ಶನಿವಾರ, ಮೇ 28, 2022
27 °C

ಶಿವಶಂಕರ್ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಾಗರಿಕರ ವೇದಿಕೆ: ಚಿತ್ರ ಸಾಹಿತಿ, ನಿರ್ದೇಶಕ, ನಟ ಸಿ.ವಿ.ಶಿವಶಂಕರ್ ಅವರಿಗೆ 75 ಜನ್ಮದಿನ ಪ್ರಯುಕ್ತ ಅಭಿನಂದನೆ. ವಾಟಾಳ್ ನಾಗರಾಜ್ ಅವರಿಂದ ‘ಕನ್ನಡ ಕುವರ ಸಿ.ವಿ.ಶಿವಶಂಕರ್’ ಕೃತಿ ಲೋಕಾರ್ಪಣೆ. ಅತಿಥಿಗಳು: ಎಂ.ವಿ.ರಾಜಶೇಖರನ್. ಲೀಲಾವತಿ, ಗೋವಿಂದಳ್ಳಿ ದೇವೇಗೌಡ, ಎಸ್. ನಿತ್ಯಾನಂದ, ಸಾ.ರಾ.ಗೋವಿಂದು.ಕನ್ನಡ ಚಿತ್ರರಂಗದಲ್ಲಿ ಸುಮಾರು 55 ವರ್ಷಗಳಿಂದ ನಟ, ಚಿತ್ರ ಸಾಹಿತಿ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ನಾಡು- ನುಡಿ ಸೇವೆ ಮಾಡುತ್ತಿರುವ ಸಿ.ವಿ.ಶಿವಶಂಕರ್ ಅವರು ದಿ.ಸುಬ್ಬಯ್ಯ ನಾಯ್ಡುರವರ ನಾಟಕ ಕಂಪನಿಯಿಂದ ಡಾ. ರಾಜ್‌ಕುಮಾರ್ ಜೊತೆಯಲ್ಲಿ ಚಿತ್ರರಂಗಕ್ಕೆ ಬಂದವರು.ನೂರಾರು ನಾಟಕಗಳನ್ನು ರೇಡಿಯೋ ನಾಟಕಗಳನ್ನು ರಚಿಸಿದವರು, ಮದರಾಸಿನಲ್ಲಿ ತಿಂಗಳಿಗೆ ಎರಡೆರಡು ಕನ್ನಡ ನಾಟಕಗಳನ್ನು ಪ್ರದರ್ಶನ ಮಾಡುತ್ತ ಹೊರನಾಡಿನಲ್ಲಿ ಕನ್ನಡ ಬಾವುಟವನ್ನು ಹಾರಿಸಿದವರು. ‘ಸಂತ ತುಕಾರಂ, ಭಕ್ತ ಕನಕದಾಸ, ವೀರ ಕೇಸರಿ, ಶ್ರೀಕೃಷ್ಣ ಗಾರುಡಿ’ ಸೇರಿ ಸುಮಾರು 50 ಚಿತ್ರಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿದ್ದಾರೆ. ಹುಣಸೂರು ಕೃಷ್ಣಮೂರ್ತಿ ಅವರಿಗೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. 1966ರಲ್ಲಿ ‘ಮನೆ ಕಟ್ಟಿ ನೋಡು’ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ‘ನಮ್ಮ ಊರು, ಹೊಯ್ಸಳ, ಮಹಾತಪಸ್ವಿ, ಮಹಡಿಯ ಮನೆ, ಕನ್ನಡದ ಕುವರ, ರಾಗಸಂಗಮ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದರು.ರಾಜೇಶ್, ದ್ವಾರಕೀಶ್, ಮಂಜುಳಾ, ಧೀರೇಂದ್ರ ಗೋಪಾಲ್, ತೂಗುದೀಪ ಶ್ರೀನಿವಾಸ್ ಮೊದಲಾದ ಕಲಾವಿದರನ್ನು, ಎಂ.ಎಂ.ಕೀರವಾಣಿ, ಆರ್.ರತ್ನ, ವಾಮನ್‌ರಾಜ್, ಕಲಾಧರ್ ಮುಂತಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರದು. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸ್ಥಳ; ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 4.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.