ಗುರುವಾರ , ಮೇ 13, 2021
35 °C

ವಿಶ್ವಕರ್ಮರಿಗೆ ಶೇ 3 ಮೀಸಲಾತಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ (ಕಟಪಾಡಿ): `ಹಿಂದುಳಿದ ವರ್ಗದಲ್ಲಿ ಎರಡನೆ ಸ್ಥಾನದಲ್ಲಿರುವ ವಿಶ್ವಕರ್ಮ ಸಮುದಾಯಕ್ಕೆ ಪ್ರತ್ಯೇಕ ಶೇ.3ರಷ್ಟು ಮೀಸಲಾತಿ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು~ ಎಂದು ಅಖಿಲ ಭಾರತ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಆಗ್ರಹಿಸಿದ್ದಾರೆ.ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಪ್ರಯುಕ್ತ ಉಡುಪಿಯ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.`ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಮೇಲಿನ ಪೊಲೀಸ್ ದೌರ್ಜನ್ಯ ತಡೆಯಲು ವಿಶೇಷ ಕಾನೂನು ರಚಿಸಬೇಕು. ಕಳವು ಮಾಲುಗಳನ್ನು ಖರೀದಿಸಿದ ಆರೋಪ ಹೊತ್ತವರನ್ನು ಪೊಲೀಸರು ಕೆಲಸಗಾರರ ಸಂಘದ ಸಮ್ಮುಖದಲ್ಲೇ ವಿಚಾರಣೆಗೆ ಒಳಪಡಿಸಬೇಕು. ಕಮ್ಮೋರ ಮತ್ತು ಬಡಗಿಗಳಿಗೆ ಕೆಲಸ ನಿರ್ವಹಿಸಲು ಶೆಡ್‌ನಿರ್ಮಿಸಿಕೊಡಬೇಕು~ ಎಂದು ಅವರು ಆಗ್ರಹಿಸಿದರು.`ಜನಸಂಖ್ಯಾ ಆಧಾರದ ಮೇಲೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ರಾಜ್ಯದ ವಿಶ್ವಕರ್ಮ ಸಮುದಾಯದ 67 ಮಠಾಧಿಪತಿಗಳಿಗೆ ಶಿಕ್ಷಣ ಸಂಸ್ಥೆ ನಡೆಸಲು ಅನುಕೂಲವಾಗುವಂತೆ ಭೂಮಿ ಹಾಗೂ ಆರ್ಥಿಕ ಸಹಾಯ ಒದಗಿಸಬೇಕು. ವಿಶ್ವಕರ್ಮ ಜಯಂತಿ ಆಚರಣೆಗೆ ಸಾರ್ವತ್ರಿಕ ರಜೆ ಘೋಷಿಸಬೇಕು. ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮ ರಚಿಸಬೇಕು~ ಎಂದು ಅವರು ಒತ್ತಾಯಿಸಿದರು.`ರಾಜಕೀಯ ಪಕ್ಷಗಳು ಸಮುದಾಯವನ್ನು ಹೊಗಳುತ್ತವೆಯೇ ಹೊರತು ಬೆಳೆಸುತ್ತಿಲ್ಲ. ಸಮುದಾಯದ ಬೇಡಿಕೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ರಾಜಕೀಯ ಪ್ರಜ್ಞೆ ಇಲ್ಲ ಎಂಬ ಕಾರಣಕ್ಕಾಗಿ ವಿಶ್ವಕರ್ಮ ಸಮುದಾಯದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಸರ್ಕಾರ ಸಮರ್ಪಕ ಸವಲತ್ತು ನೀಡದ ಪರಿಣಾಮ ಸಮುದಾಯ ಹಿಂದುಳಿದಿದೆ~ ಎಂದು ಆರೋಪಿಸಿದರು. ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಶಾಸಕ ಯು.ಟಿ. ಖಾದರ್, ಶ್ರೀಕಾಂತ್ ಆಚಾರ್ಯ, ಅಲೆವೂರು ನಾಗರಾಜ ಆಚಾರ್ಯ, ಹರೀಶ್ ಆಚಾರ್ಯ ಇದ್ದರು.ರಾಜ್ಯಮಟ್ಟದ ವಿಶ್ವಕರ್ಮ ಜಯಂತಿ 17ಕ್ಕೆ

ವಿಶ್ವಕರ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಸಮುದಾಯದ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ಗಮನ ಸೆಳೆ ಯುವ ನಿಟ್ಟಿನಲ್ಲಿ ಇದೇ 17ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಕೆ.ಪಿ.ನಂಜುಂಡಿ ತಿಳಿಸಿದರು.ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಉತ್ಸವದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಸಮುದಾಯದ 67 ಮಠಾಧೀಶರು ಭಾಗವಹಿಸಲಿರುವರು. 5 ಸ್ತಬ್ಧ ಚಿತ್ರಗಳು, ಐವರು ಸಾಧಕರಿಗೆ ಸನ್ಮಾನ, 2ಸಾವಿರ ಯುವಕರಿಂದ ಬೈಕ್ ರ‌್ಯಾಲಿ, ಮೆರವಣಿಗೆ ನಡೆಯಲಿದೆ. ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.