ಬುಧವಾರ, ಮೇ 25, 2022
24 °C

ವೃಕ್ಷಾಧಾರಿತ ಬೇಸಾಯ ಲಾಭದಾಯಕ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

`ಈ ತೋಟದಲ್ಲಿ ಎಷ್ಟು ಬೆಳೆಗಳಿರಬಹುದು ಲೆಕ್ಕ ಹಾಕಿ?~ ಎಂದು ನರೇಂದ್ರ  ಪ್ರಶ್ನೆ ಹಾಕಿದರು. `ಅವರ ತೋಟದತ್ತ ನೋಡುತ್ತ ಕಂಡ ಬೆಳೆಗಳನ್ನು ಲೆಕ್ಕ ಹಾಕಿ `ಏಳೆಂಟು ಬೆಳೆ ಇರಬಹುದು~ಎಂದೆ.ನರೇಂದ್ರ ಥಟ್ಟನೆ ಹದಿನೆಂಟು ಬೆಳೆಗಳನ್ನು ಎಣಿಸಿದರು. ಅಚ್ಚರಿ ವಿಷಯವೆಂದರೆ, ಆ ಬೆಳೆಗಳಲ್ಲಿ ಶೇ 90 ರಷ್ಟು ಮರಗಳು. ಅಷ್ಟೂ ಬೆಳೆಗಳನ್ನು ಒಂದು ಎಕರೆ ಐದು ಗುಂಟೆ ಪ್ರದೇಶದಲ್ಲಿ ಬೆಳೆದಿದ್ದಾರೆ!ಸಾಗರ ತಾಲ್ಲೂಕಿನ ಬೇಳೂರಿನ ನರೇಂದ್ರ ಅವರದ್ದು ಬೇರೆ ಬೇರೆ ಕಡೆ ಐದಾರು ಎಕರೆ ಜಮೀನಿದೆ. ಒಂದು ಎಕರೆ ಐದು ಗುಂಟೆಯಲ್ಲಿ ಮಾತ್ರ ಮರ ಆಧಾರಿತ ಬೇಸಾಯ ಮಾಡಿದ್ದಾರೆ. ಈ ತಾಕಿನಲ್ಲಿ ನಿನ್ನೆ ನೆಟ್ಟ ಗಿಡದಿಂದ ಹಿಡಿದು ಮೂವತ್ತು ವರ್ಷ ವಯಸ್ಸಿನ ಮರಗಳಿವೆ. ಇವುಗಳಲ್ಲಿ ಮುಖ್ಯ ಬೆಳೆ ಅಡಿಕೆ. ಉಳಿದಂತೆ ಬಾಳೆ, ಕೋಕೊ, ಕಾಫಿ ಇದೆ.ಇವುಗಳ ನಡುವೆಯೇ ಜಾಯಿಕಾಯಿ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಮತ್ತು ಅರಿಶಿಣದಂತಹ ಸಂಬಾರ ಬೆಳೆಗಳಿವೆ. ಎಲ್ಲ ಮರಗಳೂ ಫಲ ಕೊಡುತ್ತಿವೆ. ಇಷ್ಟೆಲ್ಲ ಮರಗಳಿದ್ದರೂ ಒಂದು ಮರ ಮತ್ತೊಂದರ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಇದೇ ಅವರ ತೋಟದ ವಿನ್ಯಾಸ ವಿಶೇಷ.ತೋಟದ ಮೇಲ್ಭಾಗದಲ್ಲಿ ಮಾವು, ಹಲಸು, ಕೆಲವು ಹಣ್ಣಿನ ಮರಗಳಿವೆ. ಕೆಳಭಾಗದಲ್ಲಿ 980 ಅಡಿಕೆ ಮರಗಳಿವೆ. 