ಸೋಮವಾರ, ಮಾರ್ಚ್ 1, 2021
31 °C

ವಾಹನ ನಿಲುಗಡೆ ಸ್ಥಳವಾದ ಕಬ್ಬನ್ ಪಾರ್ಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ನಿಲುಗಡೆ ಸ್ಥಳವಾದ ಕಬ್ಬನ್ ಪಾರ್ಕ್

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಬಂದಿದ್ದ  ವಕೀಲರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಬ್ಬನ್ ಉದ್ಯಾನದೊಳಗೆ ತಮ್ಮ ವಾಹನಗಳನ್ನು ನಿಲ್ಲಿಸಿದ್ದರಿಂದ, ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆಯವರೆಗೆ ಮುಚ್ಚಲಾಗಿತ್ತು.ಕೋರ್ಟ್‌ನ ವಾಹನ ನಿಲುಗಡೆ ಸ್ಥಳದಲ್ಲಿ ಜ. 16ರಿಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ವಾಹನಗಳ  ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಕಾಮಗಾರಿ ಕುರಿತು ಮಾಹಿತಿ ಇಲ್ಲದ ಕೆಲ ವಕೀಲರು ಮತ್ತು ಸಾರ್ವಜನಿಕರು  ಜ. 18ರಂದು (ಸೋಮವಾರ) ರಸ್ತೆ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಹಾಗಾಗಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.9 ಮಹಡಿಯ ಕಟ್ಟಡ: ಕೋರ್ಟ್ ಆವರಣದಲ್ಲಿ 9 ಮಹಡಿಯ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಲೋಕೋಪಯೋಗಿ ಇಲಾಖೆ, ಸದ್ಯ 5 ಮಹಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ನಿರ್ಮಾಣ ಕಾಮಗಾರಿ ಅವಧಿ ಒಂದೂವರೆ ವರ್ಷವಾಗಿದೆ.ವಾಹನ ದಟ್ಟಣೆಯ ಈ ಸ್ಥಳದಲ್ಲಿ  ರಾಜಾರಾಂ ಮೋಹನ್ ರಾಯ್ ರಸ್ತೆ, ಕೆಂಪೇಗೌಡ ರಸ್ತೆ ಸೇರಿದಂತೆ 9 ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹಡ್ಸನ್ ವೃತ್ತವಿದೆ. ಈ ವೃತ್ತಕ್ಕೆ ಹೊಂದಿಕೊಂಡಂತೆ ಕೋರ್ಟ್‌ ಕೂಡ ಇದೆ.ವಕೀಲರು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಸ್ಥಳದಲ್ಲಿ  ಕಾಮಗಾರಿ ಆರಂಭವಾಗಿದ್ದು, ವಾಹನಗಳ ನಿಲುಗಡೆ ಪರ್ಯಾಯ ಸ್ಥಳದ ಜತೆಗೆ, ಸಂಚಾರ ದಟ್ಟಣೆಯೂ ಸಮಸ್ಯೆಯಾಗಿ ಪರಿಣಮಿಸಿದೆ.ಅನುಮತಿ ಕೊಟ್ಟಿದ್ದರು: ‘ಜ. 16ರಿಂದ ಕಟ್ಟಡದ ಕಾಮಗಾರಿ ಆರಂಭವಾಗಿದೆ. ಕಟ್ಟಡದ ತಳ ಮಹಡಿ ಸೇರಿದಂತೆ 1 ಮತ್ತು 2ನೇ ಮಹಡಿಗಳನ್ನು ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಘಟಕದ  ಜಂಟಿ ಕಾರ್ಯದರ್ಶಿ ಶಶಿಕಿರಣ್ ಅವರು ಹೇಳಿದರು.‘ಏಳೆಂಟು ತಿಂಗಳಲ್ಲಿ 3 ಮಹಡಿಗಳನ್ನು ನಿರ್ಮಿಸಿ ಕೊಡುವುದಾಗಿ ಕಟ್ಟಡದ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಬಳಿಕ ಅಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಾಗಲಿಿದೆ’ ಎಂದು ಅವರು ತಿಳಿಸಿದರು.