ವಿಶ್ವವಿದ್ಯಾಲಯಗಳಲ್ಲಿ ಅಕ್ರಮ ಚಟುವಟಿಕೆ ತಡೆ ಮಸೂದೆ- 2010

7

ವಿಶ್ವವಿದ್ಯಾಲಯಗಳಲ್ಲಿ ಅಕ್ರಮ ಚಟುವಟಿಕೆ ತಡೆ ಮಸೂದೆ- 2010

Published:
Updated:

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ತಾಂತ್ರಿಕ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಅಕ್ರಮ ಚಟುವಟಿಕೆಗಳ ತಡೆ ಮಸೂದೆ- 2010’ ಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಸಚಿವಾಲಯದ ಸಂಸದೀಯ ಸಮಿತಿಯು ತನ್ನ ವರದಿಯನ್ನು ಎರಡು ತಿಂಗಳೊಳಗೆ ಸಂಸತ್ತಿಗೆ ಸಲ್ಲಿಸಲಿದೆ ಎಂದು ಸಮಿತಿಯ ಮುಖ್ಯಸ್ಥ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಮಸೂದೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಲ್ಲಿರುವ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಅದರಂತೆ ಈಗ ಬೆಂಗಳೂರಿಗೆ ಬಂದಿದ್ದೇವೆ. ಕೇರಳ ಭೇಟಿ ಈಗಾಗಲೇ ಮುಗಿದಿದ್ದು, ಮುಂದಿನ ದಿನಗಳಲ್ಲಿ ಚೆನ್ನೈ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಲಾಗುವುದು’ ಎಂದು ತಿಳಿಸಿದರು.‘ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಸಮಿತಿಯು ಸಂಸತ್ತಿಗೆ ವರದಿ ಸಲ್ಲಿಸಲಿದೆ. ಇದನ್ನು ಹಾಗೆಯೇ ಸ್ವೀಕಾರ ಮಾಡುವುದು ಅಥವಾ ಒಂದಿಷ್ಟು ಬದಲಾವಣೆಗಳನ್ನು ಸೂಚಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದರು. ಮಸೂದೆಯಲ್ಲಿರುವ ಪ್ರಮುಖ ಅಂಶಗಳು: ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪ್ರವೇಶ ನೀಡಲು ಕ್ಯಾಪಿಟೇಶನ್ ಶುಲ್ಕ ಪಡೆಯುವುದನ್ನು ಅಪರಾಧವೆಂದು ಪರಿಗಣಿಸುವುದು, ರಶೀದಿ ನೀಡದೆ ಶುಲ್ಕಗಳನ್ನು ಪಡೆಯುವುದಕ್ಕೆ ದಂಡವಿಧಿಸುವುದು, ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ನೀಡಿದರೆ ದಂಡ ವಿಧಿಸುವುದು ಸೇರಿದಂತೆ ಹಲವು ಪ್ರಸ್ತಾವಗಳಿವೆ. ಇದಕ್ಕೆ ಶಿಕ್ಷಣ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಿತಿಯು ಅಭಿಪ್ರಾಯಗಳನ್ನು ಕಲೆಹಾಕುತ್ತಿದೆ.ಶಿಕ್ಷಕರ ಕೊರತೆ: ‘ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಶೇ 50ರಷ್ಟು ಬೋಧಕರ ಕೊರತೆ ಇದೆ’ ಎಂದು ಆಸ್ಕರ್  ಹೇಳಿದರು.‘ಮೂಲ ಶಿಕ್ಷಣ ವಿಷಯಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಪ್ರಾಥಮಿಕ, ಉನ್ನತ ಶಿಕ್ಷಣ ಸೇರಿದಂತೆ ಒಟ್ಟಾರೆಯಾಗಿ ದೇಶದಲ್ಲಿ 5 ಲಕ್ಷ ಶಿಕ್ಷಕರ ಕೊರತೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.ಸಮಿತಿಯ ತಂಡದಲ್ಲಿ ರಾಜ್ಯದ ಸಂಸದರಾದ ಸುರೇಶ ಅಂಗಡಿ ಹಾಗೂ ಪಿ.ಸಿ. ಗದ್ದಿಗೌಡರ ಸೇರಿದಂತೆ ಪ್ರಮೋದ್ ಕುರೇಲ್ (ಉತ್ತರ ಪ್ರದೇಶ), ಪಿ.ಕೆ. ಬಿಜು (ಕೇರಳ), ಹೆಲೆನ್ ಡೇವಿಡ್‌ಸನ್ (ತಮಿಳು ನಾಡು), ಪ್ರತಾಪರಾವ್ ಜಾಧವ್ (ಮಹಾರಾಷ್ಟ್ರ), ಪ್ರಶಾಂತ ಮಜುಂದಾರ್ (ಪಶ್ಚಿಮ ಬಂಗಾಳ), ಅಶೋಕ್ ತನ್ವರ್ (ಹರ್ಯಾಣ), ಜೋಸೆಫ್ ಟೊಪ್ಪೊ (ಅಸ್ಸಾಂ) ಹಾಗೂ ಮಧು ಯಾಸ್ಕಿ (ಆಂಧ್ರ ಪ್ರದೇಶ) ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry