ಭಾನುವಾರ, ಜನವರಿ 19, 2020
28 °C

ವಾರದ ಆಹಾರ ಹಣದುಬ್ಬರ ಪ್ರಕಟಿಸದಿರಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರತಿ ವಾರ ಪ್ರಕಟಿಸಲಾಗುವ ಆಹಾರ ಹಣದುಬ್ಬರ ಅಂಕಿ ಅಂಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.ಈ ವಿವರಗಳು ಬೆಲೆ ಪರಿಸ್ಥಿತಿಯ ಸ್ಪಷ್ಟ ಮತ್ತು ಸಮಗ್ರ ಚಿತ್ರಣ ನೀಡದ ಹಿನ್ನೆಲೆಯಲ್ಲಿ  ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಆರ್ಥಿಕ ವ್ಯವಹಾರ ಸಮಿತಿ ಈ ನಿರ್ಣಯ ಕೈಗೊಂಡಿದೆ.ಪ್ರತಿ ವಾರದ ಆಹಾರ ಹಣದುಬ್ಬರ ಮತ್ತು ಪ್ರತಿ ತಿಂಗಳು ಪ್ರಕಟಿಸುವ ಸಮಗ್ರ ಹಣದುಬ್ಬರ ಮಧ್ಯೆ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ, ಈ ಪದ್ಧತಿ ಕೈಬಿಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯವು ಆಹಾರ ಪದಾರ್ಥಗಳು ಒಳಗೊಂಡ ಪ್ರಾಥಮಿಕ ಸರಕು, ಇಂಧನ, ವಿದ್ಯುತ್‌ಗೆ ಸಂಬಂಧಿಸಿದ ಸಗಟು ಬೆಲೆ ಸೂಚ್ಯಂಕವನ್ನು ಪ್ರತಿ ವಾರ ಗುರುವಾರಕ್ಕೊಮ್ಮೆ ಪ್ರಕಟಿಸುತ್ತಿದೆ. ಇದರ ಜತೆಗೆ ಸಗಟು ಬೆಲೆ ಸೂಚ್ಯಂಕ ಆಧರಿಸಿದ  ಒಟ್ಟಾರೆ ಹಣದುಬ್ಬರದ ಅಂಕಿ ಅಂಶಗಳನ್ನೂ ತಿಂಗಳಿಗೊಮ್ಮೆ ಪ್ರಕಟಿಸಲಾಗುತ್ತಿದೆ.ತಿಂಗಳಿಗೊಮ್ಮೆ ಸಮಗ್ರ ಹಣದುಬ್ಬರ ವಿವರ ನೀಡಲು ಮತ್ತು ಆಹಾರ ಹಣದುಬ್ಬರ ಸೇರಿದಂತೆ ಪ್ರಾಥಮಿಕ ಸರಕುಗಳ ಬೆಲೆ ಏರಿಕೆ ವಿವರ ನೀಡಲು ಸರ್ಕಾರ 2009ರ ಅಕ್ಟೋಬರ್‌ನಲ್ಲಿ ನಿರ್ಧರಿಸಿತ್ತು.

ಪ್ರತಿಕ್ರಿಯಿಸಿ (+)