ಬುಧವಾರ, ಜನವರಿ 29, 2020
30 °C
ಪ್ರಜಾವಾಣಿ ವಿಶೇಷ ಕೃಷಿ ಖುಷಿ

ಶಂಕರರೆಡ್ಡಿ ಕಲಿತದ್ದು ಸಾಫ್ಟ್‌ವೇರ್; ಕರೆದದ್ದು ಕೃಷಿ!

ಪ್ರಜಾವಾಣಿ ವಾರ್ತೆ/ ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಈ ತೋಟಕ್ಕೆ ಭೇಟಿ ನೀಡಿದರೆ ಹಲವು ದಶಕಗಳ ಹಿಂದೆ ಡಾ.ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಸಿನಿಮಾದ ಸನ್ನಿವೇಶಗಳು ನೆನಪಿಗೆ ಬರುತ್ತವೆ!ಸಿನಿಮಾದಲ್ಲಿ ರಾಜ್‌ಕುಮಾರ್‌ ಕೃಷಿ ಕ್ಷೇತ್ರದ ಸವಾಲು, ಅವುಗಳ ನಡುವೆ ಛಲ ಬಿಡದೇ ಮಾಡುವ ಸಾಧನೆ ಸಂದೇಶ ರಾಯಚೂರು ತಾಲ್ಲೂಕು ಡೊಂಗಾರಾಂಪುರ ಗ್ರಾಮದ ಯುವ ರೈತನ ಶಂಕರರೆಡ್ಡಿ ತೋಟದಲ್ಲಿ ಕಾಣುತ್ತೇವೆ.ರಾಯಚೂರಿಂದ 15 ಕಿ.ಮೀ ದೂರ ಇರುವ ತುಂಟಾಪುರ ಗ್ರಾಮದ ಹತ್ತಿರ ಉಬ್ಬು ಪ್ರದೇಶದಲ್ಲಿ ಇವರ 20 ಎಕರೆ ಜಮೀನಿದೆ. ಗಡಸು ಭೂಮಿ, ಗೊರಸು ಭೂಮಿ, ಬಂಜರು ಭೂಮಿ– ಹೀಗೆ ಕರೆಯುವ ಭೂಮಿ ಇದೆ. ಇವರ ತೋಟದಲ್ಲಿ ಕಾಣುವ ಮಣ್ಣು ರಸ್ತೆ ರಿಪೇರಿಗೆ ಹಾಕುವ ಮುರಂನಂತಿದೆ.ಇಂಥ ಜಮೀನಿನಲ್ಲಿ ಖುಷ್ಕಿ ಬೇಸಾಯ ಮಾಡಲೂ ಹಿಂಜರಿಯ ಬೇಕು. ಇನ್ನು ಖರ್ಚು ವೆಚ್ಚದ ತೋಟ ಗಾರಿಕೆ ಬೆಳೆ ಬೆಳೆಯುವುದಾದರೂ ಹೇಗೆ?– ಹೀಗೆ ಭಾವಿಸಿದ್ದ ಶಂಕರರೆಡ್ಡಿ ತಮ್ಮ ಜಮೀನು ಮಾರಾಟ ಮಾಡಲೂ ಪ್ರಯತ್ನಪಟ್ಟರು. ಜಮೀನು ನೋಡಿ ಹೋದವರು ಮತ್ತೆ ಖರೀದಿ ಮಾತು ಆಡಲಿಲ್ಲ. ಕೊನೆಗೆ ಈ ಗಡಸು ಭೂಮಿ ಯಲ್ಲಿ ಬಂಗಾರದ ಬೆಳೆ ಬೆಳೆಯ ಬೇಕು ಎಂದು ಹಟ ಹಿಡಿದು ಮುನ್ನುಗ್ಗಿದರು.ಶಂಕರರೆಡ್ಡಿ ಸಾಫ್ಟ್‌ವೇರ್ ಎಂಜಿನಿಯರ್. ಹೀಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದಾರೆ. ಮಾಸಿಕ ರೂ60,000 ವೇತನ ಪಡೆಯುತ್ತಿದ್ದರು. ಇವರೂ ಬೆಂಗಳೂರಿನಲ್ಲಿ ಇತರ ಸಾಫ್ಟ್ ವೇರ್‌ ಎಂಜಿನಿಯರ್‌ಗಳಂತೆ ಜೀವನ ನಡೆಸಬಹುದಿತ್ತು. ಆದರೆ ಇವರನ್ನು ಕೈ ಬೀಸಿ ಕರೆದದ್ದು ಕೃಷಿ. ಕೃಷಿ ಕುಟುಂಬ ದಲ್ಲಿಯೇ ಜನಿಸಿದ್ದರಿಂದ ಸಹಜವಾಗಿ ಶಂಕರರೆಡ್ಡಿಗೆ ಅವರಿಗೆ ಕೃಷಿ ಬಗ್ಗೆ ಒಲವಿತ್ತು. ಈ ಕ್ಷೇತ್ರದಲ್ಲಿಯೇ ಸಾಧನೆ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳ ಬೇಕು ಎಂಬ ಛಲದಿಂದ ಸಾಫ್ಟ್‌ವೇರ್ ಜಗತ್ತು ತೊರೆದು ಕೃಷಿಗೆ ಧುಮುಕಿ ದರು. ಮಗನ ಈ ಹುಚ್ಚು ಸಾಹಸಕ್ಕೆ ತಂದೆ ಗೋಪಾಲ ರೆಡ್ಡಿ ಅವರಿಗೆ ಆರಂಭದ ದಿನಗಳಲ್ಲಿ ಆತಂಕವಿದ್ದರೂ ಮಗನ ಉತ್ಸುಕತೆಗೆ ಪ್ರೋತ್ಸಾಹಿಸಿದರು.20 ಎಕರೆ ಗಡಸು ಭೂಮಿಯಲ್ಲಿ 10 ಎಕರೆ ದಾಳಿಂಬೆ ಬೆಳೆದಿದ್ದಾರೆ. 