ಬುಧವಾರ, ಜೂನ್ 16, 2021
23 °C

ವಸ್ತ್ರಗಳಲ್ಲಿ ವರ್ಣ ವೈಭವ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಸಾಮಾನ್ಯ ಕನ್ನಡತಿ ತಮ್ಮ ಸೃಜನಶೀಲ ಶಕ್ತಿಯಿಂದಲೇ ವಸ್ತ್ರವೈಭವವನ್ನು ಪ್ರತಿನಿಧಿಸುವ ರಾಯಭಾರಿಯಾದ ಕತೆ ಇದು. ಕೆಲಸದ ಬಗ್ಗೆ ಇರುವ ಶ್ರದ್ಧೆ ಹಾಗೂ ಪ್ರೀತಿ ಯಶಸ್ವಿ ಉದ್ಯಮಿಯಾಗಿಸಿದ ಬಗೆ ಇದು.

ಧರಿಸುವ ವಸ್ತ್ರಗಳು ಕೇವಲ ಮೈ ಮುಚ್ಚುವುದಿಲ್ಲ. ನಮ್ಮ ಅಭಿರುಚಿಯನ್ನೂ ಸೂಚಿಸುತ್ತವೆ ಅಂತ ವಸ್ತ್ರಗಳ ಒಳಹೊರಗನ್ನು ಬಿಚ್ಚಿಟ್ಟಿದ್ದು ಲತಾ ಪುಟ್ಟಣ್ಣ.ಕೆಎಸ್‌ಐಸಿಗಾಗಿ 10 ವಿಶೇಷ ವಿನ್ಯಾಸಗಳನ್ನು ನೀಡಿರುವ ವಸ್ತ್ರ ವಿನ್ಯಾಸಕಿ. ಅಪ್ಪಟ ಕನ್ನಡತಿ. ಈಗ ದೇಶ ವಿದೇಶಗಳಲ್ಲಿ ಭಾರತೀಯ ವಸ್ತ್ರವೈಭವ ಸಂಗ್ರಹವನ್ನು ಕೊಂಡೊಯ್ಯುತ್ತಿರುವ ಮಹಿಳಾ ಉದ್ಯಮಿ.ವಸ್ತ್ರಗಳು ಆರಾಮದಾಯಕ, ಅನುಕೂಲಕರ ಆಗಿರಬೇಕು. ಮಹಿಳೆಯರ ವಿಷಯ ಬಂದರೆ ಹೆಣ್ತನವೆಂಬುದು ಇಲ್ಲಿ ಮುಚ್ಚಿಟ್ಟರೂ ಲಾಲಿತ್ಯ ಕಂಡು ಬರಬೇಕು ಎಂಬುದು ಇವರ ವಿನ್ಯಾಸದ ಮೂಲಗುಣವಾಗಿದೆ. ಆದರೆ ಲತಾ ವಸ್ತ್ರವಿನ್ಯಾಸವನ್ನು ಓದಿಲ್ಲ. ಅಧ್ಯಯನವೂ ಮಾಡಿಲ್ಲ. ವಸ್ತ್ರವಿನ್ಯಾಸದ ಬಗ್ಗೆ ಇದ್ದ ಆಸಕ್ತಿ ಅಭಿರುಚಿ ಬೆಂಗಳೂರಿನ ಬಾಲೆಯನ್ನು ವಿಶ್ವ ಸುತ್ತಾಡಿಸಿ ಬಂತು.ಓದಿನಲ್ಲಿ ಸರಾಸರಿ ವಿದ್ಯಾರ್ಥಿ. 16 ವರ್ಷಕ್ಕೆಲ್ಲ ಮದುವೆಯಾಯಿತು. ಪತಿ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿದ್ದರು. ಆಗೆಲ್ಲ ಮಹಿಳೆಯರ ಸೃಜನಶೀಲ ಮನಸ್ಸನ್ನು ಗಂಭೀರವಾಗಿ ಪರಿಗಣಿಸುವವರೇ ಇರಲಿಲ್ಲ.ಕೇವಲ ಮಿಕ್ಸ್ ಅಂಡ್ ಮ್ಯಾಚ್ ಮಾಡುತ್ತ ಸಲ್ವಾರ್ ಕಮೀಜ್ ಹೊಲಿಸುತ್ತಿದ್ದೆ. ಎಲ್ಲರೂ ಮೆಚ್ಚುತ್ತಿದ್ದರು. ಒಮ್ಮೆ ಮಾತ್ರ 100 ವಿವಿಧ ಅಳತೆಯ ಸಲ್ವಾರ್‌ಕಮೀಜ್‌ಗಳನ್ನು ಸಿದ್ಧಪಡಿಸಿ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಿದೆ. ಮೊದಲ ಪ್ರದರ್ಶನವೇ ಯಶಸ್ವಿಯಾಯಿತು. 