300 ಬಾಳೆ, 350 ಕಾಫಿ, ಕೋಕೊ, 350 ಕಾಳುಮೆಣಸು ಬಳ್ಳಿಗಳಿವೆ.100 ಜಾಯಿಕಾಯಿ ಮರಗಳು, 15 ಲವಂಗ ಗಿಡಗಳಿವೆ. ಮನೆ ಬಳಕೆಗೆ ಏಲಕ್ಕಿ, ಶುಂಠಿ, ಅರಿಶಿಣ ಮತ್ತು ಸುವರ್ಣಗೆಡ್ಡೆ ಬೆಳೆದುಕೊಳ್ಳುತ್ತಾರೆ.`ಅಡಿಕೆ ಕಾಸು ಕೊಡುವ ಬೆಳೆ. ಒಮ್ಮಮ್ಮೆ ಕೊಳೆ ರೋಗ ಕಾಣಿಸಿಕೊಂಡರೆ, ಕೈ ಕೊಡುವ ಬೆಳೆಯೂ ಹೌದು. ಮಿಶ್ರ ಬೆಳೆಯಿದ್ದರೆ ಒಂದು ಬೆಳೆ ಕೈ ಎತ್ತಿದರೂ ಉಪ ಬೆಳೆಗಳು ಕೈಹಿಡಿಯುತ್ತವೆ. ಒಮೊಮ್ಮೆ ಎಲ್ಲ ಬೆಳೆಗಳು ಸಮೃದ್ಧವಾಗಿ ಫಸಲು ನೀಡಿ ಜೇಬು ತುಂಬಿಸಿದ್ದುಂಟು~ ಎಂದು ಮರ ಆಧಾರಿತ, ಮಿಶ್ರ ಬೇಸಾಯದ ಗುಟ್ಟು ವಿವರಿಸುತ್ತಾರೆ ನರೇಂದ್ರ.ಬೆಳೆ ಜೋಡಿಸಿರುವ ಪರಿ

ಪ್ರತಿಯೊಂದು ಗಿಡಗಳ ನಾಟಿಗೆ ವಿಶೇಷ ವಿಧಾನ ಅನುಸರಿಸಿದ್ದಾರೆ. ಅಡಿಕೆ ಮರಗಳನ್ನು  9 ಅಡಿಗಳ ಅಂತರದಲ್ಲಿ `ಜಿಗ್ ಜಾಗ್~ ವಿಧಾನದಲ್ಲಿ ನಾಟಿ ಮಾಡಿದ್ದಾರೆ. ನಡುವೆ ಜಾಯಿಕಾಯಿ ಗಿಡಗಳಿವೆ. ಅಡಿಕೆ ಮರಕ್ಕೆ ಕಾಳುಮೆಣಸಿನ  ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಕೆಲ ಮರಗಳಿಗೆ ವೀಳ್ಯೆದೆಲೆ ಬಳ್ಳಿಗಳು ಹಬ್ಬಿವೆ. ಬಳ್ಳಿಗಳು ಮರವನ್ನು ತಬ್ಬಿ ಬೆಳೆಯುವುದರಿಂದ, ಮರಕ್ಕೆ ಬಿಸಿಲಿನಿಂದ ರಕ್ಷಣೆ, ಜೊತೆಗೆ ಬಳ್ಳಿಗಳಿಗೆ ಆಸರೆಯಾಗುತ್ತದೆ.ಈ ಮರಗಳನ್ನು ಹಂತ ಹಂತವಾಗಿ ನಾಟಿ ಮಾಡಿದ್ದಾರೆ. ಅಡಿಕೆ ಮತ್ತು ಜಾಯಿಕಾಯಿ ಮರಗಳು ಬೆಳೆದು ದೊಡ್ಡವಾದ ನಂತರ ಇವುಗಳ ಆಸುಪಾಸಿನಲ್ಲಿ ಕಾಫಿ, ಬಾಳೆ, ಲವಂಗ ನಾಟಿ ಮಾಡಿದ್ದಾರೆ. ಎರಡು-ಮೂರು ಮರಗಳ ನಡುವೆ ಶುಂಠಿ, ಅರಿಶಿಣ, ಸುವರ್ಣಗೆಡ್ಡೆ ಹಾಕಿದ್ದಾರೆ. ಈ ಎಲ್ಲ ಬೆಳೆಗಳಿಗೆ ಬಿಸಿಲಿನ ಅಗತ್ಯವಿದೆ. ಅಡಿಕೆ ಮರಗಳನ್ನು `ಜಿಗ್ ಜಾಗ್~ ವಿಧಾನದಲ್ಲಿ ನಾಟಿ ಮಾಡಿರುವುದರಿಂದ ಬಿಸಿಲು ಸಾಕಷ್ಟು ಬೀಳುತ್ತದೆ. ಮಿಶ್ರ ಬೆಳೆ ವಿಧಾನದಿಂದ ಪ್ರತಿ ಬೆಳೆಗೂ ಪ್ರತ್ಯೇಕ ಗೊಬ್ಬರ, ನೀರು ಕೊಡುವ ಅಗತ್ಯ ಬೀಳುವುದಿಲ್ಲ. ಆಳುಗಳ ಅವಲಂಬನೆಯೂ ಕಡಿಮೆ~- ಇದು ಅವರ ಅನುಭವ.ಜಾಯಿಕಾಯಿ ಗಿಡಗಳಿಗೆ ಹೆಚ್ಚು ನೀರು, ಗೊಬ್ಬರ ಆರೈಕೆ ಬೇಡ. ರೋಗ, ಕೀಟ ಬಾಧೆ ಕಡಿಮೆ. ಹದಿನೈದು ದಿನಕ್ಕೊಮ್ಮೆ ದ್ರವರೂಪದ ಗೊಬ್ಬರ ಮತ್ತು ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು. ಇನ್ನು ಶುಂಠಿ, ಅರಿಶಿಣ ನಾಟಿ ಮಾಡಿದಾಗ ಆರೈಕೆ ಮಾಡಿದರೆ ಸಾಕು. ಹೀಗಾಗಿ ಮಿಶ್ರ ಬೆಳೆಯಾಗಿ ಸಂಬಾರ ಬೆಳೆಗಳು ಸೂಕ್ತ ಎನ್ನುತ್ತಾರೆ ನರೇಂದ್ರ.ದರಕಿನ ಮುಚ್ಚಿಗೆ

ಇಡೀ ತೋಟಕ್ಕೆ ಬೇಸಿಗೆಯಲ್ಲಿ ಅರ್ಧ ಅಡಿ ಎತ್ತರಕ್ಕೆ ತರಗೆಲೆಗಳನ್ನು ಹಾಕಿ ಮುಚ್ಚಿಗೆ ಮಾಡುತ್ತಾರೆ. ಮೆತ್ತನೆ ಹಾಸಿಗೆಯಂತಿರುವ ಎಲೆಗಳ ಅಡಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಸಾರವಿರುತ್ತದೆ. ಇವು ಮಣ್ಣಿಗೆ ಪೋಷಕಾಂಶ ನೀಡಿ, ಭೂಮಿ ಉಳುಮೆಗೆ ನೆರವಾಗುತ್ತವೆ. ತೋಟದಲ್ಲಿ ತೇವಾಂಶ ನಿರಂತರವಾಗಿರುತ್ತದೆ. ಸೂಕ್ಷ್ಮಜೀವಿಗಳ ಜೊತೆ ಎರೆಹುಳು, ಉಪಕಾರಕ ಕೀಟಗಳು ಮಣ್ಣಿನಲ್ಲಿ ವೃದ್ಧಿಯಾಗಿವೆ. ತೋಟವನ್ನು ಅವರೇ ಉಳುತ್ತಾರೆ. ಕೆಲವೊಮ್ಮೆ ಉಪಕಾರಿ ಇರುವೆಗಳನ್ನು ತಂದು ತೋಟಕ್ಕೆ ಬಿಟ್ಟಿದ್ದೇನೆ~ ಎನ್ನುವ ನರೇಂದ್ರ ಅವರಿಗೆ ತೋಟದ ವಾತಾವರಣ ವರ್ಷಪೂರ್ತಿ ತಂಪಾಗಿರಲು ಈ ಸೂಕ್ಷ್ಮ ಜೀವಿಗಳೇ ಕಾರಣ.ಫಲಿತಾಂಶಗಳು

