ಮಂಗಳವಾರ, ಜನವರಿ 21, 2020
29 °C

ವಿಶೇಷ ಮಕ್ಕಳ ಚಿತ್ರಗಳು

–ಎಚ್‌.ಅನಿತಾ. Updated:

ಅಕ್ಷರ ಗಾತ್ರ : | |

ಶಿಸಿ ಹೋಗುತ್ತಿರುವ ಬೆಂಗಳೂರು ನಗರದ ಸುತ್ತಮುತ್ತಲ ಕೆರೆಗಳ ಸ್ಥಿತಿಗತಿ ಒಂದು ಕಡೆ. ಅವುಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳು ಇನ್ನೊಂದು ಕಡೆ. ಜಲಮೂಲಗಳ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಏನೆಂಬುದು ತುಂಬಾ ಮುಖ್ಯ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಛಾಯಾಚಿತ್ರಗಳ ಮೂಲಕ ಕಥೆ ಹೇಳುವ ಛಾಯಾಚಿತ್ರಗಳ ಪ್ರದರ್ಶನವನ್ನು ಮಹಾತ್ಮಾ ಗಾಂಧಿ ರಸ್ತೆಯ ‘ರಂಗೋಲಿ ಮೆಟ್ರೋ ಕಲಾ ಕೇಂದ್ರ’ದಲ್ಲಿ ಆಯೋಜಿಸಲಾಗಿದೆ.‘ನಮ್ಮ ಊರು–ನಮ್ಮ ನೀರು’ ಶೀರ್ಷಿಕೆಯಡಿ ವಿಸ್ಮಯ ಗ್ಯಾಲರಿಯಲ್ಲಿ ಆಯೋಜಿಸಿರುವ  ಛಾಯಾಚಿತ್ರಗಳ ಪ್ರದರ್ಶನದಲ್ಲಿ ರಶ್ಮಿ ನಾಯರ್‌, ಹರಿ ಗಣಪತಿ, ಶರಣ್ಯ ಪ್ರಕಾಶ್‌, ಶಿವರಾಂ ಕುಪ್ಪಚಿ, ಆರತಿ ರಾವ್‌, ಆದರ್ಶ್‌ ಭಾರದ್ವಾಜ್‌, ಅಮೀನ್‌ ಅಹ್ಮದ್‌, ಬಿಜು ಚೆರಾಯತ್‌, ಹಂಸಿಕಾ ಜೇತ್‌ನಾನಿ, ಕೆ.ಎಸ್‌.ಪ್ರದೀಪ್‌, ಪೆರುಮಾಳ್‌ ವೆಂಕಟೇಶನ್‌, ಗೋಪಾಲ್‌ ಸೆರೆಹಿಡಿದಿರುವ ವಿಭಿನ್ನ ಛಾಯಾಚಿತ್ರಗಳನ್ನು ಕಾಣಬಹುದು.ಬಹುತೇಕ ಕೆರೆಗಳಲ್ಲಿ ಹೂಳು ತುಂಬಿರುವುದು, ವಿವಿಧ ಬಡಾವಣೆಗಳ ಕೊಳಚೆ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಿರುವುದು, ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಬಳಸಿದ ಕಚ್ಚಾ ಪದಾರ್ಥಗಳನ್ನು ಕೆರೆಯ ಬದಿಯಲ್ಲಿ ರಾಶಿ ಹಾಕಿರುವುದು ಇವೇ ಮುಂತಾದ ಛಾಯಾಚಿತ್ರಗಳು ಪರಿಸರ ಪ್ರಿಯರಲ್ಲಿ ಆಕ್ರೋಶ ಹುಟ್ಟಿಸುವಂತಿವೆ.ಕೆರೆಗಳ ರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ಕ್ರಮಗಳ ಕುರಿತಾದ ಛಾಯಾಚಿತ್ರಗಳು  ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೆರವಾಗಿವೆ. ಬಹುತೇಕ ಕೆರೆಗಳ ರಕ್ಷಣಾ ಕಾರ್ಯದಲ್ಲಿ ಸ್ವಪ್ರೇರಣೆಯಿಂದ ತೊಡಗಿಸಿಕೊಂಡಿರುವ ಸ್ಥಳೀಯರು ವೀಕ್ಷಣಾಕಾರರಿಗೆ ಇಲ್ಲಿ ಹಲವು ಫಲಕಗಳನ್ನು ಹಾಕಿದ್ದಾರೆ. ‘ಧೂಮಪಾನ ಮಾಡಬಾರದು’, ‘ಕುಡಿತ ನಿಷೇಧಿಸಲಾಗಿದೆ’, ‘ಕಸ/ಪೂಜಾ ಹೂಗಳು/ವಸ್ತುಗಳನ್ನು ಕೆರೆಗೆ ಎಸೆಯಬೇಡಿ’ ಹೀಗೆ 35 ಬಗೆಯ ಸೂಚನೆಗಳನ್ನು ನೀಡುವ ಫಲಕಗಳು ಅವು.ಕೆಲವು ಕೆರೆಗಳ ಪುನರುಜ್ಜೀವನದಿಂದಾಗಿ ನಾನಾ ಬಗೆಯ ಪಕ್ಷಿ ಸಂಕುಲಗಳು ಮರಳಿ ಬಂದಿರುವ, ಸ್ಥಳೀಯರು ಮೀನುಗಳಿಗೆ ಆಹಾರ ಉಣಿಸುತ್ತಿರುವ, ಕೆರೆಯ ಉಳಿವಿನಿಂದಾಗಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡಿರುವ ಮಹಿಳೆ, ಜನರ ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಯಾಗದಿರಲೆಂದು ಕೆರೆಯ ಬದಿಯಲ್ಲಿಯೇ ಕೃತಕ ಪುಷ್ಕರಿಣಿಯನ್ನು ನಿರ್ಮಿಸಿ ಅಲ್ಲಿ ಪೂಜಾ ಹೂವುಗಳನ್ನು ಚೆಲ್ಲಲು ಅವಕಾಶ ನೀಡಿರುವ ಛಾಯಾಚಿತ್ರಗಳು ನೋಡುಗರಲ್ಲಿ ಆಸಕ್ತಿ ಹುಟ್ಟಿಸುವಂತಿವೆ.ಗಮನಸೆಳೆವ ‘ಗಾಂಧೀಜಿಗೆ ಪತ್ರ’

