ಗುರುವಾರ , ಮೇ 28, 2020
27 °C

ವಿಶ್ವಕಪ್‌ಗೆ ಮುನ್ನ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ವಿಶ್ವಕಪ್ ಕ್ರಿಕೆಟ್‌ಗೆ ಮುನ್ನ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲಿನ ಕಹಿಯುಂಡಿದ್ದು ಆತಂಕಕಾರಿ. ವಿಶ್ವದ ದೊಡ್ಡ ಟೂರ್ನಿಯಲ್ಲಿ ವಿಶ್ವಾಸದೊಂದಿಗೆ ಆಡಲು ಸಜ್ಜಾಗಬೇಕಾದ ಕಾಲದಲ್ಲಿ ಸತತ ಎರಡು ಪಂದ್ಯಗಳಲ್ಲಿ ಪರಾಭವಗೊಂಡು ಸರಣಿಯನ್ನು ಗ್ರೇಮ್ ಸ್ಮಿತ್ ನಾಯಕತ್ವದ ತಂಡಕ್ಕೆ ಒಪ್ಪಿಸಿದ್ದು ಸಹನೀಯವಲ್ಲ.ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಯಶಸ್ಸಿನ ಹೊಸದೊಂದು ಅಧ್ಯಾಯವನ್ನು ಬರೆಯುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿ ಕ್ರಿಕೆಟ್ ಪ್ರೇಮಿಗಳ ಮನ ಮುದುಡುವಂತೆ ಮಾಡಿದೆ.ಟೆಸ್ಟ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಅಗ್ರಸ್ಥಾನವನ್ನು ಕಿತ್ತುಕೊಳ್ಳುವ ಸ್ಥಿತಿಯನ್ನು ಮುಟ್ಟುತ್ತದೆಂದು ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿನ ದೌರ್ಬಲ್ಯವು ಅಂಥದೊಂದು ಸ್ಥಾನಕ್ಕೇರುವ ಕನಸಿನ ಕನ್ನಡಿ ಒಡೆದುಹೋಗುವಂತೆ ಮಾಡಿತು.ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿ, ಆನಂತರ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಹೋಗುವಲ್ಲಿ ವಿಫಲವಾಗಿದ್ದರಿಂದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2-3ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಗಬೇಕಾಯಿತು.ಇದಕ್ಕೆ ಕಾರಣವಾದದ್ದು ಮಧ್ಯಮ ಕ್ರಮಾಂಕದಲ್ಲಿನ ಕೊರತೆಯನ್ನು ನೀಗಿಸಿಕೊಂಡು ಆಡಲು ವಿಫಲವಾಗಿದ್ದು. ನಾಯಕ ದೋನಿ ಅವರ ಬ್ಯಾಟ್‌ನಿಂದಲೇ ಹೆಚ್ಚು ರನ್‌ಗಳು ಹರಿದು ಬರಲಿಲ್ಲ. ಐದು ಪಂದ್ಯಗಳಲ್ಲಿ ಅವರು ಒಟ್ಟಾರೆ ಗಳಿಸಿದ್ದು 82 ರನ್.ಸ್ಥಿತಿ ಹೀಗಿರುವಾಗ ಬೇರೆ ಆಟಗಾರನ್ನು ದೂರುವುದು ಕಷ್ಟ.  ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್ ಹಾಗೂ ಸುರೇಶ್ ರೈನಾ ಅವರನ್ನು ಹೊರತುಪಡಿಸಿದಲ್ಲಿ ಭಾರತದ ಬ್ಯಾಟಿಂಗ್ ಅಷ್ಟೇನೂ ಚೈತನ್ಯದಾಯಕ ಆಗಿರಲಿಲ್ಲ.ಈ ಮೂವರು ಮಾತ್ರ ಸರಣಿಯಲ್ಲಿ ನೂರಕ್ಕೂ ಹೆಚ್ಚು ರನ್‌ಗಳನ್ನು ಗಳಿಸುವಂಥ ಸಾಮರ್ಥ್ಯ ತೋರಿದ್ದರು.ಆಕ್ರಮಣಕಾರಿ ಆಟದಿಂದ ತಂಡದ ಯಶಸ್ಸಿಗೆ ಕಾರಣವಾಗುತ್ತಾರೆನ್ನುವ ಆಶಯವನ್ನು ಯುವರಾಜ್ ಸಿಂಗ್ ಕೂಡ ಹುಸಿಯಾಗಿಸಿದರು.ದೋನಿ ಹಾಗೂ ಯುವರಾಜ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದರೆ ಭಾರತವು ಖಂಡಿತವಾಗಿಯೂ ಏಕದಿನ ಪಂದ್ಯಗಳ ಸರಣಿಯಲ್ಲಿ ನಿರಾಸೆ ಹೊಂದುತ್ತಿರಲಿಲ್ಲ.ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರ ನೆರವಿಲ್ಲದಿದ್ದರೂ ಯಶಸ್ಸಿನ ಹಾದಿಯಲ್ಲಿ ನಡೆಯುವ ಶಕ್ತಿ ಭಾರತ ತಂಡಕ್ಕಿದೆ ಎನ್ನುವ ವಿಶ್ವಾಸವನ್ನು ಬಲಗೊಳಿಸುವಂಥ ಪ್ರಯತ್ನವು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿಲ್ಲ. ಈ ಮೂವರು ಇಲ್ಲವೆಂದರೆ ಇನಿಂಗ್ಸ್ ಕಟ್ಟಿಕೊಡುವ ಶಕ್ತಿಯುತರೇ ಇಲ್ಲ ಎನ್ನುವಂತಾಯಿತು.ವಿಶ್ವಕಪ್‌ಗಾಗಿ ರಚಿಸಿರುವ ಅಂತಿಮ ಹದಿನೈದು ಆಟಗಾರರ ತಂಡದಲ್ಲಿರುವವರೂ ತಮ್ಮ ಆಯ್ಕೆಯನ್ನು ಇಲ್ಲಿ ಸಮರ್ಥಿಸಿಕೊಳ್ಳಲಿಲ್ಲ.ಆ ನಿಟ್ಟಿನಲ್ಲಿ ಪ್ರಭಾವಿಯಾಗಿ ಕಾಣಿಸಿದ್ದು ಯೂಸುಫ್ ಮಾತ್ರ.ಆದರೆ ಒಬ್ಬ ಬ್ಯಾಟ್ಸ್‌ಮನ್ ಶ್ರಮದಿಂದ ಮಾತ್ರ ಸರಣಿ ಗೆಲ್ಲಲಾಗದು. ಬೌಲರ್‌ಗಳು ತಮ್ಮ ಹೊಣೆಯನ್ನು ನಿಭಾಯಿಸುವ ಪ್ರಯತ್ನ ಮಾಡಿದರು.ಎಡವಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು. ವಿಶ್ವಕಪ್‌ನಲ್ಲಿಯೂ ಹೀಗೆ ಬ್ಯಾಟಿಂಗ್‌ನಲ್ಲಿ ಕೊರತೆ ಕಾಡಿದರೆ ಚಾಂಪಿಯನ್ ಪಟ್ಟಕ್ಕೇರುವ ಕನಸು ನನಸಾಗುವುದು ಅನುಮಾನ. ಆದ್ದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಚುರುಕಾಗಿ ಯೋಚನೆ ಮಾಡಿಕೊಂಡು ಮಹತ್ವದ ಟೂರ್ನಿಗೆ ಸಜ್ಜಾಗುವುದು ಒಳಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.