9 ವರ್ಷಗಳಿಂದ ಭರಪೂರ ಉತ್ಪನ್ನ ಪಡೆದಿದ್ದಾರೆ. ದಾಳಿಂಬೆ ತೋಟ ರಕ್ಷಿಸಿಕೊಳ್ಳಲು ನೀರಿಗಾಗಿ ಈವರೆಗೆ 36 ಕೊಳವೆಬಾವಿ ಕೊರೆಸಿದ್ದಾರೆ. ಈಗ ಒಂದೆರಡು ಕೊಳವೆಬಾವಿಯಿಂದ ಎರಡು ಇಂಚು ನೀರು ಲಭ್ಯವಾಗುತ್ತಿದೆ. ಇಷ್ಟೇ ನೀರಿನಲ್ಲಿ ಹನಿನೀರಾವರಿ ಅಳವಡಿಸಿಕೊಂಡಿದ್ದಾರೆ. ಜಮೀನು ಉಬ್ಬು ಪ್ರದೇಶದಲ್ಲಿರುವುದರಿಂದ ಮಳೆ ನೀರು ಹರಿದು ಪೋಲಾಗದಂತೆ ತೋಟದ ಮೂಲೆಯಲ್ಲಿ ಮಳೆ  ನೀಡು ಸಂಗ್ರಹಕ್ಕೆ, ಕೊಳವೆ ಬಾವಿ ನೀರು ಸಂಗ್ರ ಹಕ್ಕೆ ಚಿಕ್ಕ ಕೆರೆಯನ್ನು ನಿರ್ಮಿಸಿದ್ದಾರೆ.ರಕ್ಷಣೆ ಅನಿವಾರ್ಯ: ‘ಗಡಸು ಭೂಮಿ ಯಲ್ಲಿ ದಾಳಿಂಬೆ ಗಿಡ ಬೆಳೆ ಯಶಸ್ಸು ಕಂಡಿದ್ದೇ ನಮ್ಮ ಭಾಗ್ಯ. ಹೀಗಾಗಿ ಅವುಗಳ ರಕ್ಷಣೆಗೆ ಪ್ರಯತ್ನ ನಿರಂತರ. 10 ಎಕರೆಯಲ್ಲಿ ಪ್ರತಿ ವರ್ಷ 70 ಟನ್ ಉತ್ಪನ್ನ ಬರುತ್ತದೆ. ಆರಂಭಿಕ 3 ವರ್ಷ ದಲ್ಲಿ ಹೆಚ್ಚಿನ ಆದಾಯ ಬಂದಿತ್ತು. ರಫ್ತು ಬೇಡಿಕೆಯೂ ಇತ್ತು. ಆದರೆ, ಸ್ಥಳೀಯ ಮಟ್ಟದ ಲ್ಲಿಯೇ ಉತ್ತಮ ಬೆಲೆ ದೊರಕುತ್ತಿದ್ದ ಕಾರಣ ಮಾರಾಟ ಮಾಡಿಕೊಂಡು ಬಂದೆವು. ಮಾರ್ಚ್ ಪೂರ್ವ ಕೆ.ಜಿಗೆ ರೂ250–300, ಬಳಿಕ ರೂ100–80 ಗೆ ಮಾರುಕಟ್ಟೆ ಧಾರಣೆ ದೊರಕಿದೆ. ಈಗ ಸ್ವಲ್ಪ ಕಡಿಮೆ ಆಗಿದೆ’ ಎಂದು ರೆಡ್ಡಿ ಹೇಳಿದರು.ಇನ್ನು ಉಳಿದ 10 ಎಕರೆ ಪ್ರದೇಶ ದಲ್ಲಿ ಈಚೆಗೆ ಮಾವು, ನೆಲ್ಲಿ, ಚಿಕ್ಕು ಸಸಿ ನೆಟ್ಟಿದ್ದಾರೆ. 10 ಎಕರೆ ಪ್ರದೇಶದ ದಾಳಿಂಬೆ ಗಿಡಕ್ಕೆ ಹಾಗೂ ಇತರ 10 ಎಕರೆ ಪ್ರದೇಶದಲ್ಲಿ ಕೆರೆ ಮಣ್ಣು ಹಾಕಿ ಭೂಮಿ ಫಲವತ್ತತೆಗೆ ಪ್ರಯತ್ನಿಸಿದ್ದಾರೆ. ಹನಿ ನೀರಾವರಿ ವಿಧಾನದಿಂದ ಗಿಡಕ್ಕೆ ಹರಿಸಿದ ನೀರಿನ ತೇವಾಂಶ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳಲು ಕೆರೆಯ ಕಪ್ಪು ಮಣ್ಣು ಸಹಕಾರಿಯಾ ಗಿದೆ. ಡೊಂಗಾರಾಂಪುರದ ಹತ್ತಿರ 14 ಎಕರೆಯಲ್ಲಿ ಈ ವರ್ಷ ದಾಳಿಂಬೆ ಸಸಿಗಳನ್ನು ನೆಡಲಾಗಿದೆ. ಮಲ್ಚಿಂಗ್ ಪದ್ಧತಿ ಅನುಸರಿಸಿ, ಇಸ್ರೇಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾವು ಗಮನಿಸಿದ ಅಂಶಗಳ ಅಳವಡಿಸಿಕೊಂಡು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಜ್ಯ ತೋಟಗಾರಿಕೆ ಇಲಾಖೆ ಯೋಜ ನೆಗಳ ಪ್ರಯೋಜನ ಪಡೆಯಲಾಗಿದೆ. ಇಲಾಖೆ ಪ್ರೋತ್ಸಾಹದಿಂದ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಕೃಷಿ ಮಾಹಿತಿ ಲಭ್ಯವಾಗಿದೆ ಎನ್ನುತ್ತಾರೆ.

