ವಿಷಪೂರಿತ ಆಹಾರ ಸೇವಿಸಿ ಬಾಲಕ ಸಾವು

ಜನವಾಡ: ಕೈಗಾಡಿಯಲ್ಲಿನ ಉಪಾಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಬಾಲಕ ಮೃತಪಟ್ಟಿರುವ ಘಟನೆ ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ವಿಠ್ಠಲ ಹಣಮಂತ (12) ಮೃತ ಬಾಲಕ. ವಿಠ್ಠಲ ತಂದೆ ತಾಯಿಯೊಂದಿಗೆ ಹೈದರಾಬಾದ್ನಲ್ಲಿ ನೆಲೆಸಿದ್ದರು. ಗ್ರಾಮದಲ್ಲಿ ಸಂಬಂಧಿಯೊಬ್ಬರು ಮೃತಪಟ್ಟ ಕಾರಣ ವಾರದ ಹಿಂದೆ ಪಾಲಕರ ಜತೆ ಗ್ರಾಮಕ್ಕೆ ಬಂದಿದ್ದರು.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಗ್ರಾಮದ ಕೈಗಾಡಿಯೊಂದರಲ್ಲಿ ಬುಧವಾರ ಪಾನಿಪುರಿ ಸೇವಿಸಿದ ನಂತರ ವಿಠ್ಠಲ ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ, ಬಾಲಕನ ಪಾಲಕರು ವೈದ್ಯರ ಅನುಮತಿ ಪಡೆಯದೇ ಮಗನನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ಗುರುವಾರ ನಸುಕಿನ ಜಾವ ಹೈದರಾಬಾದ್ಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಬಾಲಕನಿಗೆ ವಾಂತಿ ಭೇದಿ ಆಗಿರುವುದು ನಿಜ. ಆದರೆ, ಸಾವಿಗೆ ಕಾಲರಾ ಅಥವಾ ವಾಂತಿ ಭೇದಿ ಕಾರಣ ಅಲ್ಲ. ವಿಷಪೂರಿತ ಆಹಾರ ಸೇವನೆ ಇಲ್ಲವೇ ದೀರ್ಘಕಾಲಿನ ಕಾಯಿಲೆ ಕಾರಣ ಆಗಿರಬಹುದು ಎಂದು ಬೀದರ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪ್ರವೀಣ ಶಂಕೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಲ್ಲಿ ಸಾವಿಗೆ ನಿಖರ ಕಾರಣ ಏನು ಎನ್ನುವುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಬಾಲಕ ಪಾನಿಪುರಿ ಸೇವಿಸಿದ ತಳ್ಳುಗಾಡಿಯನ್ನು ಪಂಚಾಯಿತಿಯವರು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿರುವ ಹೋಟೆಲ್ಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಮೃತರ ಮನೆ ಸುತ್ತಲಿನ 25 ಮನೆಗಳ ಪ್ರದೇಶದಲ್ಲಿ ಫಿನಾಯಿಲ್ ಸಿಂಪಡಿಸಲಾಗಿದೆ. ಗ್ರಾಮದಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಭೇಟಿ: ಬಾಲಕ ಮೃತಪಟ್ಟ ಸುದ್ದಿ ತಿಳಿಯುತ್ತಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪ್ರವೀಣ, ಜನವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಕಿರಣ ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ನೀರು ಪೂರೈಸುವ ಟ್ಯಾಂಕ್ ಹಾಗೂ ಕಿರು ನೀರು ಸರಬರಾಜು ಟ್ಯಾಂಕ್ಗಳನ್ನು ತೊಳೆದು, ಶುದ್ಧೀಕರಿಸಿದ ನಂತರವೇ ನೀರು ಪೂರೈಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಕೋರಿದ್ದಾರೆ.
*
ವಿಷಪೂರಿತ ಆಹಾರ ಸೇವಿಸಿ ಬಾಲಕ ಮೃತಪಟ್ಟಿರುವುದು ಹೊರತುಪಡಿಸಿದರೆ ಗ್ರಾಮದಲ್ಲಿ ಯಾವುದೇ ವಾಂತಿ ಭೇದಿ ಪ್ರಕರಣ ವರದಿಯಾಗಿಲ್ಲ. ಅದಾಗಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
-ಡಾ. ಪ್ರವೀಣ,
ಬೀದರ್ ತಾಲ್ಲೂಕು ಆರೋಗ್ಯ ಅಧಿಕಾರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.