ಈಗಿನ ಬಹುದೊಡ್ಡ ಸವಾಲು ಯಾವುದು ಎಂದು ಯಾರನ್ನಾದರೂ ಕೇಳಿದರೆ ‘ಪರಸ್ಪರ ಸಂಬಂಧಗಳನ್ನು ನಿರ್ವಹಿಸುವುದು’ ಎನ್ನುತ್ತಾರೆ. ಪರಸ್ಪರ ಸಂಬಂಧ ಎಂದರೆ ಯಾರೋ ಅಪರಿಚಿತರ ಜೊತೆಗಲ್ಲ, ಅವರು ಗಂಡನೋ ಹೆಂಡತಿಯೋ ತಂದೆಯೋ ತಾಯಿಯೋ ಮಕ್ಕಳೋ ಒಡಹುಟ್ಟಿದವರೋ – ಒಟ್ಟಿನಲ್ಲಿ ಹತ್ತಿರದ ಬಂಧುಗಳು, ಸ್ನೇಹಿತರು, ಆಫೀಸಿನಲ್ಲಿ ನಿತ್ಯವೂ ಒಡನಾಡುವವರು, ನಮಗೆ ಬೇಕಾದವರು. ಇದನ್ನು ಹೀಗೆ ಹೇಳಬಹುದು: ‘ಯಾವುದು ನಮ್ಮ ಸಂತೋಷದ ಮೂಲವೋ, ಅದೇ ನಮ್ಮ ಅಸಂತೋಷದ ಮೂಲವಾಗುತ್ತಿದೆ!’

ನಾವೆಲ್ಲ ಅಂದುಕೊಂಡಿದ್ದೆವು, ಹಣ ಇದ್ದರೆ, ಅಧಿಕಾರ ಇದ್ದರೆ, ಹೆಸರಿದ್ದರೆ, ಬೇಕಾದಷ್ಟು ಆಸ್ತಿ ಇದ್ದರೆ ನಾವು ಸಂತೋಷದಿಂದ ಇರಬಹುದು ಎಂದು. ಆದರೆ ಈಗ ಎಲ್ಲರಿಗೂ ಹಣ ಇದೆ, ಬೇಕಾದಷ್ಟು ಆಸ್ತಿಯೂ ಇದೆ, ಮೇಲ್ನೋಟಕ್ಕೆ ಎಲ್ಲರೂ ಅತ್ಯಂತ ಸಂತೋಷದಿಂದ ಇರುವಂತೆ ಕಾಣುತ್ತಾರೆ. ಆದರೆ ಎಲ್ಲರೊಳಗೂ ಒಂದು ಖಾಲಿತನ, ಒಂಟಿತನ ಆವರಿಸುತ್ತಿದೆ. ಮೊದಲು ಕೇವಲ ವಯಸ್ಸಾದವರಲ್ಲಿ, ಹೊರಗೆಲ್ಲೂ ಓಡಾಡದವರಲ್ಲಿ ಇಂತಹ ಒಂಟಿತನ ಕಾಡುತ್ತಿದೆ ಎನ್ನುತ್ತಿದ್ದರು. ಆದರೆ ಈಗ ಹದಿಹರೆಯದವರು ‘ಲೋನ್ಲಿನೆಸ್ ಪೆಂಡಮಿಕ್’ ಬಗೆಗೆ ಮಾತನಾಡುತ್ತಿದ್ದಾರೆ. ಇದೊಂದು ಜಾಗತಿಕ ಪಿಡುಗಾಗಿದೆ. ಜನರ ನಡುವೆಯೇ ಇದ್ದರೂ ಒಂಟಿ ಆಗುತ್ತಿದ್ದಾರೆ. ಸಮುದ್ರದಲ್ಲಿಯೇ ಇದ್ದರೂ ಉಪ್ಪು ನೀರಿಗೆ ಬರ ಎಂದ ಹಾಗಾಗಿದೆ.

ಯಾಕೆ ಹೀಗೆ?

