ್ಲಿ ಸೇರಿವೆ. ಇವತ್ತು ಎನ್ನುವುದು ವಾಸ್ತವ, ನಿನ್ನೆ ಎನ್ನುವುದು ಮಧುರ ನೆನಪುಗಳು. ಉಳಿದದ್ದು ಕಲ್ಪಿತ ನಾಳೆಗಳು. ಈ ವಿಷಯಗಳು ವೈಯಕ್ತಿಕವಾಗಿ ಬರವಣಿಗೆಯ ದೃಷ್ಟಿಯಿಂದ ಸಾಹಸವಾಗಿತ್ತು. ಇದು ವ್ಯತ್ಯಾಸವಾಗದಂತೆ ತೆರೆಯಲ್ಲಿ ಕಾಣಿಸಬೇಕು ಎನ್ನುವುದು ಸವಾಲು. ಛಾಯಾಗ್ರಹಕ ಅದ್ವೈತ ಗುರುಮೂರ್ತಿ ಈ ವಿಷಯದಲ್ಲಿ ನೆರವಾದರು. ಸ್ಥಳೀಯವಾಗಿ ಕಥೆ ನೋಡಬೇಕಾಗಿಲ್ಲ, ಆದರೆ ಸ್ಥಳೀಯತೆಯ ಮೂಲಕವೇ ಕಥೆ ಹುಟ್ಟುತ್ತದೆ. ಪ್ರಸ್ತುತ ಭಾರತದ ಸಂದರ್ಭದಲ್ಲಿ ಎಲ್ಲ ಭಾಗಗಳ ಜನರೂ ಚಿತ್ರವನ್ನು ತಮ್ಮ ನೆಲಕ್ಕೆ ಒಗ್ಗಿಸಿಕೊಂಡು ನೋಡಬಹುದು’ ಎನ್ನುವುದು ಸುರೇಶ್ ವಿಶ್ಲೇಷಣೆ.ಜಿಜ್ಞಾಸೆ–ಪ್ರಶ್ನೆಗಳ ಹುಟ್ಟು

‘ಪ್ರೇಕ್ಷಕನಿಗೆ ಪ್ರಶ್ನೆಗಳನ್ನು ಹುಟ್ಟಿಸುವ ಸಿನಿಮಾ ಇದು. ಒಂದು ಡಸ್ಟ್‌ಬಿನ್‌ಗೆ ಬೆಂಕಿ ಹತ್ತಿಕೊಂಡರೆ, ಅದನ್ನು ಆ ಬಣದವರು ಮಾಡಿರುವರೇ? ಈ ಬಣದವರು ಮಾಡಿದ್ದಾರಾ? ಎಂದು ಚರ್ಚೆ ಮಾಡುತ್ತೇವೆ. ಅಲ್ಲಿ ಯಾರೋ ಸಿಗರೇಟ್ ಸೇದಿ ಎಸೆದದ್ದರಿಂದ ಬೆಂಕಿ ಬಿದ್ದಿರುತ್ತದೆ. ಆದರೆ ಈ ಬಗ್ಗೆ ಚರ್ಚೆಯೇ ಇರುವುದಿಲ್ಲ.  ಸಿನಿಮಾದಲ್ಲಿ ಇಂಥ ಪ್ರಶ್ನೆಗಳಿಗೆ ನಾವು ಉತ್ತರ ಕೊಡಬೇಕು ಎಂದಲ್ಲ, ಸಮಾಜವೇ ಉತ್ತರ ಕೊಟ್ಟುಕೊಳ್ಳಬೇಕು. ವಾಸ್ತವ ತೋರಿಸುವ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ತೀರ ಜನಪ್ರಿಯ ಮೌಲ್ಯಗಳನ್ನು ಬಳಸದಿರುವ, ಆದರೆ ಜನಪ್ರಿಯ ಕಥನ ಮಾದರಿಯನ್ನು ಬಳಸಿರುವ ಚಿತ್ರ ನಮ್ಮದು. ನಾನು ಮಾತನಾಡುತ್ತಿರುವುದು ಜನಪರವಾಗಿರುವ ಚರ್ಚೆ’ ಎನ್ನುತ್ತಾರೆ ಸುರೇಶ್.ಮೊದಲು ಮಲ್ಟಿಪ್ಲೆಕ್ಸ್‌

‘ದೇವರ ನಾಡು’ ಚಿತ್ರ ಮೊದಲ ಹಂತದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ತೆರೆಗೆ ಬರುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದ್ದರೆ ಏಕಪರದೆಯ ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಆಲೋಚನೆ ನಿರ್ದೇಶಕರದ್ದು. ‘ನಾನು ಜನಪ್ರಿಯ ಮಾದರಿಗಳನ್ನು ಬಳಸಿದ್ದೇನೆ. ಆದರೆ ನಾನು ಕಟ್ಟಿರುವುದು ಜನಪ್ರಿಯ ಸಿನಿಮಾದ ಗುಣ ಅಲ್ಲ. ಹಾಗಾಗಿಯೇ ಏಕಪರದೆಯ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು. ಚೆನ್ನೈ, ಹೈದ್ರಾಬಾದ್, ಚಂಡೀಗಡ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳ ಕನ್ನಡಿಗರಿಗೂ ಚಿತ್ರವನ್ನು ತಲುಪಿಸಲಾಗುತ್ತಿದೆ’ ಎಂದು ಹೇಳುವ ಸುರೇಶ್‌ ಅವರಲ್ಲಿ, ತಮ್ಮ ಸಿನಿಮಾ ಒಂದು ಜಿಜ್ಞಾಸೆ–ಚರ್ಚೆಯನ್ನು ಹುಟ್ಟುಹಾಕುವ ನಿರೀಕ್ಷೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.