ದೇಶಕ್ಕೆ ಸೇವೆ ಸಲ್ಲಿಸಿದ ಮಹಾತ್ಮರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಹಾತ್ಮರ ಜನ್ಮದಿನದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಕಲಾ ಕೇಂದ್ರದ ಕ್ಯುರೇಟರ್‌ ಸುರೇಖಾ ಆಯೋಜಿಸಿದ್ದಾರೆ. ಈ ಬಾರಿ ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ‘ಗಾಂಧೀಜಿಗೆ ಪತ್ರ’ ಶೀರ್ಷಿಕೆಯಡಿ ಅಕ್ಟೋಬರ್‌ನಲ್ಲಿ ಸಾರ್ವಜನಿಕರಿಂದ ಪತ್ರಗಳನ್ನು ಬರೆಸಿದ್ದಾರೆ.

ಸಂಗ್ರಹವಾದ 1,250ಕ್ಕೂ ಹೆಚ್ಚು ಪತ್ರಗಳಲ್ಲಿ ಮೆಚ್ಚುಗೆಗೆ ಪಾತ್ರವಾದ 650 ಪತ್ರಗಳ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದರೊಂದಿಗೆ 1915ರಲ್ಲಿ ಗಾಂಧೀಜಿಯವರು ಕಸ್ತೂರ ಬಾ ಅವರೊಂದಿಗಿರುವ, 1931ರಲ್ಲಿ ಮುಂಬೈನಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ, 1931ರಲ್ಲಿ ಸರೋಜಿನಿ ನಾಯ್ಡು ಬ್ರಿಟಿಷ್‌ ಅಧಿಕಾರಿಗಳೊಂದಿಗೆ ಫ್ರಾನ್ಸ್‌ನ ಬೋಲಾಂಗ್‌ಗೆ ಭೇಟಿ ನೀಡಿರುವ, ಮುಂಬೈನ ಜುಹು ಬೀಚ್‌ನಲ್ಲಿ ಧ್ಯಾನದಲ್ಲಿ ಮುಳುಗಿರುವ ಹೀಗೆ ಗಾಂಧೀಜಿ ಅವರ ಜೀವನದ ಕುರಿತಾದ ಹಲವು ಘಟನೆಗಳನ್ನು ಮೆಲುಕು ಹಾಕುವ ಛಾಯಾಚಿತ್ರಗಳು ಅರಿವಿಗೆ ದೀವಟಿಗೆಯಂತಿದೆ.ವಿಶೇಷ ಮಕ್ಕಳಿಗೂ ಅವಕಾಶ

ಡಿಸೆಂಬರ್‌ 3 ‘ವಿಶ್ವ ಅಂಗವಿಕಲ ದಿನ’ದ ಅಂಗವಾಗಿ ನವೆಂಬರ್‌ನಲ್ಲಿ ವಾರದ ಪ್ರತಿ ಬುಧವಾರ ಮತ್ತು ಗುರುವಾರ ನಗರದ 15 ಶಾಲೆಗಳ ವಿಶೇಷ ಮಕ್ಕಳಿಗೆ ಕಲಾ ಕೃತಿಗಳನ್ನು ತಯಾರಿಸುವುದು ಮತ್ತು ಚಿತ್ರ ಬಿಡಿಸುವ ತರಬೇತಿ ನೀಡಿ, ಅವರಿಂದ  ತಯಾರಾದ ಕಲಾಕೃತಿಗಳು ಮತ್ತು ಬಿಡಿಸಿರುವ ಚಿತ್ರಗಳನ್ನೂ ಪ್ರದರ್ಶನಕ್ಕೆ ಇಟ್ಟಿರುವುದು ನೋಡುಗರ ಹುಬ್ಬೇರಿಸುತ್ತದೆ. ಅಲ್ಲದೇ ಬೆಂಗಳೂರಿನ ಪ್ರಸಕ್ತ ಹಾಗೂ ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕುವ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಇದ್ದು, ಡಿಸೆಂಬರ್‌ 22 ಪ್ರದರ್ಶನದ ಕೊನೆ ದಿನ.

–ಎಚ್‌.ಅನಿತಾ.

ಪ್ರತಿಕ್ರಿಯಿಸಿ (+)