ದರಕು ಕೇವಲ ಗೊಬ್ಬರ, ಮುಚ್ಚಿಗೆ ಅಷ್ಟೇ ಅಲ್ಲ. ಕೆಲವು ಬೆಳೆಗಳಿಗೆ ತಗಲುವ ರೋಗಗಳ ನಿಯಂತ್ರಕವೂ ಹೌದು.  ಅಡಿಕೆ ಮರಗಳ ಬುಡದಲ್ಲಿ ದರಕು ಹೊದಿಸಿ, ಮೆಣಸಿನ ಬಳ್ಳಿ ನಾಟಿ ಮಾಡಿ, ಸಮೀಪದಲ್ಲೇ ಅರಿಶಿಣ ಗೆಡ್ಡೆ ನೆಟ್ಟಿದ್ದಾರೆ. ಇದರಿಂದ ಕಾಳುಮೆಣಸಿಗೆ ಬರುವ ಸೊರಗು ರೋಗ ಹತೋಟಿ ಬಂದಿದೆ ಎನ್ನುತ್ತಾರೆ ನರೇಂದ್ರ. ಅರಿಶಿಣದಲ್ಲಿ ರೋಗ ನಿರೋಧಕ ಗುಣವಿರುವುದರಿಂದ ಬಳ್ಳಿಗೆ ತಗುಲುವ ರೋಗವನ್ನು ನಿಯಂತ್ರಿಸಿದೆ ಎನ್ನುವುದು ಅವರ ಅಭಿಪ್ರಾಯ.`ಇಷ್ಟಾಗಿಯೂ ಒಮೊಮ್ಮೆ ಸೊರಗು ರೋಗ ಕಾಟ ಕೊಟ್ಟಿದೆ. ಆಗ ಇಪ್ಪತ್ತು ಕೆ.ಜಿ ಟ್ರೈಕೋಡರ್ಮವನ್ನು ಕಾಡು ಮಣ್ಣಿನೊಂದಿಗೆ ಬೆರೆಸಿ ಎಂಟರಿಂದ ಹತ್ತು ದಿವಸಗಳ ಅಂತರದಲ್ಲಿ ಮೆಣಸಿನ ಬಳ್ಳಿಯ ಬುಡಕ್ಕೆ ಹಾಕಿ ರೋಗ ನಿಯಂತ್ರಿಸಿದ್ದಾರೆ.ಶುಂಠಿ, ಅರಿಶಿಣ, ಸುವರ್ಣಗೆಡ್ಡೆಗಳನ್ನು ಮನೆಗೆ ಅಗತ್ಯವ್ದ್ದಿದಾಗ ಕೊಯ್ಯುತ್ತಾರೆ. ಉಳಿದ ಗೆಡ್ಡೆಗಳನ್ನು ಮಣ್ಣಿನಲ್ಲೇ ಬಿಡುತ್ತಾರೆ. `ಗೆಡ್ಡೆ ಗೆಣಸುಗಳು ಭೂಮಿಯಲ್ಲಿದ್ದರೆ ಮಣ್ಣಿಗೆ ಬೇಕಾದ ಪೂರಕ ಪೋಷಕಾಂಶಗಳನ್ನು ನೀಡುತ್ತವೆ.ಕಾಳುಮೆಣಸು, ಜಾಕಾಯಿ,  ಪತ್ರೆಯನ್ನು ಬೆಂಗಳೂರು, ಬೆಳಗಾವಿ ಶಿರಸಿಗೆ ಕಳುಹಿಸುತ್ತಾರೆ. ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಲವಂಗವನ್ನು ಸಾಗರದ ಅಂಗಡಿಗಳಿಗೆ ಕೊಡುತ್ತಾರೆ. ವೀಳ್ಯೆದೆಲೆಯನ್ನು ಕೂಲಿ ಕಾರ್ಮಿಕರೇ ಖರೀದಿಸುತ್ತಾರೆ.  ನರೇಂದ್ರ ಅವರ ದೂರವಾಣಿ ನಂಬರ್: 08183-260135, 08183-212222.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.