ಶುಕ್ರವಾರ, ಮೇ 14, 2021
21 °C

ವಾರ್ಷಿಕ ಹಣದುಬ್ಬರ ಎರಡಂಕಿಯತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಹಾರ ಪದಾರ್ಥ ಮತ್ತು ತಯಾರಿಕಾ ಸರಕುಗಳ ಬೆಲೆಗಳು ದುಬಾರಿಯಾಗಿದ್ದರಿಂದ, ವಾರ್ಷಿಕ ಹಣದುಬ್ಬರ ದರವು ಆಗಸ್ಟ್ ತಿಂಗಳಿನಲ್ಲಿ ಶೇ 9.78ರಷ್ಟಾಗಿ 13 ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2010ರ ಮಾರ್ಚ್ ತಿಂಗಳಿನಿಂದೀಚೆಗೆ ಕೈಗೊಂಡಿರುವ ಬಡ್ಡಿ ದರ ಹೆಚ್ಚಳದ ಕ್ರಮಗಳು ಬೆಲೆ ಏರಿಕೆಗೆ ಕಡಿವಾಣ ವಿಧಿಸುವಲ್ಲಿ ವಿಫಲವಾಗಿರುವುದು ಇದರಿಂದ ಸಾಬೀತಾಗಿದೆ.   ದೇಶದ ಅರ್ಥ ವ್ಯವಸ್ಥೆಯು ಒಂದೆಡೆ ಹಣದುಬ್ಬರ ಹೆಚ್ಚಳ ಮತ್ತು ಇನ್ನೊಂದೆಡೆ ಆರ್ಥಿಕ ಬೆಳವಣಿಗೆ ಕುಸಿತ ಕಾಣುತ್ತಿರುವ ಸದ್ಯದ ಸಂದರ್ಭದಲ್ಲಿ ಭಾರತೀಯ ರಿಸರ್ವ ಬ್ಯಾಂಕ್, ಬ್ಯಾಂಕ್ ಬಡ್ಡಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಡೋಲಾಯಮಾನ ಪರಿಸ್ಥಿತಿ ಎದುರಿಸುತ್ತಿದೆ. ಇದೇ ಶುಕ್ರವಾರ ಪ್ರಕಟಗೊಳ್ಳಲಿರುವ ಹಣಕಾಸು ನೀತಿಯ ಮಧ್ಯಂತರ ತ್ರೈಮಾಸಿಕ ಪರಾಮರ್ಶೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ಈಗ ಕುತೂಹಲ ಮೂಡಿಸಿದೆ.ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಸಮಗ್ರ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಶೇ 9.22 ಮತ್ತು 2010ರ ಆಗಸ್ಟ್‌ನಲ್ಲಿ ಶೇ 8.87ರಷ್ಟಿತ್ತು. ಈ ವರ್ಷದ ಫೆಬ್ರುವರಿಯಿಂದೀಚೆಗೆ  ತಯಾರಿಕಾ ಸರಕುಗಳ ಬೆಲೆಗಳು ಏರುಗತಿಯಲ್ಲಿಯೇ ಇವೆ.ಪ್ರಣವ್ ಹೇಳಿಕೆ: ಜಾಗತಿಕ ಬೆಲೆ ಒತ್ತಡದಿಂದ ದೇಶದಲ್ಲಿ ಹಣದುಬ್ಬರವು ನಿರಂತರವಾಗಿ ಏರುಗತಿಯಲ್ಲಿದ್ದು, ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.ವಾರ್ಷಿಕ ಹಣದುಬ್ಬರವು ಅಪಾಯಕಾರಿ ರೂಪದಲ್ಲಿ ಎರಡಂಕಿ ಹತ್ತಿರ ಸಾಗಿದ್ದು, ಸರ್ಕಾರ ಮತ್ತು `ಆರ್‌ಬಿಐ~ ಜಂಟಿಯಾಗಿ ಇದನ್ನು ನಿಯಂತ್ರಣದಲ್ಲಿ ಇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ ಎಂದು ಹೇಳಿದ್ದಾರೆ.ವರ್ಷದ ಆಧಾರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಶೇ 9.62ರಷ್ಟು ದುಬಾರಿಯಾಗಿವೆ. ಈರುಳ್ಳಿ ಶೇ 45.29, ಹಣ್ಣು ಶೇ 23, ಆಲೂಗಡ್ಡೆ ಶೇ 12.53ರಷ್ಟು ತುಟ್ಟಿಯಾಗಿವೆ. ಒಟ್ಟಾರೆ ತರಕಾರಿ ಬೆಲೆಗಳು ಶೇ 12ರಷ್ಟು ಏರಿಕೆ ಕಂಡಿವೆ.ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ 20ರಷ್ಟು ಪಾಲು ಹೊಂದಿರುವ ಪ್ರಾಥಮಿಕ ಸರಕುಗಳ ಹಣದುಬ್ಬರವು ಶೇ 12.58ರಷ್ಟಿತ್ತು. ಆಹಾರೇತರ ಪ್ರಾಥಮಿಕ ಸರಕುಗಳಾದ ಎಣ್ಣೆ ಬೀಜ, ಖನಿಜ, ನಾರು ಮುಂತಾದವು ಶೇ 17.75ರಷ್ಟು ತುಟ್ಟಿಯಾಗಿವೆ. `ಡಬ್ಲ್ಯುಪಿಐ~ನಲ್ಲಿ ಶೇ 65ರಷ್ಟು ಪಾಲು ಹೊಂದಿರುವ ತಯಾರಿಕಾ ಸರಕುಗಳ ಬೆಲೆಗಳು ಶೇ 8ರಷ್ಟು ಏರಿಕೆ ಕಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.