ಸೋಮವಾರ, ಮೇ 23, 2022
21 °C

ವಸತಿ ಸಮಸ್ಯೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ವಸತಿ ಸಮಸ್ಯೆಯನ್ನು ಪರಿಹರಿಸುವುದು ಕಷ್ಟದ ಕೆಲಸವಲ್ಲ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ~ ಎಂದು ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ದಯಾನಂದ ಪೈ ತಿಳಿಸಿದರು.ಶಿಕ್ಷಣ ಸಂಸ್ಥೆಯ ಅಂತರರಾಷ್ಟ್ರೀಯ ಸಹಕಾರ ವಿಭಾಗ, ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್ ಹ್ಯಾಬಿಟ್ಯಾಟ್, ವಸತಿ ಇಲಾಖೆ, ರಾಜೀವ್‌ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ನಿಗಮ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಸಂಯುಕ್ತವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ವಿಶ್ವ ವಸತಿ ದಿನ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಮನೆಗಳನ್ನು ಒದಗಿಸಬಹುದು. ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವುದರಿಂದ ಪ್ರತಿದಿನ 150ರಿಂದ 200 ಮನೆಗಳನ್ನು ನಿರ್ಮಿಸಬಹುದಾಗಿದೆ. ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಹಲವಾರು ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿಲ್ಲ~ ಎಂದರು.`ಬಿಡಿಎ ಕೇವಲ ಶ್ರೀಮಂತರಿಗಾಗಿ ನಿವೇಶನಗಳನ್ನು ರೂಪಿಸುತ್ತಿದೆ. ಆದರೆ ಅಲ್ಲಿ ಮನೆ ಕಟ್ಟದೆ ಅದನ್ನು ಮಾರುವವರೇ ಹೆಚ್ಚು. ಒಂದು ಎಕರೆಗೆ 10-12 ನಿವೇಶನಗಳನ್ನು ಮಾತ್ರ ರೂಪಿಸಬಹುದು. ನಿವೇಶನ ನೀಡುವ ಬದಲು ಮನೆಗಳನ್ನು ಕಟ್ಟಿಕೊಡಲು ಬಿಡಿಎ ಮುಂದಾಗಬೇಕು. ಆಗ ನಿವೇಶನ ಹಂಚಿಕೆ ನಿಜವಾದ ಸಾರ್ಥಕತೆ ಕಾಣುತ್ತದೆ. ಯೋಜನಾ ಬದ್ಧವಾಗಿ ಮನೆಗಳನ್ನು ಕಟ್ಟುವುದರಿಂದ  ಪ್ರತಿ ಎಕರೆಗೆ 30ರಿಂದ 40 ಮನೆಗಳನ್ನು ನಿರ್ಮಿಸಬಹುದಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.ರಾಜೀವ್‌ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಹದೇವ ಪ್ರಸಾದ್ ಮಾತನಾಡಿ `ನಿಜವಾದ ಫಲಾನುಭವಿಗಳಿಗೆ ಮನೆಗಳು ದೊರೆಯುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ. ನಿಗಮದ ವತಿಯಿಂದ ಆನ್‌ಲೈನ್ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸಬ್ಸಿಡಿ, ಸಾಲ ಸೌಲಭ್ಯವನ್ನು ತಲುಪಿಸುವ ಯತ್ನ ಮಾಡಲಾಗಿದೆ. ನಿರ್ಮಾಣವಾದ ಮನೆಗಳ ದಾಖಲಾತಿಗೆ ಜಿಪಿಎಸ್ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ~ ಎಂದರು.`ಈವರೆಗೆ 21 ಲಕ್ಷ ಮನೆಗಳನ್ನು ನಿರ್ಮಿಸಲು ಪ್ರೋತ್ಸಾಹಧನ ನೀಡಲಾಗಿದೆ. ಇನ್ನೂ 25 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆಸರೆ ಯೋಜನೆಯಡಿ ಕೂಡ ನಿಗಮ ಮನೆಗಳನ್ನು ನಿರ್ಮಿಸುತ್ತಿದೆ~ ಎಂದರು.ವಿಭಾಗದ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಎಚ್.ಆರ್. ವಿಶ್ವನಾಥ್ ಮಾತನಾಡಿದರು. ಕೊಳಚೆ ಅಭಿವೃದ್ಧಿ ಮಂಡಳಿಯ ಜಂಟಿ ಆಯುಕ್ತ ಡಾ. ಸಯ್ಯಿದ್ ಅಲಿ ರಜ್ವಿ, ಬಿಎಂಎಸ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.