ಶಂಕರರೆಡ್ಡಿಯವರ ತೋಟ ನೋಡಿ ಮರಳುವಾಗ ‘ಬಂಗಾರದ ಮನುಷ್ಯ’ ಸಿನಿಮಾದ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಹಾಡು ಪದೇಪದೇ ನೆನಪಾಗುತ್ತಿತ್ತು.ಶಂಕರರೆಡ್ಡಿ ಅವರ ಮೊಬೈಲ್‌

ನಂ: 98864 29889‘ನಿರುತ್ಸಾಹ ಬೇಡ’

ಯಾವುದೇ ಕ್ಷೇತ್ರವಾದರೂ ಸಮಸ್ಯೆ, ಸವಾಲು ಇದ್ದದ್ದೇ. ಎದೆಗುಂದದೇ ಪ್ರಾಮಾಣಿಕತೆ ಯಿಂದ ಹಿಡಿದ ಕೆಲಸ ಸಾಧಿಸಬೇಕು. ಕೃಷಿ ಕ್ಷೇತ್ರದಲ್ಲಿ ಸಮಸ್ಯೆ ಸಾಮಾನ್ಯ. ತಜ್ಞರ ಸಲಹೆ, ಪ್ರದೇಶಕ್ಕನುಗುಣವಾದ ಹವಾಮಾನ, ಯಾವ ಬೆಳೆ ಬೆಳೆದರೆ ಲಾಭದಾಯಕ ಎಂಬು ದನ್ನು ಗಂಭೀರ ಚಿಂತನೆ ಮಾಡಿ ಬೆಳೆದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ.

–ಶಂಕರರೆಡ್ಡಿ, ಯುವ ರೈತ.‘ಯುವ ಸಮುದಾಯಕ್ಕೆ ಮಾದರಿ’


ಬರಡು ಜಮೀನಿನಲ್ಲಿ ಶಂಕರರೆಡ್ಡಿ ದಾಳಿಂಬೆ ಬೆಳೆದು ಈ ಭಾಗದ ಬಯಲು ಪ್ರದೇಶದ ರೈತರಿಗೆ ಮಾದರಿ ಆಗಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಜ್ಯ ತೋಟಗಾರಿಕೆ ಇಲಾಖೆಯಿಂದ ತಮ್ಮ ಬೆಳೆಗೆ ಉಪಯುಕ್ತ ಆಗುವ ಯೋಜನೆಗಳ ಪ್ರಯೋಜನ, ಸಹಾಯಧನ ಪಡೆದು ಸದ್ಬಳಕೆ ಮಾಡಿಕೊಂಡಿದ್ದಾರೆ. ಏನು ಬೆಳೆದು ಸಾಧನೆ ಮಾಡಿದ್ದಾರೆ ಎಂಬುದಂಕ್ಕಿಂತ ಗಡಸು ಭೂಮಿಯಲ್ಲಿ ತೋಟಗಾರಿಕೆ ಕೈಗೊಂಡಿದ್ದೇ ದೊಡ್ಡ ಸಾಧನೆ.

– ಹನುಮಂತ ನಾಯ್ಕ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಯಚೂರು.

ಪ್ರತಿಕ್ರಿಯಿಸಿ (+)