80 ಪೀಸುಗಳು ಒಂದೇ ದಿನದಲ್ಲಿ ಮಾರಾಟವಾದವು. ಆಮೇಲೆ ಇದೊಂಥರ ಹವ್ಯಾಸವಾಯಿತು ಎಂದು ತಮ್ಮ ಎರಡು ದಶಕಗಳ ಪಯಣವನ್ನು ಬಿಚ್ಚಿಡುತ್ತಾರೆ.ಅವೇಕ್ ಸಂಸ್ಥೆಯೊಂದಿಗೆ ಸಂಪರ್ಕ ಬೆಳೆಯಿತು. ಅವರು ಬಾಗಲಕೋಟೆ ಜಿಲ್ಲೆಯ ನೇಕಾರರ ಬಳಿ ಕಳುಹಿಸಿದರು. ಅವರಿಗೆ ಸೀರೆಯೊಂದಿಗೆ ಡ್ರೆಸ್ ಮಟಿರಿಯಲ್ ಮಾಡುವುದನ್ನು ಹೇಳಿದೆ. ಈಗ ಇಳಕಲ್ ಡ್ರೆಸ್‌ಗಳನ್ನು ನೋಡಿದಾಗಲೆಲ್ಲ ಖುಷಿಯಾಗುತ್ತದೆ ಎನ್ನುವ ಲತಾಗೆ ಇದು ವ್ಯಾಪಾರ ಅಲ್ಲವೇ ಅಲ್ಲ ಎನ್ನುತ್ತಾರೆ.ನಾನು ವ್ಯಾಪಾರಿಯೂ ಅಲ್ಲ, ವೃತ್ತಿ ನಿರತಳೂ ಅಲ್ಲ. ನಾನೊಬ್ಬಳು ಕಲಾವಿದೆ. ನನಗಿಷ್ಟ ಬಂದಂತೆ ವಸ್ತ್ರವನ್ನು ವಿನ್ಯಾಸಗೊಳಿಸುತ್ತೇನೆ. ನನ್ನ ಸಂಗ್ರಹದಲ್ಲಿ ಪ್ರತಿಯೊಂದೂ ಭಿನ್ನವಾದ ವಿನ್ಯಾಸಗಳೇ ದೊರೆಯುತ್ತವೆ.ಬಲ್ಕ್ ಮಾರಾಟದಲ್ಲಿ ಆಸಕ್ತಿ ಇಲ್ಲ. ಹಾಗಾಗಿಯೇ ಇದೊಂದು ವಿಶೇಷ ಸಂಗ್ರಹ ಎನ್ನುತ್ತಾರೆ ಲತಾ. ಪ್ರೊಫೆಷನ್‌ನಲ್ಲಿ ಲಾಭಗಳಿಕೆಯೇ ಮೊದಲಿಗೆ ಬರುತ್ತದೆ. ಪ್ಯಾಶನ್‌ನಲ್ಲಿ ತೃಪ್ತಿ ಆದ್ಯತೆಗಳಿಸುತ್ತದೆ. ಪ್ಯಾಶನ್ ಇದ್ದರೆ ಅದನ್ನು ಪ್ರೊಫೆಶನಲ್ ಆಗಿ ಬದಲಿಸುವುದು ನಮ್ಮ ಕೈಲಿರುವುದಿಲ್ಲ. ಗ್ರಾಹಕರೇ ಅದನ್ನು ಪ್ರೊಫೆಷನ್ ಆಗಿಸುತ್ತಾರೆ ಎಂದು ತಮ್ಮ ಸಂಗ್ರಹಗಳ ಯಶಸ್ವಿ ಮಾರಾಟದ ಗುಟ್ಟನ್ನು ಹೇಳುತ್ತಾರೆ ಲತಾ.ಈಗ ಕಾಟನ್, ಮಲ್‌ಮಲ್‌ಗಳಲ್ಲಿ ವಿನ್ಯಾಸಗೊಳಿಸುವುದು ಇಷ್ಟದ ಕೆಲಸವೆನ್ನುವ ಲತಾ ಕೆಎಸ್‌ಐಸಿಗಾಗಿಯೂ 10 ಬಗೆಯ ವಿಶೇಷ ವಿನ್ಯಾಸಗಳನ್ನು ಸಿದ್ಧಪಡಿಸಿದ್ದಾರೆ. ಅಪ್ಪಟ ಜರಿ ಸಿಗುವುದು ಈ ಸೀರೆಗಳಲ್ಲಿ ಮಾತ್ರ. ಕರ್ನಾಟಕದ ವಿಶೇಷವೂ ಆಗಿರುವುದರಿಂದ ಇದನ್ನು ಹೆಚ್ಚು ಮುತುವರ್ಜಿ ವಹಿಸಿ ಮಾಡಿದೆ ಎನ್ನುತ್ತಾರೆ ಲತಾ.