ಭಾನುವಾರ, ಏಪ್ರಿಲ್ 11, 2021
26 °C

ವಿದೇಶಿ ತರಕಾರಿ!

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

‘ಮುಂಬೈನ ತಾಜ್ ಮತ್ತು ಒಬೆರಾಯ್ ಹೋಟೆಲ್‌ಗಳ ಮೇಲೆ ಪಾಕ್ ಮೂಲದ ಭಯೋತ್ಪಾದಕರು ದಾಳಿ ಮಾಡಿದ ಸಂದರ್ಭದಲ್ಲಿ ನಾನು ಬೆಳೆದ ತರಕಾರಿಗಳನ್ನು ಕೊಳ್ಳುವವರಿಲ್ಲದೇ ಎರಡು ಲಕ್ಷ ರೂಪಾಯಿ ನಷ್ಟವಾಯಿತು. ನಾಟಿ ಮಾಡಿದ ಸಸಿಗಳೂ ಉಪಯೋಗಕ್ಕೆ ಬರಲಿಲ್ಲ’ ಎಂದು ಚನ್ನರಾಯಪಟ್ಟಣ ತಾಲ್ಲೂಕು ಮಂಚೇನ ಹಳ್ಳಿಯ ರೈತ ಮಂಜುನಾಥ್ ಅವರು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಮಂಜುನಾಥ್‌ಗೆ ಆದ ನಷ್ಟಕ್ಕೂ ಭಯೋತ್ಪಾದಕರ ದಾಳಿಗೂ ಏನು ಸಂಬಂಧ ಎಂಬ ವಿಷಯವನ್ನು ಕೆದಕಿದಾಗ ಹೊರಬಿತ್ತು ಮಂಜುನಾಥ್ ಅವರ ವಿದೇಶಿ ಸೊಪ್ಪಿನ ತರಕಾರಿ ಬೆಳೆಗಳ ಯಶೋಗಾಥೆ.ಏಳನೇ ತರಗತಿವರೆಗೆ ಓದಿರುವ ಮಂಜುನಾಥ್ ಅವರಿಗೆ ಹತ್ತು ಎಕರೆ ಭೂಮಿ ಇದೆ. ಮೊದಲು ಅವರು ದೇಸಿ  ತರಕಾರಿಗಳನ್ನು ಬೆಳೆಯುತ್ತಿದ್ದರು. ಅದರಿಂದ ಅವರಿಗೆ ನಷ್ಟವಾಗುತ್ತಿತ್ತು. ಬೆಲೆ ಕುಸಿತದಿಂದ ಆಗುವ ನಷ್ಟ ತುಂಬಿ ಕೊಳ್ಳುವ ಉಪಾಯ ಕುರಿತು ಯೋಚಿಸುತ್ತಿದ್ದಾಗ ವಿದೇಶಿ ಮೂಲದ ಸೊಪ್ಪಿನ ತರಕಾರಿಗಳನ್ನು ಬೆಳೆಯಬಾರದೇಕೆ ಅನ್ನಿಸಿತು. ಈ ಕುರಿತು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿದರು. ಮೊದಲು ಸಣ್ಣ ಪ್ರಮಾಣದಲ್ಲಿ ವಿದೇಶಿ ಸೊಪ್ಪುಗಳನ್ನು ಬೆಳೆಯಲು ಆರಂಭಿಸಿದರು.ಐಸ್‌ಬರ್ಗ್, ಚೈನಿಸ್ ಕ್ಯಾಬೇಜ್, ಪೋಪ್ ಚೈಪ್, ರೋಮನ್, ಸಿಮ್‌ಸನ್, ಲೋಲೋರಸೋ, ಪಾರ್‌ಸ್ಲಿ, ಸೆಲ್ಲರಿ, ಲೀಕ್ಸ್, ಲೆಮನ್‌ಗ್ರಾಸ್, ಜುಕುನಿ, ಪೆನೆಲ್ ಎಂಬ ಹೆಸರಿನ ಸೊಪ್ಪುಗಳು ಮತ್ತು ಗೆಡ್ಡೆ ಜಾತಿಯ ತರಕಾರಿಗಳನ್ನು ಬೆಳೆಯುವ ಮೂಲಕ ಮಂಜುನಾಥ್ ನಷ್ಟದ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಈಗ ಅವರು ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಆದರೆ ಅವರು ಬೆಳೆಯುವ ತರಕಾರಿಗಳು ಯಾವ ದೇಶದವು ಎಂಬ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.ಬೆಳೆಯುವ ವಿಧಾನ:  ಮಂಜುನಾಥ್ ದೇಸಿ ತರಕಾರಿಗಳಂತೆ ಬಯಲಿನಲ್ಲಿ ವಿದೇಶಿ ಸೊಪ್ಪಿನ ತರಕಾರಿಗಳನ್ನು ಬೆಳೆಯುತ್ತಾರೆ. ನಾಲ್ಕು ಎಕರೆ ಜಮೀನನ್ನು 20 ಗುಂಟೆಗಳಂತೆ ವಿಭಾಗಿಸಿ ಪ್ರತಿ ವಾರ ಹಂತ, ಹಂತವಾಗಿ ತರಕಾರಿ  ಸಸಿಗಳನ್ನು ನಾಟಿ ಮಾಡುತ್ತಾರೆ. ಒಮ್ಮೆ 15ರಿಂದ 20ಸಾವಿರ ಸಸಿ ನಾಟಿ ಮಾಡುತ್ತಾರೆ. ಆರಂಭದಲ್ಲಿ ಖಾಸಗಿ ಗ್ರೀನ್ ಹೌಸ್‌ಗಳಿಗೆ ಬೀಜಗಳನ್ನು ಕೊಟ್ಟು ಸಸಿಗಳನ್ನು ಬೆಳೆಸಿ ತರುತ್ತಿದ್ದರು. ಪ್ರತಿ ಸಸಿಗೆ 30ಪೈಸೆ ಗ್ರೀನ್ ಹೌಸ್‌ನ  ಮಾಲೀಕರಿಗೆ ಕೊಡುತ್ತಿದ್ದರು. ಇದರಿಂದ ಖರ್ಚು ಹೆಚ್ಚಾಗುತ್ತಿತ್ತು. ಈಗ ಅವರೇ ಸಸಿಗಳನ್ನು ಬೆಳೆಸಿಕೊಳ್ಳುತ್ತಾರೆ.  