ಗುರುವಾರ , ಜೂನ್ 24, 2021
27 °C

ಶಹಾಪುರ: ಲಗ್ಗೆ ಹಾಕಿದ ವಾಣಿಜ್ಯ ಬ್ಯಾಂಕ್ ಶಾಖೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯ ಭಾಗವಾಗಿರುವ ಶಹಾಪುರದಲ್ಲಿ ವಿವಿಧ  ಟ್ರ್ಯಾಕ್ಟರ್ ಕಂಪನಿಗಳ ಅಂಗಡಿ, ಕ್ರಿಮಿನಾಶಕ ಔಷಧಿ ಮಾರಾಟ ಕೇಂದ್ರ ಅದರ ಜೊತೆಗೆ ಲಗ್ಗೆ ಹಾಕಿರುವುದು ವಾಣಿಜ್ಯ ಬ್ಯಾಂಕ್‌ಗಳು.ಪಟ್ಟಣದಲ್ಲಿ ಎಸ್‌ಬಿಎಚ್, ಕೃಷ್ಣಾ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್‌ಬಿಐ, ವಿಜಯ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಸೇರಿದಂತೆ ಮಣಪುರಂ ಗೋಲ್ಡ್, ಶ್ರೀರಾಮ ಚಿಟ್ಸ್, ಮಹೀಂದ್ರ ಫೈನಾನ್ಸ್, ಮುತ್ತೂಟ್ ಹೀಗೆ ಹಲವಾರು ಬ್ಯಾಂಕಿನ ಶಾಖೆಗಳು ತಳವೂರಿವೆ.ಸದ್ಯ ಹೊಸ  ಶಾಖೆಗಳಲ್ಲಿ ಪೈಪೋಟಿ ಅಧಿಕವಾಗಿದೆ. ಗ್ರಾಹಕರಿಗೆ ತ್ವರಿತ ಸೇವೆ, ಆಧುನಿಕ ಸೌಲಭ್ಯ,ಆಯ್ಕೆ ಜಾಸ್ತಿಯಿದೆ. ಉತ್ತಮ ಬಡ್ಡಿದರ ಹೀಗೆ ಹಲವಾರು ಉಪಯುಕ್ತ ಘೋಷಣೆಗಳು ಗ್ರಾಹಕರನ್ನು ಆಕರ್ಷಣೆ ಮಾಡುತ್ತಿರುವುದು ಸುಳ್ಳಲ್ಲ.ವಾಣಿಜ್ಯ ಹಾಗೂ ಇತರ ಬ್ಯಾಂಕ್‌ಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗಿ ವ್ಯಾಪಾರ ಬುದ್ದಿವಂತಿಕೆಯ ಕೇಂದ್ರ ಬಿಂದುವಾಗಿದೆ. ಮಧ್ಯಮ ಹಾಗೂ ಬಡ ರೈತರಿಗೆ ಬ್ಯಾಂಕ್‌ಗಳ ಸಾಲ ಸೌಲಭ್ಯ ಇನ್ನೂ ಮರೀಚಿಕೆ. ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಬೆಳೆ ಸಾಲ ದೊರೆಯುವುದು ಕಷ್ಟದ ಕೆಲಸವಾಗಿದೆ ಎಂದು ಹತಾಶೆ ವ್ಯಕ್ತ ಪಡಿಸುತ್ತಾರೆ ವಿರುಪಣ್ಣಗೌಡ.ಹೆಚ್ಚಿನ ಬ್ಯಾಂಕ್‌ಗಳು ಸರ್ಕಾರಿ ಸಿಬ್ಬಂದಿಗೆ ಮಹತ್ವ ನೀಡುತ್ತಿವೆ. ಗೃಹಸಾಲ, ವಾಹನ ಖರೀದಿ, ಅಲ್ಲದೆ ದೊಡ್ಡ ರೈತರಿಗೆ ಗೋದಾಮು ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸುಲಭವಾಗಿ ಸಾಲ ದೊರೆಯುತ್ತದೆ. ಅಲ್ಲದೆ ಬ್ಯಾಂಕಿನ ಸೇವಾ ವ್ಯಾಪ್ತಿಯ ಕ್ಷೇತ್ರವನ್ನು ತೆಗೆದು ಹಾಕಿದ್ದರಿಂದ ಗ್ರಾಹಕರು ಇಲ್ಲವೆ ರೈತರು ಮುಕ್ತವಾಗಿ ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆಯಬಹುದಾಗಿದೆ.ನಿವ್ವಳ ಆದಾಯ ಹೆಚ್ಚಿಸುವ ಹಾಕಿದ ಬಂಡವಾಳಕ್ಕೆ ನಷ್ಟವಿಲ್ಲ  ಎಂಬ ಖಾತರಿಗೆ  ಬ್ಯಾಂಕಿನ ಶಾಖೆಯ ಸಿಬ್ಬಂದಿಯೂ  ನಾಮುಂದು ತಾಮುಂದು ಎಂದು ಸಾಲ ಸೌಲಭ್ಯಕ್ಕೆ ಮುಂಚೂಣಿಯಲ್ಲಿವೆ. ಬಡ ಜನತೆಗೆ ಸಾಲ  ನೀಡಲು ಹಿಂದೇಟು ಹಾಕುತ್ತಿರುವುದು ವಾಸ್ತವದ ಸಂಗತಿ. ಎಷ್ಟು ಬ್ಯಾಂಕ್ ಸ್ಥಾಪನೆಯಾದರೂ ನಮಗೆ ಲಾಭವಿಲ್ಲ. ಅವು ಉಳ್ಳವರ ಪಾಲಿಗೆ ಸೌಲಭ್ಯ ನೀಡುವ ಕೇಂದ್ರವಾಗಿವೆ ಎನ್ನುವುದು ಸಣ್ಣ ರೈತ ಶಿವಣ್ಣನ ದೂರು.ಬ್ಯಾಂಕ್ ಶಾಖೆಗಳ ಸ್ಥಾಪನೆಯ ಪೈಪೋಟಿಯಿಂದ ಗ್ರಾಮೀಣ ಬ್ಯಾಂಕ್‌ಗಳಿಗೆ ಧಕ್ಕೆ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೇ ಸ್ಥಳೀಯ ಸಂಪನ್ಮೂಲವನ್ನು ಕೇಂದ್ರೀಕರಿಸಿ ಮೂಲಸೌಲಭ್ಯ ಕೊರತೆಯ ನಡುವೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಶಾಖೆಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟ ನಡೆಸುವ ದುಸ್ಥಿತಿ ಬಂದಿದೆ.ಪ್ರತಿ ತಿಂಗಳು ಆಯಾ ಶಾಖೆಯ ಮುಖ್ಯಸ್ಥರ ಅಂತರಿಕ ಸಭೆಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಠೇವಣಿ ಸಂಗ್ರಹಿಸಿ ಇಲ್ಲವಾದರೆ ಬ್ಯಾಂಕ್ ಮುನ್ನಡೆಸುವುದು ಕಷ್ಟದ ಕೆಲಸವಾಗುತ್ತದೆ. ಪ್ರತಿ ತಿಂಗಳು ಇಂತಿಷ್ಟು ಠೇವಣಿ ಸಂಗ್ರಹಿಸುವ ಅಲಿಖಿತ ಆದೇಶವು ಸಿಬ್ಬಂದಿಗೆ ಮಾನಸಿಕ ಹಿಂಸೆ ಅನುಭವಿಸುವ ಸ್ಥಿತಿ ಎದುರಾಗಿದೆ. ಇವೆಲ್ಲದರ ನಡುವೆ ಇನ್ನಷ್ಟು ಶಾಖೆ ಸ್ಥಾಪನೆಯ ಕಾರ್ಯ  ತಾಲ್ಲೂಕಿನಲ್ಲಿ ಭರದಿಂದ ಸಾಗಿದೆ.ಒಂದೆಡೆ ಪ್ರವಾಹ ಇನ್ನೊಂದೆಡೆ ಬರಗಾಲದ ಸ್ಥಿತಿಯಂತಾಗಿದೆ ಬ್ಯಾಂಕ್ ಸ್ಥಾಪನೆ. ನೆರೆ ಸುರಪುರ ತಾಲ್ಲೂಕಿಗೆ ತಟ್ಟಿದೆ ಇದು ಯಾದಗಿರಿ ಜಿಲ್ಲೆಯಲ್ಲಿಯೆ ದೊಡ್ಡ ತಾಲ್ಲೂಕು ಹಾಗೂ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಕೇಂದ್ರವು ಹೌದು. ಸುರಪುರ ತಾಲ್ಲೂಕು ಕೇಂದ್ರದಲ್ಲಿ ಕೇವಲ ಬೆರಳೆಣಿಕೆಯ ಶಾಖೆಗಳು ಮಾತ್ರ ಬಾಗಿಲು ತೆರೆದಿವೆ. ಇನ್ನೂ ರೈತರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಶಾಖೆಗಳ ಸ್ಥಾಪನೆ ಅವಶ್ಯಕತೆಯಿದೆ.

