ಭಾನುವಾರ, ಮೇ 9, 2021
25 °C
ಹರಿಹರಪಲ್ಲತ್ತಡ್ಕ: ಒಂದು ವಾರದ ಕಾಲಾವಕಾಶ

ಶಿಕ್ಷಕರ ಕೊರತೆ: ಹೋರಾಟಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದ್ದು ಮಕ್ಕಳ ಭವಿಷ್ಯ ತೂಗುಯ್ಯೊಲೆಯಲ್ಲಿದೆ. ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪೋಷಕರು ಮತ್ತು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಶಾಲೆಯಲ್ಲಿ ಶನಿವಾರ ನಡೆದ ಪೋಷಕರ ಮತ್ತು ಗ್ರಾಮಸ್ಥರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆಗೆ ಪೂರಕ ವಾತಾವರಣ ನಿರ್ಮಿಸಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕಾದವರು ಸಮಸ್ಯೆಯನ್ನು ಹಗುರವಾಗಿ ಕಾಣುತ್ತಿದ್ದಾರೆ. ಶಾಲೆಯಲ್ಲಿರುವ ಏಕೈಕ ಶಾರೀಕ ಶಿಕ್ಷಕರೇ ಎಲ್ಲಾ ಕೆಲಸವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಬಂದಿದೆ. ಕ್ಷೇತ್ರದ ಶಾಸಕರೇ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. 6 ಮಂದಿ ಶಿಕ್ಷಕರ ಕೊರತೆ ಇದೆ. ಗುಮಾಸ್ತರಿಲ್ಲದೆ ಸಂಸ್ಥೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಎ.ಪಿ.ಎಂ.ಸಿ ಸದಸ್ಯ ಸತೀಶ್ ಕೂಜುಗೋಡು ಅಪಾದಿಸಿದರು.ಈಗಾಗಲೇ ಶಿಕ್ಷಕರ ಕೊರತೆ ನೀಗಿಸಲು 2 ಮಂದಿ ಗೌರವ ಶಿಕ್ಷಕರನ್ನು ಮತ್ತು ಪಕ್ಕದ ಶಾಲೆಯಿಂದ ಶಿಕ್ಷಕರನ್ನು ಕರೆಸಿ ಪಾಠ ಪ್ರವಚನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾ.ಪಂ ಸದಸ್ಯ ಹಿಮ್ಮತ್ ಕೆ.ಸಿ ಹೇಳಿದರು. 2009ರಿಂದ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿಗೊಳಿಸುವ ಕೆಲಸ ಆಗುತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರೇ ಇಲ್ಲ ಅಂದರೆ ಹೇಗೆ, ಗೌರವ ಶಿಕ್ಷಕರಿಗೆ ವೇತನವನ್ನು ಹೆತ್ತವರೇ ಭರಿಸುವಂತಾದರೆ ಸರ್ಕಾರದ ಕಾಳಜಿ ಬಗ್ಗೆ ಏನೆನ್ನಬೇಕು ಎಂದು ಮುರಳೀಧರ ದೊಡ್ಡಕಜೆ ಕೇಳಿದರು.ಬಡವರಾದ ನಮ್ಮಿಂದ ಹಣ ಕೊಡಲು ಸಾಧ್ಯವಿಲ್ಲ ಎಂದು ಪೋಷಕರು ತಿಳಿಸಿದರು. ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗಬಾರದು. ಮಕ್ಕಳ ಹಿತದೃಷ್ಟಿಯಿಂದ ಜೂನ್ ತಿಂಗಳ ಒಂದರ ಗೌರವಧನವನ್ನು ನೀಡುವುದಾಗಿ ಮುರಳೀಧರ ವಾಗ್ದಾನ ಮಾಡಿದರು.ಶಾಸಕರು ಎಸ್.ಡಿ.ಎಂ.ಸಿ ಸಭೆಗೆ ನಿರಂತವಾಗಿ ಗೈರುಹಾಜರಾಗುತ್ತಿದ್ದಾರೆ ಎಂದು ಎಸ್.ಡಿ.ಎಂ.ಸಿ ಸದಸ್ಯೆಯೊಬ್ಬರು ಆರೋಪಿಸಿದರು. ಇಂತಹ ನಿರ್ಲಕ್ಷ್ಯಕ್ಕೆ ಪ್ರತಿಭಟನೆ ಔಷಧಿ ಎಂದು ಅನಂತ ಅಂಗಣ ಹೇಳಿದಾಗ ಹಾಗಾದರೆ ಮೊದಲು ಅದನ್ನು ಮಾಡೋಣ; ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡೋಣ. ಆಗ ಜನಪ್ರತಿನಿಧಗಳು, ಅಧಿಕಾರಿಗಳು ಬರುತ್ತಾರೆ ಎಂದು ತೇಜಕುಮಾರ್ ಮುಂಡೋಕಜೆ, ಮಹಾಲಿಂಗ ಕೆರೆಕ್ಕೋಡಿ ಸಲಹೆ ನೀಡಿದರು.ಒಂದು ವಾರದೊಳಗೆ ಶಾಸಕರನ್ನು ಇಲ್ಲಿಗೆ ಕರೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಗ್ರಾ.ಪಂ. ಸದಸ್ಯ ಹಿಮ್ಮತ್ ಕೆ.ಸಿ ಒಪ್ಪಿಕೊಂಡ ಮೇರೆಗೆ ಒಂದು ವಾರದ ಕಾಲಾವಕಾಶ ನೀಡಿ ನಂತರ ಪೋಷಕರ, ಗ್ರಾಮಸ್ಥರ ಸಭೆ ನಡೆಸಿ ತೀರ್ಮಾನಿಸುವ ಬಗ್ಗೆ ನಿರ್ಧರಿಸಲಾಯಿತು.ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ರುಕ್ಷಯ್ಯ ಪಲ್ಲತ್ತಡ್ಕ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಗ್ರಾಮಸ್ಥರು ಸೇರಿ 100ಕ್ಕೂ ಮಿಕ್ಕಿ ಮಂದಿ ಇದ್ದರು. ಶಾರೀರಿಕ ಶಿಕ್ಷಕ ಮೇದಪ್ಪ ಸ್ವಾಗತಿಸಿ, ವಂದಿಸಿದರು.

ಶಾಲೆಯ ಶಿಕ್ಷಕರ ಕೊರತೆ ಬಗ್ಗೆ `ಪ್ರಜಾವಾಣಿ' ಸವಿಸ್ತಾರವಾಗಿ ವರದಿ ಪ್ರಕಟಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.