ವಿಶ್ವದ ಅತ್ಯುನ್ನತ ಜವಳಿ ತಂತ್ರಜ್ಞಾನ ನಮ್ಮ ಪರಂಪರೆಯಲ್ಲಿಯೇ ಇದೆ. ಅದನ್ನು ಗುರುತಿಸಿ, ಪ್ರಚಾರ ನೀಡಬೇಕಿದೆ. ಅದನ್ನು ಬಳಕೆಗೆ ತರಬೇಕಿದೆ. ಬಾಂಧನಿ ಇರಲಿ, ನೈಸರ್ಗಿಕ ವರ್ಣಗಳಿರಲಿ, ಅವೆಲ್ಲವೂ ಮೊದಲೇ ನಮ್ಮಲ್ಲಿದ್ದವು. ಈಗ ಆರ್ಗೆನಿಕ್ ಕಲರ್ ಹೆಸರಿನಲ್ಲಿ, ಟೈ-ಡೈ ಹೆಸರಿನಲ್ಲಿ ಅವು ಪ್ರಸಿದ್ಧವಾಗಲಿಲ್ಲವೇ? ನಮ್ಮ ಪರಂಪರೆಗೆ ಸಮಕಾಲೀನ ವಿನ್ಯಾಸದ ಸ್ಪರ್ಶ ನೀಡಿದರೆ ಅವು ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿಗಿಳಿಯುತ್ತವೆ. ಅಷ್ಟು ಸಾಮರ್ಥ್ಯ ಇದೆ ಎನ್ನುತ್ತಾರೆ ಅವರು.ಕಲಂಕಾರಿ, ಜರ್ದೋಸಿ ಹಾಗೂ ಕಸೂತಿಗಾಗಿ ದೇಶದ ವಿವಿಧ ಭಾಗದ ಕಲಾವಿದರೊಂದಿಗೆ ಸಂಪರ್ಕದಲ್ಲಿದ್ದೇನೆ. ಪರಿಪೂರ್ಣ ನೈಪುಣ್ಯ ಸಾಧಿಸಿರುವ ಕಲಾವಿದರೇ ಶ್ರಿಷ್ಟಿ ಸಂಸ್ಥೆಯೊಂದಿಗೆ ಇದ್ದಾರೆ. ಕೆಲವೊಮ್ಮೆ ಬಾಟಿಕ್‌ಗೆ ವಿನ್ಯಾಸಗಳನ್ನೂ ನಾನೇ ಸಿದ್ಧಪಡಿಸಿ ಕೊಡುತ್ತೇನೆ.ನಮ್ಮ ವಸ್ತ್ರ ಪರಂಪರೆಯೊಂದಿಗೆ ನಮ್ಮ ಸಂಸ್ಕೃತಿಯ ಛಾಪು ಮೂಡಿಸುವುದು ಈ ವಸ್ತ್ರವಿನ್ಯಾಸಗಳ ವಿಶೇಷವಾಗಿದೆ ಎನ್ನುವ ಲತಾ ಸಂಗ್ರಹಕ್ಕೆ ಅಮೆರಿಕ ಹಾಗೂ ಲಂಡನ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.ತಮ್ಮ ಈ ಹವ್ಯಾಸದಿಂದ ವೃತ್ತಿಯವರೆಗೂ, ಪ್ಯಾಶನ್‌ನಿಂದ ಪ್ರೊಫೆಷನ್‌ವರೆಗೂ ಸದಾ ಬೆಂಬಲಿಸಿದ್ದ ಪತಿ ಸಹ ಈಗ ಇವರೊಂದಿಗೆ ಕೈಗೂಡಿಸಿದ್ದಾರೆ. ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಲತಾ ಅವರ ಬೇಸಿಗೆ ಸಂಗ್ರಹವನ್ನು ಇದೇ 16 ಹಾಗೂ 17ರಂದು `ರೇನ್‌ಟ್ರೀ~ಯಲ್ಲಿ ಸಂಗ್ರಹಕ್ಕೆ ಇರಿಸಲಾಗಿದೆ. ಉಗಾದಿ ಸಂಭ್ರಮಕ್ಕಾಗಿ ರೇಷ್ಮೆಯ ವಸ್ತ್ರ ಸಂಗ್ರಹವೂ ಇಲ್ಲಿದೆ. ಬೆಲೆ 5000 ರೂಪಾಯಿಗಳಿಂದ ಆರಂಭವಾಗುತ್ತದೆ. ಐಟಿಸಿ ವಿಂಡ್ಸರ್ ಮ್ಯಾನರ್‌ನ ಎದುರಿಗೆ ಇರುವ ರೇನ್‌ಟ್ರೀ ಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗೆ: 30623251 ಅಥವಾ ಶ್ರಿಷ್ಟಿ ಸಂಸ್ಥೆ: 26567349.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.