 

ಒಂದೆಡೆ ತೀವ್ರ ಸ್ಪರ್ಧೆ ಏರ್ಪಟ್ಟರೆ ಹೆಚ್ಚು ಹಾನಿಯನ್ನು ಬ್ಯಾಂಕ್‌ಗಳು ಅನುಭವಿಸುವಂತಾಗಬಹುದು ಎಂದು ವಾಣಿಜ್ಯ ಬ್ಯಾಂಕ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಗ್ರಾಹಕರ ಹಿತ ರಕ್ಷಣೆಯ ಜೊತೆಗೆ ಎಲ್ಲಾ ವರ್ಗದ ಸಮುದಾಯಗಳಿಗೆ ಬ್ಯಾಂಕ್ ಸಾಲ ದೊರೆಯಬೇಕು. ವಾಣಿಜ್ಯ ಮನೋಭಾವದಿಂದ ತುಸು ದೂರ ಸರಿದು ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕುಶಲಕರ್ಮಿಗಳಿಗೆ, ಮಧ್ಯಮ ಬಡ ಜನತೆಗೆ ಸಾಲ ಸೌಲಭ್ಯ ದೊರೆಯುವ ವ್ಯವಸ್ಥೆಯನ್ನು ಲೀಡ್ ಬ್ಯಾಂಕ್ ಅಧಿಕಾರಿಗಳು ನೋಡಿಕೊಳ್ಳಬೇಕೆಬುಂದು ಸಾಲ ವಂಚಿತ ವರ್ಗದ ಜನತೆಯ ಮನವಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.