‘ಕಾಮಗಾರಿ ಮುಗಿಯುವವರೆಗೆ ಕಬ್ಬನ್ ಉದ್ಯಾನದಲ್ಲಿ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅವಕಾಶ ನೀಡುವಂತೆ ಕೋರಿ ತೋಟಗಾರಿಕೆ ಇಲಾಖೆಯ (ಕಬ್ಬನ್‌ ಉದ್ಯಾನ) ಉಪ ನಿರ್ದೇಶಕರಿಗೆ 3 ತಿಂಗಳ ಹಿಂದೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಮೇರೆಗೆ ವಾಹನಗಳನ್ನು ನಿಲ್ಲಿಸಲಾಗಿದೆ’ ಎಂದು ಸಂಘದ ಮಾಜಿ ಉಪಾಧ್ಯಕ್ಷ ಎಂ.ಟಿ ಹರೀಶ ಅವರು ಮಾಹಿತಿ ನೀಡಿದರು.ಸವಾರರ ಪರದಾಟ: ಯಾವುದೇ ಮುನ್ಸೂಚನೆ ಇಲ್ಲದೆ ಕಬ್ಬನ್ ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಸೋಮವಾರ ಮತ್ತು ಮಂಗಳವಾರ ಮುಚ್ಚಿದ್ದರಿಂದ, ಆ ಮಾರ್ಗವಾಗಿ ಸಂಚರಿಸುವ ವಾಹನಗಳ ಸವಾರರು ಪರದಾಡಿದರು.ಇದೇ ದ್ವಾರದ ಮೂಲಕ ಉದ್ಯಾನದ ಕೇಂದ್ರ ಗ್ರಂಥಾಲಯಕ್ಕೆ ಬರುವವರ ಜತೆಗೆ ಕೆ.ಆರ್‌. ವೃತ್ತ, ವಿಧಾನಸೌಧ ಹಾಗೂ ಸಿದ್ದಲಿಂಗಯ್ಯ ವೃತ್ತದ ಮಾರ್ಗವಾಗಿ ಹೋಗುವವರು ಅರ್ಧ ಕಿಲೋಮೀಟರ್ ಮುಂದಕ್ಕೆ ಸಾಗಿ ಸಿದ್ದಲಿಂಗಯ್ಯ ವೃತ್ತದ ಮೂಲಕ ಸಂಚರಿಸಬೇಕಾಯಿತು.ಸರಾಗ ಸಂಚಾರ: ಕೋರ್ಟ್‌ಗೆ ಬಂದವರೆಲ್ಲ ಮಂಗಳವಾರ ತಮ್ಮ ವಾಹನಗಳನ್ನು ಕಬ್ಬನ್ ಉದ್ಯಾನದಲ್ಲಿ ನಿಲ್ಲಿಸಿದ್ದರಿಂದ ಯಾವುದೇ ಸಂಚಾರ ಸಮಸ್ಯೆ ಉಂಟಾಗಿಲ್ಲ.ಸೋಮವಾರ ಕೆಲ ವಕೀಲರು ಮತ್ತು ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಬಳಿಕ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿ, ವಾಹನಗಳನ್ನು ತೆಗೆಸಲಾಗಿತ್ತು ಎಂದು ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದರು.ತಡೆಗೋಡೆ ಒಡೆದರು: ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೂ ಹಿಂದಿನ ದಿನ, ಕೋರ್ಟ್‌ ಕಟ್ಟಡಕ್ಕೆ ಹೊಂದಿಕೊಂಡಂತಿರುವ ತಡೆಗೋಡೆಯ ಸ್ವಲ್ಪ ಭಾಗವನ್ನು ಓಡಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಮಿಕರು ಒಡೆದು ಹಾಕಿದ್ದಾರೆ.‘ಅನುಮತಿ ಇಲ್ಲದೆ ಜ. 15ರಂದು ಉದ್ಯಾನದ ತಡೆಗೋಡೆ ಒಡೆದಿದ್ದಾರೆ. ಈ ಸಂಬಂಧ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಎಂಜಿನಿಯರ್‌ಗೆ ಪತ್ರ ಬರೆದು, ಕೂಡಲೇ ತಡೆಗೋಡೆಯನ್ನು ಪುನರ್‌ನಿರ್ಮಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಕ್ಷಮೆ ಯಾಚಿಸಿರುವ ಅವರು, ಒಂದೆರಡು ದಿನದಲ್ಲಿ ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುರಗೋಡ ಅವರು ಪ್ರತಿಕ್ರಿಯಿಸಿದರು.ಬೇರೆ ಸ್ಥಳಗಳೂ ಇವೆ