ಇದರಿಂದ ಖರ್ಚು ಕಡಿಮೆಯಾಗಿದೆ.ನಾಟಿ ಮಾಡಿದ 25ದಿನಕ್ಕೆ ಸೊಪ್ಪು ಕೊಯ್ಲಿಗೆ ಬರುತ್ತದೆ. ಕೆಲವು 40 ರಿಂದ 70ದಿನಗಳಿಗೆ ಕೊಯ್ಲಿಗೆ ಬರುತ್ತವೆ. ವಿದೇಶಿ ಸೊಪ್ಪಿನ ತರಕಾರಿಗಳ ವೈಶಿಷ್ಟ್ಯವೆಂದರೆ ಒಮ್ಮೆ ನಾಟಿ ಮಾಡಿದ ಸಸಿಯಿಂದ ಒಂದು ಸಲ ಮಾತ್ರ ಬೆಳೆ ಪಡೆಯಬಹುದು. ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಗಿಡಗಳು ಬೇಗ ಬಾಡುತ್ತವೆ. ಆದ್ದರಿಂದ ಅವುಗಳ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ಅಗತ್ಯವಿದೆ.ಈ ತರಕಾರಿಗಳಿಗೆ ಹುಳುಗಳ ಕಾಟ ಹೆಚ್ಚು. ಆದರೆ ಅಂಗಮಾರಿ ರೋಗ ಇವುಗಳ ಬಳಿ ಸುಳಿಯುವುದಿಲ್ಲ. ಚಳಿಗಾಲದಲ್ಲಿ (ಡಿಸೆಂಬರ್‌ನಿಂದ ಫೆಬ್ರುವರಿ) ಉತ್ತಮ ಇಳುವರಿ ಬರುತ್ತದೆ. ಮಹಾರಾಷ್ಟ್ರ ಮತ್ತು ಊಟಿಗಳಲ್ಲಿ ಈ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರಂತೆ.ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಕೆಲವು ಪಂಚತಾರಾ ಹೋಟೆಲ್‌ಗಳು ಬಂದ್ ಆದವು. ಆಗ ವಿದೇಶಗಳಿಂದ ಭಾರತಕ್ಕೆ ಬರುವ ಪ್ರವಾಸಿಗಳ ಸಂಖ್ಯೆ ಕಡಿಮೆ ಯಾಯಿತು. ಆಗ ಮಂಜುನಾಥ್ ಅವರು ಬೆಳೆದ ತರಕಾರಿಗಳನ್ನು ಕೊಳ್ಳುವವರು ಇರಲಿಲ್ಲ. ಅದರಿಂದ ನನಗೆ ನಷ್ಟವಾಯಿತು ಎನ್ನುತ್ತಾರೆ ಮಂಜುನಾಥ್.ಮಾರುಕಟ್ಟೆ: ಮಂಜುನಾಥ್ ಸ್ಥಳೀಯ ತರಕಾರಿ ಮಾರಾಟಗಾರರ ಜತೆ ಒಪ್ಪಂದ ಮಾಡಿಕೊಂಡು ಅವರಿಂದ ಬೀಜಗಳನ್ನು ಪಡೆದು ತರಕಾರಿ ಪೂರೈಸುತ್ತಾರೆ. ಒಪ್ಪಂದದ ಸಮಯದಲ್ಲೇ ಬೆಲೆ ನಿಗದಿಯಾಗಿರುತ್ತದೆ. ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ ಚನ್ನರಾಯಪಟ್ಟಣದಿಂದ ಮುಂಬೈಗೆ ಹೋಗುವ ಬಸ್ಸಿನಲ್ಲಿ 2-3 ಕ್ವಿಂಟಲ್ ತರಕಾರಿ ಕಳುಹಿಸುತ್ತಾರೆ. ಈ ತರಕಾರಿ ಸೊಪ್ಪುಗಳ ಬೆಲೆ ಕೆ.ಜಿ ಗೆ 15 ರೂನಿಂದ 60 ರೂ.ವರೆಗೆ ಇದೆ. ತಿಂಗಳಿಗೆ ಒಮ್ಮೆ ಹಣ ಸಿಗುತ್ತದೆ. ಮಂಜುನಾಥ್ ಅವರ ವಿದೇಶಿ ತರಕಾರಿ ಬೆಳೆದ ಯಶಸ್ಸಿಗಾಗಿ ಅವರಿಗೆ  ‘ಪ್ರಗತಿಪರ ಕೃಷಿಕ ಪ್ರಶಸ್ತಿ’ ಸಿಕ್ಕಿದೆ. ಮಂಜುನಾಥ್ ಅವರ ಮೊಬೈಲ್ ಸಂಖ್ಯೆ 99803 04119                                

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.