ವೇತನ ಹೆಚ್ಚಿಸದಿದ್ದರೆ ಬಿಸಿಯೂಟ ಕೊಠಡಿಗೆ ಬೀಗ
ಕಾರವಾರ: ಬಿಸಿಯೂಟ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರಿಗೆ ನವೆಂಬರ್ ತಿಂಗಳೊಳಗೆ ವೇತನ ಹೆಚ್ಚಳ ಮಾಡದಿದ್ದರೆ ರಾಜ್ಯದಾದ್ಯಂತ ಶಾಲೆಗಳ ಬಿಸಿಯೂಟ ಕೊಠಡಿಗೆ ಬೀಗ ಹಾಕಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಭಾನುವಾರ ನಗರದ ರೋಟರಿ ಭವನದಲ್ಲಿ ನಡೆದ ಅಕ್ಷರ ದಾಸೋಹ ನೌಕರರ 3ನೇ ಜಿಲ್ಲಾ ಸಮ್ಮೇಳನದಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಮ್ಮೇಳನವನ್ನು ಉದ್ಘಾಟಿಸಿದ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, `ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಲಕ್ಷಾಂತರ ಮಹಿಳೆಯರು ಕಳೆದ 11 ವರ್ಷದಿಂದ ದುಡಿಯುತ್ತಿದ್ದಾರೆ. ಆದರೆ, ಸರ್ಕಾರ ಇವರ ಅಭಿವೃದ್ಧಿಗೆ ಯಾವ ಯೋಜನೆಯನ್ನೂ ರೂಪಿಸುತ್ತಿಲ್ಲ. ಕೆಲವೆಡೆ ಬಿಸಿಯೂಟ ಯೋಜನೆಯನ್ನು ಎನ್ಜಿಓ, ಇಸ್ಕಾನ್ನಂತಹ ಖಾಸಗಿ ಸಂಸ್ಥೆಗಳಿಗೆ ನೀಡಿ ಮಹಿಳೆಯರ ಉದ್ಯೋಗ ಕಸಿದುಕೊಳ್ಳಲಾಗುತ್ತಿದೆ' ಎಂದರು.
ಮಕ್ಕಳಿಗೆ ಊಟ ಬಡಿಸುವ ಅಡುಗೆಯವರಿಗೂ ಜೀವ ಇದೆ ಎನ್ನುವುದನ್ನು ಸಮಾಜ ಅರಿಯಬೇಕು. ಸರ್ಕಾರ ನೀಡಿದ ಆಹಾರ ಪದಾರ್ಥ ಬಳಸಿಯೇ ಅಡುಗೆ ಮಾಡುತ್ತಿದ್ದರೂ ಎಲ್ಲ ತಪ್ಪಿಗೂ ಅಡುಗೆಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಭದ್ರತೆಗೆ ನಾವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಶಾಲೆ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಲ್ಲದೇ ಊರಿನ ಯಾವುದೇ ವ್ಯಕ್ತಿ ಬಂದರೂ ಅದಕ್ಕೆ ಅಡುಗೆಯವರು ಉತ್ತರಿಸಬೇಕು. ಶಾಲೆಯಲ್ಲಿ ನೀರಿನ ವ್ಯವಸ್ಥೆ ಇಲ್ಲದಿದ್ದರೆ ಕೀಲೋ ಮೀಟರ್ ದೂರದಿಂದ ನೀರು ತಂದು ಅಡುಗೆ ಮಾಡಬೇಕು. ಅಡುಗೆ ಮಾಡುವಾಗ ಮೈ ಸುಟ್ಟುಕೊಂಡರೂ ಸರಿಯಾದ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಸಿಯೂಟ ಅಡುಗೆಯವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮೆರವಣಿಗೆ: ಸಮ್ಮೇಳನಕ್ಕೂ ಮುನ್ನ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಬಸ್ ನಿಲ್ದಾಣದಿಂದ ರೋಟರಿ ಭವನದವರೆಗೆ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು.
ಮೌನಾಚರಣೆ: ಬಿಹಾರದಲ್ಲಿ ಬಿಸಿಯೂಟ ಸೇವಿಸಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಹರಿಶ ನಾಯ್ಕ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಲ್ಪನಾ ನಾಯ್ಕ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವಕರ, ಸ್ವಾಗತ ಸಮಿತಿ ಅಧ್ಯಕ್ಷ ಶ್ಯಾಮನಾಥ ನಾಯ್ಕ, ಸಂಘಟನಾ ಕಾರ್ಯದರ್ಶಿ ಜೋಸ್ ಥಾಮಸ್, ಕಾರ್ಯದರ್ಶಿ ಶೈಲಾ ಹರಿಕಂತ್ರ, ಖಜಾಂಚಿ ಜಯಶ್ರೀ ಗೌಡ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.