‘ಉದ್ಯಾನ ಸಂರಕ್ಷಣಾಕಾಯ್ದೆಯ ಪ್ರಕಾರ ಯಾರೂ ಉದ್ಯಾನವನ್ನು ಯಾವ ರೀತಿಯಲ್ಲೂ ಅತಿಕ್ರಮಿಸುವಂತಿಲ್ಲ. ಅದು ವಕೀಲರು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ’ಎಂದು ಹೈಕೋರ್ಟ್ ವಕೀಲರೂ ಹಾಗೂ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ತಿಳಿಸಿದರು.

‘ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಬ್ಬನ್ ಉದ್ಯಾನದ ಬದಲಿಗೆ ಕೋರ್ಟ್‌ ಸಮೀಪದಲ್ಲಿರುವ ವೈಎಂಸಿಎಗೆ ಸೇರಿದ 16ರಿಂದ 17 ಎಕರೆಯಷ್ಟು ಜಾಗ ಹಾಗೂ ಬನಪ್ಪ ಉದ್ಯಾನವನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬಹುದು. ಈ ಕುರಿತು ವಕೀಲ ಮಿತ್ರರೊಂದಿಗೆ ಚರ್ಚಿಸಲಾಗುವುದು’ ಎಂದು ಅವರು ಹೇಳಿದರು.ನಿಗದಿತ ಸ್ಥಳಗಳಲ್ಲಷ್ಟೆ ಅನುಮತಿ

‘ವಾಹನಗಳ ನಿಲುಗಡೆಗೆ ಅನುಮತಿ ಕೋರಿ 3 ತಿಂಗಳಹಿಂದೆ ವಕೀಲರ ಸಂಘದವರು ಪತ್ರ ಬರೆದಿದ್ದರು. ಉದ್ಯಾನದಲ್ಲಿರುವ ವಾಹನಗಳ ನಿಲುಗಡೆಗಾಗಿ 5 ಸ್ಥಳಗಳನ್ನು ಗುರುತಿಸಲಾಗಿದೆ.

ಅಲ್ಲೇ ನಿಲುಗಡೆಗೆ ಅನುಮತಿ ನೀಡಿದ್ದೆವು’ ಎಂದು ಮಹಾಂತೇಶ ಮುರಗೋಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆದರೆ ನಿಗದಿತ ಸ್ಥಳದಲ್ಲಿ ನಿಲ್ಲಿಸುವ ಬದಲು, ಉದ್ಯಾನದ ಹಡ್ಸನ್‌ ವೃತ್ತ ದ್ವಾರದ ಬಳಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಆಗಅನಿವಾರ್ಯವಾಗಿ ದ್ವಾರವನ್ನು ಮುಚ್ಚಿ ವಾಹನಗಳನ್ನು ನಿಯಂತ್ರಿಸಬೇಕಾಯಿತು. ಎರಡೂ ದಿನವೂ ಇದೇ ಸ್ಥಿತಿ ಮುಂದುವರೆದಿದೆ’ ಎಂದು ಅವರು ಹೇಳಿದರು.‘ನಿಗದಿತ ಸ್ಥಳಗಳಲ್ಲಿ ನಿಲ್ಲಿಸಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ. ನಿತ್ಯ ಸಾವಿರಾರು ಪ್ರವಾಸಿಗಳು ಉದ್ಯಾನಕ್ಕೆ ಬರುತ್ತಾರೆ. ಇಲ್ಲಿನ ಅಂದಕ್ಕೆ ಧಕ್ಕೆಯಾಗುವಂತೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆಹೇಗೆ?’ ಎಂದು ಅವರು ಪ್ರಶ್ನಿಸಿದರು.* ಇದು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿ. ವಾಹನಗಳ ನಿಲುಗಡೆಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ. ಅದಕ್ಕಾಗಿ ಸಂಬಂಧಪಟ್ಟ ವರಿಗೆ ಪತ್ರ ಬರೆಯಲಾಗುವುದು

-ಎಚ್‌.ಸಿ. ಶಿವರಾಮ್,

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ

* ಉದ್ಯಾನದ ಸಂರಕ್ಷಣೆಗೆ ಮೊದಲ ಆದ್ಯತೆ. ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಮನ ಬಂದಂತೆ ವಾಹನಗಳನ್ನು ನಿಲ್ಲಿಸಿದರೆ ಉದ್ಯಾನದ ದ್ವಾರ ಮುಚ್ಚಲೇಬೇಕಾಗುತ್ತದೆ

-ಮಹಾಂತೇಶ ಮುರಗೋಡ,

ತೋಟಗಾರಿಕೆ ಇಲಾಖೆಯ

(ಕಬ್ಬನ್ ಉದ್ಯಾನ) ಉಪ ನಿರ್ದೇಶಕ

* ಕೋರ್ಟ್‌ಗೆ ಬರುವ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಬನಪ್ಪ ಉದ್ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು. ಕಬ್ಬನ್ ಪಾರ್ಕ್‌ ದ್ವಾರ ಮುಚ್ಚುವುದು, ಬಿಡುವುದು ತೋಟಗಾರಿಕೆ ಇಲಾಖೆಯವರಿಗೆ ಬಿಟ್ಟದ್ದು

-ಡಾ.ಎಂ.ಎ. ಸಲೀಂ,  

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್

ಅಂಕಿ ಅಂಶ

9,000 ನಿತ್ಯ ಕೋರ್ಟ್‌ಗೆ ಬರುವವರು

5,000 ಕೋರ್ಟ್‌ಗೆ ನಿತ್ಯ ಬಂದು ಹೋಗುವ ವಾಹನಗಳ ಸಂಖ್ಯೆಮುಖ್ಯಾಂಶಗಳು 

* ಉದ್ಯಾನದ ಹಡ್ಸನ್ ವೃತ್ತದ ದ್ವಾರದಲ್ಲಿ ನೂರಾರು ವಾಹನಗಳ ನಿಲುಗಡೆ

*ನಿಯಂತ್ರಿಸಲಾಗದೆ ದ್ವಾರ ಮುಚ್ಚಿದ ಸಿಬ್ಬಂದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.