ಮನುಷ್ಯನಿಗೆ ಸ್ವಭಾವತಃ ಇನ್ನೊಂದು ಮನುಷ್ಯ ಜೀವಿಯ ಸಹವಾಸ ಇದ್ದಾಗ, ಅದರಲ್ಲೂ ಗುಂಪುಗಳಲ್ಲಿ ಇದ್ದಾಗ ಅವನು ಹೆಚ್ಚು ಸುರಕ್ಷಿತತೆಯ, ನೆಮ್ಮದಿಯ ಭಾವನೆ ಹೋಂದುತ್ತಾನೆ. ನಾವು ಇತ್ತೀಚಿನ ವರ್ಷಗಳಲ್ಲಿ ಹಣಕ್ಕೆ, ಸಂಪತ್ತಿಗೆ ಕೊಟ್ಟ ಮಹತ್ವವನ್ನು ಸಂಬಂಧಗಳಿಗೆ ಕೊಡಲಿಲ್ಲ. ಸಂಬಂಧಗಳು ಅಮೂಲ್ಯ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

ಮನಸ್ಸೇ ಕಾರಣ

ನಮ್ಮ ಸಂತೋಷಕ್ಕೂ, ನಮ್ಮ ದುಃಖಕ್ಕೂ ನಮ್ಮ ಮನಸ್ಸೇ ಕಾರಣ, ಇದನ್ನೇ ಭಗವದ್ಗೀತೆಯಲ್ಲಿ ಕೃಷ್ಣ ‘ಯಾರು ಬುದ್ಧಿಯ ಮೂಲಕ ಮನಸ್ಸನ್ನು ಪಳಗಿಸುತ್ತಾರೋ ಅವರಿಗೆ ಅವರ ಮನಸ್ಸೇ ಮಿತ್ರ; ಯಾರಿಗೆ ಬುದ್ಧಿಯ ಮೂಲಕ ಮನಸ್ಸನ್ನು ಪಳಗಿಸಲು ಸಾಧ್ಯ ಇಲ್ಲವೋ ಅವರಿಗೆ ಅವರ ಮನಸ್ಸೇ ಶತ್ರು’ ಎಂದಿರುವುದು. ಎಂದರೆ ನಮ್ಮ ಮಿತ್ರರು–ಶತ್ರುಗಳು ಹೊರಗಿಲ್ಲ, ನಮ್ಮ ಒಳಗೇ ಇದ್ದಾರೆ.

ಎಲ್ಲರೊಂದಿಗೂ ಸಂತೋಷವಾಗಿ ಇರುವುದು ಯಾರಿಗೆ ಬೇಡ, ಇದು ನಮ್ಮ ಬಯಕೆ ಆದರೂ ಇದನ್ನು ಹೊಂದಲು ನಮ್ಮ ಮನಸ್ಸೇ ಅಡ್ಡಿ ಆಗಿದೆ. ನಮ್ಮ ಮನಸ್ಸಿನಲ್ಲಿ ನಿರಂತರವಾಗಿ ಆಲೋಚನೆಗಳು ಬರುತ್ತಲೇ ಇರುತ್ತವೆ, ಇದು ಸಮುದ್ರದಲ್ಲಿ ಅಲೆಗಳು ಬಂದ ಹಾಗೆ. ವಿಜ್ಞಾನಿಗಳು ಹೇಳುವ ಪ್ರಕಾರ ಪ್ರತಿ ದಿನ ಒಬ್ಬ ವ್ಯಕ್ತಿಯಲ್ಲಿ ಸರಾಸರಿಯಾಗಿ 17 ಸಾವಿರದಿಂದ 69 ಸಾವಿರದ ವರೆಗೆ ಆಲೋಚನೆಗಳು ಬರುತ್ತವೆ! ಈ ಆಲೋಚನೆಗಳಲ್ಲಿ ಬಹುತೇಕ ಆಲೋಚನೆಗಳು ನಕಾರಾತ್ಮಕವಾಗಿ ಇರುತ್ತವೆ, ಸುಳ್ಳಾಗಿರುತ್ತವೆ; ಎಂದರೆ ಅದು ಕೇವಲ ನಮ್ಮ ಊಹೆ ಮಾತ್ರವೇ ಆಗಿರುತ್ತವೆ.

ನಕಾರಾತ್ಮಕವಾಗಿರುವುದನ್ನು ಕಚ್ಚಿ ಹಿಡಿಯುವ ನಮ್ಮ ಮನಸ್ಸಿನ ಸಹಜ ಗುಣದಿಂದಾಗಿ ಎಂದೋ ನಡೆದ ಘಟನೆ, ಯಾವಾಗಲೋ ಆಡಿದ ಮಾತು, ಮತ್ತೆಲ್ಲೋ ಘಟಿಸಿದ ಸಂಗತಿ ನಮಗಾದ ಸೋಲು, ಅಪಮಾನ, ಇನ್ಯಾರದ್ದೋ ತಿರಸ್ಕಾರ – ಹೀಗೆ ನಕಾರಾತ್ಮಕವಾದ ಘಟನೆ, ಮಾತು, ಸನ್ನಿವೇಶ, ತೀವ್ರ ಸಂವೇದನೆ ಉಳ್ಳ ಎಷ್ಟೋ ವಿಷಯಗಳು ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತವೆ. ಹೀಗೆ ನಾವು ನಕಾರಾತ್ಮಕ ನೆನಪುಗಳ ಬಲೆಯಲ್ಲಿ ಸಿಕ್ಕಿ ಬೀಳುತ್ತೇವೆ.

ಮನಸ್ಸು ಯಾವಾಗಲೂ ಕಳೆದು ಹೋಗಿರುವುದನ್ನು, ಅದೂ ನಕಾರಾತ್ಮಕವಾಗಿರುವುದನ್ನು ಮೆಲುಕು ಹಾಕುತ್ತಿರುತ್ತದೆ. ಮುಗಿದು ಹೋಗಿರುವುದನ್ನು ಪಶ್ಚಾತ್ತಾಪ, ದುಃಖದಿಂದ, ಮರುಕದಿಂದ ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ಭವಿಷ್ಯದ ಬಗ್ಗೆ ಭಯದಿಂದ, ಆತಂಕದಿಂದ, ಉದ್ವೇಗದಿಂದ ನಕಾರಾತ್ಮಕವಾಗಿ ಯೋಚಿಸುತ್ತದೆ.

ಏನು ಮಾಡಬೇಕು?

ಇದಕ್ಕಿರುವ ಏಕೈಕ ಪರಿಹಾರವೇ ನಾವು ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮನ್ನೇ ಅರ್ಥ ಮಾಡಿಕೊಳ್ಳುವುದು. ನಮ್ಮಲ್ಲಿ ಬರುತ್ತಿರುವ ಆಲೋಚನೆಗಳನ್ನು ಅವಲೋಕಿಸುವುದು. ನಮಗೆ ನಕಾರಾತ್ಮಕ ಆಲೋಚನೆ ಬಂದಿದ್ದು ಗೊತ್ತಾಗುತ್ತದೆ. ಆದರೆ ಅದನ್ನು ಹೇಗೆ ತಡೆಹಿಡಿಯುವುದು ಎನ್ನುವುದು ಗೊತ್ತಾಗುವುದಿಲ್ಲ. ಇದಕ್ಕಿರುವ ಏಕೈಕ ಸೂತ್ರ ‘ಮೈಂಡ್ಫುಲ್’ ಆಗಿರುವುದು. ಈಗ ‘ಮೈಂಡ್ಫುಲ್ನೆಸ್’ ಎನ್ನುವ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ಇಲ್ಲಿನ ಪ್ರಮುಖ ಸಂಗತಿ ಏನೆಂದರೆ ವರ್ತಮಾನದಲ್ಲಿ ಬದುಕುವುದು. ಎಂದರೆ ನಾವು ಏನು ಮಾಡುತ್ತಿದ್ದೇವೋ ಅದರತ್ತಲೇ ಸಂಪೂರ್ಣ ಗಮನವನ್ನು ಹರಿಸುವುದು. ದೇಹ ಮತ್ತು ಮನಸ್ಸುಗಳೆರಡೂ, ಸದ್ಯ ಮಾಡುತ್ತಿರುವ ಕೆಲಸದಲ್ಲಿಯೇ ಮಗ್ನವಾಗುವುದು. ಒಮ್ಮೊಮ್ಮೆ ನಾವು ಏನೂ ಮಾಡುತ್ತಿರುವುದಿಲ್ಲ; ಹಾಗಿದ್ದಾಗಲೂ ನಾವು ನಮ್ಮೊಳಗೆ ಏನು ನಡೆಯುತ್ತದೆ ಎನ್ನುವುದರ ಬಗೆಗೆ ಪ್ರಜ್ಞೆಯನ್ನು ಹೊಂದಿರುವುದು.

‘ಮೈಂಡ್ಫುಲ್ನೆಸ್’ನ ಇನ್ನೊಂದು ಮುಖ್ಯ ಸಂಗತಿ ಏನೆಂದರೆ ಯಾವುದೇ ಪೂರ್ವಗ್ರಹವೂ ಇಲ್ಲದೇ ಎಲ್ಲವನ್ನೂ ನೋಡುವುದು. ಈಗ ನಮಗೆ ಏನಾಗುತ್ತಿದೆ ಎಂದರೆ ನಮ್ಮ ಒಡನಾಟದಲ್ಲಿ ಇರುವವರು, ಪರಸ್ಪರ ಸಂಬಂಧಗಳಲ್ಲಿ ನಮಗೆ ಬೇರೆಯವರ ಜೊತೆಗಿನ ಎಷ್ಟೋ ಘಟನೆಗಳು, ಮಾತುಗಳು ಇವೆಲ್ಲವೂ ನೆನಪಾಗುತ್ತದೆ. ಈ ಹಿಂದಿನ ಅನುಭವದಿಂದ ನಾವು ತಪ್ಪು–ಸರಿ ಎನ್ನುವ ತೀರ್ಮಾನಕ್ಕೆ ಬರುತ್ತೇವೆ. ಇವರು ಒಳ್ಳೆಯವರು, ಕೆಟ್ಟವರು, ಸ್ವಾರ್ಥಿಗಳು – ಹೀಗೆ ತೀರ್ಮಾನಕ್ಕೆ ಬಂದು ಯೋಚಿಸುವುದು, ವರ್ತಿಸುವುದು.

‘ಮೈಂಡ್ ಫುಲ್’ ಆಗಿರುವುದನ್ನು ಅಭ್ಯಾಸ ಮಾಡಬೇಕು. ಮನಸ್ಸನ್ನು ಉತ್ತಮ ಅಭ್ಯಾಸಗಳಿಂದ ಪಳಗಿಸಬೇಕು. ಊಟ ಮಾಡುವಾಗ ಸಂಪೂರ್ಣ ಗಮನವನ್ನು ಅದರತ್ತಲೇ ಕೊಡುವುದು, ಮಕ್ಕಳ ಜೊತೆ ಮಾತನಾಡುವಾಗ, ಆಟ ಆಡುವಾಗ, ಏನಾದರೂ ಹವ್ಯಾಸಗಳಲ್ಲಿ ತೊಡಗಿಕೊಂಡಾಗ – ಹೀಗೆ ಯಾವುದೂ ಆಗಬಹುದು – ಒಟ್ಟಿನಲ್ಲಿ ನಮ್ಮ ದೇಹ ಮತ್ತು ಮನಸ್ಸುಗಳು ಒಂದೆಡೆ ಇರಬೇಕು; ತತ್ಪರತೆಯಿಂದ ಕಾರ್ಯನಿರ್ವಹಿಸಬೇಕು. ಆಗ ಸಂತೋಷ ಎನ್ನುವುದು ಸಹಜವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.