ಭಾನುವಾರ, ಜನವರಿ 19, 2020
26 °C

ಶಿವರಾತ್ರಿಯಿಂದ ಕಂಬಾರರ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಆಯ್ದ ನಾಟಕಗಳ ಉತ್ಸವವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲು ಕರ್ನಾಟಕ ನಾಟಕ ಅಕಾಡೆಮಿ ಚಿಂತನೆ ನಡೆಸಿದೆ.ಅಕಾಡೆಮಿಯ ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಶಿವರಾತ್ರಿಯ ದಿನ ಆರಂಭವಾಗಲಿರುವ ನಾಟಕೋತ್ಸವ ಮೂರು ತಿಂಗಳ ಕಾಲ ನಡೆಯಲಿದೆ.ಡಾ. ಕಂಬಾರರ ಒಟ್ಟು 17 ನಾಟಕಗಳ ಪೈಕಿ ಎಂಟು ನಾಟಕಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಲಾಗುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗುವುದು. 55 ಲಕ್ಷ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆ ಕುರಿತು ಸಚಿವ ಕಾರಜೋಳ ಉತ್ಸುಕತೆ ತೋರಿದ್ದಾರೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದರು.`ಡಾ. ಕಂಬಾರ ಅವರು ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಸಾಂಸ್ಕೃತಿಕ ಲೋಕದ ನಾಯಕನ ಸ್ಥಾನದಲ್ಲಿರುವ ಕಂಬಾರರ ನಾಟಕಗಳ ಉತ್ಸವಕ್ಕೆ ಅವರು ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲೇ ಚಾಲನೆ ನೀಡಲಾಗುವುದು. ಉತ್ಸವದ ಉದ್ಘಾಟನೆಯನ್ನು ಕಂಬಾರರೇ ಮಾಡಲಿದ್ದಾರೆ.ನಂತರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ ಮೂರು ನಾಟಕಗಳು ಪ್ರದರ್ಶನ ಕಾಣಲಿವೆ~ ಎಂದು ಮಾಲತಿ ಮಾಹಿತಿ ನೀಡಿದರು.ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ, ಶಿವರಾತ್ರಿ, ಬೆಪ್ಪುತಕ್ಕಡಿ ಭೋಳೆಶಂಕರ, ಸಾಂಬಶಿವ ಪ್ರಹಸನ, ನಾಯಿಕತೆ, ಕರಿಮಾಯಿ ಮತ್ತಿತರ ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ.ಏಕೆ ಈ ಉತ್ಸವ: `ಜ್ಞಾನಪೀಠ ಪ್ರಶಸ್ತಿಯ ಮಹತ್ವ ಏನು? ಕನ್ನಡದ ಪ್ರಮುಖ ನಾಟಕಕಾರರೊಬ್ಬರಿಗೆ ಈ ಬಾರಿ ಜ್ಞಾನಪೀಠ ಪ್ರಶಸ್ತಿ ದೊರೆತಿರುವ ಕಾರಣ ಏನು? ಅವರ ನಾಟಕಗಳಲ್ಲಿರುವ ದೇಸಿ ಸಂಸ್ಕೃತಿಯ ಪ್ರತಿಪಾದನೆ ಕುರಿತು ನಾಡಿನ ಅನೇಕರಿಗೆ ಇನ್ನೂ ಸ್ಪಷ್ಟ ಅರಿವಿಲ್ಲ~ ಎನ್ನುವ ಮಾಲತಿ ಅವರು, `ಕಾದಂಬರಿಗಳನ್ನು ಓದುವ ಸಂಸ್ಕೃತಿಯಿಂದಲೇ ಜನ ದೂರವಾಗುತ್ತಿದ್ದಾರೆ, ಇನ್ನು ನಾಟಕಗಳನ್ನು ಓದುವವರು ಎಲ್ಲಿದ್ದಾರೆ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಈ ನಾಟಕೋತ್ಸವಕ್ಕೆ ಮುಂದಾಗಿದ್ದೇವೆ~ ಎಂದರು.

 

ಪ್ರತಿಕ್ರಿಯಿಸಿ (+)